ದಾದಾಸಾಹೇಬ್ ಕಾನ್ಶಿರಾಮ್ ಅವರ ಮಹಾ ಪರಿನಿರ್ವಾಣ ದಿನಾಚರಣೆಯನ್ನು ಕಲಬುರಗಿಯಲ್ಲಿ ಶೋಷಿತ ಸಮಾಜ ವೇದಿಕೆ ಆಚರಿಸಿದೆ.
ಈ ವೇಳೆ, ಶೋಷಿತ ಸಮಾಜ ವೇದಿಕೆ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ್ ಬಿ ನೆಲೋಗಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. “ಬಹುಜನ ಸಮಾಜಕ್ಕೆ ರಾಜಾಧಿಕಾರದ ಮಾರ್ಗವನ್ನು ತೋರಿಸಿಕೊಟ್ಟ ಮಹಾನ್ ತ್ಯಾಗಿ ದಾದಾಸಾಹೇಬ್ ಕಾನ್ಶಿರಾಮ್. ಬಹುಜನ್ ಸಮಾಜ ಪಕ್ಷವನ್ನು ಸ್ಥಾಪಿಸಿ ಉತ್ತರ ಪ್ರದೇಶದಲ್ಲಿ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ” ಎಂದು ತಿಳಿಸಿದರು.
“ಅಂಬೇಡ್ಕರ್ ಅವರಿಗೆ ಭಾರತ ರತ್ನ ಪ್ರಶಸ್ತಿಗೆ ಮತ್ತು ಮಂಡಲ್ ವರದಿಯನ್ನು ಜಾರಿಗೆ ತರುವಲ್ಲಿ ಕಾನ್ಶಿರಾಮ್ ಜೀಯವರ ಕೊಡುಗೆ ಅಪಾರವಿದೆ” ಎಂದರು.
ಈ ಸಂದರ್ಭದಲ್ಲಿ ಶೋಷಿತ ಸಮಾಜ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲು ನೆದಲಗಿ, ರಾಜ್ಯ ಸಂಯೋಜಕ ಮೈನುಧಿನಿ ಇನಾಮದಾರ, ತಾಲೂಕು ಅಧ್ಯಕ್ಷ ಹರಿಚಂದ್ರ ಎಂ. ಮದನ್ಕರ್ ಇನ್ನಿತರರು ಉಪಸ್ಥಿತರಿದ್ದರು.