ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ (ಪ್ರೊ.ಕೃಷ್ಣಪ್ಪ ಸ್ಥಾಪಿತ) ಕಾರ್ಯಕರ್ತರು ದಾವಣಗೆರೆ ಜಿಲ್ಲಾ ಸಂಚಾಲಕ ಮಂಜುನಾಥ ಕುಂದವಾಡ ನೇತೃತ್ವದಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿದರು.
ದಾವಣಗೆರೆ ನಗರಕ್ಕೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ವಿವಿಧ ಕಾರ್ಯಕ್ರಮಗಳ ನಿಮಿತ್ತ ಆಗಮಿಸಿದ್ದ ವೇಳೆ ಕಾರ್ಯಕರ್ತರು ಅವರಿಗೆ ಮನವಿ ಸಲ್ಲಿಸಿದರು.
ದಸಂಸ ಜಿಲ್ಲಾ ಸಂಚಾಲಕ ಮಂಜುನಾಥ ಕುಂದವಾಡ ಮಾತನಾಡಿ, “ಸುಮಾರು 15 ವರ್ಷಗಳ ಹಿಂದೆ ದಾವಣಗೆರೆ ನಗರದ ಹೈಸ್ಕೂಲ್ ಮೈದಾನದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರದ 2ನೇ ವರ್ಷದಲ್ಲಿ ಸಾಧನಾ ಸಮಾವೇಶ ನಡೆದಿತ್ತು. ಆ ವೇಳೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ದಲಿತ ಪರ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದ ಪರಿಣಾಮವಾಗಿ ಅವರು ನಗರದಲ್ಲಿ ಅಂದಾಜು 5 ಕೋಟಿ ರೂ. ವೆಚ್ಚದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಘೋಷಿಸಿ ತಕ್ಷಣವೇ 3 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದರು. ಅಂದಿನಿಂದ ಈವರೆಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದ ಭವನ ನಿರ್ಮಾಣಕ್ಕೆ ಸೂಕ್ತ ಸ್ಥಳ ನಿಗದಿ ಆಗದೇ ಕಟ್ಟಡ ನಿರ್ಮಾಣ ಕಾಮಗಾರಿ ನೆನೆಗುದಿಗೆ ಬಿದ್ದಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಈ ಹಿಂದೆ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಹೆಚ್ ಆಂಜನೇಯ ಅವರು ಸಮಾಜ ಕಲ್ಯಾಣ ಮಂತ್ರಿಯಾಗಿದ್ದು, ಎಸ್ ಎಸ್ ಮಲ್ಲಿಕಾರ್ಜುನ್ ಅವರು ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದಾಗಲೂ ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಭವನ ನಿರ್ಮಾಣಕ್ಕೆ ಪ್ರಯತ್ನಗಳು ನಡೆದಿದ್ದವು. ಸಚಿವರಾಗಿದ್ದ ಎಸ್ ಎಸ್ ಮಲ್ಲಿಕಾರ್ಜುನ್’ ಅವರು ಸ್ವತಃ ತಾವೇ ಮುತುವರ್ಜಿ ವಹಿಸಿ ಭವನದ ನೀಲನಕ್ಷೆ ಹಾಗೂ ಅಂದಾಜು ವೆಚ್ಚ ತಯಾರು ಮಾಡಿಸಿ ಸೂಕ್ತ ಸ್ಥಳದಲ್ಲಿ ಅಂಬೇಡ್ಕರ್ ಭವನ ನಿರ್ಮಿಸಿ ಕೊಡುವುದಾಗಿ ಘೋಷಣೆ ಮಾಡಿದ್ದರು. ಆಗಲೂ ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪ ಕೂಡ ಮಹಾನಗರ ಪಾಲಿಕೆ ಹಿಂಭಾಗದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಮಾಡಿಸುವುದಾಗಿ ಭರವಸೆ ನೀಡಿದ್ದರು. ಆದರೂ ಕಾಣದ ಕೈಗಳ ಕೈವಾಡದಿಂದ ಆ ಭರವಸೆ ಹುಸಿಯಾಗಿದೆ” ಎಂದರು.
“ಪ್ರಸ್ತುತ ಸರ್ಕಾರದ ಸಮಾಜ ಕಲ್ಯಾಣ ಸಚಿವ ಡಾ ಎಚ್ ಸಿ ಮಹದೇವಪ್ಪನವರು ಇತ್ತೇಚೆಗೆ ದಾವಣಗೆರೆಗೆ ಭೇಟಿ ನೀಡಿದಾಗ ಭವನದ ವಿಷಯ ಪುನಃ ಮುನ್ನೆಲೆಗೆ ಬಂದು, ಈ ಬಾರಿ ಶತಾಯಗತಾಯ ಭವನ ನಿರ್ಮಾಣ ಮಾಡಿಸಲೇಬೇಕೆಂಬ ಹಠಕ್ಕೆ ಬಿದ್ದಿರುವ ದಲಿತ ಸಮುದಾಯ, ಹಲವು ದಲಿತ ಸಂಘಟನೆಗಳು, ರೈತ-ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳು, ಪ್ರಗತಿಪರ ಚಿಂತಕರು, ಮಹಿಳಾ ಹೋರಾಟಗಾರ್ತಿಯರು, ವಕೀಲರು, ವಿವಿಧ ಶೋಷಿತ ಸಮಾಜಗಳ ಮುಖಂಡರು ಒಗ್ಗೂಡಿ “ಡಾ.ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣ ಸಂಚಾಲನ ಸಮಿತಿ”ಯನ್ನು ರಚಿಸಿಕೊಂಡು ಹೋರಾಟಕ್ಕೆ ಇಳಿದಿದ್ದೇವೆ” ಎಂದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಮದ್ಯದಂಗಡಿ ತೆರೆಯಲು ಪರವಾನಗಿ ನೀಡದಂತೆ ಗ್ರಾಮೀಣ ಕೂಲಿಕಾರರ ಸಂಘಟನೆ ಆಗ್ರಹ
“ದಾವಣಗೆರೆ ನಗರದ ಮಧ್ಯ ಭಾಗದ ಸೂಕ್ತವಾದ ಯಾವುದಾದರೊಂದು ಸ್ಥಳದಲ್ಲಿ ಡಾ ಬಿ ಆರ್ ಅಂಬೇಡ್ಕರ್ ಭವನ ನಿರ್ಮಿಸಬೇಕು. ಇಲ್ಲವೇ ದಾವಣಗೆರೆ ನಗರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಬಾಡಾ ಕ್ರಾಸ್‌ನಿಂದ ಶಾಮನೂರುವರೆಗಿನ ಬೈಪಾಸ್ ರಸ್ತೆಯ ಅಕ್ಕಪಕ್ಕ ಕನಿಷ್ಠ 2 ಎಕರೆ ಜಮೀನನ್ನು ಖರೀದಿಸಿ ಅಂಬೇಡ್ಕರ್ ಭವನ ನಿರ್ಮಿಸಬೇಕು” ಎಂದು ಜಿಲ್ಲೆಯ ದಲಿತರು, ಪ್ರಗತಿಪರರು ಒಕ್ಕೊರಲ ಬೇಡಿಕೆ ಸಲ್ಲಿಸಿದರು.
ಈ ವೇಳೆ ಐರಣಿ ಚಂದ್ರು, ರಾಮಚಂದ್ರಪ್ಪ, ಹೆಗ್ಗೆರೆ ರಂಗಪ್ಪ, ಪ್ರದೀಪ್, ಲಿಂಗರಾಜು, ತಿಮ್ಮಣ್ಣ, ವಿಜಯಲಕ್ಷ್ಮಿ, ವೀರೇಶ್, ಮಾಂತೇಶ್, ಜಯಪ್ಪ, ಬಸವರಾಜ್, ಚೌಡೇಶ್, ಹರಿಹರದ ಮಲ್ಲೇಶ್ ಸೇರಿದಂತೆ ಇತರರು ಇದ್ದರು.