ವಿದ್ಯಾರ್ಥಿಗಳು ಸಾಧನೆಯ ಗುರಿ ತಲುಪಬೇಕಾದರೆ ತಮ್ಮ ಸೇವೆಯಿಂದಲೇ ಆದರ್ಶ ಅಧಿಕಾರಿ ಎನ್ನಿಸಿಕೊಂಡಿದ್ದ ಎಸ್.ಆರ್ ತಲ್ಲೂರ ಅವರ ವ್ಯಕ್ತಿತ್ವವನ್ನು ಅಳವಡಿಸಿಕೊಳ್ಳಬೇಕು. ಉತ್ತಮ ಪ್ರಜೆಯಾಗಬೇಕಾದರೆ ಅವರ ಹಾದಿಯಲ್ಲೇ ನಡೆಯಬೇಕು ಎಂದು ನಿವೃತ್ತ ಐಎಎಸ್ ಅಧಿಕಾರಿ ಜಿ.ವಿ.ಕೊಂಗವಾಡ ಹೇಳಿದರು.
ಧಾರವಾಡದಲ್ಲಿ ಎಸ್.ಆರ್ ತಲ್ಲೂರ ಫೌಂಡೇಶನ್ ಆಯೋಜಿಸಿದ್ದ ಚೈತನ್ಯ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. “ವಿದ್ಯಾರ್ಥಿ ಜೀವನದಲ್ಲಿ ಸಮಯ ಪ್ರಜ್ಞೆ ಅವಶ್ಯಕವಾಗಿದೆ. ಅದಕ್ಕಾಗಿ ಸಾಮಾಜಿಕ ಜಾಲತಾಣಗಳನ್ನು ಮಿತವಾಗಿ ಬಳಸಬೇಕು. ಸಾರ್ವಜನಿಕರ ಮನಸ್ಸಿನಲ್ಲಿ ಇಂದಿಗೂ ಎಸ್.ಆರ್ ತಲ್ಲೂರ ಅವರು ಜೀವಂತವಾಗಿದ್ದಾರೆ ಎಂದರೆ, ಅವರು ನಿರ್ವಹಿಸಿದ ಪ್ರಾಮಾಣಿಕ ಕರ್ತವ್ಯ ಹಾಗೂ ಸೇವೆಯೇ ಕಾರಣ. ನಾವು ಅವಂತೆಯೇ ಉತ್ತಮ ವ್ಯಕ್ತಿತ್ವ ರೂಪಿಸಿಕೊಂಡು ಸಮಾಜಕ್ಕೆ ಉತ್ತಮ ಪ್ರಜೆಯಾಗಬೇಕು” ಎಂದರು.
ಎಸ್ ಆರ್ ತಲ್ಲೂರ ಫೌಂಡೇಶನ್ ಅಧ್ಯಕ್ಷರ, ನಿವೃತ್ತ ಜೈಲು ಅಧೀಕ್ಷಕ ಸಿ.ಆರ್ ತಲ್ಲೂರ ಮಾತನಾಡಿ, “ಸಮಾಜದಲ್ಲಿ ಉತ್ತಮರಾಗಬೇಕೆಂದರೆ ಉತ್ತಮವಾದ ದೃಷ್ಟಿಕೋನವನ್ನು ಹೊಂದಬೇಕು. ಸೇವಾ ಮನೋಭಾವನೆಯನ್ನು ಬೆಳಸಿಕೊಳ್ಳಬೇಕು” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ವಿಕಾಸ ಸಂಯೋಜಕ ಅಶ್ವಿನ್ ಭೂಸಾರೆ, ಫೌಂಡೇಶನ್‌ನ ಕಾರ್ಯದರ್ಶಿ ಡಾ. ಸುಮಾ ತಲ್ಲೂರ, ಶಿವಪ್ರಸಾದ ಮಾದನಭಾವಿ, ಸಂಗಯ್ಯ ಚಿಕ್ಕಮಠ ಇದ್ದರು.