ಹುಮನಾಬಾದ ತಾಲೂಕಿನ ಹಳ್ಳಿಖೇಡ (ಬಿ) ಪಟ್ಟಣದಲ್ಲಿ ರವಿವಾರ ಸುರಿದ ಧಾರಾಕಾರ ಮಳೆಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಒಂದು ಕೋಣೆ ಸಂಪೂರ್ಣ ನೆಲಕ್ಕುರುಳಿದ್ದು, ಅದೃಷ್ಟವಶಾತ್ ವಿದ್ಯಾರ್ಥಿಗಳು ಅಪಾಯದಿಂದ ಪಾರಾಗಿದ್ದಾರೆ.
ಸೋಮವಾರ ಮುಂಜಾನೆ ಶಾಲಾ ಆವರಣದಲ್ಲಿ ಗಾಂಧೀಜಿ ಜಯಂತಿ ಆಚರಿಸುವ ವೇಳೆ ಈ ಅವಘಡ ಸಂಭವಿಸಿದ್ದು, ವಿದ್ಯಾರ್ಥಿ ಹಾಗೂ ಶಿಕ್ಷಕರು ಆವರಣದಲ್ಲಿ ಇರುವ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಹಳ್ಳಿಖೇಡ(ಬಿ) ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 112 ಮಕ್ಕಳು ವ್ಯಾಸಂಗ ಮಾಡುತ್ತಾರೆ. ಆದರೆ ವಿದ್ಯಾರ್ಥಿಗಳಿಗೆ ಅನುಗುಣವಾಗಿ ಕೋಣೆಗಳಿಲ್ಲ. ಕಳಪೆ ಕಾಮಗಾರಿ ನಡೆದ ಪರಿಣಾಮ ಸಂಪೂರ್ಣ ಒಂದು ಕೋಣೆ ನೆಲಕ್ಕುರುಳಿದೆ. ಶಿಥಿಲಗೊಂಡ ಕೋಣೆ ನೆಲಸಮಗೊಳಿಸಲು ಮುಖ್ಯ ಶಿಕ್ಷಕರು ಇಲಾಖೆಗೆ ಪತ್ರ ಬರೆದರೂ ಶಿಥಿಲಾವಸ್ಥೆಗೆ ತಲುಪಿದ ಕೊಠಡಿ ನೆಲಸಮಗೊಳಿಸದೆ ಇಲಾಖೆ ನಿರ್ಲಕ್ಷ್ಯ ವಹಿಸಿತ್ತು. ಪರಿಣಾಮ ಈ ಘಟನೆ ಜರುಗಿದೆ. ಮುಂದೆ ಇಂತಹ ಅನಾಹುತಗಳು ಮರುಕಳಿಸದಂತೆ ಇಲಾಖೆ ಎಚ್ಚರವಹಿಸಬೇಕೆಂದು ಆಪ್ ಮುಖಂಡ ಪವನ ಗೊಂಡಾ ಈದಿನ.ಕಾಮ್ ದೊಂದಿಗೆ ಮಾತನಾಡಿ ಆಗ್ರಹಿಸಿದರು.
ಈ ಬಗ್ಗೆ ಶಾಲೆಯ ಮುಖ್ಯಗುರು ಕುಪೇಂದ್ರ ಶಾಸ್ತ್ರಿ ಈದಿನ.ಕಾಮ್ ದೊಂದಿಗೆ ಮಾತನಾಡಿ, ನಿನ್ನೆ ಮುಂಜಾನೆ ಗಾಂಧೀಜಿ ಜಯಂತಿ ಆಚರಿಸುವ ಸಂದರ್ಭದಲ್ಲಿ ಶಾಲೆಯ ಒಂದು ಕೋಣೆ ಛಾವಣಿ ಕುಸಿದು ಬಿದ್ದಿದೆ. ಕೋಣೆಯ ಮೇಲ್ಭಾಗದಲ್ಲಿ ನಿರ್ಮಿಸಿದ ನಾಲ್ಕು ಶೌಚಾಲಯಗಳು ನೆಲಕ್ಕುರುಳಿವೆ. ಈ ಕೋಣೆ ಶಿಥಿಲಗೊಂಡ ಹಿನ್ನಲೆಯಲ್ಲಿ ಬೀಗ ಹಾಕಲಾಗಿತ್ತು. ಶಿಕ್ಷಣ ಇಲಾಖೆ ಅಧಿಕಾರಿಗಳಿಗೂ ಕೋಣೆ ಶಿಥಿಲಾವಸ್ಥೆ ಬಗ್ಗೆ ಮಾಹಿತಿ ನೀಡಲಾಗಿತ್ತು. ಯಾವುದೇ ಅಪಾಯ ನಡೆದಿಲ್ಲ. ಸದ್ಯ ಆವರಣದಲ್ಲೇ ಇರುವ ಉರ್ದು ಶಾಲೆಯ ಎರಡು ಕೋಣೆಯಲ್ಲಿ ಮಕ್ಕಳ ಬೋಧನೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ” ಎಂದು ತಿಳಿಸಿದ್ದಾರೆ.
ಶಾಸಕರ ಭೇಟಿ; ಹೊಸ ಕೊಠಡಿ ಮಂಜೂರು:
ಘಟನಾ ಸ್ಥಳಕ್ಕೆ ಹುಮನಾಬಾದ್ ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ್, ತಹಸೀಲ್ದಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಭೇಟಿ ನೀಡಿ ಪರಿಶೀಲಿಸಿದರು. ಶಾಸಕ ಡಾ. ಸಿದ್ದು ಪಾಟೀಲ್ ಮಾತನಾಡಿ, “ಇಂತಹ ಘಟನೆಗಳನ್ನು ಮರುಕಳಿಸದಂತೆ ಪರಿಶೀಲಿಸಿ ಕ್ಷೇತ್ರದಲ್ಲಿರುವ ಎಲ್ಲಾ ಶಾಲೆಗಳಿಗೆ ಕ್ಷೇತ್ರದ ಶಿಕ್ಷಣಾಧಿಕಾರಿಗಳು ಭೇಟಿ ನೀಡಿ ಶಿಥಿಲಗೊಂಡಿರುವ ಶಾಲಾ ಕಟ್ಟಡಗಳ ವರದಿಯನ್ನು ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಕುಸಿದಿರುವ ಶಾಲಾ ಕಟ್ಟಡವನ್ನು ತಕ್ಷಣವೇ ನೆಲಸಮಗೊಳಿಸಿ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಯೋಜನೆಯಲ್ಲಿ 3 ಹೊಸ ಕೊಠಡಿಗಳನ್ನು ಮಂಜೂರಾತಿ ಮಾಡಲು ಅಧಿಕಾರಿಗಳಿಗೆ ಆದೇಶಿಸಿದರು.

ಈ ಸುದ್ದಿ ಓದಿದ್ದೀರಾ? ಬೀದರ್ | ಹೊಸ ಮದ್ಯದಂಗಡಿಗಳಿಗೆ ಪರವಾನಿಗೆ ನೀಡುವ ಸರ್ಕಾರದ ನಡೆಗೆ ಖಂಡನೆ
ಜಿಲ್ಲೆಯಾದ್ಯಂತ ಅನೇಕ ಶಾಲೆಗಳಲ್ಲಿ ಶಿಥಿಲಾವಸ್ಥೆಗೆ ತಲುಪಿದ ಕೋಣೆಗಳಿದ್ದು, ಕುಸಿತದ ಆತಂಕದಲ್ಲಿಯೇ ವಿದ್ಯಾರ್ಥಿಗಳಷ್ಟೇ ಅಲ್ಲ ಶಿಕ್ಷಕರೂ ದಿನಗಳನ್ನು ಕಳೆಯುತ್ತಿದ್ದಾರೆ. ಇನ್ನು ಹಲವೆಡೆ ವಿದ್ಯಾರ್ಥಿಗಳಿಗೆ ಅನುಗುಣವಾಗಿ ಕೋಣೆಗಳಿಲ್ಲ, ಕೆಲವು ಕಡೆ ಮಕ್ಕಳ ಸಂಖ್ಯೆಗಿಂತ ಕೋಣೆಗಳ ಸಂಖ್ಯೆಯೇ ಅಧಿಕವಾಗಿದೆ. ಕಳೆಪೆ ಕಾಮಗಾರಿ ನಡೆಸಿದರೂ ಇಲಾಖೆ ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳದ ಪರಿಣಾಮ ಇಂತಹ ಅನಾಹುತಕ್ಕೆ ಕಾರಣವಾಗುತ್ತವೆ. ಮಕ್ಕಳು ಕಲಿಕೆಯ ವೇಳೆ ಈ ಘಟನೆ ಸಂಭವಿಸಿದರೆ ಮಕ್ಕಳ ಹಾಗೂ ಶಿಕ್ಷಕರ ಗತಿ ಏನಾಗುತ್ತಿತ್ತು ಎನ್ನುವುದು ಪ್ರಜ್ಞಾವಂತ ನಾಗರಿಕರ ಒಕ್ಕೊರಲ ಪ್ರಶ್ನೆಯಾಗಿದೆ.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.