ರಾಜಧಾನಿ ಬೆಂಗಳೂರಿನ ಅತ್ತಿಬೆಲೆ ಪಟಾಕಿ ಗೋದಾಮಿನಲ್ಲಿ ಸಂಭವಿಸಿದ ಅಗ್ನಿ ಅವಘಡ ದುರಂತ ಮಾಸುವ ಮುನ್ನವೇ ಮಂಡ್ಯದ ಮನ್ ಮುಲ್ನಲ್ಲಿ ಭಾನುವಾರ ಬೆಳ್ಳಂಬೆಳಿಗ್ಗೆ ಅಗ್ನಿ ಅವಘಡ ಸಂಭವಿಸಿರುವುದು ವರದಿಯಾಗಿದೆ.
ಮದ್ದೂರು ತಾಲೂಕಿನ ಗೆಜ್ಜಲಗೆರೆಯಲ್ಲಿರುವ ಮಂಡ್ಯ ಜಿಲ್ಲಾ ಸಹಕಾರ ಹಾಲು ಒಕ್ಕೂಟ (ಮನ್ ಮುಲ್)ದ ಮೆಗಾ ಡೈರಿ ಘಟಕ ಕಳೆದ ಐದು ತಿಂಗಳ ಹಿಂದೆ ಉದ್ಘಾಟನೆಯಾಗಿತ್ತು. ಎಂದಿನಂತೆ ಕಾರ್ಮಿಕರು ಭಾನುವಾರ ಬೆಳಗ್ಗಿನ ಶಿಫ್ಟ್‌ನಲ್ಲಿ ಕೆಲಸ ಮಾಡುತ್ತಿದ್ದರು. ಶಾರ್ಟ್ ಸರ್ಕ್ಯೂಟ್‌ನಿಂದ ಮನ್ ಮುಲ್‌ನ ಪ್ಯಾಕಿಂಗ್ ಸೆಕ್ಷನ್‌ನಲ್ಲಿ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಸಿಬ್ಬಂದಿ ಕಟ್ಟಡದಿಂದ ಹೊರಕ್ಕೆ ಓಡಿಬಂದಿದ್ದಾರೆ.
ಬೆಂಕಿ ಹೊತ್ತಿಕೊಂಡ ಕಾರಣ ಸಿಬ್ಬಂದಿಯಲ್ಲಿ ಆತಂಕ ಮೂಡಿದೆ. ವಿಷಯ ತಿಳಿದು ಘಟನಾ ಸ್ಥಳಕ್ಕೆ 3ಕ್ಕೂ ಅಗ್ನಿಶಾಮಕ ವಾಹನಗಳು ದೌಡಾಯಿಸಿದ್ದು, ಬೆಂಕಿ ನಂದಿಸುತ್ತಿದ್ದಾರೆ. ತುಪ್ಪದ ಘಟಕಕ್ಕೆ ಬೆಂಕಿ ತಗುಲಿರುವುದರಿಂದ ಬೆಂಕಿ ನಂದಿಸಲು ಅಗ್ನಿಶಾಮಕ ದಳದವರು ಹರಸಾಹಸ ಪಡುತ್ತಿದ್ದಾರೆ. ಇನ್ನು ಬೆಂಕಿಯ ಕೆನ್ನಾಲಿಗೆಗೆ ಬಾಯ್ಲರ್‌ಗಳು ಸ್ಪೋಟಗೊಂಡಿರುವ ಸಾಧ್ಯತೆಯಿದೆ. ಬೆಂಕಿಯಿಂದಾಗಿ ಮನ್ ಮುಲ್ ಆವರಣದಲ್ಲಿ ದಟ್ಟ ಹೊಗೆ ಆವರಿಸಿದೆ.
ಈ ಸುದ್ದಿ ಓದಿದ್ದೀರಾ? ಅತ್ತಿಬೆಲೆ ಪಟಾಕಿ ದುರಂತ | ಮೃತ ಕಾರ್ಮಿಕರಲ್ಲಿ ಒಂದೇ ಗ್ರಾಮದ 8 ವಿದ್ಯಾರ್ಥಿಗಳು
ಬೆಂಕಿ ಅವಘಡದಲ್ಲಿ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಆದರೆ, ಲಕ್ಷಾಂತರ ರೂ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.
ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.