‘ಈ ದಿನ’ ಸಂಪಾದಕೀಯ | ಗುಜರಾತನ್ನು ಮೆರೆಸಲು ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ಮುಳುಗಿಸಿತೇ ಬಿಸಿಸಿಐ?

Date:

ಅಹಮದಾಬಾದ್‌ನಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್‌ ಪಂದ್ಯಾವಳಿಯ ಉದ್ಘಾಟನಾ ಪಂದ್ಯವು ದೇಶದ ಕ್ರೀಡಾ ಇತಿಹಾಸದಲ್ಲೊಂದು ಕಪ್ಪು ಚುಕ್ಕೆ. ಕ್ರೀಡೆಯೊಂದರ ಘನತೆಗಿಂತ, ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಹರಾಜಾದ ದೇಶದ ಮರ್ಯಾದೆಗಿಂತ, ಕ್ರೀಡಾಪ್ರೇಮಿಗಳ ಹಿತಕ್ಕಿಂತ ಚಿಲ್ಲರೆ ರಾಜಕೀಯವೇ ಮೇಲುಗೈ ಸಾಧಿಸಿದ್ದು ವಿಪರ್ಯಾಸ

ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನಾ ಪಂದ್ಯಕ್ಕೆ ಸಿಕ್ಕಿರುವ ನೀರಸ ಪ್ರತಿಕ್ರಿಯೆಯಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಕಂಗಾಲಾಗಿದೆ. ಇತ್ತ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಾತ್ರ, ‘ಟೀಮ್ ಇಂಡಿಯಾ’ ಆಡದಿರುವ ಕಾರಣಕ್ಕೆ ಪ್ರೇಕ್ಷಕರು ಬಂದಿಲ್ಲ ಎಂಬ ಸಬೂಬು ಹೇಳಿದೆ.

- Advertisement -

ಅಕ್ಟೋಬರ್ ಐದರಂದು, ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಉದ್ಘಾಟನಾ ಪಂದ್ಯಕ್ಕೆ ಆರಂಭದಲ್ಲಿ ಇದ್ದ ಪ್ರೇಕ್ಷಕರು ಸುಮಾರು ಐದು ಸಾವಿರ. ಮೊದಲ ಇನ್ನಿಂಗ್ಸ್ ಮುಗಿಯುವ ವೇಳೆಗೆ 17 ಸಾವಿರ ಮಂದಿ ಗ್ಯಾಲರಿಯಲ್ಲಿದ್ದರು. ಪಂದ್ಯದ ಫಲಿತಾಂಶ ಹೊರಬೀಳುವ ಸಮಯಕ್ಕೆ ಒಟ್ಟು 47 ಸಾವಿರ ಮಂದಿ ಕ್ರೀಡಾಂಗಣದಲ್ಲಿ ನೆರೆದಿದ್ದರು ಎಂದು ಗುಜರಾತ್ ಕ್ರಿಕೆಟ್ ಸಮಿತಿ ಅಧಿಕೃತ ಪ್ರಕಟಣೆ ಹೊರಡಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಖಾಲಿಯಾಗುತ್ತಿವೆ ಉತ್ತರ ಕನ್ನಡದ ಹಳ್ಳಿಗಳು: 40ಕ್ಕೂ ಹೆಚ್ಚು ಗ್ರಾಮಗಳಲ್ಲಿ...

ಮಕ್ಕಳ ಗದ್ದಲ, ಕೃಷಿ ಚಟುವಟಿಕೆಯ ಹಿಗ್ಗು, ಹಬ್ಬ-ಹರಿದಿನಗಳ ಸಂಭ್ರಮದಿಂದ ಕಂಗೊಳಿಸುತ್ತಿದ್ದ ಹಳ್ಳಿಗಳು ಇವತ್ತು ನಿಶ್ಶಬ್ದವಾಗಿ ನಿಂತಿವೆ. ಪ್ರಕೃತಿಯ ಮಡಿಲಲ್ಲಿ ಕಟ್ಟಿಕೊಂಡಿದ್ದ ಬದುಕು ನಿಧಾನವಾಗಿ ಕರಗಿ ಹೋಗುತ್ತಿದೆ. ಊರು ತೊರೆದು ಪಟ್ಟಣ ಸೇರವುದು ಅನಿವಾರ್ಯವ...

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಆದರೆ, ಉದ್ಘಾಟನಾ ಪಂದ್ಯದಲ್ಲಿ ಪ್ರೇಕ್ಷಕರು ಅತ್ಯಂತ ಕಡಿಮೆ ಇದ್ದದ್ದು ಸುದ್ದಿಯಾದ ನಂತರ, ಗುಜರಾತ್ ಕ್ರಿಕೆಟ್ ಸಮಿತಿಯ ಅಧಿಕಾರಿಗಳ ಮೇಲೆ ಒತ್ತಡ ಉಂಟಾಗಿ, ಸಿಕ್ಕಸಿಕ್ಕವರನ್ನೆಲ್ಲ ಕ್ರೀಡಾಂಗಣಕ್ಕೆ ಕರೆತಂದು ಕೂರಿಸಲಾಯಿತು ಎಂಬ ಆರೋಪಗಳಿವೆ. ಇದಕ್ಕೆ ಪೂರಕವಾಗಿ, ಭಾರತ-ಪಾಕಿಸ್ತಾನದ ನಡುವಿನ ಪಂದ್ಯ ಎಂದು ಸುಳ್ಳು ಹೇಳಿ ಸ್ಥಳೀಯರನ್ನು ಕರೆತಂದ ಕುರಿತೂ ಸುದ್ದಿಯಾಗಿದೆ. ಇನ್ನೂ ಕೌತುಕದ ಸಂಗತಿ ಎಂದರೆ, ಎಲ್ಲ ಪಂದ್ಯಗಳ ಟಿಕೆಟ್ ಸಂಪೂರ್ಣ ಮಾರಾಟವಾಗಿದೆ ಎಂದು ಖುದ್ದು ಬಿಸಿಸಿಐ ಹೇಳಿಕೊಂಡಿರುವುದು.

ಅಹಮದಾಬಾದ್ ಕ್ರೀಡಾಂಗಣ ಅತ್ಯಂತ ದೊಡ್ಡದು, ಟೀಮ್ ಇಂಡಿಯಾ ಆಡುತ್ತಿರಲಿಲ್ಲ ಎಂಬ ಕಾರಣಗಳು ಸತ್ಯದೂರವಲ್ಲ. ಈ ಕ್ರೀಡಾಂಗಣ ತುಂಬಬೇಕೆಂದರೆ ಪ್ರೇಕ್ಷಕರ ಸಂಖ್ಯೆ ಒಂದು ಲಕ್ಷ ದಾಟಬೇಕು. ಇದೆಲ್ಲ ಮೊದಲೇ ಗೊತ್ತಿದ್ದರೂ ಅಹಮದಾಬಾದ್‌ನಲ್ಲೇ ಉದ್ಘಾಟನಾ ಪಂದ್ಯ ಆಯೋಜಿಸಿದ್ದೇಕೆ ಎಂಬ ಪ್ರಶ್ನೆ ಇದೀಗ ಮುನ್ನೆಲೆಗೆ ಬಂದಿದೆ. ಇದಕ್ಕೆ ಕಾರಣವೂ ಉಂಟು.

ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ವೇಳಾಪಟ್ಟಿ ಪ್ರಕಟವಾಗಿದ್ದು ಇದೇ ವರ್ಷದ ಜೂನ್‌ನಲ್ಲಿ. ಐಸಿಸಿ ಮತ್ತು ಬಿಸಿಸಿಐ ಜಂಟಿ ಪತ್ರಿಕಾಗೋಷ್ಠಿ ನಡೆಸಿ, ಒಟ್ಟು ಹತ್ತು ಕ್ರೀಡಾಂಗಣಗಳಲ್ಲಿ (ಅಹಮದಾಬಾದ್, ಹೈದರಾಬಾದ್, ಧರ್ಮಶಾಲಾ, ದೆಹಲಿ, ಚೆನ್ನೈ, ಲಖನೌ, ಪುಣೆ, ಬೆಂಗಳೂರು, ಮುಂಬೈ, ಕೊಲ್ಕತ್ತಾ) ಪಂದ್ಯಾವಳಿ ನಡೆಯಲಿದೆ ಎಂದು ಘೋಷಿಸಿದ್ದವು. ಪಂದ್ಯಗಳು ಯಾವ ಸ್ಥಳದಲ್ಲಿ ನಡೆಯಬೇಕು ಎಂಬ ವಿಷಯದಲ್ಲಿ ಆತಿಥೇಯ ದೇಶದ ತೀರ್ಮಾನವೇ ಅಂತಿಮ. ಅಂದರೆ, ವೇಳಾಪಟ್ಟಿಯನ್ನು ತಯಾರಿಸಿದ್ದು ಬಿಸಿಸಿಐ. ಉದ್ಘಾಟನಾ ಪಂದ್ಯಕ್ಕೆ ಕಡಿಮೆ ಪ್ರೇಕ್ಷಕರು ಸೇರುತ್ತಾರೆಂಬ ಲೆಕ್ಕಾಚಾರ ಮೊದಲೇ ಇದ್ದಿದ್ದರಿಂದ, ಅಹಮದಾಬಾದ್ ಬಿಟ್ಟು ಬೇರೆ ಕ್ರೀಡಾಂಗಣ ಆಯ್ಕೆ ಮಾಡುವ ಅವಕಾಶ ಬಿಸಿಸಿಐಗೆ ಖಂಡಿತ ಇತ್ತು. ಆದರೆ, ಇಂತಹ ತೀರ್ಮಾನಗಳನ್ನು ಕ್ರೀಡಾ ಲೆಕ್ಕಾಚಾರಗಳಿಗೆ ಅನುಗುಣವಾಗಿ ತೆಗೆದುಕೊಳ್ಳುವ ವಾತಾವರಣ ಬಿಸಿಸಿಐನಲ್ಲಿ ಇಲ್ಲ ಎಂಬುದು ಹಿರಿಯ ಕ್ರಿಕೆಟಿಗರ ಕಟು ಟೀಕೆ. ಸುನಿಲ್ ಗವಾಸ್ಕರ್ ನೇರವಾಗಿಯೇ ಇದನ್ನು ಹೇಳಿದ್ದಾಗಿದೆ. ರಾಜಕೀಯ ಲೆಕ್ಕಾಚಾರಗಳನ್ನು ಆಧರಿಸಿ ತೆಗೆದುಕೊಳ್ಳುವ ನಿರ್ಧಾರಗಳು ಹೇಗಿರುತ್ತದೆ ಎಂಬುದಕ್ಕೆ, ಉದ್ಘಾಟನಾ ಪಂದ್ಯವನ್ನು ಅಹಮದಾಬಾದ್‌ನಲ್ಲಿ ಆಯೋಜಿಸಿದ್ದು ಘನ ನಿದರ್ಶನ. ಈ ಪಂದ್ಯಾವಳಿಯ ಫೈನಲ್ ಪಂದ್ಯ ಕೂಡ ಇದೇ ಸ್ಟೇಡಿಯಂನಲ್ಲಿ ನಿಗದಿಯಾಗಿದೆ. ಉದ್ಘಾಟನಾ ಪಂದ್ಯದ ಕಹಿ ಅನುಭವದಿಂದ ಬಿಸಿಸಿಐ ಪಾಠ ಕಲಿಯಬಹುದು. ಜನ ಸೇರದಿದ್ದರೆ ನೂರಾರು ಬಸ್ಸುಗಳ ಭರ್ತಿ ಜನರನ್ನು ಮೋದಿ ಸ್ಟೇಡಿಯಮ್‌ಗೆ ಹೊತ್ತು ತರಲೂಬಹುದು.

ವಿಶ್ವಕಪ್ ಪಂದ್ಯಗಳನ್ನು ಎಲ್ಲೆಲ್ಲಿ ನಡೆಸಬೇಕು ಎಂದು ತೀರ್ಮಾನ ಮಾಡುವಲ್ಲಿಯೂ ಬಿಸಿಸಿಐನೊಳಗೆ ರಾಜಕೀಯ ಕೆಲಸ ಮಾಡಿದೆ. ವಿಶ್ವಕಪ್, ಅಂತಾರಾಷ್ಟ್ರೀಯ ಏಕದಿನ ಮತ್ತು ಟೆಸ್ಟ್ ಪಂದ್ಯಗಳಿಗಾಗಿ ಹೆಸರು ಮಾಡಿದ ಮಧ್ಯಪ್ರದೇಶದ ಇಂದೋರ್ ಕ್ರೀಡಾಂಗಣದಲ್ಲಿ ಈ ಬಾರಿ ಒಂದೂ ಪಂದ್ಯ ನಡೆಯುತ್ತಿಲ್ಲ. ಪಂಜಾಬ್‌ನ ಮೊಹಾಲಿ ಕ್ರೀಡಾಂಗಣವನ್ನೂ ಪರಿಗಣಿಸಿಲ್ಲ. ಈ ಎರಡೂ ರಾಜ್ಯದ ಕ್ರಿಕೆಟ್ ಸಮಿತಿಗಳು ಬಿಸಿಸಿಐ ತೀರ್ಮಾನಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ್ದವು. ಝಾರ್ಖಂಡ್‌ನ ರಾಂಚಿ, ಮಹಾರಾಷ್ಟ್ರದ ನಾಗಪುರ ಹಾಗೂ ಸ್ವತಃ ಗುಜರಾತ್‌ನ ರಾಜ್‌ಕೋಟ್‌ ಕ್ರೀಡಾಂಗಣಗಳೂ ಇಂಥದ್ದೇ ನಿರ್ಲಕ್ಷ್ಯಕ್ಕೆ ಒಳಗಾಗಿವೆ.

ಇವೆಲ್ಲ ಬೆಳವಣಿಗೆಗಳು – ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ವೇಳೆ ನರೇಂದ್ರ ಮೋದಿಯವರ ಹೆಸರು ಹೆಚ್ಚು-ಹೆಚ್ಚು ಕಾಣಿಸಿಕೊಳ್ಳುವಂತೆ, ಕೇಳಿಬರುವಂತೆ ಮಾಡುವ ಭಟ್ಟಂಗಿ ತಂತ್ರಗಾರಿಕೆಯ ಭಾಗ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಅಹಮದಾಬಾದ್‌ ಕ್ರೀಡಾಂಗಣದ ಹೆಸರು ಪ್ರಧಾನಿಯವರ ಹೆಸರನ್ನೇ ಹೊತ್ತಿದೆ. ಇದೇ ಜಾಗದಲ್ಲಿದ್ದ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಹೆಸರಿನ ಕ್ರಿಕೆಟ್ ಕ್ರೀಡಾಂಗಣವನ್ನು ಒಡೆದುಹಾಕಿ, ವಿಶ್ವದಲ್ಲೇ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣವನ್ನು ಮೋದಿಯವರು ನಿರ್ಮಿಸಿದರು. ಹಳೆಯ ಕ್ರೀಡಾಂಗಣಕ್ಕಿದ್ದ ಸರ್ದಾರ್ ಪಟೇಲ್ ಹೆಸರನ್ನು ಕೈಬಿಟ್ಟು ತಮ್ಮದೇ ಹೆಸರನ್ನು ಇರಿಸಿಕೊಂಡರು. ಇದೀಗ ಇದು ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರೀಡಾಂಗಣ.

ಈ ಭವ್ಯ ಕ್ರೀಡಾಂಗಣದಲ್ಲಿ ಮೋದಿಯವರು ಏರ್ಪಡಿಸಿದ ಮೊದಲನೆಯ ವಿದ್ಯಮಾನ ಕ್ರಿಕೆಟ್‌ಗೆ ಸಂಬಂಧಿಸಿರಲಿಲ್ಲ. ಬದಲಾಗಿ, ಅಮೆರಿಕದ ಅಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮನಮೆಚ್ಚಿಸುವ ‘ನಮಸ್ತೆ ಟ್ರಂಪ್’ ರಾಜಕೀಯ ರ್‍ಯಾಲಿ ಏರ್ಪಡಿಸಿದ್ದರು. ಲಕ್ಷಗಟ್ಟಲೆ ಜನರನ್ನು ಕರೆತಂದು ಕ್ರೀಡಾಂಗಣವನ್ನು ತುಂಬಿಸಲಾಗಿತ್ತು. ಟ್ರಂಪ್ ಖುಷಿಯಾದರು. ಮೋದಿ ಬಿರಿದು ಬೀಗಿದರು. ಇದೀಗ 2024ರ ಲೋಕಸಭಾ ಚುನಾವಣೆಗಳು ಹೊಸ್ತಿಲಲ್ಲಿವೆ. ಪೂರಕವಾಗಿ, ಗೃಹ ಸಚಿವ ಅಮಿತ್ ಶಾ ಅವರ ಮುದ್ದುಮಗ ಜಯ್ ಶಾ ಬಿಸಿಸಿಐನ ಅತ್ಯಂತ ಪ್ರಭಾವಿ ಕಾರ್ಯದರ್ಶಿ. ಮೋದಿ, ಶಾ, ಜಯ್ ಶಾ ಮೆರೆದಾಡಬೇಕು. ಹೀಗೆ, ಕ್ರೀಡೆಯೊಂದರ ಘನತೆಗಿಂತ, ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಹರಾಜಾದ ದೇಶದ ಮರ್ಯಾದೆಗಿಂತ, ಕ್ರೀಡಾಪ್ರೇಮಿಗಳ ಹಿತಕ್ಕಿಂತ ಚಿಲ್ಲರೆ ರಾಜಕೀಯವೇ ಮೇಲುಗೈ ಸಾಧಿಸಿದ್ದು ವಿಪರ್ಯಾಸ. ದೇಶದ ಕ್ರೀಡಾ ಇತಿಹಾಸದಲ್ಲಿ ಇದೊಂದು ಕಪ್ಪು ಚುಕ್ಕೆ.

ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಹಬ್ಬ-ಆಚರಣೆಗಳೇ ಬಿಜೆಪಿಯ ದ್ವೇಷದ ಅಸ್ತ್ರ; ಜನತೆ ಎಚ್ಚೆತ್ತುಕೊಳ್ಳಲಿ!

ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಧಾರ್ಮಿಕ ಆಚರಣೆಗಳ ಪಾವಿತ್ರ್ಯವನ್ನು ಹಾಳುಗೆಡವುವ, ಹಬ್ಬಗಳನ್ನು...

ಈ ದಿನ ಸಂಪಾದಕೀಯ | ಪ್ರಜಾ ಸೇವೆ ಪ್ರಚಾರವೂ ಇರಲಿ, ಪ್ರಜೆಗಳ ಬದುಕಿನಲ್ಲಿ ಬದಲಾವಣೆಯನ್ನೂ ತರಲಿ

ಸರ್ಕಾರದ ಕಾರ್ಯಕ್ರಮಗಳು, ಯೋಜನೆಗಳು ಜನರಿಗೆ ತಲುಪಲು ಪ್ರಚಾರ ಮುಖ್ಯ; ಅದಕ್ಕಿಂತ ಸಾಮಾನ್ಯರ...

ಈ ದಿನ ಸಂಪಾದಕೀಯ | ಭಿನ್ನಮತಗಳ ನಡುವೆ BRICS ಶೃಂಗಸಭೆ; ಒಮ್ಮತ ಸಾಧಿಸುವುದೇ ಸವಾಲು!

ಇರಾನ್-ಯುಎಇ ಉದ್ವಿಗ್ನತೆ, ರಷ್ಯಾ-ಪಶ್ಚಿಮ ರಾಷ್ಟ್ರಗಳ ಸಂಘರ್ಷ, ಏಷ್ಯಾ ದೈತ್ಯರ ಆಂತರಿಕ ತಿಕ್ಕಾಟಗಳು...

ಈ ದಿನ ಸಂಪಾದಕೀಯ | ಪಾದಯಾತ್ರೆಯ ಪಾವಿತ್ರ್ಯತೆಯನ್ನು ಬಿಜೆಪಿ ಮುಖಂಡರು ಮಣ್ಣುಗೂಡಿಸಿದರೇ?

ದೇಶದಲ್ಲಿ ಇಲ್ಲಿಯವರೆಗೆ ಜರುಗಿದ ಪಾದಯಾತ್ರೆಗಳು ಜನರ ಸಮಸ್ಯೆಗಳನ್ನು ಹೊತ್ತು ನಡೆದ ಹೆಜ್ಜೆಗಳಾಗಿದ್ದವು,...