ವಿಶ್ವಕಪ್ ಮೊದಲ ಪಂದ್ಯ ಆರಂಭವಾಗುವುದಕ್ಕೂ ಮುನ್ನವೇ ಭಾರತಕ್ಕೆ ಆಘಾತಕಾರಿ ಸುದ್ದಿ ಎದುರಾಗಿದೆ. ಅಕ್ಟೋಬರ್ 8 ರಂದು ಚೆನ್ನೈನಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ದ ತನ್ನ ಮೊದಲ ಪಂದ್ಯವನ್ನು ಆಡಲಿದ್ದು, ಶುಭಮನ್ ಗಿಲ್ ಅನಾರೋಗ್ಯ ಸಮಸ್ಯೆ ಟೀಂ ಇಂಡಿಯಾಗೆ ಸಮಸ್ಯೆಯಾಗಿದೆ.
ತೀವ್ರ ಜ್ವರದಿಂದ ಬಳಲುತ್ತಿದ್ದ ಶುಭಮನ್ ಅವರನ್ನು ತಪಾಸಣೆಗೆ ಒಳಪಡಿಸಲಾಗಿತ್ತು. ಇದೀಗ ಅವರಿಗೆ ಡೆಂಗ್ಯೂ ಇರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಭಾರತದ ಮೊದಲ ಪಂದ್ಯದಲ್ಲಿ ಶುಭಮನ್ ಗಿಲ್ ಮೈದಾನಕ್ಕೆ ಇಳಿಯುವುದು ಅನುಮಾನ ಎನ್ನಲಾಗಿದೆ.
ಚೆನ್ನೈಗೆ ಬಂದಿಳಿದ ನಂತರ ಶುಭ್ಮನ್ ಗಿಲ್ಗೆ ವಿಪರೀತ ಜ್ವರ ಕಾಡಿತ್ತು. ಈ ಹಿನ್ನೆಲೆಯಲ್ಲಿ ಗಿಲ್ ರಕ್ತದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಇಂದು ಗಿಲ್ ಅವರನ್ನು ದೈಹಿಕ ಪರೀಕ್ಷೆಗೆ ಒಳಪಡಿಸಲಾಗುವುದು. ಇದಾದ ನಂತರವಷ್ಟೇ ಗಿಲ್ ಆರಂಭಿಕ ಪಂದ್ಯದಲ್ಲಿ ಭಾಗವಹಿಸುತ್ತಾರೆಯೋ ಇಲ್ಲವೋ ಎನ್ನುವುದು ತಿಳಿಯಲಿದೆ.
ಡೆಂಗ್ಯೂ ರೋಗಿಗಳು ಗುಣಮುಖರಾಗಲು 7 ರಿಂದ 10 ದಿನಗಳು ತೆಗೆದುಕೊಳ್ಳುತ್ತದೆ. ಇದು ಸಾಮಾನ್ಯ ಜ್ವರ ಅಲ್ಲ. ವೈರಲ್ ಜ್ವರ ಆಗಿದ್ದರೆ, ಆಂಟಿ ಬಯೋಟಿಕ್ಗಳನ್ನೂ ತೆಗೆದುಕೊಂಡು ಆಟಗಾರನನ್ನು ಮೈದಾನಕ್ಕೆ ಇಳಿಸಬಹುದು. ಆದರೆ ಡೆಂಗ್ಯೂ ಹಾಗಲ್ಲ. ಈಗ ಗಿಲ್ ಆಡುತ್ತಾರೆಯೋ ಇಲ್ಲವೋ ಎನ್ನುವುದು ವೈದ್ಯಕೀಯ ತಂಡ ನಿರ್ಧರಿಸಲಿದೆ.
ಈ ಸುದ್ದಿ ಓದಿದ್ದೀರಾ? ಏಕದಿನ ವಿಶ್ವಕಪ್ 2023 | ಬೆಂಗಳೂರಿನ ತಮ್ಮ ಪೂರ್ವಜರ ಬಗ್ಗೆ ಮೆಲುಕು ಹಾಕಿದ ರಚಿನ್ ರವೀಂದ್ರ
ಗಿಲ್ ಅವರು ಮೊದಲ ಪಂದ್ಯದಿಂದ ಹೊರಗುಳಿದರೆ ಕೆಎಲ್ ರಾಹುಲ್ ಅಥವಾ ಇಶಾನ್ ಕಿಶನ್, ರೋಹಿತ್ ಶರ್ಮಾ ಜೊತೆ ಒಪನರ್ ಆಗಿ ಬರುವ ಸಾಧ್ಯತೆ ಇದೆ. ಶುಭಮನ್ ಗಿಲ್ ಭಾರತ ತಂಡದ ಅತ್ಯಂತ ವಿಶ್ವಾಸಾರ್ಹ ಆಟಗಾರನಾಗಿದ್ದು, ಈ ವರ್ಷ ಏಕದಿನ ಪಂದ್ಯಗಳಲ್ಲಿ 70 ಕ್ಕೂ ಹೆಚ್ಚು ರನ್ಗಳ ಸರಾಸರಿ ಹೊಂದಿದ್ದಾರೆ. ಅಲ್ಲದೆ ಅತ್ಯುತ್ತಮ ಆರಂಭಿಕ ಬ್ಯಾಟ್ಸ್ ಮ್ಯಾನ್ಗಳ ಪಟ್ಟಿಯಲ್ಲಿ ನಿಲ್ಲುತ್ತಾರೆ.
ಮೊದಲ ಪಂದ್ಯಕ್ಕೆ ಅಶ್ವಿನ್ ಲಭ್ಯ ಸಾಧ್ಯತೆ
ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಅಶ್ವಿನ್ ಅವರು ರವೀಂದ್ರ ಜಡೇಜ, ಕುಲದೀಪ್ ಜೊತೆಗೆ ಮೂರನೇ ಸ್ಪಿನ್ನರ್ ಆಗಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಡೇವಿಡ್ ವಾರ್ನರ್ ಮತ್ತು ಸ್ಟೀವ್ ಸ್ಮಿತ್ ವಿರುದ್ಧ ಅವರ ದಾಖಲೆ ಉತ್ತಮವಾಗಿರುವುದೂ ಅವರಿಗೆ ಆಯ್ಕೆಗೆ ಪೂರಕ ಆಗಬಲ್ಲದು. ಅಶ್ವಿನ್ ಟೆಸ್ಟ್ ಪಂದ್ಯಗಳಲ್ಲಿ 11 ಬಾರಿ ಡೇವಿಡ್ ವಾರ್ನರ್ ಅವರ ವಿಕೆಟ್ ಪಡೆದಿದ್ದಾರೆ.
ಏಕದಿನ ಪಂದ್ಯಗಳಲ್ಲಿ ಸ್ಪೋಟಕ ಆಟಗಾರ ಸ್ಮಿತ್ ಕೂಡ ಟೆಸ್ಟ್ ಪಂದ್ಯಗಳಲ್ಲಿ ಅಶ್ವಿನ್ ಅವರ ಬೌಲಿಂಗ್ನಲ್ಲಿ ಆಡಲು ಪರದಾಡಿದ್ದಾರೆ. ಹೀಗಾಗಿ ಶಾರ್ದೂಲ್ ಠಾಕೂರ್ ಬದಲು ಅಶ್ವಿನ್ ಅವರು ಅವಕಾಶ ಪಡೆದರೆ ಅಚ್ಚರಿ ಇಲ್ಲ. ಮಾರ್ಪಡಿಸಿದ ತಂಡದಲ್ಲಿ ವಿಶ್ವಕಪ್ ಟೂರ್ನಿಗೆ ಅಕ್ಷರ್ ಪಟೇಲ್ ಬದಲು ವಿಶ್ವಕಪ್ ತಂಡದಲ್ಲಿ ಆರ್ ಅಶ್ವಿನ್ ಅವಕಾಶ ಪಡೆದಿದ್ದಾರೆ.