ಎರಡು ವರ್ಷಗಳ ಹಿಂದೆ ರಾಜ್ಯದಲ್ಲಿ ತಲ್ಲಣ ಮೂಡಿಸಿದ್ದ ಡಿಜೆಹಳ್ಳಿ ಪ್ರಕರಣವು ಪ್ರವಾದಿ ಅವರ ವಿರುದ್ಧ ಮಾನಹಾನಿಕರವಾಗಿ ಸೋಷಿಯಲ್ ಮೀಡಿಯಾದಲ್ಲಿ ಬರೆಯಲಾಗಿತ್ತು ಎನ್ನುವುದರ ವಿರುದ್ಧ ಹುಟ್ಟಿಕೊಂಡಂತಹ ಬೆಂಕಿಯಾಗಿತ್ತು. ಆಗ ಜೈಲು ಸೇರಿಕೊಂಡ ಹುಡುಗರಲ್ಲಿ ಅಪರಾಧಿಗಳು ಹಾಗೂ ಕೆಲವು ಮುಗ್ಧರೂ ಕೂಡಾ ಈಗಲೂ ಅಲ್ಲೇ ಕೊಳೆಯುತ್ತಿದ್ದಾರೆ
ಪ್ರವಾದಿ ಮಹಮ್ಮದರ ಜನ್ಮದಿನವನ್ನು ಈದ್ ಮಿಲಾದ್ ಎಂದು ಸಂಭ್ರಮಿಸುವುದು ಮುಸ್ಲಿಮರಲ್ಲಿ ಸಾಮಾನ್ಯವಾಗಿ ನಡೆದುಕೊಂಡು ಬಂದಿರುವ ಪರಿಪಾಠ. ಇದನ್ನು ಮುಸ್ಲಿಮರಲ್ಲಿ ಕೆಲವು ಪಂಗಡಗಳು ತೀವ್ರವಾಗಿ ವಿರೋಧಿಸುತ್ತವೆ ಯಾಕೆಂದರೆ ಹುಟ್ಟು ಹಬ್ಬದ ಆಚರಣೆಯು ಇಸ್ಲಾಮಿನಲ್ಲಿ ಇಲ್ಲ ಎನ್ನುವ ಕಾರಣಕ್ಕಾಗಿ.
ಇದೀಗ ಶಿವಮೊಗ್ಗದಲ್ಲಿ ನಡೆದಿರುವ ಈದ್ ಮಿಲಾದ್ ಸಂಭ್ರಮದ ಬಗ್ಗೆ ನೋಡುವುದಾದರೆ ಇಲ್ಲಿನ ಹಲವು ಗುಂಪುಗಳು ಹಲವು ಕಾರಣಕ್ಕಾಗಿ ಈ ಘಟನೆಯನ್ನು ವಿರೋಧಿಸುತ್ತಿವೆ. ಒಂದನೆಯದು ಪ್ರವಾದಿ ಮಹಮ್ಮದರ ಹುಟ್ಟುಹಬ್ಬವನ್ನು ಆಚರಿಸುವುದು ಇಸ್ಲಾಮಿನಲ್ಲಿ ಇಲ್ಲ. ಹುಟ್ಟುಹಬ್ಬದ ಪರಿಕಲ್ಪನೆ ಇಸ್ಲಾಮಿನಲ್ಲಿ ನಿಷಿದ್ಧ ಎನ್ನುವುದಾಗಿದೆ.
ಎರಡನೇ ಕಾರಣ ಇಸ್ಲಾಮಿನಲ್ಲಿ ಮೂರ್ತಿ ಪೂಜೆ ಇಲ್ಲ. ಯಾವುದೇ ಸಚಿತ್ರ ವ್ಯಕ್ತಿಗಳ ಆರಾಧನೆಗೆ ಅವಕಾಶ ಇಲ್ಲ. ಪ್ರವಾದಿ ಅವರದೇ ಆಗಿರಲಿ, ಯಾರದೇ ಆಗಿರಲಿ ಫೋಟೋಗಳು ಇಸ್ಲಾಮಿನಲ್ಲಿ ಇಲ್ಲ. ಅಂತಹದ್ದರಲ್ಲಿ ಯಾರದೋ ಫೋಟೋವನ್ನು ಹಿಡಿದುಕೊಂಡು ಪ್ರವಾದಿಯೊಂದಿಗೆ ಸಮೀಕರಿಸುವುದು, ಸಂಭ್ರಮಿಸುವುದು ಇಸ್ಲಾಂನಲ್ಲಿ ಅನಾಚಾರ. ಹಾಗಾಗಿ ಇದು ಇಸ್ಲಾಂ ತತ್ವಕ್ಕೆ ವಿರುದ್ಧ ಎನ್ನುವುದು ಕೆಲವರ ನಿಲುವು.
ಇನ್ನು ಕೆಲವರದು ಇಸ್ಲಾಮಿನಲ್ಲಿ ಸಂಗೀತ ನಿಷಿದ್ಧವಾಗಿದೆ. ಹಾಗಾಗಿ ಈ ಡಿಜೆ ಕುಣಿತ ಎಲ್ಲವನ್ನು ಇಸ್ಲಾಂನಲ್ಲಿ ಹರಾಮ್ ಎನ್ನುವ ಕಾರಣಕ್ಕಾಗಿ ಇದಕ್ಕೆ ಅವಕಾಶ ಮಾಡಿಕೊಡಕೂಡದು. ಇಸ್ಲಾಮಿನಾಚೆಗೂ ಶಬ್ದ ಮಾಲಿನ್ಯದಿಂದ ಕಿರಿಕಿರಿಗೊಳಗಾದವರು ಈ ಎಲ್ಲಾ ಡಿಜೆಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ತಮ್ಮ ತಮ್ಮ ಅಳಲುಗಳನ್ನು ಬೇರೆ ಬೇರೆ ಹಬ್ಬದ ಸಮಯದಲ್ಲಿ ತೋಡಿಕೊಳ್ಳುತ್ತಲೇ ಇರುತ್ತಾರೆ.
ಇದೀಗ ಔರಂಗಜೇಬನ ವಿಚಾರಕ್ಕೆ ಬರುವುದಾದರೆ ಮೊದಲನೆಯದಾಗಿ ಕೇಸರಿ ಪಡೆ ಮತ್ತು ಹಸಿರುಪಡೆ ಎಂದು ವಿವರಿಸುವುದಾದರೆ ಕೇಸರಿ ಪಡೆ ಹೇಗೆ ಮಾನವಂತ ಹಿಂದೂಗಳ ಮರ್ಯಾದೆಯನ್ನು ತೆಗೆಯಲು ಹೆಣಗುತ್ತದೆಯೋ ಅದೇ ರೀತಿಯಾಗಿ ಇಲ್ಲಿ ಹಸಿರುಪಡೆಗಳು ಸೌಹಾರ್ದಯುತ ಜೀವನವನ್ನು ಬಯಸುವಂತಹ ಮುಸ್ಲಿಮರು ತಲೆತಗ್ಗಿಸುವಂತೆ ಮಾಡುತ್ತಲೇ ಬಂದಿದೆ. ಅದರ ಒಂದು ಭಾಗವೇ ಸಾರ್ವಜನಿಕ ಡಿಜೆ ಕುಣಿತದ ವಿಕೃತ ಆಚರಣೆ.
ಇದೇ ಕೆಲವು ವರ್ಷಗಳ ಹಿಂದೆ ರಾಜ್ಯದಲ್ಲಿ ತಲ್ಲಣ ಮೂಡಿಸಿದ್ದ ಡಿಜೆಹಳ್ಳಿ ಪ್ರಕರಣವು ಪ್ರವಾದಿ ಅವರ ವಿರುದ್ಧ ಮಾನಹಾನಿಕರವಾಗಿ ಸೋಷಿಯಲ್ ಮೀಡಿಯಾದಲ್ಲಿ ಬರೆಯಲಾಗಿತ್ತು ಎನ್ನುವುದರ ವಿರುದ್ಧ ಹುಟ್ಟಿಕೊಂಡಂತಹ ಬೆಂಕಿಯಾಗಿತ್ತು. ಆಗ ಜೈಲು ಸೇರಿಕೊಂಡ ಹುಡುಗರಲ್ಲಿ ಅಪರಾಧಿಗಳು ಹಾಗು ಕೆಲವು ಮುಗ್ಧರೂ ಕೂಡ ಈಗಲೂ ಅಲ್ಲೇ ಕೊಳೆಯುತ್ತಿದ್ದಾರೆ. (ಅಲ್ಲಿ ಮದುವೆಯಾಗಿ ಅದೇ ತಾನೇ ಮರುದಿನ ಅತ್ತೆ ಮನೆಗೆ ಬಂದ ಹುಡುಗನೊಬ್ಬ ಕೂಡಾ ಜೈಲಿನಲ್ಲಿದ್ದಾನೆ ಎಂದು ಇತ್ತೀಚೆಗಷ್ಟೇ ಆ ಊರ ಜನ ತಿಳಿಸಿದ್ದರು)

ಆದರೆ, ಇಲ್ಲೂ ಕೂಡ ನಡೆದಿರುವುದು ಪ್ರವಾದಿ ಅವರ ವಿರುದ್ಧದ ಮಾನಹಾನಿಯೇ. ಆದರೆ ಪ್ರವಾದಿಯವರನ್ನು ಸಂಭ್ರಮಿಸುವ ಮರುಳುತನದ ಹಿಂದೆ ನಡೆದಿರುವಂತಹ ನಿಜವಾದ ಮಾನಹಾನಿ ಎನ್ನಬಹುದು. ಪ್ರವಾದಿ ಮಹಮ್ಮದ್ ಪೈಗಂಬರ್ ಅವರು ಸದ್ವರ್ತನೆಗೆ ಬಹಳ ಹೆಸರುವಾಸಿಯಾಗಿದ್ದರು. ಅವರ ನಿಜಜೀವನದ ಚರ್ಯೆಯೇ ಸದಾಚಾರ ಮತ್ತು ಮೌಲ್ಯಗಳ ಪಾಠವಾಗಿತ್ತು. ಆದರೆ ಈ ಕಿಡಿಗೇಡಿಗಳು ಸದ್ಯದ ಹಿಂದೂ ಧರ್ಮದ ಹೊಸ ಪಾರ್ಶ್ವ ರೂಪಾಂತರವಾದ ಹಿಂದುತ್ವದ ಜನರು ಯಾವ ರೀತಿಯಾಗಿ ತಮ್ಮ ಧರ್ಮವನ್ನು ಅಭಿವ್ಯಕ್ತಿಗೊಳಿಸುತ್ತಿದ್ದಾರೋ ಅಂತಹ ಒಂದು ರೂಪಾಂತರಕ್ಕೆ ನಮ್ಮ ಧರ್ಮವೂ ನಿಲ್ಲಲಿ ಎಂಬ ಬಯಕೆಯ ಪ್ರತಿಫಲನವಿದು. ಆದರೆ ಯಾವ ಒಳಿತನ್ನೂ ಇತರ ಧರ್ಮಗಳಿಂದ ಕಲಿಯುವುದಿಲ್ಲ ಎನ್ನುವುದು ಮಾತ್ರ ಸರ್ವವಿಧಿತ. ಕೆಡುಕಿಗೆ ಇರುವ ಕಾಂತೀಯ ಗುಣ ಒಳಿತಿಗೆಲ್ಲಿದೆ ?
ಕೇಸರಿ – ಹಸಿರು ಗುಂಪುಗಳು
ಭಾರತದ ಜಾತ್ಯತೀತ ಪರಂಪರೆಯ ನಡುವೆ ಸೀಳು ಮೂಡಿಸುವ ಕೋಮುವಾದಿ ರಸ್ತೆಯ ಸಮಾನಾಂತರ ಹಳಿಗಳು ಎನ್ನಬಹುದು. ಅದರ ಫಲವಾಗಿಯೇ ಈ ವಿಕೃತ ಮೆರವಣಿಗೆ ನಡೆದಿದೆ.
ಭಾರತದಂತಹ ಬಹುತ್ವದ ಪರಂಪರೆಯನ್ನು ಹೊಂದಿರುವಂತಹ ಮಣ್ಣಿನಲ್ಲಿ ಇತ್ತೀಚಿನ ಬೆಳವಣಿಗೆಗಳು ಮೂಡಿಸಿರುವಂತಹ ಅಭದ್ರತೆ ಮತ್ತು ಅಪಾಯಕಾರಿ ವಾತಾವರಣದ ಹಿನ್ನೆಲೆಯಲ್ಲಿ ಎಷ್ಟು ಅಚ್ಚುಕಟ್ಟಾಗಿ ನಡೆದರೂ ಸಾಲದು ಎನ್ನುವ ಪರಿಸ್ಥಿತಿಯಲ್ಲಿ ಅಲ್ಪಸಂಖ್ಯಾತರು ತಳಮಳಿಸುತ್ತಿರುವಾಗ, ಈ ಪುಂಡು ಪೋಕರಿಗಳ ಮೆರವಣಿಗೆಯನ್ನು ತಡೆಯುವ ಹಿರಿಯರು ಯಾರೂ ಆ ಊರಿನಲ್ಲಿ ಇರಲಿಲ್ಲವೇ? ಅಥವಾ ಕರಾವಳಿಯ ಸೋಂಕಿಗೊಳಗಾಗಿದ್ದ ಶಿವಮೊಗ್ಗದಲ್ಲಿ ರೋಗಲಕ್ಷಣ ಉಲ್ಭಣವಾದ ಲಕ್ಷಣವೇ?
ಅದರಲ್ಲೂ ಔರಂಗಜೇಬ್ ನಂತಹ ಒಬ್ಬ ಸಂಗೀತವನ್ನು, ಕುಣಿತವನ್ನು ಪ್ರಬಲವಾಗಿ ನಿಷೇಧಿಸಿದ ಕಟ್ಟರ್ ಇಸ್ಲಾಮಿಕ್ ವಾದಿ ಅರಸನನ್ನು ಇಟ್ಟುಕೊಂಡು ಡಿಜೆ ಸಂಗೀತ ಹಾಕಿ ಕುಣಿದ ಈ ಪೋಕರಿ ಹುಡುಗರು ಅತ್ತ ಔರಂಗಜೇಬನಿಗೂ ನ್ಯಾಯ ಸಲ್ಲಿಸಲಿಲ್ಲ, ಇತ್ತ ತಾವು ನಂಬಿದ್ದ ಧರ್ಮಕ್ಕೂ ನ್ಯಾಯ ಸಲ್ಲಿಸಲಿಲ್ಲ.
ಇದನ್ನೂ ಓದಿ ಕೋಮುಗಲಭೆಗೆ ಶಿವಮೊಗ್ಗದ ರಾಗಿಗುಡ್ಡವನ್ನೇ ಯಾಕೆ ಆಯ್ಕೆ ಮಾಡಲಾಯಿತು ?
ಇನ್ನೊಂದೆಡೆ ದೇಶದ ವಾಯುವ್ಯ ಭಾಗದಲ್ಲಿ ಅತ್ಯಂತ ವಿಸ್ತಾರವಾದ ಪ್ರದೇಶವನ್ನು ಒಳಗೊಂಡಂತೆ ಭಾರತದ ಭೂಪಟವನ್ನು ಕೈಯಾಡಿಸಿ ವಿಕೃತ ಮೆರೆದಿರುವ ಇವರ ಹುಚ್ಚಾಟಕ್ಕೆ ಮಿತಿ ಇಲ್ಲ. ಇದು ಯಾವ ಕೇಸಿನಡಿಯಲ್ಲಿ ಬರುತ್ತದೆ ಎಂಬ ಕಲ್ಪನೆಯೂ ಈ ಪುಂಡರಿಗಿಲ್ಲ. ಪೊಲೀಸರ ಮೇಲೆ ಬೇರೆ ಕಲ್ಲು ತೂರಿ ಬೆದರಿಕೆಯ ರೀತಿಯ ಮಾತುಗಳನ್ನು ಆಡಿರುವುದು ಎಲ್ಲವೂ ಮುಸ್ಲಿಂ ಸಮುದಾಯಕ್ಕೆ ಮಾರಕವಾಗಿ ಅಡಗಿಕೊಂಡಿರುವ ಕೋಮುವಾದಿ ಹುಣ್ಣನ್ನು ಎತ್ತಿ ತೋರಿಸುತ್ತಿದೆ. ಆ ಹುಣ್ಣಿನ ಆಳದಲ್ಲಿ ಕೋಮುವಾದಿ ಹುಳಗಳು ಹಿತಪಿತ ನಡೆಯುತ್ತಿದೆ. ಮರ್ಯಾದಸ್ಥರೂ ವಿವೇಕವುಳ್ಳವರೂ ಆದ ಮುಸ್ಲಿಮರಿಗೆ ಇಂತಹ ಧೂರ್ತರನ್ನು ಖಂಡಿಸುವುದೇ ಒಂದು ಪಾರ್ಟ್ ಟೈಮ್ ಕೆಲಸವಾಗಿ ನೋಡಿಕೊಳ್ಳುವಂತಹ ದರಿದ್ರ ಸ್ಥಿತಿಗೆ ತಲುಪಿದ್ದೇವೆ.

ಯು ಟಿ ಫರ್ಝಾನ ಅಶ್ರಫ್
ಲೇಖಕಿ, ಸಾಮಾಜಿಕ ಕಾರ್ಯಕರ್ತೆ
ನಿಮ್ಮ ಅನಿಸಿಕೆಗೆ ನನ್ನ ಸಹಮತ. ಮುಸ್ಲಿಂರೇಕೆ ಇಷ್ಟೊಂದು ವ್ಯಗ್ರರಾಗಿದ್ದಾರೆ? ಯಾಕೋ ಏನೋ ಅವರು ಮೊದಲಿನ೦ತೆ ಇಲ್ಲ. ಶಾಲೆಗಳಲ್ಲಿ ಅವರ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಪೋಷಕರಿಂದಲೇ ಅಡ್ಡಿ ಇದೆ. ಅವರು ಹೆಚ್ಚಾಗಿರುವ ಪ್ರದೇಶದಲ್ಲಿ ಹಿಂದುಗಳು ವಾಸಿಸಲು ಅವಕಾಶ ಇಲ್ಲ. ಏನಾದರೂ ನೆಪ ತೆಗೆದು ಜಗಳವಾಡುತ್ತಾರೆ. ಇನ್ನು ಹಲವು ಸಂರ್ಘಷದ ಸಂದ ರ್ಭಗಳಿವೆ. ಹಿಂದುಗಳಲ್ಲಿ ಕೂಡ ಹಲವು ಜನರು ಪ್ರಚೋದನೆಗೆ ಒಳಗಾಗಿದ್ದಾರೆ.. ಮುಸ್ಲಿಂ ಹಿರಿಯರು ಯುವಕರನ್ನು ಸರಿದಾರಿಗೆ ತರಲು ಪ್ರಯತ್ನಿಸುತ್ತಿಲ್ಲ. ಈ ಸಂಘರ್ಷ ಇನ್ನಷ್ಟು.ಹೆಚ್ಚುಾಗುವ ಸಾದ್ಯತೆ ಇದೆ.