- ದಾಳಿಕೋರರಿಗೆ ‘ಶ್ರೀ ರಕ್ಷೆ’ ನೀಡುತ್ತಿರುವ ಸರ್ಕಾರ
- ಸರ್ಕಾರ ಗಲಭೆಕೋರರ ಪರ ಇದೆ ಎಂದು ಸಾಬೀತು
ಹಳೆ ಹುಬ್ಬಳ್ಳಿ, ಡಿಜೆ ಹಳ್ಳಿ-ಕೆಜಿ ಹಳ್ಳಿ ಗಲಭೆಗಳಲ್ಲಿ ದಾಳಿ ಮಾಡಿದ ದಾಳಿಕೋರರ ವಿರುದ್ಧ ಪ್ರಕರಣಗಳನ್ನು ಹಿಂಪಡೆಯಲು ಸರ್ಕಾರ ಮುಂದಾಗಿರುವುದು ಇವರ ತುಷ್ಟೀಕರಣ ನೀತಿಗೆ ಹಿಡಿದ ಕನ್ನಡಿಯಾಗಿದೆ ಎಂದು ಬಸವರಾಜ ಪಾಟೀಲ ಯತ್ನಾಳ ಟೀಕಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, “ಬ್ರದರ್ಸ್ ವಿರುದ್ದ ಪ್ರಕರಣಗಳನ್ನು ಹಿಂಪಡೆಯಲು ಪತ್ರ ಬರೆದಿರುವ ಡಿ ಕೆ ಶಿವಕುಮಾರ್ ರಾಜ್ಯದ ಶಾಂತಿ ಕದಡುವ ಪುಂಡ ಪೋಕರಿಗಳಿಗೆ ನೇರ ಬೆಂಬಲ ನೀಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
“ಹುಬ್ಬಳ್ಳಿ ಗಲಭೆ ಪ್ರಕರಣ ಕೈಬಿಡುವಂತೆ ಗೃಹ ಇಲಾಖೆಗೆ ‘ಪ್ರಭಾವಿ’ ಸಚಿವರೊಬ್ಬರು ಪತ್ರ ಬರೆದಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. 1000 ಜನ ಸೇರಿ ಪೊಲೀಸ್ ಠಾಣೆಗೆ ಕಲ್ಲೆಸೆದಿದ್ದು ಮನ್ನಿಸಲಾಗದ ಅಪರಾಧ ಎಂದು ಈಗಾಗಲೇ ನ್ಯಾಯಾಲಯ ತೀರ್ಪು ನೀಡಿದೆ. ಇವರ ಜಾಮೀನು ಅರ್ಜಿಯನ್ನು ಘನತೆವೆತ್ತ ಕರ್ನಾಟಕ ಉಚ್ಚ ನ್ಯಾಯಾಲಯವೂ ಸಹ ತಿರಸ್ಕರಿಸಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬುರ್ನಾಸು ಬಿಜೆಪಿ ಬಿಟ್ಟು ಒಂದಾಗುವರೆ ಯಡಿಯೂರಪ್ಪ ಮತ್ತು ಕುಮಾರಸ್ವಾಮಿ?
“ಶಾಂತಿ ಸೌಹಾರ್ದತೆ ಹಾಳು ಮಾಡುವ ನಿಟ್ಟಿನಲ್ಲಿ ಅಂದು ಪೊಲೀಸ್ ಠಾಣೆಗೆ ಕಲ್ಲೆಸೆದವರ ಮುಖಗಳನ್ನು ಸಿ.ಸಿ. ಕ್ಯಾಮೆರಾದಿಂದ ಪಡೆಯಬಹುದು ಹಾಗೂ ಅವರ ಚಹರೆಯನ್ನು ಅದರಿಂದ ಖಾತರಿ ಪಡೆಸಬಹುದು ಎಂದು ದ್ವಿಸದಸ್ಯ ಪೀಠ ಹೇಳಿತ್ತು. ಮುಂದುವರೆದು, ಅಲ್ಲಿ ನೆರೆದಿದ್ದ ಉದ್ರಿಕ್ತರ ಗುಂಪನ್ನು ಅವರ ಮೊಬೈಲ್ ರೆಕಾರ್ಡ್ಸ್ (ಟವರ್ ಲೊಕೇಶನ್) ಮೂಲಕ ಸಹ ಖಾತರಿಗೊಳಿಸಬಹುದು. ಹಾಗಾಗಿ ಸಮಾಜದ ಶಾಂತಿ, ಸುವ್ಯವಸ್ಥೆಯನ್ನು ಹಾಳುಗೆಡವಿದ ಉದ್ರಿಕ್ತರಿಗೆ ಜಾಮೀನು ನೀಡಲಾಗುವುದಿಲ್ಲ ಎಂದು ಸ್ಪಷ್ಟವಾಗಿ ತಿರಸ್ಕರಿಸಿ, ವಿಶೇಷ ನ್ಯಾಯಾಲಯದ ತೀರ್ಪನ್ನು ಎತ್ತು ಹಿಡಿದಿತ್ತು” ಎಂದಿದ್ದಾರೆ.
“ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಹುಬ್ಬಳ್ಳಿ ಗಲಾಟೆ ಪ್ರಕರಣವನ್ನು ಕೈ ಬಿಡಲು ಸರ್ಕಾರದ ಸಚಿವರೊಬ್ಬರು ಪ್ರಯತ್ನಿಸುತ್ತಿರುವುದು ಅಧಿಕಾರದ ದುರ್ಬಳಕೆ ಹಾಗೂ ಅಪರಾಧಗಳನ್ನು legitimize ಮಾಡುವ ಪ್ರಯತ್ನ ಎಂದರೆ ತಪ್ಪಾಗುವುದಿಲ್ಲ. ಸಾರ್ವಜನಿಕ ಆಸ್ತಿ ಪಾಸ್ತಿಯನ್ನು ಹಾಳು ಮಾಡಿದ ಪಟ್ಟಭದ್ರ ಹಿತಾಸಕ್ತಿಗಳನ್ನು ಜೈಲಿಗಟ್ಟಿ, ಸರ್ಕಾರಕ್ಕಾದ ನಷ್ಟವನ್ನು ಅವರಿಂದ ಭರಿಸುವ ಕ್ರಮ ಜರುಗಿಸುವುದನ್ನು ಬಿಟ್ಟು, ಅವರಿಗೆ ‘ಶ್ರೀ ರಕ್ಷೆ’ ನೀಡುತ್ತಿರುವುದು ಸರ್ಕಾರ ಗಲಭೆಕೋರರ ಪರ ಇದೆ ಎಂದು ಸಾಬೀತಾಗುತ್ತದೆ” ಎಂದು ದೂರಿದ್ದಾರೆ.