ಉದ್ಯೋಗ ಖಾತ್ರಿ, ಬಾಕಿ ಕೂಲಿ, ಬರಗಾಲದ ನಿಮಿತ್ತ 200 ದಿನಗಳ ಕೆಲಸ ಮತ್ತು ದಿನಕ್ಕೆ ₹600 ಕೂಲಿಗಾಗಿ ಒತ್ತಾಯಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ, ಅಖಿಲ ಭಾರತ ಕೃಷಿ ಕೂಲಿಕಾರರ ಸಂಘ(ಎಐಎಡಬ್ಲ್ಯೂಯು) ಸಂಯೋಜಿತ ಕಲಬುರಗಿ ಜಿಲ್ಲಾ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕಲಬುರಗಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
“ಮಳೆಯ ಕೊರತೆಯಿಂದ ರಾಷ್ಟ್ರ ಮತ್ತು ರಾಜ್ಯ ಎಂದೂ ಕಂಡರಿಯದ ಬರಕ್ಕೆ ಸಿಲುಕಿದ್ದು, ಕೃಷಿ ಕೂಲಿಕಾರರು, ಇತರೆ ಗ್ರಾಮೀಣ ದುಡಿಮೆದಾರರು, ಬಡ ರೈತರು, ದಿಕ್ಕಾಪಾಲಾಗುತ್ತಿದ್ದಾರೆ. ಅತ್ತ ಕೇಂದ್ರ ಸರ್ಕಾರ ಉದ್ಯೋಗ ಖಾತ್ರಿಗೆ ನೀಡುತ್ತಿದ್ದ ಅನುದಾನವನ್ನು ನಿರಂತರವಾಗಿ ಕಡಿತ ಮಾಡುತ್ತಾ ಬರುತ್ತಿದೆ. ಜೀವನಾವಶ್ಯಕ ವಸ್ತುಗಳ ಬೆಲೆ ಹೆಚ್ಚಾಗಿ ಕೂಲಿಕಾರರ ಕೊಳ್ಳುವ ಶಕ್ತಿ ತೀವ್ರ ಕುಸಿದಿದೆ. ಪರಿಣಾಮವಾಗಿ ಹಸಿವಿನ ಸಾವುಗಳು, ಆತ್ಮಹತ್ಯೆಯ ಸಾವುಗಳು ಹೆಚ್ಚಾಗುವ ಸನ್ನಿವೇಶ ಸೃಷ್ಟಿಯಾಗುತ್ತಿದೆ. ಇದನ್ನು ತಡೆಯಲು ಸರ್ಕಾರಗಳು ಮುಂದಾಗಬೇಕು” ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಅಖಿಲ ಭಾರತ ಕೃಷಿ ಕೂಲಿಕಾರರ ಸಂಘದ ಕೇಂದ್ರ ಸಮಿತಿಯು ಉದ್ಯೋಗ ಖಾತ್ರಿ ಕಾಯ್ದೆಯ ಬೇಡಿಕೆ ದಿನ ಆಚರಿಸಿ ಅಕ್ಟೋಬರ್ 11 ರಂದು ಇಡೀ ದೇಶಾದ್ಯಂತ ಈ ಕಾಯ್ದೆಯ ಸಮರ್ಪಕ ಜಾರಿಗಾಗಿ ಹೋರಾಟ ನಡೆಸುತ್ತಿದ್ದು, ಈ ವೇಳೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಗುವುದು” ಎಂದರು.
“ಬರಕ್ಕೆ ತುತ್ತಾಗಿರುವ ಕೂಲಿಕಾರರಿಗೆ 200 ದಿನಗಳ ಕೆಲಸ ಮತ್ತು ₹600 ಕೂಲಿ ನೀಡಬೇಕು. ಉಳಿಸಿಕೊಂಡಿರುವ ಬಾಕಿ ಕೂಲಿಯನ್ನು ಕೂಡಲೇ ಪಾವತಿಸಿ ನಾಳೆಯಿಂದ ಕೆಲಸ ನೀಡಬೇಕು. ಗುತ್ತಿಗೆದಾರರಿಂದ ಉದ್ಯೋಗ ಖಾತ್ರಿ ರಕ್ಷಿಸಿ ಯಂತ್ರದ ಹಾವಳಿ ತಪ್ಪಿಸಿ ಕೃಷಿ ಕೂಲಿಕಾರರ ಆರ್ಥಿಕ ಸ್ವಾವಲಂಬನೆಗೆ ಒತ್ತು ನೀಡಬೇಕು” ಎಂದು ಒತ್ತಾಯಿಸಿದರು.
“ಮಳೆಯ ಕೊರತೆಯಿಂದ ಪೂರ್ಣ ಒಣಗಿರುವ ಭೂಮಿಯ ಕಾಮಗಾರಿಯ ಆಳತೆಯ ಪ್ರಮಾಣದಲ್ಲಿ ರಿಯಾಯಿತಿ ಘೋಷಿಸಬೇಕು. ಕುಲಿಕಾರರು ಬಯಸುವ ವೇಳೆಯಲ್ಲಿ ಕೆಲಸ ಕಲ್ಪಿಸಬೇಕು. ಮಹಿಳೆಯರು, ಅಂಗವಿಕಲರು, 60 ವರ್ಷ ಮೇಲ್ಪಟ್ಟವರಿಗೆ ಅರಣೀಕರಣದಲ್ಲಿ ನರ್ಸರಿ ಮಾಡುವಂತೆ ಗಿಡಗಳಿಗೆ ನೀರು ಹಾಕುವಂತಹ ಕೆಲಸಗಳನ್ನು ಕಲ್ಪಿಸಬೇಕು” ಎಂದು ಆಗ್ರಹಿಸಿದರು.
“ಎನ್‌ಎಂಆರ್ ಅಂದಾಜು ಪಟ್ಟಿ, ಇತರೆ ವಿವರಗಳನ್ನು ಕನ್ನಡದಲ್ಲಿ ಮುದ್ರಿಸಿ ಕಾಯಕ ಗುಂಪಿನ ಕಾಯಕ ಬಂಧುಗೆ ನೀಡಬೇಕು. ಎನ್‌ಎಂಎಂಎಸ್ ಆ್ಯಪ್‌ನಿಂದ ಆಗುತ್ತಿರುವ ತೊಂದರೆಯನ್ನು ತಪ್ಪಿಸಿ ಕೂಲಿಕಾರರನ್ನು ರಕ್ಷಿಸಬೇಕು. ಕೆಲಸ ಮಾಡಿದ ದಿನಗಳ ಎನ್‌ಎಂಆರ್‌ಗಳನ್ನು ಶೂನ್ಯ ಮಾಡಿ ಕೂಲಿಕಾರರನ್ನು ಅಲೆಸುವುದನ್ನು ನಿಲ್ಲಿಸಬೇಕು. ಪಂಚಾಯತಿ ಅಭಿವೃದ್ಧಿ ಅಧಿಕಾರಿ ಇದರ ಹೊಣೆ ಹೊರಬೇಕು” ಎಂದು ಹೇಳಿದರು.
“ಮೊದಲ ಮತ್ತು ಎರಡನೇ ಹಾಜರಾತಿಯನ್ನು ಕೆಲಸ ಮುಗಿದ ಕೂಡಲೇ 1 ಗಂಟೆ ಅವಧಿಯನ್ನು ಶಿಸ್ತಿನಿಂದ ಪಾಲಿಸಬೇಕು. ಕೆಲಸ ಮುಗಿದ ಮೇಲೆ ಕಾಯಿಸುವುದನ್ನು ತಪ್ಪಿಸಬೇಕು. ಕಾಯಕ ಬಂಧುಗಳಿಗೆ 7 ದಿನದ ಭೌತಿಕ ತರಬೇತಿ ಕೊಟ್ಟು, ಅವರಿಗೆ ಡೈರಿ, ಟೇಪು, ಕ್ಯಾಲ್ಕುಲೇಟರ್, ಬ್ಯಾಗ್ ಮತ್ತು ಮೊಬೈಲ್‌ಗಳನ್ನು ನೀಡಬೇಕು. ಇವರ ಕೂಲಿಯನ್ನು ಅರೆಕುಶಲ ಕಾರ್ಮಿಕರೆಂದು ಪರಿಗಣಿಸಿ ಸಾಮಾಗ್ರಿ ವೆಚ್ಚದಡಿ ಪಾವತಿಸಬೇಕು. ಬಾಕಿ ಉಳಿಸಿಕೊಂಡಿರುವ ಪ್ರೋತ್ಸಾಹ ಧನ ನೀಡಬೇಕು. ಕೂಲಿಕಾರರಿಗೆ ಕುಡಿಯುವ ನೀರು, ನೆರಳು, ಔಷಧಿ ಕಿಟ್‌ಗಳ ವ್ಯವಸ್ಥೆ ಕಲ್ಪಿಸಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ತಾಯಂದಿರು ಕೆಲಸಕ್ಕೆ ಬಂದರೆ ಆ ಮಕ್ಕಳ ಪಾಲನೆಗೆ ಬೇರೊಬ್ಬರನ್ನು ನೇಮಿಸಬೇಕು” ಎಂದು ಒತ್ತಾಯಿಸಿದರು.
“ಪ್ರತಿ ತಿಂಗಳು ಪಂಚಾಯಿತಿ ಕಚೇರಿಯಲ್ಲಿ ರೋಜ್‌ಗಾರ್ ದಿವಸವನ್ನು ಆಚರಿಸಬೇಕು. ಪ್ರತಿ ಕಾಯಕ ಗುಂಪಿನ ರಚನೆಗೆ ಕನಿಷ್ಠ 25, ಗರಿಷ್ಠ 50 ಮಂದಿ ಕೂಲಿಕಾರರು ಇರಬೇಕೆಂಬ ನಿಯಮ ರೂಪಿಸಿ 50 ಮಂದಿ ಇರಬೇಕೆಂಬುವುದನ್ನು ಕೈ ಬಿಡಬೇಕು. ಉದ್ಯೋಗ ಖಾತ್ರಿಗೆ ಕೇಂದ್ರ ಸರ್ಕಾರ ಹೆಚ್ಚಿನ ಅನುದಾನ ನೀಡಬೇಕು. ಕುಟುಂಬದ ಎಲ್ಲ ಕೂಲಿಕಾರರು ಅವರು ಮಾಡುವಷ್ಟು ದಿನದ ಕೆಲಸ ಕಲ್ಪಿಸಬೇಕು” ಎಂದರು.
“ಉದ್ಯೋಗ ಖಾತ್ರಿ ಕೆಲಸಕ್ಕೆ ತೊಡಿಸಿಕೊಂಡಿದ್ದಾಗ ಅಪಘಾತವಾದರೆ, ಮೃತಪಟ್ಟರೆ 10 ಲಕ್ಷ ರೂ. ಪರಿಹಾರ ನೀಡಬೇಕು. ಗಾಯಾಳುಗಳಿಗೆ ಉಚಿತ ಉನ್ನತ ಚಿಕಿತ್ಸೆ ನೀಡಬೇಕು. ದಿನಕ್ಕೆ ಎರಡು ಬಾರಿ ಹಾಜರಿ ಹಾಕುವುದನ್ನು, ಆನ್‌ಲೈನ್ ಮೂಲಕ ಕೂಲಿ ನೀಡುವ ಪದ್ಧತಿಯನ್ನು ಕೈಬಿಡಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಮೀಸಲಾತಿ ಅನುಭವಿಸುತ್ತಿರುವವರು ಸಮುದಾಯದ ಋಣ ತೀರಿಸಬೇಕು
ಈ ಸಂದರ್ಭದಲ್ಲಿ ಭೀಮಶೆಟ್ಟಿ ಯಂಪಳ್ಳಿ, ಕಾಶಿನಾಥ ಬಂಡಿ, ಮಲ್ಲಮ್ಮ ಕೋಡ್ಲಿ, ಗುರುನಂದೇಶ ಕೋಣಿನ, ಮೇಘರಾಜ ಕಠಾರ, ಹನಿಫಾ ಕೊಡದೂರ, ಸಿದ್ದರಾಮ ಹರವಾಳ, ಜಗದೇವಿ ಚಂದನಕೇರಾ, ಬಸವರಾಜ ಕೊಳಕೂರ, ಕಸ್ತೂರಬಾಯಿ ಕೊಡದೂರ, ಐರಪ್ಪ, ಅಶ್ವಿನಿ ಚವ್ಹಾಣ್ ಸೇರಿದಂತೆ ಇತರರು ಇದ್ದರು.