- ಜೆಡಿಎಸ್‌ಗೆ ಮುಸ್ಲಿಂ ಮತಗಳು ಬರದೇ ಇದ್ದಲ್ಲಿ ಎರಡು ಸ್ಥಾನ ಲಭಿಸುತ್ತಿತ್ತು
- ಮೈತ್ರಿಯಿಂದಾಗಿ ವಿಷಕಂಠನಾಗಿ ರಾಜ್ಯಾಧ್ಯಕ್ಷ ಸ್ಥಾನ ನಿಭಾಯಿಸುತ್ತಿರುವೆ
ನಾಲ್ಕು ಜನ ಹೋಗಿ ತಾಳಿಕಟ್ಟಿಕೊಂಡು ಬಂದರೆ ಹೇಗೆ? ಎಲ್ಲರೂ ಹೋಗಬೇಕಿತ್ತು ಅಲ್ವಾ? ಜೆಡಿಎಸ್ ಮತ್ತು ಬಿಜೆಪಿ ಮದುವೆ ಬಹಿರಂಗವಾಗಿ ಆಗಿಲ್ಲ. ಮನೆಯ ಎಲ್ಲ ಸದಸ್ಯರೂ ಸೇರಿಸಿಕೊಂಡು ಅಕ್ಟೋಬರ್ 16ರಂದು ಚರ್ಚಿಸಿ, ಮದುವೆ ಹೆಣ್ಣನ್ನು ಷರತ್ತು ಹಾಕಿ ಒಳಗೆ ಕರೆದುಕೊಳ್ಳಬೇಕಾ ಅಥವಾ ಹೇಗೆ ಎಂಬುದರ ಬಗ್ಗೆ ಚರ್ಚಸಿ ತೀರ್ಮಾನಕ್ಕೆ ಬರುತ್ತೇವೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರು ತಮ್ಮದೇ ಶೈಲಿಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಬಗ್ಗೆ ಸೂಚ್ಯವಾಗಿ ಹೇಳಿದರು.
ಬೆಂಗಳೂರಿನಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, “ಕುಮಾರಸ್ವಾಮಿ ಅವರು ನಾಲ್ಕು ಜನರನ್ನು ಕರೆದುಕೊಂಡು ಹೋಗಿ ಮದುವೆ ಮಾಡಿಕೊಂಡು ಬಂದಿದ್ದಾರೆ. ಈಗ ನಮ್ಮ ಮುಂದಿರುವ ಪ್ರಶ್ನೆ ಮದುವೆ ಹೆಣ್ಣನ್ನು ಮನೆಯೊಳಗೆ ಬಿಟ್ಟುಕೊಳ್ಳಬೇಕಾ ಅಥವಾ ಬೇಡವೇ ಎಂಬುದು” ಎಂದರು.
”ಕುಮಾರಸ್ವಾಮಿ ಅವರ ನಡೆಯಿಂದಾಗಿ ವಿಷಕಂಠನಾಗಿ ರಾಜ್ಯಾಧ್ಯಕ್ಷ ಸ್ಥಾನ ನಿಭಾಯಿಸುತ್ತಿರುವೆ. ನಿತ್ಯ ವಿಷ ಕುಡಿಯುತ್ತಿರುವೆ. ಆದರೆ ಜೆಡಿಎಸ್ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿಲ್ಲ ಎಂಬುದು ತಪ್ಪು. ನನ್ನ ಕೆಲಸ ನಾನು ಮಾಡುತ್ತಿದ್ದೇನೆ. ಪಕ್ಷ ಸಂಘಟಿಸುತ್ತಿದ್ದೇನೆ. ನಮ್ಮ ಸಮುದಾಯ ಸಾಕಷ್ಟು ಪ್ರಶ್ನೆಗಳನ್ನು ಮುಂದಿಟ್ಟಿದೆ. ಈ ಬಗ್ಗೆ ಚರ್ಚೆ ಆಗಬೇಕಲ್ವಾ?” ಎಂದು ತಿಳಿಸಿದರು.
”ಬಿಜೆಪಿಯವರ ಗುರಿ ಏನಿದೆ ಎಂಬುದು ಕುಮಾರಸ್ವಾಮಿ ಅವರಿಗೆ ಗೊತ್ತಿಲ್ವಾ? ತಾವು ಗೆಲ್ಲದಿದ್ದರೂ ಅಷ್ಟೇ ಹೋಯಿತು, ಜೆಡಿಎಸ್ ಮುಗಿಸಬೇಕು ಎಂಬುದು ಈಗಲೂ ಬಿಜೆಪಿಯವರ ಮನಸ್ಥಿತಿ. ಚುನಾವಣೆ ವೇಳೆ ಜನತಾದಳ ಶಕ್ತಿ ಇದ್ದ ಕಡೆಯೇ ಮೋದಿ ಅವರು ಹೆಚ್ಚಿನ ಸಭೆಗಳನ್ನು ಮಾಡಿದ್ದು. ಹಾಗಾದ್ರೆ ಯಾಕೆ ಮಾಡಿದರು? ಕಾಂಗ್ರೆಸ್‌ಅನ್ನು ನಂತರ ನೋಡಿಕೊಳ್ಳಿ, ಮೊದಲು ಜೆಡಿಎಸ್ ಕಿತ್ತುಹಾಕಿ ಎಂದು ಮೋದಿ ಹೇಳಿದ್ದಾರೆ. ಇಂತಹ ನೀತಿಗಳನ್ನು ಹೊಂದಿದ ಬಿಜೆಪಿ ಜೊತೆ ನಾವು ಹೋಗುತ್ತಿದ್ದೇವೆ ಎಂದರೆ ಹೇಗೆ” ಎಂದು ಗಂಭೀರವಾಗಿ ಪ್ರಶ್ನಿಸಿದರು.
ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಕೇವಲ ಲೋಕಸಭೆಗೆ ಮಾತ್ರವೇ? ಮುಂದೆ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಹಾಗೂ ವಿಧಾನಸಭೆ ಚುನಾವಣೆ ಬಂದಾಗ ಏನು? ಯಾವುದರ ಬಗ್ಗೆಯೂ ನಮ್ಮ ಕಾರ್ಯಕರ್ತರಲ್ಲಿ ಸ್ಪಷ್ಟತೆ ಇಲ್ಲ. ಅ.16ರ ಸಭೆಯಲ್ಲಿ ಎಲ್ಲ ವಿಚಾರಗಳನ್ನು ಚರ್ಚಿಸಿ, ದೇವೇಗೌಡರ ಮುಂದೆ ಇಡುತ್ತೇವೆ” ಎಂದರು.
ಈ ಸುದ್ದಿ ಓದಿದ್ದೀರಾ? ಕರ್ನಾಟಕದ ಜಾತಿ ಗಣತಿ ವರದಿ ವ್ಯರ್ಥ ಆಗಲು ಬಿಡಬಾರದು: ಸಚಿವ ಪರಮೇಶ್ವರ್
ಯಾರಿಗೆ ಬೇಕು ಈ ಮೈತ್ರಿ?
ಈ ಮೈತ್ರಿ ಜೆಡಿಎಸ್‌ಗೆ ಬೇಕಾಗಿತ್ತೋ ಅಥವಾ ಬಿಜೆಪಿಗೆ ಬೇಕಾಗಿತ್ತೋ? ಅದನ್ನು ಈವರೆಗೂ ನಮ್ಮ ನಾಯಕರು ಸ್ಪಷ್ಟಪಡಿಸಿಲ್ಲ. ಬಿಜೆಪಿ ಸಿದ್ಧಾಂತ ಒಪ್ಪಿ ನಮ್ಮವರು ಮೈತ್ರಿ ಮಾಡಿಕೊಂಡಿದ್ದಾರಾ? ಅಥವಾ ಜೆಡಿಎಸ್ ಸಿದ್ಧಾಂತ ಒಪ್ಪಿ ಅವರು ಮೈತ್ರಿ ಮಾಡಿಕೊಂಡಿದ್ದಾರಾ? ಈ ಪ್ರಶ್ನೆ ಕೇವಲ ನನ್ನದಲ್ಲ. ಜೆಡಿಎಸ್ ಬೆಂಬಲಿಸುವ ಎಲ್ಲರದ್ದು” ಎಂದು ಹೇಳಿದರು.
ದೇವೇಗೌಡರು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ನಾವು ಜಾತ್ಯತೀತ ನಿಲುವನ್ನು ಎಂದಿಗೂ ಬಿಡಲು ಸಾಧ್ಯವಿಲ್ಲ ಎಂದು. ಪಠ್ಯಪುಸ್ತಕ ವಿಚಾರದಲ್ಲಿ ಬಿಜೆಪಿಯ ತಪ್ಪುಗಳನ್ನು ದೇವೇಗೌಡರು ಕಟುವಾಗಿ ವಿರೋಧಿಸಿದ್ದರು. ಯಾವ ಸ್ಪಷ್ಟತೆಯೂ ಇಲ್ಲದೇ ಈಗ ಮೈತ್ರಿ ಮಾಡಿಕೊಂಡರೆ ಹೇಗೆ? ಸಂವಿಧಾನದಿಂದ ಬಿಜೆಪಿಯವರು ಜಾತ್ಯತೀತ ಮತ್ತು ಸಮಾಜವಾದ ಪದಗಳನ್ನು ಬಿಟ್ಟಿದ್ದಾರೆ. ಎನ್‌ಆರ್‌ಸಿ ಕೈಬಿಟ್ಟಿರುವ ಬಗ್ಗೆ ಚರ್ಚೆ ಆಗಿದೆಯಾ” ಎಂದು ಪರೋಕ್ಷವಾಗಿ ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದರು.
“ರಾಷ್ಟ್ರಮಟ್ಟದಲ್ಲಿ ಮೈತ್ರಿ ಮಾಡಿಕೊಳ್ಳುವಂತಹ ಶಕ್ತಿಯಾಗಲಿ, ಆಧಾರವಾಗಲಿ ನಮ್ಮ ಪಕ್ಷಕ್ಕೆ ಇಲ್ಲ. ನಾವು ಕರ್ನಾಟಕಕ್ಕೆ ಅಷ್ಟೇ ಸಿಮೀತವಾಗಿ ಉಳಿಯುತ್ತೇವೆ. ಈ ಮೈತ್ರಿಯಿಂದ ಮುಂದೆ ನಮಗೆ ನಮ್ಮ ಸಿಂಬಲ್ ಉಳಿಯುತ್ತಾ? ಎಲ್ಲ ರಾಜ್ಯ ಘಟಕಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಮತ್ತೊಂದು ಸಲ ಚರ್ಚೆ ಮಾಡಿ, ಅಭಿಪ್ರಾಯ ಸಂಗ್ರಹಿಸಬೇಕು ಎಂಬುದು ನನ್ನ ಸಲಹೆ” ಎಂದರು.
ಕುಮಾರಸ್ವಾಮಿ ಅವರು, ಜೆಡಿಎಸ್ ಗೆ ಬನ್ನಿ ಎಂದರು ಕರೆದಿರಲಿಲ್ಲ, ಬಂದವರಿಗೆ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟಿದ್ದೋ, ಅದರಿಂದಾನೂ ಏನು ಆಗಲಿಲ್ಲ ಎಂದು ಪತ್ರಕರ್ತರು ಜ್ಞಾಪಿಸಿದಾಗ, “ಶೇ. 20ರಷ್ಟು ಮುಸ್ಲಿಂ ಮತಗಳು ಜೆಡಿಎಸ್‌ಗೆ ಬಂದಿವೆ. ಇಲ್ಲದಿದ್ದರೆ ಜೆಡಿಎಸ್‌ಗೆ ಕೇವಲ ಎರಡು ಸ್ಥಾನಗಳು ಲಭಿಸುತ್ತಿದ್ದವು. ಹಾಗಾದ್ರೆ ಕುಮಾರಸ್ವಾಮಿ ಅವರು ಕಳೆದುಕೊಂಡಿದ್ದಾದರೂ ಏನು? ಈವರೆಗೂ ಜನತಾ ದಳಕ್ಕೆ 211 ಸ್ಪರ್ಧಿಗಳು ಸಿಕ್ಕಿರಲಿಲ್ಲ. ನಾನು ರಾಜ್ಯಾಧ್ಯಕ್ಷನಾದ ಮೇಲೆ ಅಷ್ಟು ಅಭ್ಯರ್ಥಿಗಳು ಸಿಕ್ಕಿದ್ದು. ಹಾಗಾದ್ರೆ ಮಂಡ್ಯದಲ್ಲಿ ಮತ್ತು ಹಾಸನದಲ್ಲಿ ಒಕ್ಕಲಿಗರ ಮತಗಳು ಯಾಕೆ ಕಡಿಮೆ ಆಯಿತು? ಜೆಡಿಎಸ್‌ಗೆ ಎಲ್ಲಿ ಶಕ್ತಿ ಇಲ್ಲವೋ ಅಲ್ಲಿ ಕಾಂಗ್ರೆಸ್‌ಗೆ ಬೆಂಬಲ ಕೊಡಿ ಎಂದು ಕುಮಾರಸ್ವಾಮಿ ಅವರು ಹೇಳಿದ ವಿಡಿಯೋ ವೈರಲ್ ಆಗಿ, ಬಹಳ ಪರಿಣಾಮ ಬೀರಿತು” ಎಂದರು.