ವೈದ್ಯಕೀಯ ವಿದ್ಯಾರ್ಥಿಗಳ ಪಿಜಿ ಪ್ರವೇಶ ಪರೀಕ್ಷೆ 2023ರ ಕೌನ್ಸಿಲಿಂಗ್‌ನ 2ನೇ ಸುತ್ತನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕೌನ್ಸಿಲಿಂಗ್(ಕೆಇಎ) ಮುಂದೂಡಲು ಒತ್ತಾಯಿಸಿ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ ನೇತೃತ್ವದಲ್ಲಿ ವೈದ್ಯಕೀಯ ಸಚಿವ ಡಾ. ಶರಣಪ್ರಕಾಶ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
“2023ರ ಪಿಜಿ ಪ್ರವೇಶ ಪರೀಕ್ಷೆಯ 2ನೇ ಸುತ್ತಿನಿಂದ 3ನೇ ಸುತ್ತಿಗೆ ಮುಂದುವರಿಯಲು 2023ರ ನೀಟ್ ಆಕಾಂಕ್ಷಿಗಳಿಗೆ ಅವಕಾಶ ಕಲ್ಪಿಸಲು ಒಂದು ವ್ಯವಸ್ಥೆಯ ಅವಶ್ಯಕತೆಯಿದೆ. ನಿಷ್ಪಕ್ಷಪಾತದಿಂದ ಎಲ್ಲರಿಗೂ ನ್ಯಾಯಬದ್ಧ ಶಿಕ್ಷಣ ಒದಗಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವಿದ್ಯಾರ್ಥಿಗಳಿಗೆ ಸಮರ್ಪಕ ಅವಕಾಶಗಳನ್ನು ಕಲ್ಪಿಸಬೇಕು” ಎಂದು ವಿದ್ಯಾರ್ಥಿಗಳು ಕೋರಿದರು.
“ಮೆಡಿಕಲ್ ಸೆಂಟ್ರಲ್ ಕೌನ್ಸಿಲ್‌ನ 3ನೇ ಮತ್ತು ಕರ್ನಾಟಕ ಪಿಜಿ ಪ್ರವೇಶ ಪರೀಕ್ಷೆಯ 2ನೇ ಸುತ್ತಿನ ಕೌನ್ಸಿಲಿಂಗ್ ಎರಡೂ ಕೂಡ ಒಂದೇ ಸಮಯದಲ್ಲಿ ನಡೆಯುತ್ತಿವೆ. ಮೂರನೇ ಸುತ್ತಿಗೆ ಅವಕಾಶ ನೀಡದಿದ್ದಲ್ಲಿ ಉತ್ತಮ ಮೆರಿಟ್ ಹೊಂದಿರುವ ವಿದ್ಯಾರ್ಥಿಗಳು ಎರಡನೇ ಸುತ್ತಿನ ಸೀಟುಗಳನ್ನೇ ಪಡೆಯುವ ಅನಿವಾರ್ಯತೆ ಉಂಟಾಗುತ್ತದೆ. ಮೂರನೇ ಸುತ್ತಿಗೆ ಮುಂಬಡ್ತಿ ದೊರೆತಲ್ಲಿ ಎಲ್ಲ ವಿದ್ಯಾರ್ಥಿಗಳು ಉತ್ತಮ ಕಾಲೇಜಿಗೆ ಪ್ರವೇಶಾತಿ ಅವಕಾಶ ಪಡೆಯುತ್ತಾರೆ. ನೀಟ್ 2023ರಲ್ಲಿ ಅವರು ಪಡೆದಿರುವ ಅಂಕಗಳಿಗೆ ಇದು ನ್ಯಾಯಸಮ್ಮತವಾಗಿರುತ್ತದೆ” ಎಂದರು.
“ಮೆಡಿಕಲ್ ಸೆಂಟ್ರಲ್ ಕೌನ್ಸಿಲಿಂಗ್‌ನ ಮೂರನೇ ಸುತ್ತಿನ ಅಕ್ಟೋಬರ್ 6 ರವರೆಗೂ ಪಿಜಿ ಪ್ರವೇಶ ಪರೀಕ್ಷೆಯ ಎರಡನೇ ಸುತ್ತನ್ನು ತಡೆ ಹಿಡಿದಲ್ಲಿ ಮೆಡಿಕಲ್ ಸೆಂಟ್ರಲ್ ಕೌನ್ಸಿಲಿಂಗ್‌ನಲ್ಲಿ ಸೀಟುಗಳನ್ನು ಪಡೆದಿರುವ ವಿದ್ಯಾರ್ಥಿಗಳು ಕರ್ನಾಟಕ ಪಿಜಿ ಪ್ರವೇಶ ಪರೀಕ್ಷೆಯ ಎರಡನೇ ಸುತ್ತಿನಿಂದ ಹೊರ ಹೋಗುತ್ತಾರೆ. ಇದರಿಂದಾಗಿ ಬಾಕಿ ಉಳಿದ ಸೀಟುಗಳು ಕರ್ನಾಟಕದ ಆಕಾಂಕ್ಷಿಗಳಿಗೆ ಲಭ್ಯವಾಗುತ್ತವೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ವೈದ್ಯಕೀಯ ವಿದ್ಯಾರ್ಥಿಗಳಿಗೆ ಪಿಜಿ ಪ್ರವೇಶ ಪರೀಕ್ಷೆ 2023; 3ನೇ ಸುತ್ತಿಗೆ ಒತ್ತಾಯ
“ಅಭ್ಯರ್ಥಿಗಳ ಮೆರಿಟ್ ಹಾಗೂ ಪರಿಶ್ರಮಕ್ಕೆ ಇದು ನ್ಯಾಯ ಒದಗಿಸುತ್ತದೆ. ಕರ್ನಾಟಕದ ಒಂದು ಸಾವಿರ ವಿದ್ಯಾರ್ಥಿಗಳು ಇದರಿಂದ ಪ್ರಯೋಜನ ಹೊಂದುತ್ತಾರೆ. ನಿಜವಾದ ಸಾಮರ್ಥ್ಯ ಮತ್ತು ಅರ್ಹತೆಯೊಂದಿಗೆ ಪ್ರವೇಶ ಪಡೆಯುವ ಸಮಾನ ಹಕ್ಕನ್ನು ಎಲ್ಲ ಆಕಾಂಕ್ಷಿಗಳು ಹೊಂದುವಂತೆ ಮಾಡುವುದು ಅತ್ಯವಶ್ಯಕವಾಗಿದೆ. ಅಸಂಖ್ಯಾತ ಅಭ್ಯರ್ಥಿಗಳ ಕನಸು ಮತ್ತು ಆಕಾಂಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ಈ ಪ್ರಸ್ತಾವನೆಯನ್ನು ಅತ್ಯಂತ ಸೂಕ್ತವೆಂದು ಪರಿಗಣಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.
ವೈದಕೀಯ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಅವರು ಮನವಿ ಸ್ವೀಕರಿಸಿ ಪತಿಕ್ರಿಯಿಸಿದ್ದು, ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕೌನ್ಸಿಲಿಂಗ್ ಮೂರನೇ ಸುತ್ತಿಗೆ ಅವಕಾಶ ಕೊಡುವ ಪ್ರಯತ್ನ ಮಾಡುತ್ತೇವೆ” ಎಂದು ಭರವಸೆ ನೀಡಿದರು.