ದೇಶ ವಿಭಜನೆ | ಯಾವ ಪ್ರಭುತ್ವವೂ ಅಳಿಸಲಾಗದ ಅಶ್ರುಧಾರೆಯ ಕತೆ…

Date:

Advertisements

ಹಿಂದೊಮ್ಮೆ ಭಾರತದ ಲಾಹೋರ್ ನಗರವು ಏಷ್ಯಾದ ಪ್ಯಾರಿಸ್ ಎನಿಸಿಕೊಂಡಿತ್ತು. ಆದಾಗ್ಯೂ  ಇದೇ ಲಾಹೋರಿನಲ್ಲಿ ನೆಲೆಸಿದ್ದ ಇಂಗ್ಲಿಷ್ ಕವಿ ರುಡ್ಯಾರ್ಡ್ ಕಿಪ್ಲಿಂಗ್ “ಈಸ್ಟ್ ಈಜ್ ಈಸ್ಟ್, ವೆಸ್ಟ್ ಈಜ್ ವೆಸ್ಟ್” ಎಂದು ಉದ್ಗರಿಸಿದ್ದ. ಭಾರತದ ಆ ಪ್ರಸಿದ್ಧ ನಗರಿ ಏಕಾಏಕಿ ಜಾಗತಿಕ ಭೂಪಟದಲ್ಲಿ ಉದಿಸಿ ಪಾಕಿಸ್ತಾನಕ್ಕೆ ಸೇರಿಬಿಟ್ಟಿತು. ಪಾಕಿಸ್ತಾನ ಮುಸಲ್ಮಾನರ ದೇಶ ಹಾಗೂ ಭಾರತ ಹಿಂದೂಗಳ ದೇಶವಾಗಿಬಿಟ್ಟಿತು. ಭಾರತದಲ್ಲೇ ಹುಟ್ಟಿ ಬೆಳೆದ ಉರ್ದು ಭಾಷೆ ಪಾಕಿಸ್ತಾನದ ಭಾಷೆಯೆನಿಸಿತು. ಹಿಂದಿ ಹಿಂದೂಗಳ ಭಾಷೆಯಾಗಿ ಉಳಿಯಿತು.

ಆದರೆ, ವಾಸ್ತವವೇನೆಂದರೆ ಉರ್ದು ಕೇವಲ ಮುಸಲ್ಮಾನರ ಭಾಷೆಯಾಗಿರಲಿಲ್ಲ. ಹಿಂದೂಗಳ ಭಾಷೆ ಕೇವಲ ಹಿಂದಿಯಾಗಿರಲಿಲ್ಲ. ಆದಾಗ್ಯೂ ಧರ್ಮ ಹಾಗೂ ಭಾಷೆಗಳು ಮನುಷ್ಯ ಮನುಷ್ಯರ ನಡುವೆ ಅಭೇದ್ಯ ಗೋಡೆಗಳಾಗಿಬಿಟ್ಟವು. ಇದ್ದಕ್ಕಿದ್ದಂತೆ ಒಂದು ದೇಶವು ಎರಡಾಗಿ ಮಾರ್ಪಟ್ಟಿತು. ಬರೀ ದೇಶವೊಂದು ಹೋಳಾಗಲಿಲ್ಲ. ಮನುಷ್ಯ ದೇಹಗಳೂ ತುಂಡಾದವು. ಎಲ್ಲಕ್ಕೂ ಹೆಚ್ಚಾಗಿ ಶತಶತಮಾನಗಳಿಂದ ಜೊತೆಯಾಗಿ ಬದುಕಿದವರ ಮನಸ್ಸುಗಳು ಒಡೆದು ಹೋಗಿದ್ದವು. ಮಾನವೇತಿಹಾಸ ಕಂಡರಿಯದ ಘೋರ ಹತ್ಯಾಕಾಂಡಕ್ಕೆ ಎರಡೂ ದೇಶಗಳು ನಲುಗಿ ಹೋದವು.

ಸೂಕ್ಷ್ಮ ಮನಸ್ಸಿನ ಕವಿಗಳು ಇತಿಹಾಸದ ಆ ರಕ್ತಸಿಕ್ತ ಅಧ್ಯಾಯ ಕಣ್ಣಾರೆ ಕಂಡು ಮಮ್ಮಲ ಮರುಗಿದರು. ಪಂಜಾಬಿ ಕವಿ ಅಮೃತಾ ಪ್ರೀತಂ ಅವರು, ತನ್ನ ಪ್ರಿಯತಮ ರಾಂಝಾನಿಂದ ದೂರವಾಗಲಾಗದ ಹೀರಾಳ ದಾರುಣ ಸಾವಿನಿಂದಾಗಿ ಹೃದಯ ಹಿಂಡುವ ಕಾವ್ಯ ರಚಿಸಿದ್ದ ಸೂಫಿ ಕವಿ ವಾರಿಸ್ ಶಾಹ್‌ನಿಗೆ ತನ್ನ ದುರಂತ ಕಥನ ಕಾವ್ಯದ ಮುಂದಿನ ಪುಟಗಳನ್ನು ತಿರುವಿ ನೋಡು ಎಂದು ಮನವಿ ಮಾಡಿಕೊಳ್ಳುತ್ತಾರೆ. ಅಂದು ಪಂಜಾಬಿನ ಅಸಂಖ್ಯಾತ ನತದೃಷ್ಟ ಮಹಿಳೆಯರ ಗೋಳಿನ ಕತೆಯನ್ನು ಗೋರಿಯೊಳಗಿಂದಲೇ ಕಣ್ತೆರೆದು ನೋಡಿದರೆ ಇತಿಹಾಸವು ಪುನರಾವರ್ತನೆ ಆಗುತ್ತಿದೆಯೆನ್ನುವುದು ನಿನಗೆ ಮನವರಿಕೆಯಾದೀತೆಂದು ಅಮೃತಾ ಗೋಳಾಡುತ್ತಾರೆ.

Advertisements

ಸೇನಾ ಆಡಳಿತದ ಕಡುವಿರೋಧಿಯಾದ ಹಾಗೂ ಅದಕ್ಕಾಗಿ ಅನೇಕ ಸಲ ಜೈಲು ಪಾಲಾಗಿದ್ದ ಪ್ರಸಿದ್ಧ ಕವಿ ಅಹಮದ್ ಫರಾಜ್ ಅವರು

“ಈಗ ತುಂಡಾಗಿರುವ ದೇಶದಲ್ಲಿ ಆಚರಿಸುವಿರಿ

ಅದು ಯಾವ ಘಟನೆಯನ್ನು

ತನುಮನಗಳು ತುಂಡಾದ ಮೇಲೆ ಕೇಳಿಸುವಿರಿ

ಇನ್ಯಾರ ಹಾಡುಗಳನ್ನು”

ಎಂದು ಎರಡೂ ದೇಶಗಳ ಸ್ವಾತಂತ್ರ್ಯ ದಿನಾಚರಣೆಯ ನಿರರ್ಥಕತೆಯನ್ನು ಒತ್ತಿ ಹೇಳುತ್ತಾರೆ. ಇನ್ನು ಗಡಿಯ ಎರಡೂ ಕಡೆಯ ಕಾವ್ಯ ಪ್ರೇಮಿಗಳ ಕಣ್ಮಣಿಯೆನಿಸಿಕೊಂಡಿರುವ ಮಹಾ ಕವಿ ಫೈಜ್ ಅಹಮದ್ ಫೈಜ್ ಅವರ ‘ಸುಬಹ್-ಎ-ಆಜಾದಿ’ (ಸ್ವಾತಂತ್ರ್ಯದ ಬೆಳಗು) ಕವನವಂತೂ ಉಪಖಂಡದ ವಿಭಜನೆ ಕುರಿತ ಅತ್ಯಂತ ಮಹತ್ವಪೂರ್ಣ ರಚನೆಯೆನಿಸಿದೆ. ಫೈಜ್ ಅವರು ‘ಕಳಂಕಿತ ಬೆಳಕು’, ‘ಕತ್ತಲು ಕಚ್ಚಿದ ಬೆಳಗು’ ಮುಂತಾದ ರೂಪಕಗಳನ್ನು ಬಳಸಿ ಕವನವನ್ನು ಅರ್ಥವತ್ತಾಗಿಸಿದ್ದಾರೆ.

ದೇಶವಿಭಜನೆ ಆಗಸ್ಟ್ ೧೫, ೧೯೪೭ರಂದು ಆಗಿದ್ದರೂ ವಾಸ್ತವದಲ್ಲಿ ದಶಕಗಳ ಮೊದಲೇ ಜನರ ಮನಸ್ಸುಗಳು ಒಡೆದಿದ್ದವು. ಆದರೂ ಶತಶತಮಾನಗಳಿಂದ ಕೂಡಿ ಬದುಕಿದ ಜನಸಾಮಾನ್ಯರು ನಾನು ಬೇರೆ ನೀನು ಬೇರೆ ಎಂದು ಹೇಳುತ್ತಿರಲಿಲ್ಲ. ಪಟ್ಟಭದ್ರ ಹಿತಾಸಕ್ತಿಗಳು ಮಾತ್ರ ಮುಚ್ಚುಮರೆಯಿಲ್ಲದೆ ನಾವು ಮುಸಲ್ಮಾನರು, ಪಾಕಿಸ್ತಾನ ನಮ್ಮ ದೇಶ ಎಂದು ನಿದ್ರೆಯಲ್ಲೂ ಬಡಬಡಿಸತೊಡಗಿದ್ದವು.

ಒಮ್ಮೆ ಸಾಂಸ್ಕೃತಿಕ ನಗರಿ ಲಾಹೋರಿನಲ್ಲಿ ‘ಪಾಕಿಸ್ತಾನ’ ‘ಪಾಕಿಸ್ತಾನ’ ಎಂದು ಜನ ಅರಚಿಕೊಳ್ಳುವುದು ಕೇಳಿ ಹರಿಚಂದ ಅಖ್ತರ್ ಎನ್ನುವ ಪ್ರಸಿದ್ಧ ಕವಿ ಹಾಗೂ ಪತ್ರಕರ್ತ ಸುತ್ತ ಕುಳಿತಿದ್ದ ಗೆಳೆಯರಿಗೆ “ಪಾಕಿಸ್ತಾನ ಎಂದು ನಾನು ಉಚ್ಚರಿಸುವ ಅಗತ್ಯವಿಲ್ಲ. ಯಾಕಂತೀರಾ? ಜನ ನನ್ನನ್ನು ಪಾಕಿಸ್ತಾನಿ ಎಂತಲೇ ಕರೆಯುತ್ತಾರೆ. ಜನ ಹುಚ್ಚರಲ್ಲ. ಹಸಿರು ಹಿನ್ನೆಲೆಯಲ್ಲಿ ನಕ್ಷತ್ರದ ಜೊತೆ ಬಿದಿಗೆ ಚಂದ್ರನ ಸಂಕೇತವೇ ಪಾಕಿಸ್ತಾನದ ಧ್ವಜವಾಗಲಿದೆ. ‘ಹರಿ’ ಎಂದರೆ ಹಸಿರು, ‘ಚಂದರ’ ಎಂದರೆ ಚಂದ್ರ. ‘ಅಖ್ತರ್’ ಎಂದರೆ ನಕ್ಷತ್ರ. ಪಾಕಿಸ್ತಾನ ಎಂದು ನಾನೂ ಹೇಳಬೇಕಿಲ್ಲ. ಜನರೂ ಬಾಯಿಬಿಟ್ಟು ಹೇಳಬೇಕಾಗಿಲ್ಲ. ನಾನು ಪಾಕಿಸ್ತಾನದ ಚಲಿಸುವ ಧ್ವಜವಲ್ಲವೆ?” ಎಂದು ಹೇಳಿ ಎಲ್ಲರ ಬಾಯಿ ಮುಚ್ಚಿಸುತ್ತಿದ್ದರು.

ದೇಶವಿಭಜನೆ ನಂತರವೂ ಎಂದಿನಂತೆ ಕವಿಗಳು, ಕಲಾವಿದರು ತಾವು ಕಾಲಾತೀತರು ಹಾಗೂ ದೇಶಾತೀತರು ಎನ್ನುವುದನ್ನು ಸಾಬೀತುಪಡಿಸಿದರು. ವೈರದ ಪರಿಸರದಲ್ಲಿ ಉಸಿರಾಡತೊಡಗಿದ್ದ ದೇಶಗಳ ನಡುವೆ ಸ್ನೇಹ ಸೇತುವೆ ನಿರ್ಮಿಸುವ ಹೊಣೆಗಾರಿಕೆಯನ್ನು ಕವಿಗಳು ಹಾಗೂ ಕಲಾವಿದರು ವಹಿಸಿಕೊಂಡರು. ಒಂದು ಕವಿಗೋಷ್ಠಿಗೆ ಪ್ರಸಿದ್ಧ ಉರ್ದು ಕವಿ ಪ್ರೊ.ಜಗನ್ನಾಥ ಆಜಾದರನ್ನು ಆಹ್ವಾನಿಸಲಾಯಿತು. ಪಾಕಿಸ್ತಾನಿ ವಿಮಾನದಲ್ಲಿ ಅವರ ಜೊತೆ ಪ್ರಯಾಣಿಸುತ್ತಿದ್ದ ಅಲಿ ಸರ್ದಾರ್ ಜಾಫ್ರಿ ಅವರಿಗೆ ಮದ್ಯಪಾನ ಮಾಡಬೇಕೆನಿಸಿತು.

ವಿಮಾನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪರಿಚಾರಕ ತಮ್ಮ ಬಳಿ ಬಂದೊಡನೆ ತಮಗೆ ಮದ್ಯ ಪೂರೈಸಲು ಕೇಳಿಕೊಂಡರು. ತಕ್ಷಣ ಅವನು ಅವರಿಗೆ ಮದ್ಯ ಸರಬರಾಜು ಮಾಡಲಾರೆ ಎಂದು ಉತ್ತರ ನೀಡಿದ. ಕಾರಣ, ಅವರು ಮುಸಲ್ಮಾನರೆನ್ನುವುದಾಗಿತ್ತು. ಸ್ವಲ್ಪ ಸಮಯ ಕಳೆದ ಮೇಲೆ ಜಾಫ್ರಿ “ನನ್ನ ಸ್ನೇಹಿತ ಆಜಾದ್‌ರಿಗಾದರೂ ಮದ್ಯ ಸರಬರಾಜು ಮಾಡುವಿರಾ?” ಎಂದು ಕೇಳಿದರು. ಪರಿಚಾರಕ ಆಜಾದ್‌ರನ್ನು ದಿಟ್ಟಿಸಿ ನೋಡಿದ. ಅವರು ಹಿಂದೂ ಆಗಿದ್ದರೂ ಅವರಿಗೆ ಮದ್ಯ ಪೂರೈಸಲಾರೆ ಎಂದ ಆ ಪರಿಚಾರಕ. “ಆಜಾದ್ ಉರ್ದುವಿನ ಮಹಾ ಕವಿ ಅಲ್ಲಾಮಾ ಇಕ್ಬಾಲ್ ಕುರಿತು ಹಲವಾರು ಗ್ರಂಥಗಳನ್ನು ರಚಿಸಿದವರು. ಅವರನ್ನು ಪಾಕಿಸ್ತಾನಿಯರು ತುಂಬ ಗೌರವಿಸುತ್ತಾರೆ. ಆಜಾದ್‌ರು ಪಾಕಿಸ್ತಾನಕ್ಕೆ ಸೇರಿದವರು” ಎಂದ ಅವನು. ಆಜಾದ್ ಭಾರತದಲ್ಲಿಯೇ ನೆಲೆಸಿದ್ದು ಅವನಿಗೆ ತಿಳಿದಿರಲಿಕ್ಕಿಲ್ಲ.

ಲಾಹೋರ್ ವಿಮಾನ ನಿಲ್ದಾಣದಲ್ಲಿ ಅವರನ್ನು ಸ್ವಾಗತಿಸಲು ಅಲ್ಲಿ ಕ್ರಾಂತಿ ಹಾಗೂ ಮಾನವೀಯತೆಯ ಸಂಕೇತವಾಗಿದ್ದ ಕವಿ ಫೈಜ್ ಅಹಮದ್ ಫೈಜ್ ನಿಂತಿದ್ದರು. ವಿಮಾನದಿಂದ ಅತಿಥಿಗಳು ಇಳಿದರು. ಫೈಜ್ ಅತಿಥಿಗಳನ್ನು ಅಲ್ಲಿಂದ ನೇರವಾಗಿ ಹೋಟೆಲ್ ಇಂಟರ್‌ಕಾಂಟಿನೆಂಟಲ್‌ಗೆ ಕರೆದೊಯ್ದರು. ಅಲ್ಲಿಂದ ಅತಿಥಿಗಳನ್ನು ಲಗುಬಗೆಯಿಂದ ಕರೆದೊಯ್ದದ್ದು ಒಂದು ಬಾರ್‌ಗೆ. ಆಜಾದ್ ಫೈಜ್‌ರನ್ನೇ ಆಶ್ಚರ್ಯಚಕಿತರಾಗಿ ನೋಡತೊಡಗಿದರು. “ಇಲ್ಲಿ ಮದ್ಯಪಾನ ನಿಷಿದ್ಧ, ಅಲ್ಲವೆ?” ಎಂದು ಫೈಜ್‌ರನ್ನು ಕೇಳಿದರು. ಆಜಾದ್‌ರು ಅವರಿಂದ ಆ ಪ್ರಶ್ನೆಗೆ ಉತ್ತರ ನಿರೀಕ್ಷಿಸಲಿಲ್ಲ. ಉತ್ತರ ನೀಡಲು ಅವರೇ ಮುಂದಾದರು. ಅವರಿಗೆ ಹಿಂದೊಮ್ಮೆ ಪಾಕಿಸ್ತಾನದ ತಮ್ಮ ಸ್ನೇಹಿತರ ಆತಿಥ್ಯ ನೆನಪಾಯಿತು. ಆ ಪ್ರಸಂಗದಲ್ಲೇ ತಮ್ಮ ಪ್ರಶ್ನೆಗೆ ತಕ್ಕ ಉತ್ತರವಿತ್ತು ಎಂದು ಅವರಿಗೆ ಅನಿಸಿತ್ತೇನೋ.

ದೇಶ ವಿಭಜನೆ ನಂತರ ಮೊದಲ ಸಲ ಪಾಕಿಸ್ತಾನಕ್ಕೆ ಆಗಮಿಸಿದ್ದಾಗ ಆಜಾದ್‌ ಅವರಿಗೆ ‘ನುಕೂಶ್’ ಪತ್ರಿಕೆಯ ಸಂಪಾದಕ ಮುಹಮ್ಮದ್ ತುಫೈಲ್ ತಮ್ಮ ಮನೆಯಲ್ಲಿ ಭೋಜನ ಕೂಟ ಏರ್ಪಡಿಸಿದ್ದರು. ಊಟ ಬಡಿಸುತ್ತಿದ್ದಂತೆಯೆ ಆಜಾದ್‌ರಿಗೆ ತಮ್ಮ ಸ್ನೇಹಿತ ಅದೇನು ಅಡುಗೆ ಮಾಡಿಸಿರಬಹುದೆಂದು ಕುತೂಹಲ. ಊಟ ಮುಗಿಯುತ್ತ ಬಂದರೂ ಆಜಾದ್ ಇನ್ನೂ ಏನೇನು ಬರಲಿದೆಯೋ ಎಂದು ಕಾದರು. ಕಡೆಗೂ ಎಲ್ಲರ ಊಟ ಮುಗಿಯಿತು. “ಊಟ ಹೇಗಿತ್ತು?” ಎಂದು ತುಫೈಲ್ ಕೇಳಿದರು. “ಅದೇನು ವಿಶೇಷ ಅಡುಗೆ ಮಾಡಿಸಿದ್ದೀರೋ ಎಂದು ಕಾದೆ. ತರಕಾರಿ, ತರಕಾರಿ, ಬರೀ ತರಕಾರಿ.. ಅತಿಥಿಗಳಿಗೆ ಸಸ್ಯಾಹಾರಿ ಊಟ ಬಡಿಸುವುದಕ್ಕಾಗಿಯೇ ಪಾಕಿಸ್ತಾನ ನಿರ್ಮಿಸಬೇಕಾಯಿತೆ?” ಎಂದು ಬೇಸರ ವ್ಯಕ್ತಪಡಿಸಿದ್ದರು.

ಧರ್ಮದ ಆಧಾರದಲ್ಲಿ ದೇಶ ವಿಭಜನೆಯ ಯೋಚನೆಯೇ ಹಾಸ್ಯಾಸ್ಪದವಾಗುವಂತೆ ಮುಹಮ್ಮದ್ ಅಲಿ ಜಿನ್ನಾ ಅವರು ‘ಜಾತ್ಯತೀತತೆ’ಯ ಮಂತ್ರ ಜಪಿಸಲಾರಂಭಿಸಿದರು. ಜಿನ್ನಾರ ಅಭಿಮಾನಿಗಳಷ್ಟೇ ಅಲ್ಲ ಅವರ ಕಟು ವಿಮರ್ಶಕರೂ ಅವರನ್ನು ಸಂದೇಹದ ದೃಷ್ಟಿಯಿಂದ ನೋಡತೊಡಗಿದರು. ವೈರದ ಭಾವನೆ ಹಾಗೂ ಮತೀಯ ಅಸಹಿಷ್ಣುತೆಯೇ ಪಾಕಿಸ್ತಾನದ ನಿರ್ಮಾಣಕ್ಕೆ ಪುಷ್ಟಿ ನೀಡಿತೇನೋ ಎನ್ನುವವರೂ ತಮ್ಮ ಯೋಚನಾಲಹರಿಯ ಬಗ್ಗೆ ಎಚ್ಚರ ವಹಿಸಿದರು. ಹಿಂದೊಮ್ಮೆ “ಜಿನ್ನಾ ಕೋಮು ಸೌಹಾರ್ದದ ಹರಿಕಾರರಾಗಿದ್ದಾರೆ” ಎಂದು ಭಾರತದ ಕೋಗಿಲೆ ಸರೋಜಿನಿ ನಾಯ್ಡು ಅವರ ಅಭಿಪ್ರಾಯಪಟ್ಟಿದ್ದರು.

ಹೊಸದಾಗಿ ದೇಶವೊಂದು ಅಸ್ತಿತ್ವಕ್ಕೆ ಬಂದಿತ್ತು. ಅದರ ನಾಮಕರಣವೂ ಆಗಿಹೋಗಿತ್ತು. ಆದರೆ, ಆ ದೇಶಕ್ಕೆ ಒಂದು ರಾಷ್ಟ್ರಗೀತೆ ಬೇಡವೆ? ದೇಶದಲ್ಲಿ ಮತೀಯ ಶಕ್ತಿಗಳು ಹಾಗೂ ಪ್ರಗತಿಪರರ ಮೇಲಾಟ ನಡೆದೇ ಇತ್ತು. ರಾಷ್ಟ್ರಗೀತೆ ರಚಿಸುವ ಕಾರ್ಯವನ್ನು ಯಾರಿಗೆ ವಹಿಸಿಕೊಡಬೇಕು ಎನ್ನುವ ಕುರಿತಂತೆ ಜಿನ್ನಾ ಯಾರೊಂದಿಗೂ ಸಮಾಲೋಚನೆ ಮಾಡಲಿಲ್ಲ. ತಮ್ಮ ದೇಶದ ರಾಷ್ಟ್ರಗೀತೆಯನ್ನು ಒಬ್ಬ ಹಿಂದೂ ಕವಿಯೇ ಬರೆಯಬೇಕು ಎಂಬುದು ಅವರ ಬಯಕೆಯಾಗಿತ್ತು.

ಕೇವಲ ೨೮ರ ಹರೆಯದ ಜಗನ್ನಾಥ ಆಜಾದ್‌ರಿಗೆ ಜಿನ್ನಾ ಪಾಕಿಸ್ತಾನದ ರಾಷ್ಟ್ರಗೀತೆ ರಚಿಸುವ ಕಾರ್ಯ ವಹಿಸಿಕೊಟ್ಟರು. ಅವರಿಗೆ ಕೇವಲ ಐದು ದಿನಗಳ ಕಾಲಾವಕಾಶವಿತ್ತು. ಅವರು ಹಿಂದೇಟು ಹಾಕಿದರೂ ಜಿನ್ನಾ ಆ ಮಹತ್ವಪೂರ್ಣ ಕಾರ್ಯವನ್ನು ಅವರೇ ಮಾಡಬೇಕೆಂದರು. ಜಿನ್ನಾ ಪಾಕಿಸ್ತಾನ ಸಂವಿಧಾನ ರಚನಾ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಪಾಕಿಸ್ತಾನದಲ್ಲಿ ಧಾರ್ಮಿಕ ಸ್ವಾತಂತ್ರ್ಯವಿರುತ್ತದೆಯೆಂದು ಒತ್ತು ಕೊಟ್ಟು ಹೇಳಿದರು. ಹೀಗೆ ಅವರ ಭರವಸೆಯ ಮಾತಿಗೆ ಓಗೊಟ್ಟ ಹಿಂದೂಗಳು ಭಾರತಕ್ಕೆ ವಲಸೆ ಹೋಗುವ ವಿಚಾರವನ್ನು ಕೈಬಿಟ್ಟರು. ಗಡಿ ಪ್ರದೇಶದ ಕಡೆಯ ನಗರ ಲಾಹೋರ್‌ದಲ್ಲಿ ಉಳಿದ ಏಕೈಕ ಹಿಂದೂ ಕುಟುಂಬ ಆಜಾದ್‌ರದಾಗಿತ್ತು. ಪಾಕಿಸ್ತಾನದಲ್ಲೇ ನೆಲೆಸಲು ತೀರ್ಮಾನಿಸಿದ ಹಿಂದೂಗಳ ಪೈಕಿ ಆಜಾದ್ ಪ್ರಮುಖರೆನಿಸಿದ್ದರು.

ಇದೇ ದೇಶದಲ್ಲಿ ಹುಟ್ಟಿ ಇದೇ ಐತಿಹಾಸಿಕ ನಗರ ಲಾಹೋರಿನಲ್ಲಿ ಯೌವನವನ್ನು ಕಳೆದಿದ್ದ ಜಗನ್ನಾಥ ಆಜಾದ್ ಸಹ ಗಡಿಯೀಚೆಯ ಜಮ್ಮುವಿನಲ್ಲಿ ನೆಲೆ ಕಂಡುಕೊಂಡರು. ಆಜಾದ್‌ರು ಲಾಹೋರ್ ಬಾನುಲಿ ಕೇಂದ್ರದಿಂದ ತಾವು ರಚಿಸಿದ್ದ ಪಾಕಿಸ್ತಾನದ ಪ್ರಥಮ ರಾಷ್ಟ್ರಗೀತೆ ಆಲಿಸಿದ ನಂತರವೇ ತಮ್ಮ ‘ತಾಯ್ನಾಡ’ನ್ನು ತೊರೆದರು. ಜಿನ್ನಾ ನಿಧನರಾಗುತ್ತಲೇ ಪಾಕಿಸ್ತಾನದ ರಾಷ್ಟ್ರಗೀತೆಯನ್ನು ರದ್ದು ಮಾಡಲಾಯಿತು. ಹೀಗೆ ಒಂದೂವರೆ ವರ್ಷದ ನಂತರ ಹಫೀಜ್ ಜಲಂಧರಿಯವರು ರಚಿಸಿದ ರಾಷ್ಟ್ರಗೀತೆಯನ್ನು ಪಾಕಿಸ್ತಾನ ಸರ್ಕಾರ ಅಂಗೀಕರಿಸಿತು.

ಪಾಕಿಸ್ತಾನದ ಪ್ರಥಮ ರಾಷ್ಟ್ರಗೀತೆಯನ್ನು ಹಿಂದೂ ಕವಿ ಆಜಾದ್ ಬರೆದಿದ್ದರೆನ್ನುವುದನ್ನು ಜನ ಮರೆಯುವಂತೆ ಏನೆಲ್ಲ ಪ್ರಯತ್ನ ಮಾಡಲಾಯಿತು. ಆದರೂ ಆಜಾದ್‌ರು ನಿಧನರಾಗುವುದಕ್ಕೆ ಒಂದೆರಡು ತಿಂಗಳು ಮೊದಲು ‘ದಿ ಹಿಂದೂ’ ಪತ್ರಿಕೆಗೆ ಸಂದರ್ಶನ ನೀಡಿದರು. ಆಜಾದ್‌ರೇ ಸಂದರ್ಶನದಲ್ಲಿ ಪಾಕಿಸ್ತಾನದ ಪ್ರಥಮ ರಾಷ್ಟ್ರಗೀತೆ ಬರೆದಿದ್ದು ಎನ್ನುವ ಮಾತು ಪ್ರಸ್ತಾಪವಾಯಿತು. ಬೀನಾ ಸರವರ್ ಆ ಸಂದರ್ಶನದಲ್ಲಿ “ಪಾಕಿಸ್ತಾನದ ನಿರ್ಮಾಪಕ ಜಿನ್ನಾ ಅವರೇ ಆಜಾದ್‌ರಿಗೆ ಪಾಕಿಸ್ತಾನದ ರಾಷ್ಟ್ರಗೀತೆ ರಚಿಸಬೇಕೆಂದು ಕೇಳಿಕೊಂಡರು. ಜಿನ್ನಾ ನಿಧನರಾದ ತಕ್ಷಣ ಹಫೀಜ್ ಜಲಂಧರಿಯವರ ಪರ್ಶಿಯನ್‌ಭೂಯಿಷ್ಠ ರಾಷ್ಟ್ರಗೀತೆಯನ್ನು ಅಂಗೀಕರಿಸಲಾಯಿತು” ಎಂದು ವಿವರಿಸಿದ್ದಾರೆ.

ತಮ್ಮ ತಂದೆ ಕುರಿತು ಬರೆದಿರುವ ‘ಯಾದೇಂ ಜಗನ್ನಾಥ ಆಜಾದ್ ಕೀ’ ಗ್ರಂಥದಲ್ಲಿ ಮುಕ್ತಾ ಲಾಲ್  ತಮ್ಮ ತಂದೆಯವರೇ ಪಾಕಿಸ್ತಾನದ ಪ್ರಥಮ ರಾಷ್ಟ್ರಗೀತೆ ಬರೆದಿದ್ದರು ಹಾಗೂ ಅದನ್ನು ರದ್ದು ಮಾಡಿ ಹಫೀಜ್ ಜಲಂಧರಿ ಬರೆದ ಗೀತೆಯನ್ನು ಪಾಕಿಸ್ತಾನ ಸರ್ಕಾರ ಅಂಗೀಕರಿಸಿತು ಎನ್ನುವುದನ್ನು ನಿಷ್ಪಕ್ಷಪಾತವಾಗಿ ಬರೆದಿದ್ದಾರೆ. ಏನೇ ಆಗಲಿ ಸಾಮಾನ್ಯವಾಗಿ ಪ್ರಭುತ್ವ ತನಗೆ ಬೇಡವಾದ ವ್ಯಕ್ತಿ ಅಥವಾ ಪ್ರಸಂಗಗಳನ್ನು ಜನ ಮರೆಯುವಂತೆ ಮಾಡುತ್ತದೆ. ಅಷ್ಟೇ ಅಲ್ಲ, ಇತಿಹಾಸವನ್ನು ತಿರುಚುವ ಪ್ರಯತ್ನ ಮಾಡುತ್ತದೆ.

ಈ ಸುದ್ದಿ ಓದಿದ್ದೀರಾ: ‘ನಿಜ’ದ ನಿತ್ಯಹತ್ಯೆಯ ದುರುಳ ಕಾಲದಲ್ಲಿ ‘ಬಸವರಾಜುಪ್ರಜ್ಞೆ’ಯ ಎಚ್ಚರ    

ಪಾಕಿಸ್ತಾನ ಅಸ್ತಿತ್ವಕ್ಕೆ ಬಂದ ಹೊಸತರಲ್ಲಿ ಪಾಕಿಸ್ತಾನದ ಐತಿಹಾಸಿಕ ನಗರ ಲಾಹೋರಿನಲ್ಲಿ ಏರ್ಪಡಿಸಲಾದ ಕವಿಗೋಷ್ಠಿಗೆ ಜಗನ್ನಾಥರನ್ನು ಆಹ್ವಾನಿಸಲಾಯಿತು. ಜಗನ್ನಾಥರ ತುಟಿಗಳು ನಡುಗುತ್ತಿದ್ದವು. ಅವರ ಬಾಯಿಂದ ಹೊರಟ ಒಂದೊಂದು ಶಬ್ದ ಕೇಳುಗರ ಮನ ಮಿಡಿಯುವಂತೆ ಮಾಡಿತು. ವಿಶ್ವಮಾನವ, ತಾಯ್ನಾಡು, ದೇಶಪ್ರೇಮ ಇತ್ಯಾದಿ ಪದಗಳ ಅರ್ಥವೇನು ಎಂದು ಕಾವ್ಯಪ್ರೇಮಿಗಳು ತಡಕಾಡುವಂತೆ ಮಾಡಿತ್ತು.

“ತೇರಿ ಮೆಹಫಿಲ್‌ಸೆ ಜೋ ಅರಮಾಂ-ಒ-ಹಸ್ರತ್ ಲೇಕೆ ನಿಕಲಾ ಥಾ

ವೋ ಹಸ್ರತ್ ಲೇಕೆ ಆಯಾ ಹೂಂ ವೋ ಅರಮಾಂ ಲೇಕೆ ಆಯಾ ಹೂಂ

ತುಮ್ಹಾರೆ ವಾಸ್ತೆ ಐ ದೋಸ್ತೋ ಮೈಂ ಔರ್ ಕ್ಯಾ ಲಾತಾ

ವತನ್‌ಕೀ ಸುಬಹ್ ಶಾಮೇ ಗರೀಬಾಂ ಲೇಕೆ ಆಯಾ ಹೂಂ

ಮೈ ಅಪನೆ ಘರ್‌ಮೇಂ ಆಯಾ ಹೂಂ ಮಗರ್

ಅಂದಾಜ್ ತೋ ದೇಖೋ

ಕೆ ಅಪನೆ ಆಪಕೋ ಮಾನಿಂದ್ ಮೆಹಮಾಂ ಲೇಕೆ ಆಯಾ ಹೂಂ’

(ನಿಮ್ಮ ಬಳಗದಿಂದ ಯಾವ ಆಸೆ ಆಕಾಂಕ್ಷೆಗಳೊಂದಿಗೆ ಅಗಲಿದ್ದೆನೋ

ಮರಳಿ ಬಂದಿರುವೆ ಅದೇ ಆಸೆ ಅದೇ ಆಕಾಂಕ್ಷೆಗಳೊಂದಿಗೆ

ಓ ಗೆಳೆಯರೇ ಇನ್ನೇನು ತರಲಿ ನಿಮಗಾಗಿ

ತಾಯ್ನಾಡಿನ ಬೆಳಗು ಶೋಕತಪ್ತ ಸಂಜೆಯನ್ನು ತಂದಿರುವೆ

ನಾನು ನನ್ನ ಮನೆಗೆ ಆಗಮಿಸಿದ್ದೇನೆ ಆದರೆ ನೋಡಿರಿ

ಒಮ್ಮೆ ಭಾವಭಂಗಿಯನ್ನು

ನನ್ನನ್ನೇ ಇಲ್ಲಿ ಅತಿಥಿಯಾಗಿ ಕರೆ ತಂದಿರುವೆ

ಅಲ್ಲಿ ಅವರು ಓದಿದ ಕವನವು ಶ್ರೋತೃಗಳು ಕಣ್ಣೀರು ಸುರಿಸುವಂತೆ ಮಾಡಿತು. ನಿಲ್ಲದ ಅಶ್ರುಧಾರೆಯ ಕತೆಯನ್ನು ಮಾತ್ರ ಯಾವ ಪ್ರಭುತ್ವವೂ ಅಳಿಸಿ ಹಾಕಲಾರದು.

Capture 4
ಹಸನ್ ನಯೀಂ ಸುರಕೋಡ
+ posts

ಲೇಖಕ, ಅನುವಾದಕ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಹಸನ್ ನಯೀಂ ಸುರಕೋಡ
ಹಸನ್ ನಯೀಂ ಸುರಕೋಡ
ಲೇಖಕ, ಅನುವಾದಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X