ಗಣೇಶ ವಿಸರ್ಜನೆ ಕಾರ್ಯಕ್ರಮದಲ್ಲಿ ದ್ವೇಷ ಭಾಷಣ ಮಾಡಿದ ಆರೋಪದ ಮೇಲೆ ಸ್ವಯಂಘೋಷಿತ ಮಠಾಧೀಶ, ಶ್ರೀರಾಮ ಸೇನೆಯ ಕಾರ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಬುಧವಾರ, ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಗಣೇಶ ವಿಸರ್ಜನಾ ಕಾರ್ಯಕ್ರಮ ನಡೆದಿತ್ತು. ಈ ವೇಳೆ ಮಾತನಾಡಿದ್ದ ಸಿದ್ದಲಿಂಗ ಸ್ವಾಮಿ, “ಶಿವಮೊಗ್ಗ ಭಾಗದಲ್ಲಿ ನಡೆದ ಈದ್ ಮಿಲಾದ್ ಮೆರವಣಿಗೆಯಲ್ಲಿ ಮುಸ್ಲಿಮರು ಹಿಂಸಾಚಾರ ನಡೆಸಿದ್ದಾರೆ. ನಾವು ಮುಸ್ಲಿಮರ ಮೇಲೆ ದಾಳಿ ಮಾಡುತ್ತೇವೆ. ಕರ್ನಾಟಕದಲ್ಲಿ ಮತ್ತೊಂದು ಗೋಧ್ರಾ ಘಟನೆ ಸಂಭವಿಸುತ್ತದೆ” ಎಂದು ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಲಾಗಿದೆ.
ಅವರ ಭಾಷಣದ ವಿಡಿಯೋವನ್ನು ಆಧರಿಸಿ ಶಹಾಪುರ ಪೊಲೀಸರು ಸಿದ್ದಲಿಂಗ ಸ್ವಾಮಿ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 295ಎ (ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದು) ಮತ್ತು 153ಎ (ಸಮುದಾಯಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಅಡಿಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.
ಈ ಹಿಂದೆ ಕೂಡ ಇದೇ ರೀತಿಯಲ್ಲಿ ಹಲವಾರು ಭಾರಿ ಸಿದ್ದಲಿಂಗ ಸ್ವಾಮಿ ಪ್ರಚೋದನಾಕಾರಿ ಮತ್ತು ದ್ವೇಷದ ಭಾಷಣ ಮಾಡಿದ್ದಾರೆ. 2020ರಲ್ಲಿ, “ಮೋದಿ ಮತ್ತು ಅಮಿತ್ ಶಾ ಅವರನ್ನು ವಿರೋಧಿಸುವ ಜನರು ಪತ್ರಕರ್ತೆ ಗೌರಿ ಲಂಕೇಶ್ ರೀತಿಯಲ್ಲಿ ಬಲಪಂಥೀಯ ಉಗ್ರಗಾಮಿಗಳ ಗುಂಡಿಗೆ ಬಲಿಯಾಗುತ್ತಾರೆ” ಎಂದು ಪ್ರಚೋದನಾಕಾರಿ ಹೇಳಿಕೆ ನೀಡಿದ್ದರು.
ಕಳೆದ ವರ್ಷ, ದೇವಸ್ಥಾನದ ಉತ್ಸವಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡಬಾರದು. ಹಲಾಲ್ ಮಾಡಿದ ಮಾಂಸವನ್ನು ಖರೀದಿಸಬಾರದು ಎಂದು ಹೇಳಿದ್ದರು.