ಈ ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ನಡೆದಿದೆ ಎನ್ನಲಾದ 500 ಕೋಟಿ ರೂಪಾಯಿ ಹಗರಣವನ್ನು ಈಗ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ತನಿಖೆಗೆ ಆದೇಶಿಸಿದೆ.
ಮಾಜಿ ಸಚಿವ ಬಿ ಆರ್ ಯಾವಗಲ್ ನೀಡಿದ್ದ ದೂರಿನ ಆಧಾರದ ಮೇಲೆ ರಾಜ್ಯ ಸರ್ಕಾರವು, ಪಿಡಬ್ಲ್ಯೂಡಿಯ ಗುಣ ಭರವಸೆ ವಲಯದ ಬೆಂಗಳೂರಿನ ಮುಖ್ಯ ಇಂಜಿನಿಯರ್ ನೇತೃತ್ವದಲ್ಲಿ ತನಿಖೆಗೆ ಆದೇಶಿಸಿದೆ. ಇದರಿಂದಾಗಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಲೋಕೋಪಯೋಗಿ ಇಲಾಖೆ ಸಚಿವರಾಗಿದ್ದ ಸಿಸಿ ಪಾಟೀಲ್ಗೆ ಸಂಕಷ್ಟ ಎದುರಾಗುವ ಸಾಧ್ಯತೆ ಹೆಚ್ಚಳವಾಗಿದೆ.
ಮಾಜಿ ಸಚಿವ ಬಿ ಆರ್ ಯಾವಗಲ್
ತನಿಖೆಗೆ ಆದೇಶ ನೀಡಿರುವ ಈ ದಿನ.ಕಾಮ್ ಜೊತೆಗೆ ಮಾತನಾಡಿದ ಮಾಜಿ ಸಚಿವ ಬಿ ಆರ್ ಯಾವಗಲ್, ‘ಕಳಪೆ ಕಾಮಗಾರಿ, ಅರ್ಹತೆ ಇಲ್ಲದ ಗುತ್ತಿಗೆದಾರರಿಗೆ ಕೋಟ್ಯಂತರ ರೂಪಾಯಿ ಮೊತ್ತದ ಟೆಂಡರ್ ನೀಡಲಾಗಿದೆ. ಅಲ್ಲದೇ, ಗುತ್ತಿಗೆದಾರರು. ನಕಲಿ ‘ವರ್ಕ್ ಡನ್’ ಸರ್ಟಿಫಿಕೇಟ್ ನೀಡಿ ಟೆಂಡರ್ ಪಡೆದುಕೊಂಡಿದ್ದಾರೆ. ಕಡಿಮೆ ಮೊತ್ತಕ್ಕೆ ಟೆಂಡರ್ ಹಾಕಿದವರನ್ನು ಬಿಟ್ಟು ಹೆಚ್ಚಿನ ದರಕ್ಕೆ ಹಾಕಿದವರಿಗೆ ಟೆಂಡರ್ ನೀಡಲಾಗಿದೆ. ಅಂದಿನ ಸಚಿವ ಸಿ ಸಿ ಪಾಟೀಲ್ ತಮಗೆ ಬೇಕಾದವರಿಗೆ ಕೆಲಸ ಕೊಡಿಸಿದ್ದಾರೆ. ತಮ್ಮ ಪ್ರಭಾವ ಬಳಸಿ ಸ್ವಜನಪಕ್ಷಪಾತ ನಡೆಸಿದ್ದಾರೆ’ ಎಂದು ಗಂಭೀರ ಆರೋಪ ಮಾಡಿದರು.
“ಮಾಜಿ ಲೋಕೋಪಯೋಗಿ ಇಲಾಖೆ ಸಚಿವ ಸಿ ಸಿ ಪಾಟೀಲ್ ಈ 500 ಕೋಟಿ ರೂ. ಹಗರಣದ ಪ್ರಮುಖ ರೂವಾರಿ. ಹಾಗಾಗಿ, ಈ ಬಗ್ಗೆ ತನಿಖೆ ನಡೆಸುವಂತೆ ಮುಖ್ಯಮಂತ್ರಿಗಳಿಗೆ ಕಳೆದ ಜೂ.30ರಂದು ದೂರು ನೀಡಿದ್ದೆ. ಈ ದೂರನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ತನಿಖೆಗೆ ಆದೇಶ ನೀಡಿದೆ. ಅಕ್ಟೋಬರ್ 11, 12 ರಂದು ತನಿಖೆ ನಡೆಸಲಿರುವ ಅಧಿಕಾರಿಗಳ ತಂಡ ನರಗುಂದ ಕ್ಷೇತ್ರಕ್ಕೆ ಆಗಮಿಸಲಿದ್ದಾರೆ’ ಎಂದು ತಿಳಿಸಿದರು.
ತನಿಖೆಗೆ ಆದೇಶ ನೀಡಿರುವ ಪ್ರತಿ
ತನಿಖೆಗೆ ಆದೇಶ ನೀಡಿರುವ ಪ್ರತಿ ಈ ದಿನ.ಕಾಮ್‌ಗೆ ಲಭ್ಯವಾಗಿದ್ದು, ಇಲಾಖಾ ಅಧಿಕಾರಿಗಳ ಒಂದು ವಿಶೇಷ ತಂಡವನ್ನು ರಚಿಸಿ, ವಿಸ್ತೃತವಾದ ತನಿಖೆ ನಡೆಸಿ 30 ದಿನಗಳೊಳಗೆ ವಿವರವಾದ ವರದಿಯನ್ನು ನೀಡುವಂತೆ ಸರ್ಕಾರ ಸೂಚಿಸಿದೆ.
ಏನಿದು ಪ್ರಕರಣ?
ನರಗುಂದ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಲೋಕೋಪಯೋಗಿ, ಜಿಲ್ಲಾ ಪಂಚಾಯತ್, ಸಣ್ಣ, ನೀರಾವರಿ, ಜಲಸಂಪನ್ಮೂಲ ಮತ್ತು ಪೌರಾಡಳಿತ ಇಲಾಖೆ ಮೂಲಕ ಅಂದಾಜು ರೂ.500.00 ಕೋಟಿಗಿಂತಲೂ ಹೆಚ್ಚು ಮೊತ್ತದಲ್ಲಿ ವಿವಿಧ ಕಾಮಗಾರಿಗಳನ್ನು ಚುನಾವಣೆಗಿಂತ ಮೊದಲು ಒಂದು ವರ್ಷದಲ್ಲಿ ಅನುಷ್ಠಾನಗೊಳಿಸಿದ್ದು, ಅಧಿಕಾರದ ದುರುಪಯೋಗ ಹಾಗೂ ನಿಯಮಗಳ ಪಾಲನೆ ಮಾಡಿರುವುದಿಲ್ಲವೆಂದು ಆರೋಪಿಸಿ ನರಗುಂದ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಬಿ.ಆರ್.ಯಾವಗಲ್ ಕಳೆದ ಜೂನ್ 30ರಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು. ಪತ್ರದಲ್ಲಿ ಲೋಕಾಯುಕ್ತ ಇಲ್ಲವೆ ಸಿಓಡಿ ತನಿಖೆ ಕೈಗೊಳ್ಳುವಂತೆ ವಿನಂತಿಸಿದ್ದರು.
ಮಾಜಿ ಲೋಕೋಪಯೋಗಿ ಸಚಿವ ಸಿ ಸಿ ಪಾಟೀಲ್
ಈ ಮನವಿಯನ್ನು ಪರಿಗಣಿಸಿರುವ ಸರ್ಕಾರವು, ನರಗುಂದ ವಿಧಾನಸಭಾ ವ್ಯಾಪ್ತಿಯಲ್ಲಿ 2022- 23ನೇ ಸಾಲಿನಲ್ಲಿ ವಿವಿಧ ಇಲಾಖೆಯು ಕೈಗೊಂಡಿರುವ ಕಾಮಗಾರಿಗಳ ಅವಶ್ಯಕತೆ, ಕಾಮಗಾರಿಗಳ ಗುತ್ತಿಗೆ ನೀಡುವ ಬಗೆ, ನಿಯಮಗಳ ಪಾಲನೆ, ತಾಂತ್ರಿಕವಾಗಿ ಕಾಮಗಾರಿಗಳ ಗುಣಮಟ್ಟ ಪರಿಶೀಲನೆ, ಅಧಿಕಾರ ಹಾಗೂ ಹಣ ದುರುಪಯೋಗ, ಕಾಮಗಾರಿಗಳನ್ನು ನಿಯಮಾನುಸಾರ ಕೈಗೊಂಡು, ಪೂರ್ಣಗೊಳಿಸಿರುವ ವಿಷಯಗಳಿಗೆ ಸಂಬಂಧಿಸಿದಂತೆ ಇಲಾಖಾ ಅಧಿಕಾರಿಗಳ ಒಂದು ವಿಶೇಷ ತಂಡವನ್ನು ರಚಿಸಿ, ವಿಸ್ತೃತವಾದ ತನಿಖೆ ನಡೆಸಿ 30 ದಿನಗಳೊಳಗೆ ವಿವರವಾದ ವರದಿಯನ್ನು ನೀಡುವಂತೆ ಸರ್ಕಾರವು ಆದೇಶಿಸಿದೆ.
ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ತನಿಖೆ ಕೈಗೊಳ್ಳಲು ಪಿಡಬ್ಲ್ಯೂಡಿಯ ಗುಣ ಭರವಸೆ ವಲಯದ ಬೆಂಗಳೂರಿನ ಮುಖ್ಯ ಇಂಜಿನಿಯರ್ ನೇತೃತ್ವದಲ್ಲಿ ನಾಲ್ವರು ಅಧಿಕಾರಿಗಳ ತಂಡವನ್ನು ರಚಿಸಲಾಗಿದೆ. ಈ ಪ್ರಕರಣವು ಮಾಜಿ ಲೋಕೋಪಯೋಗಿ ಸಚಿವ ಹಾಗೂ ಪ್ರಸ್ತುತ ನರಗುಂದ ವಿಧಾನಸಭಾ ಕ್ಷೇತ್ರದ ಶಾಸಕ ಸಿ ಸಿ ಪಾಟೀಲ್ ಅವರಿಗೆ ಮುಳುವಾಗುವ ಸಾಧ್ಯತೆ ಇದೆ.
ಇವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದವರು. ಕಳೆದ 13 ವರ್ಷಗಳಿಂದ ಪತ್ರಿಕೋದ್ಯಮದಲ್ಲಿದ್ದು, ವಾರ್ತಾಭಾರತಿ ದಿನಪತ್ರಿಕೆ, ಸಂಜೆ ವಾಣಿ, ಕೋಸ್ಟಲ್ ಡೈಜೆಸ್ಟ್ ಹಾಗೂ ಸನ್ಮಾರ್ಗ ವಾರಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ಈದಿನ ಡಾಟ್ ಕಾಮ್‌ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ.