ಸಶಕ್ತತೆ ಅನ್ನುವುದು ಒಂದು ಪ್ರಕ್ರಿಯೆ; ವಿದ್ಯಮಾನ ಅಲ್ಲ. ಅದು ನಿರಂತರ ಚಲನೆಯಲ್ಲಿ ಇರುವ ಅನುಭವ. ಮಹಿಳೆಯರು ತಮ್ಮ ಶಕ್ತಿಯ ನೆಲೆಗಳನ್ನು ಅಂದರೆ, ವಸ್ತುರೂಪದ ಮತ್ತು ಬೌದ್ಧಿಕ ರೂಪದ ಸಂಪನ್ಮೂಲಗಳ ಮೇಲೆ ಹಿಡಿತ ಸಾಧಿಸಬೇಕು; ಪುರುಷ ಪ್ರಧಾನತೆಯ ಸಿದ್ಧಾಂತವನ್ನು ಪ್ರಶ್ನಿಸಬೇಕು; ಬದುಕಿನ ಪ್ರತಿಯೊಂದು ಹಂತಗಳಲ್ಲಿ, ಸಂಸ್ಥೆಗಳಲ್ಲಿ ಕಂಡುಬರುವ ಲಿಂಗತ್ವ ಆಧಾರಿತ ತಾರತಮ್ಯಗಳಿಗೆ ಸವಾಲು ಒಡ್ಡಲು ಸಾಧ್ಯವಾಗಬೇಕು. ಇದನ್ನು ರೂಪಿಸುವ ಪ್ರಕ್ರಿಯೆಯೇ ಸಶಕ್ತತೆಯ ಅಥವಾ ಸಬಲೀಕರಣದ ಪ್ರಕ್ರಿಯೆ. ಈ ಪ್ರಕ್ರಿಯೆಗೆ ಅದರದ್ದೇ ಆದ ಕೆಲವು ಆಯಾಮಗಳಿವೆ. ಅದಕ್ಕಾಗಿ ತಾರತಮ್ಯವನ್ನು ಎತ್ತಿಹಿಡಿವಂತಹ ಮತ್ತು ಉಳಿಸಿ ಬೆಳೆಸುವಂತಹ ವ್ಯವಸ್ಥೆ ಮತ್ತು ಸಂಸ್ಥೆಗಳಾದ ಕುಟುಂಬ, ಜಾತಿ, ವರ್ಗ, ಸಾಮಾಜಿಕ, ಆರ್ಥಿಕ, ರಾಜಕೀಯ, ಧಾರ್ಮಿಕ, ಶೈಕ್ಷಣಿಕ, ಮಾಧ್ಯಮ, ಕಾನೂನು, ಅಭಿವೃದ್ಧಿ ಯೋಜನೆಗಳು – ಎಲ್ಲವನ್ನೂ ಚಿಂತನೆಯ ಒರೆಗೆ ಹಚ್ಚಿ ಪರಿಶೀಲಿಸಬೇಕು. ಸುಮ್ಮನೇ ಒಪ್ಪಿಕೊಳ್ಳುವುದಲ್ಲ. ಪ್ರಶ್ನೆ ಕೇಳುವುದು ಸಾಧ್ಯವಾಗಬೇಕು.
ಸಶಕ್ತತೆಯ ಪ್ರಕ್ರಿಯೆ ಶುರುವಾಗುವುದು ಮನಸ್ಸಿನಲ್ಲಿ. ಅಂದರೆ, ಮಹಿಳೆಯರ ಆಲೋಚನಾ ಕ್ರಮದಲ್ಲಿ ಬದಲಾವಣೆ ಬರಬೇಕಾಗುತ್ತದೆ. “ಯಾಕೆ… ಯಾಕೆ… ಯಾಕೆ…” – ಎಂದು ಕೇಳಬೇಕಾಗುತ್ತದೆ;
“ವಿಧವೆಯರು ಯಾಕೆ ಹೂವು ಮುಡಿಯಬಾರದು?”
“ದುಪಟ್ಟಾ ಹಾಕದೆ ಯಾಕೆ ಓಡಾಡಬಾರದು?”
“ಹುಡುಗಿಯರ ಅಂಗಿಗೆ ಯಾಕೆ ಜೇಬು ಇಲ್ಲ?”
“ಅಣ್ಣ ಯಾಕೆ ಕದ್ದು ಮುಚ್ಚಿ ಅಳುತ್ತಾನೆ? ಎಲ್ಲರ ಎದುರು ಯಾಕೆ ಅಳುವುದಿಲ್ಲ?”
“ಶಬರಿಮಲೆಗೆ ಮಹಿಳೆಯರು ಹೋಗಬಾರದೇಕೆ?”
“ಗಂಡ ಯಾಕೆ ಹೆಂಡತಿಯ ಬಟ್ಟೆ ಒಗೆಯಬಾರದು?”
“ಗಂಡಸರು ಯಾಕೆ ಲಿಪ್‌ಸ್ಟಿಕ್ ಹಾಕಬಾರದು?”
“ಮುಟ್ಟಾದಾಗ ಆಚೆ ಯಾಕೆ ಕೂರಬೇಕು?”
– ಹೀಗೆ ಹತ್ತು ಹಲವು ಪ್ರಶ್ನೆಗಳು ಹುಟ್ಟುತ್ತವೆ. ಅವನ್ನು ಅಲ್ಲಿಯೇ ತಣ್ಣಗಾಗಿಸದೆ ಒಂದು ಹೆಜ್ಜೆ ಮುಂದೆ ಹೋಗಬೇಕು. ಮುಟ್ಟಾದಾಗ ದೇವರ ಕೋಣೆಗೆ ಹೋಗಬಾರದು – ಯಾಕೆ ಹೋಗಬಾರದು? ಯಾರು ಈ ನಿಯಮ ಮಾಡಿದ್ದಾರೆ? ಹೋದರೆ ಏನಾಗುತ್ತದೆ? ಮುಂದೆ ಹೋಗುತ್ತಿರುವಂತೆಯೇ ಪ್ರಶ್ನೆಗಳು ಅಲೆಅಲೆಯಾಗಿ ಹುಟ್ಟಿಕೊಳ್ಳುತ್ತವೆ. ಅಷ್ಟೇ ಅಲ್ಲ, ದೇವರ ಕೋಣೆಗೆ ಹೋದರೆ ಏನಾಗುತ್ತದೆ? ಸ್ವಲ್ಪ ನೋಡಿಯೇಬಿಡೋಣ ಅನಿಸುತ್ತದೆ. ಮೆಲ್ಲಗೆ ಒಳಗೆ ಹೋಗಿಯೇಬಿಡುವುದಕ್ಕೆ ಸಾಧ್ಯವಾಗುತ್ತದೆ. ಆವಾಗ, “ಅಯ್ಯೋ, ಏನೂ ಆಗಿಲ್ಲವಲ್ಲ…” ಅಂತ ಗೊತ್ತಾಗಿಬಿಡುತ್ತದೆ. ಹೀಗೆ ಗೊತ್ತಾಗುತ್ತಿದ್ದಂತೆಯೇ ಒಂದು ಸಂಕಲೆ ಕಳಚಿಕೊಂಡುಬಿಡುತ್ತದೆ. ಇದು ಇಲ್ಲಿಗೇ ನಿಲ್ಲುವುದಿಲ್ಲ…
ಆದರೆ ಕೆಲವೊಮ್ಮೆ, ಹಾಗೆ ಮುಟ್ಟಾದಾಗ ದೇವರ ಕೋಣೆಗೆ ಹೋಗಿ, ಮರುದಿನ ಜ್ವರ ಬಂದರೆ, ಹೋಗಿದ್ದಕ್ಕಾಗಿಯೇ ಜ್ವರ ಬಂತು ಅಂತ ಅಂದುಕೊಂಡು ಭಯಪಡುವವರೂ ಇದ್ದಾರೆ. ಈ ವಿಷಯಕ್ಕೆ ಅಂತ ಅಲ್ಲ, ಯಾವುದೇ ಇಂತಹ ಸಾಹಸ ಮಾಡಲು ಹೊರಟಾಗ ಅದಕ್ಕೆ ಅನುಗುಣವಾಗಿ ಏನೇನೋ ಸವಾಲುಗಳೂ ಎದುರಾಗುತ್ತವೆ. ಅದಕ್ಕಾಗಿ ಜ್ವರ ಬಂದರೂ, ಧೈರ್ಯ ತೆಗೆದುಕೊಂಡು ಮತ್ತೊಮ್ಮೆ ಮಗದೊಮ್ಮೆ ಪ್ರಯೋಗ ಮಾಡುವ ಉಮೇದು ತೋರಿಸಬೇಕಾಗುತ್ತದೆ. ಆಗ, ಓಹ್… ಇದು ಹೀಗೆ… ಅನ್ನುವುದು ಖಾತರಿ ಆಗುತ್ತದೆ. ಸಂಕಲೆಗಳು ಕಳಚುತ್ತ ಹೋಗುವುದು ಹೀಗೆಯೇ.
ಇಲ್ಲೂ ಒಂಟಿ ಪಯಣದ ಅನುಭವಗಳು ಒಂದು ರೀತಿಯ ಪರಿಣಾಮ ಬೀರುತ್ತದೆ. ಸಮೂಹ ಪಯಣದ ಅನುಭವ ಇನ್ನೊಂದು ಎತ್ತರಕ್ಕೆ ತೆಗೆದುಕೊಂಡು ಹೋಗುತ್ತದೆ. ಒಂಟಿಯಾಗಿ ಚೌಕಟ್ಟು ಮೀರಿ ಬದುಕಿದವರು ಆದರ್ಶಗಳಾಗಿದ್ದಾರೆ, ಇತರರಿಗೆ ಪ್ರೇರಣೆಯನ್ನೂ ಕೊಟ್ಟಿದ್ದಾರೆ. ಆದರೆ, ಸಾಮೂಹಿಕ ಬದಲಾವಣೆಗಳನ್ನು ಅಷ್ಟಾಗಿ ತಂದಿಲ್ಲ. ಸಾಮೂಹಿಕವಾಗಿ ಮಹಿಳೆಯರು ಇಡುವ ಹೆಜ್ಜೆಗಳು ಸಾಮಾಜಿಕ ಬದಲಾವಣೆಗಳನ್ನು ತರುತ್ತವೆ. ಅಲ್ಲದೆ, ಬಲವಾದ ಚಳವಳಿಗಳನ್ನು ಹುಟ್ಟುಹಾಕುತ್ತವೆ. ಅವು ರಾಜಕೀಯ ಒತ್ತಡವಾಗಿ ಬೆಳೆಯುತ್ತವೆ. ಹಾಗಾದಾಗ ಮಾತ್ರ, ಅಧಿಕಾರ ಸಂಬಂಧಗಳನ್ನು, ಅಧಿಕಾರದ ರಚನೆಗಳನ್ನು ಬದಲಾಯಿಸುವುದು ಸಾಧ್ಯ.
ಈ ಸಶಕ್ತತೆಯ ಪ್ರಕ್ರಿಯೆ, ಪರಾಧೀನತೆಯ ಬದುಕಿನ ಒಳಗಿನಿಂದ ತನ್ನಿಂತಾನೇ ಶುರುವಾಗುತ್ತದೆ ಅಂತ ಹೇಳುವುದಕ್ಕೆ ಆಗುವುದಿಲ್ಲ. ಎಲ್ಲಿಂದಲೋ ಯಾರಿಂದಲೋ ಒಂದು ಪ್ರೇರಣೆ, ಸಹಕಾರ ಬೇಕಾಗುತ್ತದೆ ಅಥವಾ ಎಲ್ಲಿಂದಲೋ ಯಾರೋ ತಲ್ಲಣ ಮೂಡಿಸುವ ಒಂದು ಕಲ್ಲು ಎಸೆಯಬೇಕಾಗುತ್ತದೆ. ಹೊರಗಿನಿಂದಲೋ, ಒಳಗಿನಿಂದಲೋ ಒಂದು ಚಾಲನೆ ಸಿಗಬೇಕಾಗುತ್ತದೆ. ಇಲ್ಲೂ ಅಷ್ಟೆ – ಮಹಿಳೆಯರಿಗೆ ತಮ್ಮದೇ ಆದ ಸಮಯ ಮತ್ತು ಅವಕಾಶ ಸಿಕ್ಕರೆ ಚಕ್ಕಂತ ಏನೋ ಹೊಸ ಬಾಗಿಲು ತೆರೆದುಕೊಳ್ಳುವುದು ಸಾಧ್ಯವಿದೆ. ಈ ಬದಲಾವಣೆಯ ದಾರಿ ಒಂದು ಸಮೂಹದಲ್ಲಿ ಒಬ್ಬ ವ್ಯಕ್ತಿಯಿಂದ ಗುಂಪಿಗೆ ಪಸರಿಸಿಕೊಳ್ಳಬಹುದು ಅಥವಾ ಒಂದು ಗುಂಪಿನಲ್ಲೇ ಚಿಂತನೆಯೊಂದು ಅರಳಿಕೊಂಡು ವ್ಯಕ್ತಿ-ವ್ಯಕ್ತಿಗಳ ಎದೆಗೆ ಇಳಿಯಬಹುದು. ಒಂದು ಪುಸ್ತಕ ಓದು, ಒಂದು ಮುಕ್ತವಾದ ಪ್ರವಾಸ, ದೈನಂದಿನ ಬದುಕನ್ನು ಕಲಕುವ ಒಂದು ಗಾಢವಾದ ಅನುಭವ, ಒಂದು ಹೊಸ ಗೆಳೆತನ, ಒಂದು ಸಾಮೂಹಿಕ ಚಿಂತನೆ… ಹೀಗೆ ಏನೋ ಒಂದು ಅನುಭವ ಮಹಿಳೆಯರ ಒಳಗೆ ಬೇರುಬಿಟ್ಟಿರುವ ಅಧೀನತೆಯ ಭಾವವನ್ನು ಅಲ್ಲಾಡಿಸಬಹುದು. ಪ್ರಶ್ನೆಗಳನ್ನು ಹುಟ್ಟಿಸಬಹುದು. ಹೊಸತೊಂದು ಮಿಂಚು ಹರಿಯಬಹುದು.
ಪ್ರಶ್ನೆ ಕೇಳುವಾಗಲೂ ಕೇಳಿದ ತಕ್ಷಣ ಉತ್ತರ ಸಿಗಲಾರದು. ಪ್ರಶ್ನೆಗಳನ್ನು ದಮನಿಸಲಾಗುತ್ತದೆ. ಹೆಚ್ಚು ಪ್ರಶ್ನೆ ಕೇಳಿದಾಗಲೆಲ್ಲ ಸಿಗುವ ಸುಲಭದ ಉತ್ತರ ‘ಬಾಯಿ ಮುಚ್ಚು…’ ಎಂಬುದು. ಪ್ರಶ್ನೆಗಳಿಗೆ ಉತ್ತರ ಹುಡುಕುತ್ತ ಹೋದರೆ ಯಥಾಸ್ಥಿತಿಗೆ ಧಕ್ಕೆ ಬರುವ ಎಲ್ಲ ಸಾಧ್ಯತೆಗಳು ಇವೆ. ಚಿಕ್ಕ ಮಕ್ಕಳು ಸಹಜವಾಗಿ ಹತ್ತು ಹಲವು ಪ್ರಶ್ನೆ ಕೇಳುತ್ತಾರೆ. ಆದರೆ ಹಂತಹಂತವಾಗಿ ಅವರ ಈ ಪ್ರಶ್ನೆ ಕೇಳುವ ಪ್ರವೃತ್ತಿಯನ್ನು ಬೇರೆ-ಬೇರೆ ರೀತಿಯಲ್ಲಿ ನಿಯಂತ್ರಿಸಲಾಗುತ್ತದೆ. ಎಷ್ಟರ ಮಟ್ಟಿಗೆ ನಿಯಂತ್ರಿಸಲಾಗುತ್ತದೆ ಅಂದರೆ, ಬಾಯಿ ಮುಚ್ಚುವುದೇ ರೂಢಿಯಾಗುತ್ತದೆ. ಇದರಿಂದಾಗಿ ಕೊನೆಕೊನೆಗೆ ಪ್ರಶ್ನೆಗಳು ಹುಟ್ಟುವುದೇ ಇಲ್ಲ. ಮನಸ್ಸಿಗೆ ಅಂತಹ ತರಬೇತಿ ಸಿಕ್ಕಿಬಿಟ್ಟಿರುತ್ತದೆ. ಮಹಿಳೆಯರ ಪರಿಸ್ಥಿತಿ ಕೂಡ ಹಾಗೆಯೇ ಆಗುವುದು. ಪ್ರಶ್ನೆಗಳನ್ನು ಜೀವಂತವಾಗಿ ಇರಿಸಿಕೊಂಡರೆ ಮಾತ್ರ ಮನಸ್ಸು, ಬುದ್ಧಿ ಹರಿತವಾಗಿ ಇರುತ್ತದೆ. ಹೊಸ ಚಿಂತನೆ ಸಾಧ್ಯವಾಗುತ್ತದೆ. ಅಹಂಕಾರ, ಅಧಿಕಾರ ಮೆರೆಯುವುದಕ್ಕೆ, ಯಾರನ್ನೋ ಅಧೀನತೆಗೆ ತಳ್ಳುವುದಕ್ಕೆ ಪ್ರಶ್ನೆ ಕೇಳುವುದಲ್ಲ; ತಮ್ಮನ್ನು ತಾವು ಅರ್ಥ ಮಾಡಿಕೊಳ್ಳಲು, ಸತ್ಯ ಕಂಡುಕೊಳ್ಳಲು, ನ್ಯಾಯದ ಬೆನ್ನು ಹತ್ತಲು, ಹೊಸ ಜಾಡು ಕಂಡುಕೊಳ್ಳಲು ಪ್ರಶ್ನೆ ಕೇಳಬೇಕು. ಬೇರೆಯವರನ್ನೂ ಕೇಳಬೇಕು; ನಮ್ಮನ್ನು ನಾವೇ ಕೂಡ ಕೇಳಿಕೊಳ್ಳಬೇಕು. ಉತ್ತರ ತಕ್ಷಣಕ್ಕೆ ಸಿಗದೆಹೋದರೂ ಕೇಳುವುದನ್ನು ಬಿಡಬಾರದು. ಪ್ರಶ್ನೆಗಳನ್ನು ಅನುಸರಿಸಿಕೊಂಡು ಬರುವ ಸವಾಲುಗಳನ್ನೂ ಎದುರಿಸುವುದಕ್ಕೂ ಸಿದ್ಧರಾಗಬೇಕು.
ಮಹಿಳಾ ಸಮಾಖ್ಯ ಯೋಜನೆಯ ಹಸಿರು ಕಡತವೊಂದರಲ್ಲಿ ಬರೆದಿತ್ತು – “ಎಲ್ಲವನ್ನೂ ನಿಷ್ಕ್ರಿಯವಾಗಿ ಒಪ್ಪಿಕೊಳ್ಳುವ, ಸ್ವೀಕರಿಸುವ ಮನಸ್ಥಿತಿಯಿಂದ, ಸಾಮಾಜಿಕ ಆಗುಹೋಗುಗಳನ್ನು ಪ್ರಶ್ನಿಸುತ್ತ, ವಿವೇಚಿಸುತ್ತ, ಸಕ್ರಿಯವಾಗಿ ಭಾಗವಹಿಸುವ ಒಂದು ಸ್ಥಿತಿಗೆ ಮಹಿಳೆಯರು ಬೆಳೆಯಬೇಕು…” ಪರಿಕಲ್ಪನೆ ಏನೋ ಸೊಗಸಾಗಿತ್ತು. ಇದನ್ನು ನೆಲದಲ್ಲಿ ಕಾಣುವುದು ಹೇಗೆ ಎಂಬ ಗೊಂದಲ ಇತ್ತು. ಅಲ್ಲಿ ಇಲ್ಲಿ ಬದಲಾವಣೆಯ ಕುರುಹುಗಳು ಕಾಣತೊಡಗಿದವು. ಒಬ್ಬ ಕಾರ್ಯಕರ್ತೆಯ ಮಾತು ಹೀಗಿತ್ತು… “ತಪ್ಪು ಮಾಡುತ್ತಿದ್ದೆನೋ ಇಲ್ಲವೋ, ಆದರೂ ಚರ್ಚಿಗೆ ಹೋಗುವಾಗ ಏನೂ ಇಲ್ಲದಿದ್ದರೂ ಪಶ್ಚಾತ್ತಾಪಪಡುತ್ತಿದ್ದೆ. ಇತ್ತೀಚೆಗೆ ಒಮ್ಮೆ ಅನ್ನಿಸಿತು, ನಾನು ಏನೂ ತಪ್ಪು ಮಾಡಿಲ್ಲವಲ್ಲ, ಸುಮ್ಮನೆ ಯಾಕೆ ಹೀಗೆಲ್ಲ ಕ್ಷಮೆ ಕೇಳಬೇಕು! ತಕ್ಷಣ ಮನಸ್ಸು ಬದಲಾಯಿಸಿಕೊಂಡೆ. ದೇವರೇ, ನಾನೇನೂ ತಪ್ಪು ಮಾಡಿಲ್ಲ, ಒಳ್ಳೆಯದು ಮಾಡು, ಅಂತ ನಮಸ್ಕರಿಸಿ ಬಂದುಬಿಟ್ಟೆ.”
ಒಂದಷ್ಟು ಸಮಯ ಕಳೆದಾಗ ಬೀದರ್ ಜಿಲ್ಲೆಯಲ್ಲಿ ಒಂದು ಮಹಿಳಾ ಮೇಳ ನಡೆದಿತ್ತು. ಅಷ್ಟು ಹೊತ್ತಿಗೆ ಮಹಿಳಾ ಸಂಘಗಳನ್ನು ಮಾಡಿಕೊಳ್ಳುತ್ತ ಮಹಿಳೆಯರು ಹೊಸ-ಹೊಸ ದಾರಿಗಳನ್ನು ಗುರುತಿಸತೊಡಗಿದ್ದರು. ಆ ಹೊತ್ತಿನಲ್ಲಿ ಮಹಿಳೆಯರ ಜೊತೆ ಮಾತಾಡುತ್ತ, ಅವರಲ್ಲಿ ಆದ ಬದಲಾವಣೆ ಬಗ್ಗೆ ಸಾವಕಾಶವಾಗಿ ಮಾತಾಡುತ್ತಿದ್ದೆವು. ಹಸಿರು ಕಡತದ ಆಶಯ ನನಸಾಗುವ ರೀತಿಯಲ್ಲಿ ಬೀದರ್ ಜಿಲ್ಲೆಯ ಗ್ರಾಮೀಣ ಮಹಿಳೆಯೊಬ್ಬರು ಹೀಗೆ ಹೇಳಿದ್ದರು: “ಹೌದ್ರೀ… ಸಂಘ ಮಾಡೀವ್ರೀ. ಅದಕ್ಕ ಮೊದಲು ಎಲ್ಲಾದಕ್ಕು ‘ಹ್ಞೂಂ…’ ಅನ್ತಿದ್ದಿವ್ರೀ. ಈಗ ‘ಯಾಕೆ?’ ಅಂತ ಕೇಳಕ್ಕೆ ಕಲ್ತಿದ್ದೀವ್ರೀ.” ಮಹಿಳಾ ಸಮಾಖ್ಯದ ದಾರಿ ಹೀಗಿತ್ತು. ಆದರೆ, ಹೆಚ್ಚು ದೂರ ಕ್ರಮಿಸಲು ಸಾಧ್ಯವಾಗಲಿಲ್ಲ…
ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ