ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತವು ಸಾಧನೆಯ ಹಾದಿಯಲ್ಲಿದೆ. ಚಂದ್ರಯಾನ-3 ಯಶಸ್ವಿಯು ದೇಶದ 140 ಕೋಟಿ ಭಾರತೀಯರ ಇಚ್ಛೆ ಈಡೇರಿದಂತಾಗಿದೆ. ಈ ಯಶಸ್ವಿಯು ಭಾರತವನ್ನು ಇತಿಹಾಸದ ಪುಟಗಳಲ್ಲಿ ಅಜರಾಮರವಾಗಿಸಿದೆ ಎಂದು ವಿಜ್ಞಾನಿ ಸುಧೀಂದ್ರಬಿಂದಗಿ ಹೇಳಿದ್ದಾರೆ.
ಗದಗದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ಚಂದ್ರಯಾನ-3 ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಭಾರತದ ಪ್ರತಿಯೊಬ್ಬ ತಾಯಿಯು ತನ್ನ ಮಗು ಅಳುತ್ತಿದ್ದರೆ, ಆ ಮಗುವನ್ನು ಆಕಾಶದತ್ತ ತೋರಿಸಿ ಚಂದ ಮಾಮನ ನೋಡು ಅಂತ ಹೇಳುತ್ತಾಳೆ. ತಲೆತಲಾಂತರದಿಂದಲೂ ಚಂದ್ರನೊಂದಿಗೆ ಭಾರತೀಯರು ಅವಿನಾಭಾವ ಸಂಬಂಧ ಹೊಂದಿದ್ದರೆ. ನಮ್ಮ ಭಾರತದ ವಿಜ್ಞಾನಿಗಳು ಚಂದ್ರನ ಮೇಲೆ ಭಾರತದ ಬಾವುಟವನ್ನು ಹಾರಿಸುವುದರ ಮೂಲಕ ಜಗತ್ತಿಗೆ ಭಾರತದ ವಿಜ್ಞಾನಿಗಳು ಶಕ್ತಿ ಎಂತಹುದೆಂದು ಜಗತ್ತಿಗೆ ಪರಿಚಯಿಸಿದೆ” ಎಂದಿದ್ದಾರೆ.
“ಚಂದ್ರನ ಮೇಲೆ ವಿಕ್ರಮ ಲ್ಯಾಂಡ್ ಆಗುವವರೆಗೂ ಭಾರತದ ಜನರು ದೇವರ ಬಳಿ ಪ್ರಾರ್ಥನೆ ಮಾಡಿದನ್ನು ನಾವು ನೋಡಿದ್ದೇವೆ. ಎಂತಹುದೆ ಕೆಲಸಗಳು ಇರಲಿ ಆತ್ಮವಿಶ್ವಾಸ ಮುಖ್ಯ. ಎಂದಿಗೂ ದೃತಿಗೆಡಬಾರದು. ಚಂದ್ರಯಾನದ ಮೇಲೆ ರಷ್ಯಾ ತುದಿಗಾಲಲ್ಲಿ ನಿಂತಿತ್ತು. ಆದರೆ, ಲ್ಯಾಂಡ್ ಆಗುವ ಸಮಯದಲ್ಲಿ ವಿಫಲವಾಯಿತು. 2014ರಲ್ಲಿ ಚಂದ್ರಯಾನ-2 ಯಶಸ್ವಿಗೆ ಭಾರತ ತುದಿಗಾಲಲ್ಲಿ ನಿಂತಿತ್ತು. ಆದರೆ, ಫಲಕಾರಿಯಾಗಲಿಲ್ಲ. ಈಗ ನಾವು ಯಶಸ್ಸು ಕಂಡಿದ್ದೇವೆ” ಎಂದು ಹೇಳಿದ್ದರೆ.
“ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ರಾಜ್ಯ ಸರ್ಕಾರವು ಚಂದ್ರಯಾನ ಪ್ರಯೋಗಕ್ಕಾಗಿ ಸಾವಿರ ಎಕರೆ ಜಮೀನನ್ನು ನೀಡಿತ್ತು. ಆ ಜಮೀನಿನಲ್ಲಿ ಚಂದ್ರನಲ್ಲಿರುವ ವಾತಾವರಣವನ್ನು ನಿರ್ಮಿಸಿ ಮೊದಲು ಪ್ರಯೋಗ ಮಾಡಿ ನಂತರ ಚಂದ್ರಯಾನ ಉಪಗ್ರಹವನ್ನು ಉಡಾವಣೆ ಮಾಡಲಾಯಿತು. ಚಂದ್ರಯಾನ ಉಪಗ್ರಹ ಉಡಾವಣೆಯಲ್ಲಿ ಕರ್ನಾಟಕ ಸರ್ಕಾರದ ಪಾತ್ರ ಅಪಾರವಾಗಿದೆ” ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಮುದ್ದಕ್ಕಣನವರ, ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಂ.ಎ ರಡ್ಡೇರ, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ತಾರಮಣಿ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ವಿವಿಧ ಶಾಲಾ ಮಕ್ಕಳು, ಶಿಕ್ಷಕರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಇಸ್ರೋ ಸಂಸ್ಥೆಯ ವಿಜ್ಞಾನಿ ಸುಧೀಂದ್ರ ಬಿಂದಗಿ ದಂಪತಿಗಳಿಗೆ ಜಿಲ್ಲಾಡಳಿತದಿಂದ ಸನ್ಮಾನಿಸಲಾಯಿತು.