ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆಗೆ 1,000 ಕೋಟಿ ರೂ. ವೆಚ್ಚ ಮಾಡಲಾಗಿದೆ. ಯೋಜನೆಯ ಕಾಮಗಾರಿ ಅವ್ಯವಹಾರದಿಂದ ಕೂಡಿದ್ದು, ಶಾಸಕ ಅಭಯ್ ಪಾಟೀಲ್ ಅವರ ಕೈವಾಡವಿದೆ. ಅವ್ಯವಹಾರದ ಬಗ್ಗೆ ತನಿಕೆ ನಡೆಸಬೇಕು ಎಂದು ಬೆಳಗಾವಿ ನಾಗರಿಕ ಹಿತರಕ್ಷಣಾ ಒಕ್ಕೂಟವು ಒತ್ತಾಯಿಸಿದೆ.
ಬೆಳಗಾವಿಯ ಶಿವಾಜಿ ಉದ್ಯಾನದ ಬಳಿ ಪ್ರತಿಭಟನೆ ನಡೆಸಿದ ಒಕ್ಕೂಟದ ಕಾರ್ಯಕರ್ತರು, “ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಯಿಂದ ಮನೆ ಕಳೆದುಕೊಂಡ ಜನ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಸಂತ್ರಸ್ತರಿಗೆ ಪರಿಹಾರ ನೀಡುವಂತೆ ನ್ಯಾಯಾಲಯ ಸೂಚನೆ ನೀಡಿದೆ. ತೀರ್ಪು ಬಂದ ಮೇಲೂ ಪಾರಿಹಾರ ನೀಡಲಾಗಿಲ್ಲ. ಆದರೂ, ‘ಬುಡಾ’ ಆಯುಕ್ತರು ರಸ್ತೆ ಕಾಮಗಾರಿಗೆ ಅನೂಕೂಲ ಮಾಡಿಕೊಟ್ಟಿದ್ದಾರೆ. ಇದರಿಂದ ನಿವಾಸಿಗಳಿಗೆ ಅನ್ಯಾಯವಾಗಿದೆ. ಜನರ ತೇರಿಗೆ ಹಣವು ವ್ಯರ್ಥವಾಗಿದೆ” ಎಂದು ಆರೋಪಿಸಿದ್ದಾರೆ.
“ಸ್ಮಾರ್ಟ್ ಸಿಟಿ ಯೋಜನೆಯ ಹಣವನ್ನು ರಾಷ್ಟ್ರಿಕೃತ ಬ್ಯಾಂಕಿನಲ್ಲಿಡಬೇಕು. ಆದರೆ, ರತ್ನಾಕರ ಬ್ಯಾಂಕ್ ಲಿಮಿಟೆಡ್‌ನಲ್ಲಿ ಇಡಲಾಗಿದೆ. ಇದಕ್ಕೆ ಕಾರಣವೇನೆಂದು ಬಹಿರಂಗ ಪಡಿಸಿಬೇಕು. ಅಲ್ಲದೆ, ಅದರ ಬಡ್ಡಿ ಹಣ ಎಲ್ಲಿ ಹೋಯಿತು ಎಂಬುದರ ಕುರಿತು ಸಮಗ್ರ ತನಿಕೆ ನಡೆಸಬೇಕು. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯನ್ನು ಹಾಳು ಮಾಡಿದ ಅಧಿಕಾರಿಗಳ ಮೇಲೆ ಕ್ರಮವಹಿಸಬೇಕು” ಎಂದು ಒತ್ತಾಯಿಸಿದ್ದಾರೆ.
ಆಮ್ ಆದ್ಮಿ ಪಕ್ಷದ ಮುಖಂಡ ರಾಜೀವ ಟೋಪ್ಪಣ್ಣವರ ಮಾತನಾಡಿ, “ಸ್ಮಾರ್ಟ್ ಸಿಟಿ ಕ್ರಿಯಾ ಯೋಜನೆ ಸಿದ್ಧಪಡಿಸುವ ಮೊದಲು ರಾಜಕಾಲುವೆ ಮತ್ತು ಪ್ರಾಥಮಿಕ ಕಾಲುವೆಗಳ ಅಭಿವೃದ್ಧಿಗಾಗಿ ಯೋಜನೆ ರೂಪಿಸಲಾಗಿತ್ತು. ಆದರೆ, ಕಾಲುವೆಗಳ ಅಭಿವೃದ್ಧಿ ಮಾಡಿಲ್ಲ. ಹೀಗಾಗಿ, ಮಳೆಯಾಗಿ ರಸ್ತೆ ಮೇಲೆ ನೀರು ಹರಿಯುತ್ತಿದೆ” ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಸುಜೀತ ಮುಳಗುಂದ, “ಶಹಾಪೂರ ಪ್ರದೇಶದಲ್ಲಿರುವ ಬ್ಯಾಂಕ್ ಆಫ್ ಇಂಡಿಯಾದಿಂದ ಹಳೆ ಪಿ.ಬಿ ರಸ್ತೆಯವರೆಗೆ ರಸ್ತೆ ವಿಸ್ತರಣೆ ಮಾಡಿ ಅಮಾಯಕರ ಮನೆಗಳನ್ನು ನೆಲಸಮ ಮಾಡಲಾಗಿದೆ. ಈ ರಸ್ತೆ ಅವೈಜ್ಞಾನಿಕವಾಗಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಉನ್ನತ ಮಟ್ಟದ ತನಿಕೆ ನಡೆಸಬೇಕು. ಶಾಸಕ ಅಭಯ ಪಾಟೀಲ್ ಅವರು ತಮಗೆ ಅನುಕೂಲವಾಗವು ರೀತಿಯಲ್ಲಿ ರಸ್ತೆ ಮಾಡಿಸಿದ್ಧಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾಕಾರರ ಮನವಿ ಸ್ವೀಕರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, “ಮನೆಗಳನ್ನು ಕಳೆದುಕೊಂಡವರಿಗೆ ಪರಿಹಾರ ಕೊಡಿಸಲು ಪ್ರಯತ್ನ ಮಾಡಲಾಗುವುದು” ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ಸುನೀಲ ಹಣಮಣ್ಣವರ, ಜಿಲ್ಲಾ ಗ್ರಾಮಿಣ ಕಾಂಗ್ರೆಸ್ ಘಟಕದ ಅಧ್ಯಕ್ಷ ವಿನಯ ನಾವಲಟಗಿ ,ಎಮ್.ಜೆ.ಪ್ರದೀಪ, ಅಜೀಮ್ ಪಟೇಗಾರ, ಪ್ರತಿಭಾ ಪಾಟಿಲ್, ಆಯಿಶಾ ಸನದಿ ಇತರರು ಇದ್ದರು