ಕಳೆದ ವರ್ಷ (2022) ಏಪ್ರಿಲ್ 1ರಿಂದ ಡಿಸೆಂಬರ್ 31ರವರೆಗೆ (8 ತಿಂಗಳು) ಪೌರತ್ವ ಕಾಯ್ದೆ-1995 ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)-2020 ಅಡಿಯಲ್ಲಿ 9 ರಾಜ್ಯಗಳ 31 ಜಿಲ್ಲೆಗಳಲ್ಲಿ ಒಟ್ಟು 1,739 ವಿದೇಶಿಗರಿಗೆ ಪೌರತ್ವ ಪ್ರಮಾಣಪತ್ರ ನೀಡಲಾಗಿದೆ ಎಂದು ಕೇಂದ್ರ ಗೃಹ ಗೃಹ ವ್ಯವಹಾರಗಳ ಸಚಿವಾಲಯವು ಹೇಳಿದೆ.
ಸಚಿವಾಲಯವು ತನ್ನ 2022-23ರ ವಾರ್ಷಿಕ ವರದಿಯನ್ನು ಬಿಡುಗಡೆ ಮಾಡಿದೆ. ಅಧಿಕಾರಿಗಳು ಸಮರ್ಥ ದಾಖಲೆಗಳನ್ನು ಪರಿಶೀಲಿಸಿ 1,739 ವಿದೇಶಿಗರಿಗೆ ಪೌರತ್ವ ಪ್ರಮಾಣಪತ್ರ ನೀಡಿದ್ದಾರೆ ಎಂದು ಹೇಳಿದೆ.
ಪೌರತ್ವ ನೀಡಲಾಗಿರುವ 1,739 ಪ್ರಮಾಣಪತ್ರಗಳ ಪೈಕಿ 1,386 ಪ್ರಮಾಣಪತ್ರಗಳನ್ನು ಪೌರತ್ವ ಕಾಯ್ದೆಯ-1995ರ ಸೆಕ್ಷನ್ 5ರ ಅಡಿ ಹಾಗೂ 353 ಪ್ರಮಾಣಪತ್ರಗಳನ್ನು ಕಾಯ್ದೆಯ ಸೆಕ್ಷನ್ 6ರ ಅಡಿಯಲ್ಲಿ ನೀಡಲ್ಪಟ್ಟಿವೆ ಎಂದು ಸಚಿವಾಲಯ ಹೇಳಿದೆ.
ವರದಿಯ ಪ್ರಕಾರ, ಪೌರತ್ವ (ತಿದ್ದುಪಡಿ) ಕಾಯಿದೆ-2019 (ಸಿಎಎ)ಅನ್ನು 2019ರ ಡಿಸೆಂಬರ್ 12ರಂದು ಪರಿಚಯಿಸಿದ್ದು, 2020ರ ಜನವರಿ 10ರಿಮದ ಜಾರಿಗೆ ತರಲಾಗಿದೆ.
“ತಿದ್ದುಪಡಿ ಕಾಯ್ದೆಯು 2014ರ ಡಿಸೆಂಬರ್ 31ಕ್ಕಿಂತ ಮುಂಚೆ ಅಫ್ಘಾನಿಸ್ತಾನ, ಬಾಂಗ್ಲಾದೇಶ ಅಥವಾ ಪಾಕಿಸ್ತಾನದಿಂದ ಭಾರತಕ್ಕೆ ಬಂದಿರುವ ಹಿಂದು, ಸಿಖ್, ಬೌದ್ಧ, ಜೈನ್, ಪಾರ್ಸಿ ಅಥವಾ ಕ್ರಿಶ್ಚಿಯನ್ ಸಮುದಾಯಗಳಿಗೆ ಸೇರಿದ ವಲಸಿಗರಿಗೆ ಪೌರತ್ವವನ್ನು ನೀಡಲು ಅನುಕೂಲ ಮಾಡಿಕೊಡುವ ಗುರಿಯನ್ನು ಹೊಂದಿದೆ. ಪಾಸ್‌ಪೋರ್ಟ್ (ಭಾರತಕ್ಕೆ ಪ್ರವೇಶ) ಕಾಯಿದೆ-1920ರ ಸೆಕ್ಷನ್ 3ರ ಉಪ-ವಿಭಾಗ (2)ರ ಷರತ್ತು (ಸಿ) ಮೂಲಕ ಅಥವಾ ಅಡಿಯಲ್ಲಿ ಕೇಂದ್ರ ಸರ್ಕಾರದಿಂದ ವಿನಾಯಿತಿ ಪಡೆದವರಿಗೆ ತಿದ್ದುಪಡಿ ಕಾಯ್ದೆಯು ಅನುಕೂಲ ನೀಡುತ್ತದೆ” ಎಂದು ವರದಿ ಹೇಳಿದೆ.
ಸಿಎಎಯನ್ನು ಕೇಂದ್ರ ಸರ್ಕಾರ ಅಂಗೀಕರಿಸಿದ ಸಮಯದಲ್ಲಿ ದೇಶಾದ್ಯಂತ ವಿರೋಧ ವ್ಯಕ್ತವಾಗಿತ್ತು. ಸಾವಿರಾರು ಪ್ರತಿಭಟನೆಗಳು ನಡೆಸಿದ್ದವು. ಸಿಎಎ ಮತ್ತು ಎನ್‌ಆರ್‌ಸಿ ಮೂಲಕ ಕೇಂದ್ರ ಸರ್ಕಾರವು ಮುಸ್ಲಿಮರ ಎದೆಗೆ ನೇರವಾಗಿ ಚೂರಿ ಹಾಕಿದರೆ, ಹಿಂದುಗಳು ಮತ್ತು ಸಂವಿಧಾನದ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುತ್ತದೆ. ಈ ಕಾಯ್ದೆಗಳು ದೇಶವನ್ನು ಒಡೆಯುವ, ಮೂಲಭೂತವಾಗಿ ತಾರತಮ್ಯ ಎಸಗುವ ಮತ್ತು ದೇಶಕ್ಕೆ ಬೆಂಕಿ ಹಚ್ಚುವ ಕಾಯ್ದೆಗಳಾಗಿವೆ. ಈಶಾನ್ಯ ಭಾಗದ ಜನರು, ಮುಸ್ಲಿಮರು, ಆದಿವಾಸಿಗಳು, ದಲಿತರು ಈ ಕಾಯ್ದೆಗಳಿಂದ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ತೀವ್ರ ವಿರೋಧ ವ್ಯಕ್ತವಾಗಿತ್ತು.
ಸಿಎಎಯನ್ನು ಅಂಗೀಕರಿಸಿದ್ದ ಕೇಂದ್ರ ಸರ್ಕಾರ, ಕಾಯ್ದೆಯನ್ನು ಜಾರಿಗೆ ತರುವ ಬಗ್ಗೆ ಸ್ಪಷ್ಟನೆ ನೀಡಿಲ್ಲ. ಕಾಯ್ದೆಯಡಿ ನಿಯಮಗಳನ್ನು ರೂಪಸಲಾಗುತ್ತಿದೆ. ಶೀಘ್ರದಲ್ಲೇ ಜಾರಿಗೆ ತರುತ್ತೇವೆ ಎಂದು 2021ರಲ್ಲಿ ಕೇಂದ್ರ ಸರ್ಕಾರ ಹೇಳಿತ್ತು. ಸಧ್ಯ, ಹೊಸ ಕಾಯ್ದೆ ಇನ್ನೂ ಜಾರಿಗೆ ಬಂದಿಲ್ಲ.