ಗದಗ ಜಿಲ್ಲೆಯ ಮುಂಡರಗಿ ತಾಲೂಕು ಹೊರತು ಪಡಿಸಿ ಉಳಿದ ಆರು ತಾಲೂಕುಗಳನ್ನು ಈಗಾಗಲೇ ರಾಜ್ಯ ಸರ್ಕಾರ ತೀವ್ರ ಬರಪೀಡಿತ ತಾಲೂಕುಗಳೆಂದು ಘೋಷಿಸಿದೆ. ಅಕ್ಟೋಬರ 6 ರಂದು ಗದಗ ಜಿಲ್ಲೆಗೆ ನಾಲ್ಕು ಸದಸ್ಯರನ್ನೊಳಗೊಂಡ ಕೇಂದ್ರ ಬರ ಅಧ್ಯಯನ ತಂಡ ಭೇಟಿ ನೀಡಲಿದ್ದು, ಅವರಿಗೆ ಜಿಲ್ಲೆಯ ಬರ ಪರಿಸ್ಥತಿಯ ಕುರಿತು ಸರಿಯಾಗಿ ಮಾಹಿತಿ ಒದಗಿಸಬೇಕೆಂದು ಜಿಲ್ಲಾಧಿಕಾರಿ ವೈಶಾಲಿ ಎಂ ಎಲ್ ಸೂಚಿಸಿದರು.
ಜಿಲ್ಲೆಗೆ ಕೇಂದ್ರ ಬರ ಅಧ್ಯಯನ ತಂಡ ಆಗಮಿಸುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಸಂಜೆ ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ಕೇಂದ್ರ ಬರ ಅಧ್ಯಯನ ತಂಡದ ಸದಸ್ಯರಿಗೆ ಜಿಲ್ಲೆಯ ಬರ ಪರಿಸ್ಥಿತಿಯ ಕುರಿತು ಮನವರಿಕೆ ಆಗುವಂತೆ ಸಂಬಂಧಿತ ಇಲಾಖೆ ಅಧಿಕಾರಿಗಳು ಸರಿಯಾಗಿ ವಿವರಣೆ ನೀಡಬೇಕು. ಯಾವುದೇ ಕಾರಣಕ್ಕೂ ಬರ ಅಧ್ಯಯನ ತಂಡದ ಸದಸ್ಯರು ಬಂದು ಹೋಗುವವರೆಗೆ ಶಿಷ್ಠಾಚಾರ ವ್ಯವಸ್ಥೆಯಲ್ಲಿ ಅವ್ಯವಸ್ಥೆ ಆಗದಂತೆ ನಿಗಾವಹಿಸಬೇಕು” ಎಂದು ನಿರ್ದೇಶನ ನೀಡಿದರು.
“ಜಿಲ್ಲೆಯ ಬರಪೀಡಿತ ತಾಲೂಕುಗಳ ಪರಿಸ್ಥಿತಿಯನ್ನು ಪರಿಶೀಲಿಸಲು ಕೇಂದ್ರ ಬರ ಅಧ್ಯಯನ ತಂಡವು ಶುಕ್ರವಾರ ಜಿಲ್ಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ಈ ತಂಡದ ಮುಖ್ಯಸ್ಥರಾಗಿ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಹೆಚ್ಚುವರಿ ಸಲಹೆಗಾರ ಡಿ.ರಾಜಶೇಖರ, ಸದಸ್ಯರುಗಳಾದ ಕೇಂದ್ರ ಪಶುಸಂಗೋಪನಾ ಇಲಾಖೆ ನಿರ್ದೇಶಕ ವಿ ಆರ್ ಠಾಕ್ರೆ, ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆಯ ಸಹಾಯಕ ಆಯುಕ್ತ ಮೋತಿ ರಾಮ ಹಾಗೂ ಕಂದಾಯ ಇಲಾಖೆಯ ರಾಜ್ಯ ವಿಪತ್ತು ನಿರ್ವಹಣೆಯ ನಿರ್ದೇಶಕ ಕರೀಗೌಡ ಅವರುಗಳ ನಾಲ್ಕು ಜನರ ಅಧ್ಯಯನ ತಂಡವು ಜಿಲ್ಲೆಗೆ ಭೇಟಿ ನೀಡಲಿದೆ” ಎಂದರು.
“ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ನೈರುತ್ಯ ಮುಂಗಾರು ಮಳೆಯು ವಾಡಿಕೆ ಮಳೆ 372 ಮೀಮೀ ಆಗಬೇಕಿತ್ತು. ಆದರೆ ವಾಡಿಕೆ ಮಳೆ ಆಗದೇ ಇರುವದರಿಂದ ಬರಗಾಲ ಆವರಿಸಿದೆ. ಜಿಲ್ಲೆಯಲ್ಲಿ ಜೂನ್ ಮಾಹೆಯಲ್ಲಿ ಶೇ.54 ರಷ್ಟು ಹಾಗೂ ಅಗಸ್ಟ್‌ನಲ್ಲಿ ಶೇ.62 ರಷ್ಟು ಮಳೆ ಕೊರತೆಯಾಗಿದ್ದು ಬರಗಾಲ ಸಂಪೂರ್ಣವಾಗಿ ಆವರಿಸುವಂತಾಗಿದೆ. ಅಧಿಕಾರಿಗಳು ಕೇಂದ್ರ ಬರ ಅಧ್ಯಯನ ಅಧಿಕಾರಿಳಿಗೆ ತಮ್ಮ ಇಲಾಖೆಗೆ ಸಂಬಂಧಿಸಿದಂತೆ ನಿಖರವಾದ ಅಂಕಿ ಸಂಖ್ಯೆಗಳನ್ನು ದಾಖಲೆಗಳೊಂದಿಗೆ ವಸ್ತು ಸ್ಥಿತಿಯ ಕುರಿತು ಮನವರಿಕೆ ಮಾಡಿಕೊಡಬೇಕು” ಎಂದು ತಿಳಿಸಿದರು.
ಬರ ಅಧ್ಯಯನ ತಂಡಕ್ಕೆ ಜಿಲ್ಲೆಯ ಕುಡಿಯುವ ನೀರಿನ ನಿರ್ವಹಣೆ, ಮೇವಿನ ಅಗತ್ಯತೆ, ಅಂತರ್ಜಲ ಮಟ್ಟ ಕುಸಿತದ ವಿವರ, ಬೆಳೆ ಹಾನಿ ವಿವರವನ್ನು ಅಂಕಿ ಸಂಖ್ಯೆ ಸಮೇತ ವಿವರಿಸುವ ಕುರಿತಂತೆ ಸಭೆಯಲ್ಲಿ ಚರ್ಚಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಎಸ್‌ಸಿ/ಎಸ್‌ಟಿ ದೌರ್ಜನ್ಯ ಪ್ರಕರಣ; 1.30 ಕೋಟಿ ರೂ. ಪರಿಹಾರ
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ ಎಸ್ ನೇಮಗೌಡ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ, ಉಪವಿಭಾಗಾಧಿಕಾರಿ ಡಾ.ವೆಂಕಟೇಶ ನಾಯ್ಕ, ಜಿ.ಪಂ.ಉಪಕಾರ್ಯದರ್ಶಿ ಸಿ.ಆರ್.ಮುಂಡರಗಿ, ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ, ತೋಟಗಾರಿಕೆ ಉಪನಿರ್ದೇಶಕ ಶಶಿಕಾಂತ ಕೋಟಿಮನಿ, ಜಿ.ಪಂ. ಮುಖ್ಯ ಯೋಜನಾಧಿಕಾರಿ ಎ.ಎ.ಕಂಬಾಳಿಮಠ, ಪಂಚಾಯತ ರಾಜ್ ಎಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರ ಶಿವಾನಂದ ಗೌಡರ, ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ.ಹುಲಗನ್ನವರ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಅಮಿತ ಬಿದರಿ, ಆಹಾರ ಇಲಾಖೆ ಉಪನಿರ್ದೇಶಕ ಗಂಗಪ್ಪ.ಎಂ ಸೇರಿದಂತೆ ಹಲವು ಇಲಾಖೆಯ ಅಧಿಕಾರಿಗಳು ಇದ್ದರು.