ದೇವಸ್ಥಾನದ ಬಳಿಯಿದ್ದ ನಲ್ಲಿಯಲ್ಲಿ ನೀರು ತುಂಬಲು ಹೋಗಿದ್ದ ದಲಿತ ಬಾಲಕಿಗೆ ಆಕೆಯ ಜಾತಿ ಹೆಸರಿಡಿದು ಪೂಜಾರಿ ಮತ್ತು ಆತನ ಸಹೋದರಿ ನಿಂದಿಸಿರುವ ಘಟನೆ ರಾಮನಗರ ಜಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಚನ್ನಮಾನಹಳ್ಳಿಯಲ್ಲಿ ಜಾತಿ ದೌರ್ಜನ್ಯದ ಘಟನೆ ನಡೆದಿದೆ. 13 ವರ್ಷದ ಬಾಲಕಿಯನ್ನು ಪೂಜಾರಿ ಜಾತಿ ಹೆಸರಿನಲ್ಲಿ ನಿಂದಿಸಿದ್ದಾನೆ.
ಬಾಲಕಿ ತನ್ನ ಮನೆಯ ಸಮೀಪವೇ ಇದ್ದ ಮಾರಮ್ಮ ದೇವಸ್ಥಾನದ ಬಳಿಯ ನಲ್ಲಿಯಲ್ಲಿ ನೀರು ತುಂಬಿಸಲು ಬಿಂದಿಗೆ ತೆಗೆದುಕೊಂಡು ಹೋಗಿದ್ದಾಳೆ. ಈ ವೇಳೆ, ಪೂಜಾರಿ ಕುಮಾರ್ ಮತ್ತು ಆತನ ಸಹೋದರಿ ಯಶೋಧಾ – ಇಬ್ಬರೂ ಸೇರಿ ಬಾಲಕಿಗೆ ನಿಂದಿಸಿದ್ದಾರೆ.
ಅದನ್ನು ಪ್ರಶ್ನಿಸಿದ ಬಾಲಕಿಯ ಚಿಕ್ಕಪ್ಪ ಪ್ರಸನ್ನಕುಮಾರ್ ಮತ್ತು ಸ್ನೇಹಿತನ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಘಟನೆ ಸಂಬಂಧ ಪ್ರಸನ್ನ ಕುಮಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
“ಪೂಜಾರಿ ಮತ್ತು ಆತನ ಸಹೋದರಿ ನನ್ನ ಕೆನ್ನೆಗೆ ಹೊಡೆದು, ಕಲ್ಲಿನಿಂದ ಹಲ್ಲೆ ಮಾಡಿದ್ದಾರೆ” ಎಂದು ಪ್ರಸನ್ನ ಕುಮಾರ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಅವರ ದೂರನ್ನು ಆಧರಿಸಿ ಐಜೂರು ಪೊಲೀಸರು ಪೂಜಾರಿ ಮತ್ತು ಆತನ ಸಹೋದರಿ ವಿರುದ್ಧ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎಸ್‌ಸಿ ಮತ್ತು ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಮತ್ತು ಐಪಿಸಿ ಸೆಕ್ಷನ್ 323, 324, 504, 506 ಹಾಗೂ 34ರ ಅಡಿ ಪ್ರಕರಣ ದಾಖಲಾಗಿದೆ.