ಚಿನ್ನದ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡು ಸುಮಾರು 1 ಕೆ.ಜಿ 262 ಗ್ರಾಂ ಚಿನ್ನದ ಆಭರಣಗಳನ್ನು ಕಳ್ಳತನ ಮಾಡಿದ್ದ ಕಳ್ಳರನ್ನು ಬೆಂಗಳೂರಿನ ಹಲಸೂರು ಗೇಟ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಹಲಸೂರು ಗೇಟ್ ಠಾಣಾ ವ್ಯಾಪ್ತಿಯಲ್ಲಿರುವ ಜುವೆಲ್ಲರಿ ಶಾಪ್ ಮಾಲೀಕ ಅಭಿಷೇಕ್ ಎಂಬುವರು ನೀಡಿದ ದೂರಿನ ಮೇರೆಗೆ ಇದೇ ಅಂಗಡಿಯಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ರಾಜಸ್ತಾನ ಮೂಲದ ಲಾಲ್ ಸಿಂಗ್ ಹಾಗೂ ಈತನಿಗೆ ಸಹಕರಿಸಿದ ಮತ್ತೋರ್ವ ಆರೋಪಿ ರಾಜ್ ಪಾಲ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 1.262 ಕೆ.ಜಿ. ಮೌಲ್ಯದ ಚಿನ್ನದೊಡವೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಏನಿದು ಪ್ರಕರಣ?
ಕಳೆದ ಏಳು ತಿಂಗಳಿಂದ ಅಭಿಷೇಕ್ ಜುವೆಲ್ಲರಿ ಶಾಪ್‌ನಲ್ಲಿ ಸೇಲ್ಸ್ ಮ್ಯಾನ್ ಆಗಿ ಲಾಲ್ ಸಿಂಗ್ ಕೆಲಸ ಮಾಡುತ್ತಿದ್ದನು. ಮಾಲೀಕರ ವಿಶ್ವಾಸಗಳಿಸಿಕೊಂಡಿದ್ದರಿಂದ ಕಳೆದ ತಿಂಗಳು 28ರಂದು ಆತನಿಗೆ ಜುವೆಲ್ಲರಿ ಮಾಲೀಕರು ಆಂಧ್ರದ ನಲ್ಲೂರಿನಲ್ಲಿರುವ ಮುಖೇಶ್ ಹಾಗೂ ಶುಭಂ ಗೋಲ್ಡ್ ಜುವೆಲ್ಲರಿ ಶಾಪ್‌ಗಳ ಮಾಲೀಕರಿಗೆ 1.262 ಕೆ.ಜಿ ಚಿನ್ನಾಭರಣ ಕೊಟ್ಟು ಬರುವಂತೆ ಹೇಳಿದ್ದರು.
ಚಿನ್ನಾಭರಣ ಬ್ಯಾಗ್ ಪಡೆಯುತ್ತಿದ್ದಂತೆ ಆರೋಪಿಯು ದುರಾಸೆಗೆ ಬಿದ್ದು, ಬೆಂಗಳೂರಿನಲ್ಲಿರುವ ಸಹಚರರಿಗೆ ವಿಷಯ ತಿಳಿಸಿ ಚಿನ್ನವನ್ನು ಕದಿಯುವ ಉಪಾಯ ಮಾಡಿದ್ದಾನೆ.
ಉಪಾಯದಂತೆ, ಆತ ನೆಲ್ಲೂರು ತಲುಪಿದ ನಂತರ ತನ್ನ ಮಾಲೀಕರಿಗೆ ಕರೆ ಮಾಡಿ, ನೆಲ್ಲೂರಿನಲ್ಲಿ ಅಪರಿಚಿತರು ತನಗೆ ಗನ್‌ಪಾಯಿಂಟ್ ಇಟ್ಟು, ಚಾಕುವಿನಿಂದ ಹಲ್ಲೆ ಮಾಡಿ, ಚಿನ್ನವಿರುವ ಬ್ಯಾಗ್ ಅನ್ನು ಕಿತ್ತುಕೊಂಡು ಹೋಗಿದ್ದಾರೆ ಎಂದು ತಿಳಿಸಿದ್ದಾನೆ.
ನಂತರ ಶಾಪ್ ಮಾಲೀಕ ಸೇಲ್ಸ್ ಮ್ಯಾನ್‌ನನ್ನು ನೆಲ್ಲೂರಿನಿಂದ ವಾಪಸ್ ಕರೆದುಕೊಂಡು ಬಂದಿದ್ದಾರೆ. ಅಕ್ಟೋಬರ್ 2ರಂದು ಹಲಸೂರುಗೇಟ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದಾರೆ.
ಪ್ರಕರಣ ದಾಖಲಾಗಿ ತನಿಖೆ ಆರಂಭಿಸಿದ ಇನ್ಸ್‌ಪೆಕ್ಟರ್ ಹನುಮಂತ್ರ ಭಜಂತ್ರಿ, ಚಾಕುವಿನಿಂದ ಕೈಗಳ ಮೇಲೆ ಹಲ್ಲೆ ಮಾಡಿರುವುದಾಗಿ ನೀಡಿದ ಹೇಳಿಕೆಗೂ ಕೈ ಮೇಲೆ ಆಗಿರುವ ಗಾಯಕ್ಕೆ ಸಾಮ್ಯತೆ ಬರದ ಹಿನ್ನೆಲೆಯಲ್ಲಿ 10 ದಿನಗಳ ಕಾಲ ಪೊಲೀಸ್ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಅಪರಾಧ ಕೃತ್ಯದ ಬಗ್ಗೆ ಸತ್ಯ ಬಾಯಿಬಿಟ್ಟಿದ್ದಾನೆ.
Today, the Commissioner of Police, Bengaluru briefed the press on a job scam and a gold theft case. Please find the full video of the press conference: https://t.co/6zyTHvOLmQ
1. The Halasuru Gate Police station have arrested an accused who deceived over 200 job seekers, posing… pic.twitter.com/D1EIeSjTGn
— ಬೆಂಗಳೂರು ನಗರ ಪೊಲೀಸ್ BengaluruCityPolice (@BlrCityPolice) October 11, 2023
ಈ ಸುದ್ದಿ ಓದಿದ್ದೀರಾ? ಬಿಬಿಎಂಪಿಯಲ್ಲಿ ಮಾರ್ಷಲ್ ನೌಕರಿ ಕೊಡಿಸುವುದಾಗಿ ವಂಚಿಸಿದ್ದ ಆರೋಪಿಯ ಬಂಧನ
ಬಳಿಕ, ಕದ್ದ ಚಿನ್ನಾಭರಣಗಳನ್ನು ರಾಜಸ್ಥಾನಕ್ಕೆ ತನ್ನ ಸಹಚರರ ಮೂಲಕ ಕಳುಹಿಸಿರುವುದಾಗಿ ಒಪ್ಪಿಕೊಂಡಿದ್ದಾನೆ. ಈ ಸಂಬಂಧ ಸಹಚರ ರಾಜ್ ಆಲಿಯಾಸ್ ರಾಜಪಾಲ್ ವಶಕ್ಕೆ ಪಡೆದು ₹75 ಲಕ್ಷ ಮೌಲ್ಯದ 1.262 ಕೆ.ಜಿ.ಚಿನ್ನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.