ಅಕ್ರಮ ಹಣದಿಂದ ಸರ್ಕಾರ ನಡೆಸುವುದನ್ನು ನಿಲ್ಲಿಸಿ, ಮದ್ಯಪಾನ ಮಾರುವುದನ್ನು ಸರ್ಕಾರ ನಿಷೇಧಿಸಲಿ ಎಂದು ಆಗ್ರಹಿಸಿ ನಶಾಮುಕ್ತ ಭಾರತ ಜಾಗೃತಿ ಆಂದೋಲನ ಸಮಿತಿ ನೇತೃತ್ವದಲ್ಲಿ ಕಲಬುರಗಿ ನಗರದ ಟೌನ್ ಹಾಲ್‌ನ ಗಾಂಧೀಜಿ ಪ್ರತಿಮೆ ಸಮ್ಮುಖದಲ್ಲಿ ಜಾಗೃತಿ ಸಮಾವೇಶ ನಡೆಸಿದರು.
“ಕುಡಿತಕ್ಕೆ ಅಂಟಿಕೊಳ್ಳುವವನು ರಕ್ಕಸನಾಗುತ್ತಾನೆ, ತನ್ನ ಚಟದ ದಾಸನಾಗುತ್ತಾನೆ, ಎಲ್ಲ ಅಪರಾಧಗಳ ಮೂಲ ಸೆಲೆಯಾಗುತ್ತಾನೆ. ಮತ್ತು ಭರಿಸುವ ಮದಿರೆ, ಮತ್ತು ಮದ್ದುಗಳು ಮಾನವನು ಸೃಷ್ಟಿಸಿಕೊಂಡಿರುವ ಸ್ವಯಂ ನಾಶದ ಪಾನೀಯ ಹಾಗೂ ಪದಾರ್ಥಗಳಾಗಿವೆ” ಎಂದು ಹೇಳಿದರು.
“ಕುಡಿತ ಮತ್ತು ಅದರಿಂದುಂಟಾಗುವ ಅನಾಹುತಗಳು ಅಭಿವೃದ್ಧಿಶೀಲ ಸ್ವತಂತ್ರ ಭಾರತಕ್ಕೆ ಅಂಟಿರುವ ಮದ್ದಿಲ್ಲದ ಮಾರಕ ರೋಗಗಳಾಗಿವೆ. ಪಂಚವಾರ್ಷಿಕ ಯೋಜನೆ ಹಾಗೂ ಇತರ ಬಡವರಪರ ಯೋಜನೆಗಳೆಲ್ಲವನ್ನೂ ಮಾದಕ ಪೇಯ ಮತ್ತು ಪದಾರ್ಥಗಳೇ ಬಹುಮಟ್ಟಿಗೆ ನುಂಗಿಹಾಕಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ನಶಾ ಪ್ರಚೋದಕ ಪಾನೀಯ ಮತ್ತು ಪದಾರ್ಥಗಳ ಹಾನಿ ಕೇವಲ ಅವುಗಳ ಚಟ ಅಂಟಿಸಿಕೊಂಡ ವ್ಯಕ್ತಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ಅವನ ಕುಟುಂಬ, ಸಮುದಾಯ, ಊರು ಮತ್ತು ಆ ಮೂಲಕ ಇಡೀ ದೇಶದ ಸಾಮಾಜಿಕ ನೆಮ್ಮದಿ ಹಾಗೂ ಆರ್ಥಿಕ ಸುಸ್ಥಿತಿಯನ್ನು ಅಸ್ತವ್ಯಸ್ತಗೊಳಿಸುತ್ತದೆ. ಇದರ ಪರಿಣಾಮವಾಗಿ ವ್ಯಕ್ತಿ ಮತ್ತು ಸಮಾಜದ ಆರೋಗ್ಯ, ಸಾಮಾಜಿಕ ನೆಮ್ಮದಿ ಹಾಗೂ ಬಡತನದ ಅವಸ್ಥೆಯನ್ನು ಇನ್ನಷ್ಟು ಹದಗೆಡಿಸಿ ನಿತ್ಯ ನಿರಂತರ ಯಾತನೆಯ ವಾಸ್ತವ ನರಕವನ್ನೇ ಸೃಷ್ಟಿಸುತ್ತದೆ” ಎಂದರು.

“ಕುಡುಕರು ಮತ್ತು ಮಾದಕ ವ್ಯಸನಿಗಳ ಕುಟುಂಬದ ಕೌಟುಂಬಿಕ ಸಂಬಂಧಗಳು ಮೂರಾ ಬಟ್ಟೆಯಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಅಮಲಿನ ವಶದಲ್ಲಿ ಬುದ್ಧಿಹೀನನಾಗುವ ವ್ಯಕ್ತಿ ಕಾಲು ಕೆದರಿ ಜಗಳ, ತಂಟೆಗೆ ತೊಡಗುವುದು ಸಹಜ. ಇದರಿಂದ ಸಾಮುದಾಯಿಕ ಸಂಬಂಧ ಹಾಳಾಗಿ, ಹೊಡೆದಾಟ ಹಾಗೂ ಕೊಲೆಗಳಂಥ ಅಪರಾಧಕ್ಕೂ ದಾರಿ ಮಾಡಿಕೊಡುವುದುಂಟು. ಇದರಿಂದ ಕುಡುಕರು ಪೊಲೀಸ್ ಸ್ಟೇಷನ್, ಜೈಲು ಪಾಲಾಗಿ ಕುಟುಂಬದ ಅವಲಂಬಿತರನ್ನು ಅನಾಥರನ್ನಾಗಿ ಮಾಡುತ್ತಾರೆ. ಮಕ್ಕಳ ಶಿಕ್ಷಣ, ಆರೋಗ್ಯ ಹಾಳಾಗಿ ಹೋಗುತ್ತದೆ” ಎಂದು ಹೇಳಿದರು.
“ನಶಾ ಪ್ರಚೋದಕ ಪಾನೀಯ ಮತ್ತು ಪದಾರ್ಥಗಳು ಇಷ್ಟೆಲ್ಲಾ ಹಾನಿ ಉಂಟು ಮಾಡುವುದು ಎಲ್ಲರಿಗೂ ಗೊತ್ತಿರುವ ಸತ್ಯ. ಆದರೂ ಅಧಿಕಾರಸ್ಥರು ಅವುಗಳ ಉತ್ಪಾದನೆ ಮತ್ತು ಸೇವನೆಗಳನ್ನು ಕಟ್ಟುನಿಟ್ಟಿನಿಂದ ನಿಷೇಧಿಸುವ ಬದಲು ಮಾರಾಟಕ್ಕೆ ಪ್ರೇರೇಪಿಸುತ್ತಾರೆ” ಎಂದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಸಾವಿರ ಮದ್ಯದಂಗಡಿ ತೆರೆಯುವ ಪ್ರಸ್ತಾಪ ಕೈಬಿಡುವಂತೆ ಆಗ್ರಹ
ನಶಾಮುಕ್ತ ಭಾರತ ಆಂದೋಲನ ಸಮಾವೇಶದಲ್ಲಿ ನಾಡಿನ ಪೂಜ್ಯ ಮಠಾಧೀಶರು ಮತ್ತು ಆಳಂದ ಮತಕ್ಷೇತ್ರದ ಶಾಸಕ ಬಿ ಆರ್ ಪಾಟೀಲರು, ರಾಜಶೇಖರ ಪಾಟೀಲ ಹೆಬಳಿ, ಅಶ್ವಿನಿ ಮದನಕರ್, ಪ್ರೊ. ಆರ್ ಕೆ ಹುಡಗಿ, ಕೆ ನೀಲಾ, ವಾಜ್ ಬಾಬಾ, ರವೀಂದ್ರ ಶಾಬಾದಿ, ದೀಪಕ ಗಾಲಾ, ರೇವಣಸಿದ್ದಪ್ಪ ಸಾತನೂರ, ಎನ್ ಶಹಜಾನ್ ಅಕ್ತರ, ಬಿ ಎನ್ ಪಾಟೀಲ, ಶರಣಗೌಡ ಸೇರಿದಂತೆ ಹೆಚ್ಚಿನ ಸಂಖ್ಯೆಯ ಮಹಿಳೆಯರು, ಸಾರ್ವಜನಿಕರು ಇದ್ದರು.