- ಬಂಡೀಪುರ ಸಫಾರಿ ಕೌಂಟರ್ ಸಮೀಪವೇ ಮೂರು ಹೆಲಿಪ್ಯಾಡ್ ನಿರ್ಮಾಣ
- ‘ದಿ ಎಲಿಫೆಂಟ್ ವಿಸ್ಪರರ್ಸ್’ ಕಾವಾಡಿ ದಂಪತಿ ಭೇಟಿ ಮಾಡಲಿರುವ ಮೋದಿ
ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 9ರಂದು ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಹಾಗೂ ತಮಿಳುನಾಡಿನ ಮಧುಮಲೆ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ನೀಡುವ ಸಾಧ್ಯತೆ. ಈ ಹಿನ್ನೆಲೆ, ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್‌ಕುಮಾರ್ ಬಂಡೀಪುರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಚಾಮರಾಜನಗರ ಜಿಲ್ಲಾಧಿಕಾರಿ ಡಿ ಎಸ್ ರಮೇಶ್, ದಕ್ಷಿಣ ವಲಯ ಐಜಿಪಿ ಪ್ರವೀಣ್ ಮಧುಕರ್ ಪವಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ಅವರೊಂದಿಗೆ ಮೇಲುಕಾಮನಹಳ್ಳಿ ಸಫಾರಿ ಕೇಂದ್ರ ಬಳಿ ನಿರ್ಮಾಣವಾಗುತ್ತಿರುವ ಹೆಲಿಪ್ಯಾಡ್ ಸ್ಥಳಕ್ಕೆ ಭೇಟಿ ಕೊಟ್ಟು, ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಪ್ರಧಾನಿ ಮೋದಿ ಭೇಟಿ ನೀಡುವ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಹಾಗೂ ಭದ್ರತಾ ಲೋಪ ಉಂಟಾಗದ ರೀತಿ ಬಿಗಿ ಭದ್ರತೆ ಕೈಗೊಳ್ಳುವಂತೆ ಅಲೋಕ್ ಕುಮಾರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಸಾರ್ವಜನಿಕರಗಳನ್ನು ನಿಯಂತ್ರಿಸಲು ಹೆಲಿಪ್ಯಾಡ್ ಸುತ್ತ ಬ್ಯಾರಿಕೇಡ್, ಕಾಂಪೌಂಡ್ ವ್ಯವಸ್ಥೆ ಇರಬೇಕು ಎಂಬುದು ಸೇರಿದಂತೆ ಹಲವು ಸೂಚನೆಗಳನ್ನು ದಕ್ಷಿಣ ವಲಯ ಐಜಿಪಿ ಪ್ರವೀಣ್ ಮಧುಕರ್ ಪವಾರ್ ಮತ್ತು ಎಸ್‌ಪಿ ಪದ್ಮಿನಿ ಸಾಹು ಅವರಿಗೆ ನೀಡಿದರು.
ಏ. 9ರಂದು ಪ್ರಧಾನಿ ಭೇಟಿ ಇನ್ನೂ ಅಧಿಕೃತವಾಗದಿದ್ದರೂ, ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮತ್ತು ಅರಣ್ಯ ಇಲಾಖೆ ಎಲ್ಲ ಸಿದ್ಧತೆಗಳನ್ನು ಮಾಡುತ್ತಿದೆ. ಬಂಡೀಪುರ ಸಫಾರಿ ಕೌಂಟರ್ ಸಮೀಪವೇ ಮೂರು ಹೆಲಿಪ್ಯಾಡ್ ನಿರ್ಮಾಣ ಮಾಡಲಾಗುತ್ತಿದೆ.
ಈ ಸುದ್ದಿ ಓದಿದ್ದೀರಾ? ಒಂದೇ ಮಳೆಗೆ ಹೊಂಡವಾದ ನಲ್ಲೂರಳ್ಳಿ ಮೆಟ್ರೋ ನಿಲ್ದಾಣ
ಏ. 8 ರಂದು ಮೈಸೂರಿಗೆ ಬರಲಿರುವ ಮೋದಿ, ಅಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಏ. 9ರಂದು ಮೈಸೂರಿನಿಂದ ಹೆಲಿಕಾಪ್ಟರ್ ಮೂಲಕ ಮೇಲುಕಾಮನಹಳ್ಳಿಗೆ ಬಂದಿಳಿಯಲಿರುವ ಮೋದಿ, ಬಂಡೀಪುರಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿ ಸಫಾರಿ, ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ.
ನಂತರ ರಸ್ತೆ ಮಾರ್ಗವಾಗಿ ಮಧುಮಲೆ ಹುಲಿ ಸಂರಕ್ಷಿತ ಪ್ರದೇಶಕ್ಕೆ ತೆರಳಿ, ಆಸ್ಕರ್ ವಿಜೇತ ‘ದಿ ಎಲಿಫೆಂಟ್ ವಿಸ್ಪರರ್ಸ್’ ಸಾಕ್ಷ್ಯಚಿತ್ರದಲ್ಲಿ ಕಾಣಿಸಿಕೊಂಡಿದ್ದ ಕಾವಾಡಿ ದಂಪತಿ ಬೊಮ್ಮನ್ ಮತ್ತು ಬೆಳ್ಳಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಅಲ್ಲಿಂದ ಮೈಸೂರಿಗೆ ವಾಪಸ್ ಆಗಲಿರುವ ಮೋದಿ ಹುಲಿಯೋಜನೆಗೆ 50 ವರ್ಷಗಳ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.