ವಿಕೃತ ಮನಸ್ಸಿನ ದುರುಳ ವ್ಯಕ್ತಿಯೊಬ್ಬ ತನ್ನ ಪತ್ನಿಯ ಖಾಸಗಿ ಕ್ಷಣಗಳನ್ನು ಚಿತ್ರೀಕರಿಸಿ, ಹಣ ಕೊಡದಿದ್ದರೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬ್ಲಾಕ್‌ಮೇಲ್ ಮಾಡಿರುವ ಪ್ರಕರಣವೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ತನ್ನ ಪತಿಯ ವಿರುದ್ಧ ಬೆಂಗಳೂರಿನ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರು ದೂರು ದಾಖಲಿಸಿದ್ದಾರೆ. “ತನ್ನ ಖಾಸಗಿ ವಿಡಿಯೋವನ್ನು ಚಿತ್ರೀಕರಿಸಿಕೊಂಡು ತನ್ನ ಪತಿಯೇ ಹಣಕ್ಕಾಗಿ ತನಗೆ ಬ್ಲಾಕ್‌ಮೇಲ್ ಮಾಡುತ್ತಿದ್ದಾನೆ. 10 ಲಕ್ಷ ರೂ. ಹಣ ಮತ್ತು ತಿಂಗಳ ವೇತನವನ್ನು ತನಗೆ ನೀಡದಿದ್ದರೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕುತ್ತಿದ್ದಾನೆ” ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.
“2022ರ ನವೆಂಬರ್‌ನಲ್ಲಿ ವಿವಾಹವಾಗಿದ್ದೆವು. ಹನಿಮೂನ್‌ಗಾಗಿ ಥಾಯ್ಲೆಂಡ್‌ಗೆ ಹೋಗಿದ್ದಾಗ ಅಶ್ಲೀಲ ವಿಡಿಯೋಗಳನ್ನು ತೋರಿಸಿ, ವಿಡಿಯೋದಲ್ಲಿರುವ ರೀತಿ ತನ್ನೊಂದಿಗೆ ನಡೆದುಕೊಳ್ಳುವಂತೆ ಕಿರುಕುಳ ನೀಡಿದ್ದ. ಬಲವಂತವಾಗಿ ಮದ್ಯಪಾನ ಮಾಡಿಸಿದ್ದ. ಅಲ್ಲದೆ, ಚಿಕ್ಕಮಗಳೂರಿನಲ್ಲಿರುವ ತವರು ಮನೆಗೆ ಹೋಗಿದ್ದಾಗ ನನ್ನ ಖಾಸಗಿ ಕ್ಷಣಗಳನ್ನು ತನ್ನ ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡಿದ್ದ. ಆ ವಿಡಿಯೋವನ್ನು ತೋರಿಸಿ ಬ್ಲಾಕ್ ಮೇಲ್ ಮಾಡುತ್ತಿದ್ದಾನೆ” ಎಂದು 28 ವರ್ಷದ ಆಕೆ ವಿವರಿಸಿದ್ದಾರೆ.
ಅಲ್ಲದೆ, “ವಿವಾಹಕ್ಕೂ ಮೊದಲು ತಾನು ಸ್ವಂತ ಕಂಪನಿ ಹೊಂದಿದ್ದೇನೆಂದು ಪತಿ ಸುಳ್ಳು ಹೇಳಿದ್ದ. ವಿವಾಹವಾದ ಕೆಲ ದಿನಗಳ ನಂತರ ಆರೋಪಿ ನಿರುದ್ಯೋಗಿ ಎಂಬುದು ಗೊತ್ತಾಯಿತು. ಪ್ರಶ್ನಿಸಿದರೆ ಸರಿಯಾಗಿ ಉತ್ತರಿಸಲಿಲ್ಲ. ಬದಲಾಗಿ, ನನ್ನ ವೇತನ ಮತ್ತು 10 ಲಕ್ಷ ರೂ. ಕೊಡಬೇಕೆಂದು ಕಿರುಕುಳ ನೀಡುತ್ತಿದ್ದ. ಕೊಡದಿದ್ದರೆ, ಖಾಸಗಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕುತ್ತಿದ್ದಾನೆ” ಎಂದು ಮಹಿಳೆ ಆರೋಪಿಸಿದ್ದಾರೆ.