ಸಂಪೂರ್ಣ ಹದಗಟ್ಟಿರುವ ಶಹಾಬಾದ್ – ಜೇವರ್ಗಿ ರಸ್ತೆಯ ದುರಸ್ಥಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅ.9ರಂದು ವಾಡಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ ತಡೆದು ಅನಿರ್ಧಿಷ್ಟಾವಧಿ ಕಾಲ ಧರಣಿ ನಡೆಸಲು ಪ್ರಗತಿಪರ ಸಂಘಟನೆಗಳು ಹಾಗೂ ಪ್ರಗತಿಪರ ಒಕ್ಕೂಟ ನಿರ್ಧರಿಸಿದೆ.
ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರೆಪ್ಪಾ ಹಳ್ಳಿ, “ಶಹಾಬಾದ್ ತಾಕೂಕು ಕೇಂದ್ರವಾಗಿದ್ದರೂ ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ತಾಲೂಕಿನ ಪ್ರಗತಿ ಶೂನ್ಯವಾಗಿದೆ. ಹಲವು ಬಾರಿ ಶಹಾಬಾದ್ – ಜೇವರ್ಗಿ ನಡುವಿನ ರಸ್ತೆ ನಿರ್ಮಿಸಿದರೂ ಹಾಳಾಗುತ್ತಿದ್ದು, ಹೊಸ ರಸ್ತೆ ನಿರ್ಮಿಸುವಂತೆ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಗುತ್ತಿದೆ” ಎಂದು ಹೇಳಿದರು.
“ವಾಡಿ ಕ್ರಾಸ್‌ನಿಂದ ಮರಗೊಳ ಕ್ರಾಸ್, ಜೇವರ್ಗಿ ಕ್ರಾಸ್ ವರೆಗೆ 17 ಕಿ.ಮೀ. ರಸ್ತೆ ಸಂಪೂರ್ಣ ಹದಗೆಟ್ಟಿದೆ. ಕಳೆದು ಎರಡ್ಮೂರು ವರ್ಷಗಳಿಂದ ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ಆರೋಪಿಸಿದ್ದಾರೆ.
“ಅ.9 ರಂದು ನಡೆಯುವ ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಹಾಗೂ ತಾಲ್ಲೂಕಿನ ಸುಮಾರು ಎರಡು ಸಾವಿರ ಜನರು ಭಾಗವಹಿಸಲಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಬರುವವರೆಗೂ ಪ್ರತಿಭಟನೆ ಮುಂದುವರೆಯುತ್ತದೆ” ಎಂದು ತೀಳಿಸಿದ್ದಾರೆ.
“ಜಿಲ್ಲೆಯಲ್ಲಿ ತಹಸೀಲ್ದಾರ್ ಕಚೇರಿ, ನಗರಸಭೆ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ ಎಗ್ಗಿಲ್ಲದೆ ಭ್ರಷ್ಟಾಚಾರ ನಡೆಯುತ್ತಿದೆ. ಹಣ ಕೊಡದೆ ಯಾವುದೇ ಕೆಲಸಗಳು ಆಗುತ್ತಿಲ್ಲ. ಇದರಿಂದ ಸಾರ್ವಜನಿಕರು ಅಲೆದಾಡುವಂತಾಗಿದೆ. ಇನ್ನು ಹಣ ನೀಡಿದರೆ ಮಾತ್ರ ಸಾಮಾನ್ಯ ಸಭೆಗೆ ಹಾಜರಾಗುತ್ತೇವೆಂದು ಜನಪ್ರತಿನಿಧಿಗಳು ರಾಜಾರೋಷವಾಗಿ ಹೇಳುತ್ತಾರೆ” ಎಂದು ದೂರಿದ್ದಾರೆ.
ಈ ಸುದ್ದಿ ಓದಿದ್ದೀರಾ? ವಿವಾಹೇತರ ಸಂಬಂಧ ಹೊಂದಿರುವ ಪತ್ನಿಯು ಪತಿಯಿಂದ ಜೀವನಾಂಶ ಕೇಳುವಂತಿಲ್ಲ: ಹೈಕೋರ್ಟ್
ಪತ್ರಿಕಾಗೋಷ್ಠಿಯಲ್ಲಿ ಎಸ್. ಎಚ್. ರಾಘವೇಂದ್ರ, ಪೂಜಪ್ಪಾ ಮೇತ್ರಿ, ವಿಶ್ವನಾಥ ಫಿರೋಜಾಬಾದ್, ಮಲ್ಲಣ್ಣ ಮಸ್ಕಿ, ಕಿರಣ, ಯಲ್ಲಾಲಿಂಗ, ಗಣಪತರಾವ ಮಾನೆ ಸೇರಿದಂತೆ ಇತರರಿದ್ದರು.