ಶಿವಮೊಗ್ಗ ನಗರದಲ್ಲಿ ಈದ್ ಮಿಲಾದ್ ಸಂದರ್ಭದಲ್ಲಿ ನಡೆದ ಗಲಾಟೆ ಹಿಂದಿರುವ ಶಕ್ತಿಯನ್ನು ಅರ್ಥಮಾಡಿಕೊಳ್ಳಬೇಕು. ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆದಿದೆ ಎಂದು ಹೇಳಲಾಗಿದೆ. ಅದಕ್ಕೆ ಪ್ರತಿಯಾಗಿ ಕಲ್ಲು ತೂರುವುದು ಜಾಣ ನಡೆಯಲ್ಲ. ಆ ಪ್ರದೇಶದಲ್ಲಿ ಇರುವ ಹಿರಿಯರು ಅದನ್ನು ನಿಯಂತ್ರಿಸಬೇಕಿತ್ತು. ಕಲ್ಲು ತೂರಿರುವವರ ಮೇಲೆ ಕಾನೂನು ಕ್ರಮಕ್ಕೆ ಒತ್ತಾಯ ಮಾಡಲು ಅವಕಾಶವಿತ್ತು. ಅಂತಹ ಅವಕಾಶವನ್ನು ಕಳೆದುಕೊಳ್ಳಲಾಗಿದೆ
ರಾಷ್ಟ್ರಕವಿ ಕುವೆಂಪು ಅವರು ಹೇಳಿದಂತೆ ಕರ್ನಾಟಕ ರಾಜ್ಯವನ್ನು ಶಾಂತಿಯ ತೋಟ ಮಾಡಬೇಕೆಂದು ಸಾಕಷ್ಟು ಜನ ಶಾಂತಿ ಪ್ರಿಯರು ಪ್ರಯತ್ನ ಮಾಡುತ್ತಲೇ ಬಂದಿದ್ದಾರೆ. ಆದರೂ ಗಲಭೆ ಮನಸ್ಥಿತಿಯಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಒಂದು ವರ್ಗ ರಾಜ್ಯದಲ್ಲಿ ಯಾವಾಗಲೂ ಬೆಂಕಿಗೆ ತುಪ್ಪ ಸುರಿಯಲು ತಯಾರಿರುತ್ತಾರೆ. ಇಂತಹ ಸಂದರ್ಭದಲ್ಲಿ ವಿಶೇಷವಾಗಿ ಮುಸ್ಲಿಂ ಸಮುದಾಯ ಸಾಕಷ್ಟು ಜಾಗೃತೆಯಿಂದ ಮತ್ತು ಸಂಯಮದಿಂದ ವರ್ತಿಸಬೇಕಿದೆ. ಕಾಲು ಕೆರೆದು ಜಗಳ ತೆಗೆಯುವವರು ಬಂದರೂ ಸಹ ಕಾನೂನುಬದ್ಧವಾಗಿ ಹೋರಾಡಬೇಕು. ಕ್ರಿಯೆಗೆ ಪ್ರತಿಕ್ರಿಯೆ ನೀಡುವ ಅವಶ್ಯಕತೆಯಿಲ್ಲ. ಶಿವಮೊಗ್ಗ ನಗರದಲ್ಲಿ ಈದ್ ಮಿಲಾದ್ ಸಂದರ್ಭದಲ್ಲಿ ನಡೆದ ಗಲಾಟೆ ಹಿಂದಿರುವ ಶಕ್ತಿಯನ್ನು ಅರ್ಥಮಾಡಿಕೊಳ್ಳಬೇಕು. ಈದ್ ಮಿಲಾದ್ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆದಿದೆ ಎಂದು ಹೇಳಲಾಗಿದೆ. ಅದಕ್ಕೆ ಪ್ರತಿಯಾಗಿ ಕಲ್ಲು ತೂರುವುದು ಜಾಣ ನಡೆಯಲ್ಲ. ಆ ಪ್ರದೇಶದಲ್ಲಿ ಇರುವ ಹಿರಿಯರು ಅದನ್ನು ನಿಯಂತ್ರಿಸಬೇಕಿತ್ತು. ಕಲ್ಲು ತೂರಿರುವವರ ಮೇಲೆ ಕಾನೂನು ಕ್ರಮಕ್ಕೆ ಒತ್ತಾಯ ಮಾಡಲು ಅವಕಾಶವಿತ್ತು. ಅಂತಹ ಅವಕಾಶವನ್ನು ಕಳೆದುಕೊಳ್ಳಲಾಗಿದೆ.
ಶಿವಮೊಗ್ಗ ಜಿಲ್ಲೆಯ ಜನಪ್ರತಿನಿಧಿಗಳು, ಸಂಸದರು ಮತ್ತು ಶಾಸಕರು ಗಲಾಟೆ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯಾರೂ ಅನಾವಶ್ಯಕ ಹೇಳಿಕೆ ನೀಡದಂತೆ ತಡೆಯಬಹುದಿತ್ತು. ಆದರೆ ಕ್ಷೇತ್ರದ ಸಂಸದರೆ ಪ್ರಚೋದನಾತ್ಮಕವಾಗಿ ಹೇಳಿಕೆ ನೀಡುವುದು ಯಾವ ನಾಯಕತ್ವವಿದು? ರಾಜ್ಯದಲ್ಲಿ ಸೋತ ನಂತರ ಮಾನಸಿಕ ಸ್ಥಿಮಿತ ಕಳೆದುಕೊಂಡ ನಾಯಕರು ಸಾಕಷ್ಟು ಜನ ಬಿಜೆಪಿಯಲ್ಲಿ ಇದ್ದಾರೆ. ಆ ಪಕ್ಷದ ನಾಯಕರು ರಾಜ್ಯದ ಮೂಲೆ ಮೂಲೆಯಿಂದ ಗಲಾಟೆ ವಿರುದ್ದ ಹೇಳಿಕೆ ನೀಡುತ್ತ, ಒಂದು ಸಮುದಾಯವನ್ನು ಟಾರ್ಗೆಟ್ ಮಾಡುತ್ತಿರುವುದು ನೋಡಿದರೆ ಇವರಿಗೆ ಎಷ್ಟೊಂದು ಅಸಹನೆ ಇದೆ ಎಂದು ತಿಳಿಯುತ್ತದೆ.
ಈಗ ಮಾಧ್ಯಮದಲ್ಲಿ ಚರ್ಚೆಯಾಗುತ್ತಿರುವುದು ಬಹುಮುಖ್ಯ ವಿಷಯ ಔರಂಗಜೇಬ್ ಕಟೌಟ್ ನಿರ್ಮಾಣ ಮಾಡಿದವರ ಕುರಿತು. ಹೌದು ಈ ಸಂದರ್ಭದಲ್ಲಿ ಅಲ್ಲಿಯ ಮುಸ್ಲಿಂ ಸಮುದಾಯ ಪ್ರವಾದಿಯವರ ಜನ್ಮ ದಿನದ ನಿಮಿತ್ತ ನಡೆಯುತ್ತಿರುವ ಮೆರವಣಿಗೆಯಲ್ಲಿ ಯಾವುದೇ ರಾಜ ಮಹಾರಾಜರ ಕಟೌಟ್ ನಿರ್ಮಾಣ ಮಾಡುವ ಅವಶ್ಯಕತೆಯಿರಲಿಲ್ಲ, ಮುಸ್ಲಿಂ ಸಮುದಾಯದ ಸ್ಥಳೀಯ ಹಿರಿಯರು ಇದನ್ನು ತಡೆಹಿಡಿಯಬಹುದಿತ್ತು. ಯಾರೋ ಏನೋ ಮಾಡಿದರು ಎಂದು ನಾವು ಅದನ್ನೇ ಮಾಡಬೇಕು ಎನ್ನುವುದು ಸರಿಯಾದುದಲ್ಲ. ಪ್ರವಾದಿಯವರ ಜೀವನ ಚರಿತ್ರೆಯ ವಿಷಯಗಳ ಕುರಿತು ರೂಪಕಗಳನ್ನು ಮಾಡಿ ಸಾರ್ವಜನಿಕರಿಗೆ ತಿಳಿಯುವ ಹಾಗೆ ಪ್ರದರ್ಶಿಸಬಹುದಿತ್ತು.

ಬಿಜೆಪಿ ಪಕ್ಷದ ನಾಯಕರು ಅಧಿಕಾರ ಕಳೆದುಕೊಂಡು ಪರದಾಡುತ್ತಿದ್ದಾರೆ. ಏನಾದರೂ ಮಾಡಿ ಈ ಸರಕಾರಕ್ಕೆ ಕೆಟ್ಟಹೆಸರು ತರಬೇಕೆಂದು ಪ್ರಯತ್ನ ಮಾಡುತ್ತಲೇ ಬರುತ್ತಿದ್ದಾರೆ. ಈದ್ ಮಿಲಾದ್ ಹಬ್ಬದ ನಿಮಿತ್ತ ಕೋಲಾರದ ಕ್ಲಾಕ್ ಟವರ್ ಸಮೀಪ ಕತ್ತಿಯ ಕಟೌಟ್ ನಿರ್ಮಾಣ ಮಾಡಿ ಅದರ ಮೇಲೆ ಅರಬ್ಬಿ ಭಾಷೆಯಲ್ಲಿ ದೇವರ ಆರಾಧನೆ ಬಗ್ಗೆ ಬರೆಯಲಾಗಿದೆ ಎಂದು ಅಲ್ಲಿಯ ಸಂಸದ ತೀವ್ರ ಆಕ್ಷೇಪ ಎತ್ತಿರುವುದು ಮತ್ತು ಅದನ್ನು ಗಲಾಟೆ ಆಗಬಹುದು ಎನ್ನುವ ಅಂದಾಜಿನಲ್ಲಿ ಅಲ್ಲಿಯ ಪೊಲೀಸ್ ಇಲಾಖೆ ಸರಿಪಡಿಸುವ ಕೆಲಸ ಮಾಡಿದೆ. ಇದು ಬಿಜೆಪಿಯವರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಷ್ಟಕ್ಕೂ ಒಂದು ಹಬ್ಬದ ಸಂದರ್ಭದಲ್ಲಿ ಮುಸ್ಲಿಂ ಸಮುದಾಯ ತಮ್ಮ ಆರಾಧಕನ ವಿಷಯ ಬರೆದರೆ ಈ ಬಿಜೆಪಿ ಯವರಿಗೆ ಏಕೆ ಕೋಪ? ಇತರೆ ಹಬ್ಬಗಳಲ್ಲಿ ಬರೆಯುವುದಿಲ್ಲವೇ? ಆ ರೀತಿ ಯಾವ ಧರ್ಮದವರೂ ಬರೆಯಬಾರದು ಎಂದು ನಿಷೇಧ ಮಾಡಲು ಸರಕಾರಕ್ಕೆ ಒತ್ತಾಯಿಸಿದರಾಯಿತು.
ಕರ್ನಾಟಕ ರಾಜ್ಯವನ್ನು ಆಳಿದ ರಾಜ ಮಹಾರಾಜರ ಕಟೌಟ್ ಗಳನ್ನು ಮಾತ್ರ ಅಳವಡಿಸಬೇಕೆನ್ನುವುದು ಈಗ ನಡೆದಿರುವ ವಾದ. ಅದನ್ನು ಅಲ್ಲಿಯ ಜನರಿಗೆ ಹಿರಿಯರು ತಿಳಿ ಹೇಳಬಹುದಿತ್ತು. ಅಷ್ಟಕ್ಕೂ ಔರಂಗಜೇಬ್ ಭಾರತ ದೇಶವನ್ನು 50 ವರ್ಷಗಳ ಕಾಲ ಆಳಿದ ಒಬ್ಬ ಮಹಾರಾಜ. ಆತನನ್ನು ಭಾರತ ಸರಕಾರ ನಿಷೇಧ ಮಾಡಿಲ್ಲ. ಆತನ ಆಡಳಿತ ಜನಪರವಾಗಿತ್ತು ಅಥವಾ ಜನವಿರೋಧಿಯಾಗಿತ್ತು ಎನ್ನುವುದು ಇತಿಹಾಸದಲ್ಲಿ ಓದುವ ವಿಷಯ. ಔರಂಗಜೇಬ್ ರಾಜ್ಯದ ಹೊರಗಿನವನು ಎನ್ನುವ ಜನ ರಾಜ್ಯದ ಹೊರಗಿನ ಇಂತಹ ಅನೇಕ ರಾಜ ಮಹಾರಾಜರ ಜಯಂತಿಗಳನ್ನು ರಾಜ್ಯದಲ್ಲಿ ಆಚರಿಸುವ ವೇಳೆ ಒಂದೇ ಒಂದು ಮಾತನಾಡುವುದಿಲ್ಲವೇಕೆ? ವಿರೋಧ ಮಾಡುವುದಾದರೆ ರಾಜ್ಯದ ಹೊರಗಿನ ಎಲ್ಲ ರಾಜ ಮಹಾರಾಜರ ಹೆಸರು, ಫೋಟೊ, ಜಯಂತಿ ಬಳಕೆಯನ್ನು ವಿರೋಧ ಮಾಡಬೇಕು.
ಇನ್ನೊಂದು ವಿಷಯ ಈದ್ ಮಿಲಾದ್ ಮೆರವಣಿಗೆಯ ಸಂದರ್ಭದಲ್ಲಿ ಖಡ್ಗದ ಕಟೌಟ್ ಮಾಡಲಾಗಿದೆ ಎನ್ನುವುದು ಆರೋಪ. ರಾಜ್ಯದಲ್ಲಿ ಖಡ್ಗದ ರೂಪಕವನ್ನು ಪ್ರದರ್ಶಿಸುವುದು ಅಪರಾಧವಲ್ಲ ಎನ್ನುವುದು ಪೊಲೀಸ್ ಇಲಾಖೆಯ ಮಾರ್ಗಸೂಚಿಯಲ್ಲಿದೆ. ರೂಪಕವನ್ನು ಪ್ರದರ್ಶಿಸುವುದು ಅಪರಾಧ ಎನ್ನುವ ರೀತಿಯಲ್ಲಿ ಮಾಧ್ಯಮದಲ್ಲಿ ತೋರಿಸುತ್ತಿರುವುದು ಸರಿಯಾದುದಲ್ಲ. ಅಷ್ಟಕ್ಕೂ ಅದನ್ನು ವಿರೋಧಿಸುವವರು ಖಡ್ಗವನ್ನು ಮೆರವಣಿಗೆಯಲ್ಲಿ ಬಳಸುವಾಗ ವಿರೋಧ ಮಾಡಲಿಲ್ಲವೇಕೆ? ರಾಜ್ಯದಲ್ಲಿ ಈಗಲೂ ಅಧಿಕಾರದಲ್ಲಿರುವವರನ್ನು ಸನ್ಮಾನಿಸುವಾಗ ಬೆಳ್ಳಿ ಖಡ್ಗವನ್ನು ನೀಡಿ ಸನ್ಮಾನಿಸುತ್ತಾರೆ. ಅಲ್ಲಿ ಖಡ್ಗವನ್ನು ಸಾರ್ವಜನಿಕವಾಗಿ ಎತ್ತಿ ತೋರಿಸುತ್ತಾರೆ. ಅದರ ಅರ್ಥ ಯಾರನ್ನೋ ಕೊಲ್ಲುತ್ತೀನಿ ಎಂದಲ್ಲ. ಖಡ್ಗ ಕೈಯಲ್ಲಿ ಹಿಡಿಯುವುದು ಹೆಮ್ಮೆಯ ಮತ್ತು ಗೆಲುವಿನ ವಿಷಯ. ಆದರೆ, ಕಾನೂನು ವ್ಯಾಪ್ತಿಯಲ್ಲಿ ಯಾವುದೇ ಆಯುಧವನ್ನು ಅನುಮತಿಯಿಲ್ಲದೇ ಸಾರ್ವಜನಿಕವಾಗಿ ತೆಗೆದುಕೊಂಡು ಹೋಗುವಂತಿಲ್ಲ ಮತ್ತು ಸಂಗ್ರಹಿಸುವಂತಿಲ್ಲ. ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ನವರು ಖಡ್ಗದಿಂದ ಉತ್ತರಿಸುವುದು ನಮಗೂ ಗೊತ್ತಿದೆ ಎಂದು ಹೇಳಿದ್ದಾರೆ. ಇದು ಪ್ರಚೋದನಾತ್ಮಕವಾದದ್ದು, ಅಲ್ಲಿ ಖಡ್ಗ ಹಿಡಿದು ಯಾರೂ ಹೋರಾಡಲು ಬಂದಿರಲಿಲ್ಲ.

ಭಾರತದ ನಕ್ಷೆಯಲ್ಲಿ ಹಸಿರು ಬಣ್ಣ ಹಚ್ಚಲಾಗಿದೆ ಎಂದು ಮಾಧ್ಯಮಗಳಲ್ಲಿ ಆರೋಪಿಸಲಾಗಿದೆ. ಕೇಸರಿ ಬಣ್ಣ ಹಚ್ಚುವುದು ತಪ್ಪಲ್ಲದಿದ್ದರೆ ಹಸಿರು ಬಣ್ಣ ಹಚ್ಚುವುದು ಹೇಗೆ ತಪ್ಪಾಗುತ್ತದೆ? ಕೇಂದ್ರ ಸರಕಾರ ಒಂದು ಆದೇಶ ಮಾಡಲಿ ಭಾರತದ ನಕ್ಷೆಯೊಳಗೆ ಇಂತಹದ್ದೇ ಬಣ್ಣ ಹಚ್ಚಬಹುದು ಎಂದರೆ ಅದನ್ನು ಒಪ್ಪಬಹುದು. ಈಗ ಭಾರತದ ನಕ್ಷೆಗೆ ಯಾವ ಬಣ್ಣ ಹಚ್ಚಬೇಕು ಎಂದು ಎಲ್ಲಿಯೂ ನಮೂದಿಸಿಲ್ಲ. ಒಬ್ಬರು ಕೇಸರಿ ಬಣ್ಣ ಹಚ್ಚಿದರೆ, ಇನ್ನೊಬ್ಬರು ಹಸಿರು ಬಣ್ಣ ಹಚ್ಚುತ್ತಾರೆ, ಮತ್ತೊಬ್ಬರು ಕೆಂಪು ಬಣ್ಣ ಹಚ್ಚುತ್ತಾರೆ. ಇದರಲ್ಲಿ ತಪ್ಪು ಹುಡುಕುವ ಅವಶ್ಯಕತೆಯೇನಿದೆ? ಏನಾದರೂ ಮಾಡಿ ಮುಸ್ಲಿಮರ ವಿರುದ್ದ ಆರೋಪ ಮಾಡುವುದು. ಅವರನ್ನು ಕ್ರಿಮಿನಲ್ ತರಹ ಬಿಂಬಿಸುವುದು ಮತ್ತು ಅವರ ವೈಯಕ್ತಿಕ ಬದುಕಿಗೆ ಕುತ್ತು ತರುವುದೇ ಬಿಜೆಪಿ ಪಕ್ಷದ ಕೆಲಸವಾಗಿದೆ.
ಇದನ್ನೂ ಓದಿ ಶಿವಮೊಗ್ಗ ಗಲಾಟೆ | ಧಾರ್ಮಿಕ ಕಾರ್ಯಕ್ರಮಕ್ಕೆ ಯಾರೇ ಧಕ್ಕೆ ತಂದರೂ ಸಹಿಸಲ್ಲ: ಸಿದ್ದರಾಮಯ್ಯ
ಇದನ್ನೂ ಓದಿ ತಲ್ವಾರ್‌ಗೆ ತಲ್ವಾರ್ ಹಿಡಿದು ಉತ್ತರ ಕೊಡಲು ಹಿಂದೂ ಸಮಾಜಕ್ಕೂ ಬರುತ್ತೆ: ಕೆ ಎಸ್ ಈಶ್ವರಪ್ಪ
2024ರ ಚುನಾವಣೆ ಮುಗಿಯುವವರೆಗೂ ಏನಾದರೂ ಮಾಡಿ ಇಂಡಿಯಾ ಮೈತ್ರಿಕೂಟಕ್ಕೆ ಕಪ್ಪು ಚುಕ್ಕೆ ತರಬೇಕು. ಭಾರತ ಮತ್ತು ಹಿಂದುಗಳು ಸುರಕ್ಷಿತರಾಗಿರಬೇಕೆಂದರೆ ಬಿಜೆಪಿಗೆ ಮತ ನೀಡಬೇಕು ಎನ್ನುವ ವಾತಾವರಣ ನಿರ್ಮಾಣ ಮಾಡುವುದು ಬಿಜೆಪಿಯ ಉದ್ದೇಶದಂತಿದೆ. ಇಂತಹ ಸಂದರ್ಭದಲ್ಲಿ ಸುಲಭವಾಗಿ ಆಹಾರವಾಗುವುದು ಮುಸ್ಲಿಂ ಸಮುದಾಯ. ಹಾಗಾಗಿ ಮುಸ್ಲಿಂ ಸಮಾಜದ ಹಿರಿಯರು, ಬುದ್ಧಿಜೀವಿಗಳು, ಸಂಘಸಂಸ್ಥೆಗಳು ಮತ್ತು ರಾಜಕೀಯ ನಾಯಕರು ಸೂಕ್ಷ್ಮವಾಗಿ ನಡೆದುಕೊಳ್ಳಬೇಕು.ಕೋಮುವಾದಿಗಳಿಗೆ ಆಹಾರವಾಗುವಂತಹ ಯಾವುದೇ ವಿಷಯವನ್ನು ತಪ್ಪಿಸಬೇಕು. ತಮ್ಮ ತಪ್ಪಿಲ್ಲದಿದ್ದರೂ ಸಹಿಸಿಕೊಳ್ಳುವ ಮೂಲಕ ಕೋಮುವಾದಿಗಳನ್ನು ವಿಷಯಾಧಾರಿತವಾಗಿ ಸೋಲಿಸಬೇಕು. ಕಾನೂನಾತ್ಮಕ ಹೋರಾಟ ಮಾಡುವುದರ ಮೂಲಕ ಅವರನ್ನು ಸೋಲಿಸಬೇಕು. ನಮ್ಮ ದೇಶದ ಸಂವಿಧಾನ ನೀಡಿರುವ ಅವಕಾಶಗಳನ್ನು ಬಳಸಿಕೊಳ್ಳಬೇಕು. ಯಾವುದೇ ಸಂದರ್ಭದಲ್ಲಿ ಮುಸ್ಲಿಂ ಸಮುದಾಯ ಕ್ರಿಯೆಗೆ ಪ್ರತಿಕ್ರಿಯೆ ಎನ್ನಬಾರದು. ಕಷ್ಟವಾದರೂ ಸಹಿಸಿಕೊಳ್ಳಬೇಕು, ಸಹಿಸಿಕೊಂಡವನೇ ಗೆಲ್ಲುತ್ತಾನೆ ಎನ್ನುವ ಸತ್ಯವನ್ನು ಅರಿಯಬೇಕು.

ಡಾ ರಝಾಕ್ ಉಸ್ತಾದ್
ರಾಜ್ಯ ಉಪಾಧ್ಯಕ್ಷರು, ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿ ರಾಯಚೂರು