ಜಾತಿ ಸಮೀಕ್ಷೆಯ ಹೆಚ್ಚಿನ ಅಂಕಿಅಂಶವನ್ನು ಪ್ರಕಟಿಸದಂತೆ ಬಿಹಾರ ಸರ್ಕಾರವನ್ನು ನಿರ್ಬಂಧಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಸರ್ಕಾರದ ನೀತಿ ನಿರ್ಧಾರಗಳಲ್ಲಿ ನಾವು ಮಧ್ಯ ಪ್ರವೇಶ ಮಾಡುವುದಿಲ್ಲ ಎಂದು ಕೋರ್ಟ್ ಶುಕ್ರವಾರ (ಅ.6) ಹೇಳಿದೆ.
ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಪೀಠವು ಸಮೀಕ್ಷೆಯ ಕಾನೂನುಬದ್ಧತೆಯನ್ನು ಪ್ರಶ್ನಿಸುವ ಅರ್ಜಿಗಳು ಸುಪ್ರೀಂ ಕೋರ್ಟ್ನಲ್ಲಿ ಬಾಕಿ ಇರುವಾಗ ರಾಜ್ಯವು ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ ಎಂಬ ಪ್ರತಿವಾದಿ ವಕೀಲರ ಆಕ್ಷೇಪಣೆಯ ಮನವಿಯ ವಿಚಾರಣೆ ನಡೆಸಲು ನಿರಾಕರಿಸಿತು.
“ನೀವು ರಾಜ್ಯ ಸರ್ಕಾರ ಅಥವಾ ಯಾವುದೇ ಸರ್ಕಾರ ನಿರ್ಧಾರ ತೆಗೆದುಕೊಳ್ಳುವುದನ್ನು ತಡೆಯಲು ಸಾಧ್ಯವಿಲ್ಲ. ಅಂಕಿಅಂಶಗಳಿಗೆ ಸಂಬಂಧಿಸಿದಂತೆ ಸಮಸ್ಯೆಯಿದ್ದರೆ, ಅದನ್ನು ಪರಿಗಣಿಸಲಾಗುವುದು” ಎಂದು ನ್ಯಾಯಮೂರ್ತಿ ಖನ್ನಾ ಅರ್ಜಿದಾರರನ್ನು ಉದ್ದೇಶಿಸಿ ಹೇಳಿದರು.
ಈ ಸುದ್ದಿ ಓದಿದ್ದೀರಾ? ಜೈಲಿನಲ್ಲಿರುವ ಮಾನವ ಹಕ್ಕುಗಳ ಹೋರಾಟಗಾರ್ತಿ ನರ್ಗೀಸ್ ಮೊಹಮ್ಮದಿ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ
ಜಾತಿ ವರದಿ ಬಿಡುಗಡೆ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಸರ್ಕಾರವು ಜಾತಿ ಗಣತಿಯ ಮಾಹಿತಿಯನ್ನು ಪ್ರಕಟಿಸುವುದನ್ನು ತಡೆಯವುದಿಲ್ಲ. ರಾಜ್ಯ ಸರ್ಕಾರ ಅಥವಾ ಯಾವುದೇ ಸರ್ಕಾರ ನಿರ್ಧಾರ ತೆಗೆದುಕೊಳ್ಳುವುದನ್ನು ತಡೆಯಲು ಸಾಧ್ಯವಿಲ್ಲ. ಅದು ತಪ್ಪಾಗುತ್ತದೆ. ಆದರೆ, ಜಾತಿ ಆಧಾರಿತ ಸಮೀಕ್ಷೆಯ ದತ್ತಾಂಶಕ್ಕೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಯನ್ನು ಪರಿಗಣಿಸುತ್ತೇವೆ ಎಂದು ನ್ಯಾಯಾಲಯ ತಿಳಿಸಿದೆ.
ರಾಜ್ಯದಲ್ಲಿ ಜಾತಿ ಆಧಾರಿತ ಸಮೀಕ್ಷೆಗೆ ಸಂಬಂಧಿಸಿದ ಮನವಿಯ ಕುರಿತು ಸುಪ್ರೀಂ ಕೋರ್ಟ್ ಬಿಹಾರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ್ದು, ಜನವರಿ 2024ಕ್ಕೆ ಮುಂದಿನ ವಿಚಾರಣೆಯನ್ನು ಪಟ್ಟಿ ಮಾಡಿದೆ ಮತ್ತು ರಾಜ್ಯದಲ್ಲಿ ಜಾತಿವಾರು ಸಮೀಕ್ಷೆಯ ಅಂಕಿ ಅಂಶಗಳ ಪ್ರಕಟಣೆಯಿಂದಾಗಿ ಉದ್ಭವಿಸಿರುವ ಸಮಸ್ಯೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಕೆಲವು ಅಂಕಿ ಅಂಶಗಳನ್ನು ಪ್ರಕಟಿಸುವ ಮೂಲಕ ರಾಜ್ಯ ಸರ್ಕಾರವು ತಡೆಯಾಜ್ಞೆಗೆ ಮುನ್ನುಡಿ ಬರೆದಿದೆ ಮತ್ತು ದತ್ತಾಂಶಗಳ ಹೆಚ್ಚಿನ ಪ್ರಕಟಣೆಗೆ ಸಂಪೂರ್ಣ ತಡೆಯಾಜ್ಞೆ ನೀಡಬೇಕು ಎಂಬ ಅರ್ಜಿದಾರರ ಆಕ್ಷೇಪವನ್ನು ನ್ಯಾಯಾಲಯ ತಳ್ಳಿಹಾಕಿದೆ.
ಬಿಹಾರ ಸರ್ಕಾರ ಜಾತಿ ಆಧಾರಿತ ಜನಗಣತಿಯ ಫಲಿತಾಂಶವನ್ನು ಕಳೆದ ಸೋಮವಾರ ಪ್ರಕಟಿಸಿತ್ತು. ಗಣತಿಯ ವರದಿಯ ಪ್ರಕಾರ ರಾಜ್ಯದ 13.1 ಕೋಟಿ ಜನಸಂಖ್ಯೆಯಲ್ಲಿ ಶೇ. 36 ಅತ್ಯಂತ ಹಿಂದುಳಿದ ವರ್ಗ, ಶೇ. 27.1 ಹಿಂದುಳಿದ ವರ್ಗ, ಶೇ. 19.7 ಪರಿಶಿಷ್ಟ ಜಾತಿ ಮತ್ತು ಶೇ. 1.7 ಪರಿಶಿಷ್ಟ ಪಂಗಡ, ಸಾಮಾನ್ಯ ಸಮುದಾಯ ಜನಸಂಖ್ಯೆಯು ಶೇ. 15.5 ರಷ್ಟಿದೆ ಎಂದು ತಿಳಿಸಿದೆ.