ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಶನಿವಾರ(ಅಕ್ಟೋಬರ್ 07) ತಡರಾತ್ರಿ ಅತ್ತಿಬೆಲೆ ಪಟಾಕಿ ಗೋದಾಮಿನಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ಡಿ ಕೆ ಶಿವಕುಮಾರ್ ತಡರಾತ್ರಿ(ಅಕ್ಟೋಬರ್ 07) ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.
ಬೆಂಗಳೂರಿನ ದಕ್ಷಿಣ ಹೊರವಲಯದಲ್ಲಿರುವ ಅತ್ತಿಬೆಲೆ ಗಡಿ ಚೆಕ್‌ಪೋಸ್ಟ್‌ನಿಂದ 500 ಮೀಟರ್‌ಗಿಂತ ಕಡಿಮೆ ದೂರದಲ್ಲಿರುವ ಸಗಟು ಪಟಾಕಿ ಗೋದಾಮು ಶ್ರೀಬಾಲಾಜಿ ಟ್ರೇಡರ್ಸ್‌ನಲ್ಲಿ ಕನಿಷ್ಠ 14 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ಗೋದಾಮಿನಲ್ಲಿ 19 ಕಾರ್ಮಿಕರು ಇದ್ದರು ಎಂಬ ಮಾಹಿತಿ ನಮಗೆ ಲಭ್ಯವಾಗಿದೆ ಎಂದು ಡಿ ಕೆ ಶಿವಕುಮಾರ್ ಸುದ್ದಿಗಾರರಿಗೆ ತಿಳಿಸಿದರು. ದುರಂತಕ್ಕೆ ಸಂಬಂಧಿಸಿದಂತೆ ಒಬ್ಬನನ್ನು ಬಂಧಿಸಲಾಗಿದೆ, ಆತ ಕೂಡ ಚಿಕಿತ್ಸೆ ಪಡೆಯುತ್ತಿದ್ದಾನೆ. ಗಾಯಗೊಂಡಿರುವ ಇತರ ಆರು ಮಂದಿ ಆಸ್ಪತ್ರೆಯಲ್ಲಿದ್ದಾರೆ. 12 ಮಂದಿಯ ಮೃತದೇಹಗಳು ಪತ್ತೆಯಾಗಿವೆ.
ದೀಪಾವಳಿ ಪ್ರಯುಕ್ತ ರಾಜ್ಯಾದ್ಯಂತ ಪಟಾಕಿ ಅಂಗಡಿಗಳು ಮತ್ತು ಗೋದಾಮುಗಳಲ್ಲಿ ಅಗ್ನಿ ಅನಾಹುತ ನಿಯಂತ್ರಣ ನಿಯಮಗಳ ಪಾಲನೆ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಡಿ ಕೆ ಶಿವಕುಮಾರ್ ತಿಳಿಸಿದರು.
ಆನೇಕಲ್ ಬಳಿಯ ಅತ್ತಿಬೆಲೆ ಸಮೀಪ ಇಂದು ಸಂಭವಿಸಿರುವ ಪಟಾಕಿ ದುರಂತದಲ್ಲಿ 12 ಮಂದಿ ಜೀವಂತ ದಹನವಾಗಿರುವ ಸುದ್ದಿ ದುಃಖಕರ. ವಿಷಯ ತಿಳಿದ ಕೂಡಲೇ ದುರಂತ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ದುರಂತದ ಕಾರಣ ಸಂಬಂಧ ಸೂಕ್ತ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ.… pic.twitter.com/YHjwxzV2CZ
— DK Shivakumar (@DKShivakumar) October 7, 2023
ಶನಿವಾರ ಮಧ್ಯಾಹ್ನ 3:30 ರ ಸುಮಾರಿಗೆ ಕಾರ್ಮಿಕರು ಶ್ರೀ ಬಾಲಾಜಿ ಟ್ರೇಡರ್ಸ್‌ಗೆ ಲಾರಿ ಮತ್ತು ಎರಡು ಮಿನಿ ಗೂಡ್ಸ್ ವಾಹನಗಳಿಂದ ಪಟಾಕಿಗಳನ್ನು ಇಳಿಸುವ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ದೀಪಾವಳಿಗೆ ಮುನ್ನ ತಮಿಳುನಾಡಿನ ಪಟಾಕಿ ಕೇಂದ್ರವಾದ ಶಿವಕಾಶಿಯಿಂದ ಪಟಾಕಿಗಳನ್ನು ಸಾಗಿಸಲಾಗಿತ್ತು.
ಬೆಂಕಿಯ ನಿಖರವಾದ ಕಾರಣ ಅಸ್ಪಷ್ಟವಾಗಿದ್ದರೂ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮೂರು ವಾಹನಗಳಲ್ಲಿ ಸಂಗ್ರಹಿಸಲಾದ ಪಟಾಕಿಗಳು ಹೈ-ಟೆನ್ಷನ್ ಓವರ್‌ಹೆಡ್ ವಿದ್ಯುತ್ ತಂತಿಗೆ ತಾಕಿದ ಪರಿಣಾಮ ದುರಂತ ಸಂಭವಿಸಿದೆ ಎಂದು ಶಂಕಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಇಸ್ರೇಲ್ – ಹಮಾಸ್ ಯುದ್ಧ| 500ಕ್ಕೂ ಹೆಚ್ಚು ಸಾವು;…
ಮೃತರು ಕೂಲಿ ಕೆಲಸಕ್ಕೆ ಬಂದಿದ್ದ ತಮಿಳುನಾಡಿನ ಪದವೀಧರರು
ಪಟಾಕಿ ದುರಂತದಲ್ಲಿ ಮೃತಪಟ್ಟಿರುವ ಏಳು ಮಂದಿ ಗುರುತು ಪತ್ತೆಯಾಗಿದೆ. ಎಲ್ಲರೂ ತಮಿಳುನಾಡಿನವರು. ಮೃತರನ್ನು ಧರ್ಮ ಪುರಿ ಜಿಲ್ಲೆಯ ವೆಡಪ್ಪನ್, ರಾಘವನ್, ಆದಿಕೇಶವನ್, ಗಿರಿ, ಮುನಿವೇಲಂ, ಆಕಾಶ್, ಇಳಂಬರ್ದಿ , ಚಂಗಂ ತಾಲ್ಲೂಕಿನ ಪ್ರಕಾಶ್ ರಾಜ್ ಎಂದು ಗುರುತಿಸಲಾಗಿದೆ. ಮೃತರೆಲ್ಲರೂ ಪದವೀಧರರಾಗಿದ್ದು, ಕೂಲಿ ಕೆಲಸಕ್ಕೆ ಪಟಾಕಿ ಅಂಗಡಿಯಲ್ಲಿ ಸೇರಿಕೊಂಡಿದ್ದರು.
ತಮಿಳುನಾಡಿನಿಂದ ಅಧಿಕಾರಿಗಳ ತಂಡ ಬಂದಿದ್ದು, ಅವರ ಎದುರು ಮೃತರ ಸಂಬಂಧಿಕರು ಆಕ್ಸಫರ್ಡ್ ಆಸ್ಪತ್ರೆಯಲ್ಲಿರುವ ಮೃತದೇಹ ನೋಡಲು ಅನುವು ಮಾಡಬೇಕೆಂದು ಮನವಿ ಮಾಡಿದ್ದಾರೆ.