ಬಸವಾದಿ ಶರಣರ ಕಾಯಕ ಭೂಮಿ ಬಸವಕಲ್ಯಾಣದ ಬಸವ ಧರ್ಮ ಪೀಠದ ಮಹಾಮನೆಯ ಆವರಣದಲ್ಲಿ ಅಕ್ಟೋಬರ್ 28, 29 ಹಾಗೂ 30 ರಂದು ಮೂರು ದಿನಗಳ ಕಾಲ ʼ22ನೇ ಕಲ್ಯಾಣ ಪರ್ವʼ ಸಮಾವೇಶ ಜರುಗಲಿದ್ದು ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ಬಸವಕುಮಾರ ಸ್ವಾಮಿಜಿ ತಿಳಿಸಿದರು.
ಹುಮನಾಬಾದ್ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ” ಕೂಡಲ ಸಂಗಮ ಬಸವ ಧರ್ಮದ ಪೀಠಾಧ್ಯಕ್ಷೆ ಪೂಜ್ಯ ಗಂಗಾ ಮಾತಾಜಿಯವರ ಅಧ್ಯಕ್ಷತೆಯಲ್ಲಿ ಹಾಗೂ ಪೂಜ್ಯ ಸಿದ್ದರಾಮೇಶ್ವರ ಸ್ವಾಮೀಜಿಗಳ ನೇತೃತ್ವದಲ್ಲಿ ಜರುಗುವ 22ನೇ ಕಲ್ಯಾಣ ಪರ್ವ ಸಮಾವೇಶ ಅತ್ಯಂತ ಅರ್ಥಪೂರ್ಣವಾಗಿ ನಡೆಯಲಿದೆ” ಎಂದು ಹೇಳಿದರು.
ಅನಿಮಿಷಾನಂದ ಸ್ವಾಮಿಜಿ ಮಾತನಾಡಿ, “ಕಲ್ಯಾಣ ಪರ್ವ ಸಮಾವೇಶದಲ್ಲಿ ರಾಜ್ಯದ ನಾನಾ ಭಾಗಗಳಿಂದ ಅಲ್ಲದೆ ತೆಲಂಗಾಣ ಮಹಾರಾಷ್ಟ್ರ, ತಮಿಳುನಾಡು, ಗೋವಾ ಸೇರಿದಂತೆ ಮೊದಲಾದ ರಾಜ್ಯಗಳಿಂದ ಸಾವಿರಾರು ಬಸವಾನುಯಾಯಿಗಳು ಭಾಗವಹಿಸಲಿದ್ದಾರೆ. ವರ್ಷಕ್ಕೊಮ್ಮೆ ನಡೆಯುವ ಕಲ್ಯಾಣ ಪರ್ವ ಕಾರ್ಯಕ್ರಮದಲ್ಲಿ ಜಾತಿ, ಮತ ಪಂಥಗಳ ಭೇದವಿಲ್ಲದೆ ಸರ್ವರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು” ಮನವಿ ಮಾಡಿದರು.
“ಮೂರು ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮದಲ್ಲಿ ಯೋಗ, ಇಷ್ಟಲಿಂಗ ಪೂಜೆ, ಪ್ರಾರ್ಥನೆ, ಶರಣರ ಸ್ಮರಣೆ, ಧರ್ಮಚಿಂತನೆ, ವಿಚಾರಗೋಷ್ಟಿ, ವಚನ ಸಂಗೀತ, ವಚನ ನೃತ್ಯ , ಪೀಠಾರೋಹಣ, ಪಥ ಸಂಚಲನ, ಪ್ರಶಸ್ತಿ ಪ್ರದಾನ ಸೇರಿದಂತೆ ಇತ್ಯಾದಿ ಕಾರ್ಯಕ್ರಮಗಳು ನೆರವೇರಲಿವೆ” ಎಂದು ಬಸವಪ್ರಕಾಶ ಸ್ವಾಮೀಜಿ ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಚೆಂಡು ಹೂ ಕೃಷಿ : ಉತ್ತಮ ಆದಾಯದ ನಿರೀಕ್ಷೆಯಲ್ಲಿ ಯುವ ರೈತ
ಸುದ್ದಿಗೋಷ್ಠಿಯಲ್ಲಿ ಸಾಹಿತಿ, ಪತ್ರಕರ್ತ ಸಂಗಮೇಶ ಎನ್ ಜವಾದಿ ಉಪಸ್ಥಿತರಿದ್ದರು.