ಕೆಲಸದ ಆದೇಶ ಪಡೆದು ಕಾಮಗಾರಿ ಮುಗಿಸಿದರೂ ಗುತ್ತಿಗೆ ಹಣ ಪಾವತಿಯಾಗಿಲ್ಲ. ಒಂದು ವರ್ಷದಿಂದ ಮನೆಗೂ ಕಚೇರಿಗೂ ಅಲೆದಾಡಿ ಬೇಸತ್ತಿವೆಂದು ಗುತ್ತಿಗೆದಾರರೊಬ್ಬರು ಅಧಿಕಾರಿಗಳ ಎದುರೇ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಗುತ್ತಿಗೆದಾರ ನಾಗಪ್ಪ ಬಂಗಿ ಎಂಬವರು ಬೆಳಗಾವಿಯ ಲೋಕೋಪಯೋಗಿ ಇಲಾಖೆಯ ಕಚೇರಿಯಲ್ಲಿ ಎಕ್ಸಿಕೆಟಿವ್ ಎಂಜಿನಿಯರ್ ಎದುರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
2022ರಲ್ಲಿ ಹಲಗಾ ಗ್ರಾಮ ಮತ್ತು ತಿಗಡಿ ಗ್ರಾಮದ ನಡುವೆ ರಸ್ತೆ ನಿರ್ಮಾಣ ಕಾಮಗಾರಿಯ ಗುತ್ತಿಗೆಯನ್ನು ನಾಗಪ್ಪ ಪಡೆದುಕೊಂಡಿದ್ದರು. ಕಾಮಗಾರಿ ಮುಗಿದ್ದಿದ್ದರೂ ಗುತ್ತಿಗೆಯ ಹಣ ಮಂಜೂರು ಮಾಡಿರಲಿಲ್ಲ. ಹೀಗಾಗಿ, ವಿಷದ ಬಾಟಲಿಯೊಂದಿಗೆ ಲೋಕೋಪಯೋಗಿ ಇಲಾಖೆಯ ಕಚೇರಿಗೆ ನಾಗಪ್ಪ ಬಂದಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಬರಬೇಕೆಂದು ಒತ್ತಾಯಿಸಿ ಕುಟುಂಬಸ್ಥರೊಂದಿಗೆ ಧರಣಿ ಕುಳಿತಿದ್ದರು. ಆದರೆ, ಅಧಿಕಾರಿಗಳು ಸರಿಯಾಗಿ ಸ್ಪಂದಿಸದ ಕಾರಣ ವಿಷ ಕುಡಿದಿದ್ದಾರೆ ಎಂದು ತಿಳಿದುಬಂದಿದೆ.
ಈ ಹಿಂದೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿಲ್ ಮಂಜೂರಾಗದ ಕಾರಣದಿಂದಾಗಿ ಗುತ್ತಿಗೆದಾರ ಸಂತೋಷ ಪಾಟೀಲ್ ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರು ಈಶ್ವರಪ್ಪ ವಿರುದ್ಧ 40% ಕಮಿಷನ್ ಆರೋಪ ಮಾಡಿದ್ದರು. ಹೀಗಾಗಿ, ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಲ್ಲದೆ, ಗುತ್ತಿಗೆದಾರರು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದ್ದರು. ಸರ್ಕಾರವು ಪ್ರತಿ ಕಾಮಗಾರಿಯಲ್ಲೂ 40% ಕಮಿಷನ್ ಪಡೆಯುತ್ತಿದೆ ಎಂದು ಆರೋಪಿಸಿದ್ದರು.