ಸಿಕ್ಕಿಂನಲ್ಲಿ ಮೇಘಸ್ಫೋಟಗೊಂಡು ಹಲವೆಡೆ ಪ್ರವಾಹ ಉಂಟಾಗಿದೆ. ಪ್ರವಾಹದಲ್ಲಿ ಇದುವರೆಗೂ 27 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೆ, 141 ಮಂದಿ ನಾಪತ್ತೆಯಾಗಿದ್ದಾರೆ. ಕಾಣೆಯಾಗಿರುವವರ ಪತ್ತೆಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಸಾವನ್ನಪ್ಪಿದವರ ಸಂಖ್ಯೆ 27 ಕ್ಕೆ ಏರಿದ್ದು, 141 ಮಂದಿ ನಾಪತ್ತೆಯಾದವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.
ಬುಧವಾರ ಹಠಾತ್ತನೆ ಸಂಭವಿಸಿದ ಮೇಘಸ್ಫೋಟವು ರಾಜ್ಯವನ್ನು ಸಂಕಷ್ಟಕ್ಕೆ ದೂಡಿದೆ. ಅಂದಿನಿಂದ ಶನಿವಾರ ಬೆಳಗ್ಗೆಯವರೆಗೆ ಎಂಟು ಮಂದಿ ಸೇನಾ ಯೋಧರು ಸೇರಿದಂತೆ 27 ಜನರು ಸಾವನ್ನಪ್ಪಿದ್ದಾರೆ. ಪ್ರವಾಹದಿಂದ ಮಂಗನ್, ಗ್ಯಾಂಗ್ಟಾಕ್, ಪಾಕ್ಯೊಂಗ್ ಮತ್ತು ನಾಮ್ಚಿ ಜಿಲ್ಲೆಯ 25,065ಕ್ಕೂ ಹೆಚ್ಚು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. 1,200ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. 13 ಸೇತುವೆಗಳು ಕೊಚ್ಚಿಹೋಗಿವೆ ಎಂದು ಭೂಕಂದಾಯ ಮತ್ತು ವಿಪತ್ತು ನಿರ್ವಹಣಾ ಇಲಾಖೆ ಹೇಳಿದೆ.
ಪಶ್ಚಿಮ ಬಂಗಾಳದಲ್ಲಿ ಶನಿವಾರ ಬೆಳಗ್ಗೆ ಮತ್ತೊಬ್ಬ ಸೇನಾ ಯೋಧನ ಮೃತದೇಹ ಪತ್ತೆಯಾಗಿದೆ. 27 ಸಾವುಗಳಲ್ಲಿ- ನಾಲ್ವರು ಮಂಗನ್ ಜಿಲ್ಲೆಯವರು, ಆರು ಗ್ಯಾಂಗ್ಟಾಕ್ ಜಿಲ್ಲೆಯಲ್ಲಿ, ಒಂಬತ್ತು ಪಾಕ್ಯೊಂಗ್ ಜಿಲ್ಲೆಯವರಾಗಿದ್ದಾರೆ. ಜೊತೆಗೆ, ಎಂಟು ಸೈನಿಕರು ಸೇರಿಸಿದ್ದಾರೆ ಎಂದು ವರದಿ ತಿಳಿಸಿದೆ.
ಇಲ್ಲಿಯವರೆಗೆ, ವಿವಿಧ ಪ್ರದೇಶಗಳಿಂದ 2,413 ಜನರನ್ನು ರಕ್ಷಿಸಲಾಗಿದೆ. ರಾಜ್ಯದಾದ್ಯಂತ 22 ಪರಿಹಾರ ಶಿಬಿರಗಳನ್ನು ತೆರೆಯಲಾಗಿದ್ದು, 6,875 ಜನರು ಆಶ್ರಯ ಪಡೆಯುತ್ತಿದ್ದಾರೆ ಎಂದು ಇಲಾಖೆ ಹೇಳಿದೆ.
ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಅವರು ಮೃತರ ಕುಟುಂಬಗಳಿಗೆ 4 ಲಕ್ಷ ರೂಪಾಯಿ ಪರಿಹಾರ ಮತ್ತು ಶಿಬಿರಗಳಲ್ಲಿ ಆಶ್ರಯ ಪಡೆದ ಎಲ್ಲರಿಗೂ ತಲಾ 2,000 ರೂಪಾಯಿಗಳ ತಕ್ಷಣದ ಪರಿಹಾರ ಘೋಷಿಸಿದ್ದಾರೆ.
“ಸಾವಿರಾರು ಕೋಟಿ ರೂಪಾಯಿ ಹಾನಿಯಾಗಿದೆ. ಹಾನಿಯ ಬಗ್ಗೆ ನಾವು ನಿಖರವಾದ ವಿವರಗಳನ್ನು ನೀಡಲು ತಕ್ಷಣದಲ್ಲಿ ಸಾಧ್ಯವಿಲ್ಲ. ಸಮಿತಿ ರಚಿಸಿ ಅದರ ವಿಶ್ಲೇಷಣೆ ಪೂರ್ಣಗೊಂಡ ನಂತರ ನಿಖರ ಮಾಹಿತಿ ಗೊತ್ತಾಗಲಿದೆ. ಸದ್ ಕ್ಕೆ, ಸಂಕಷ್ಟದಲ್ಲಿರುವವರನ್ನು ರಕ್ಷಿಸುವುದು ಮತ್ತು ತಕ್ಷಣ ಪರಿಹಾರಗಳನ್ನು ಒದಗಿಸುವುದು ನಮ್ಮ ಆದ್ಯತೆಯಾಗಿದೆ” ಎಂದು ಅವರು ಹೇಳಿದ್ದಾರೆ.