ಪ್ರಸಿದ್ಧ ಮೈಸೂರು ದಸರಾ ಉತ್ಸವಕ್ಕೆ ಪೂರ್ವಭಾವಿಯಾಗಿ ಜಂಬೂಸವಾರಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕುವ ಆನೆಗಳಿಗೆ ಕುಶಾಲುತೋಪು ತಾಲೀಮು ನಡೆಯಿತು.
ಮೈಸೂರು ಅರಮನೆಯ ಮುಂಭಾಗದ ವಸ್ತು ಪ್ರದರ್ಶನ ಮೈದಾನದ ಆವರಣದಲ್ಲಿ ಕುಶಾಲತೋಪು ಸಿಡಿಸುವ ಮೊದಲ ತಾಲೀಮು ನಡೆಯಿತು. ಮೈಸೂರು ದಸರಾದ ಜಂಬೂಸವಾರಿ ಮೆರವಣಿಗೆ ವೇಳೆ ಕುಶಾಲತೋಪು ಸಿಡಿಸುವಾಗ ಆನೆಗಳು ಮತ್ತು ಅಶ್ವಗಳು ಬೆದರದಂತೆ ತಾಲೀಮು ನಡೆಯುತ್ತದೆ.
ಏಳು ಫಿರಂಗಿಗಳಿಂದ ಹೊರಹೊಮ್ಮಿದ ಸಿಡಿ ಮದ್ದಿನ ಶಬ್ದಕ್ಕೆ ಅಭಿಮನ್ಯು ನೇತೃತ್ವದ ಗಜಪಡೆ ಅಂಜದೆ ಅನುಭವಿ ವರ್ತನೆ ತೋರಿದವು. ಹಿರಣ್ಯ ಆನೆ ಮೊದಲ ಬಾರಿ, ಸುಗ್ರೀವ ಆನೆ ಎರಡನೇ ಬಾರಿಗೆ ದಸರಾ ಮೆರವಣಿಗೆಯಲ್ಲಿ ಭಾಗವಹಿಸುತ್ತಿದ್ದು, ಹೊಸ ಆನೆಗಳಾದ ಸುಗ್ರೀವ ಮತ್ತು ಹಿರಣ್ಯ ಕೆಲ ಹೊತ್ತು ಹಿಂದಡಿ ಇಟ್ಟಿದ್ದವು.
ನಗರ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ 7 ಫಿರಂಗಿ ಗಾಡಿಗಳನ್ನು ಬಳಸಿಕೊಂಡು ಒಟ್ಟು 21 ಬಾರಿ ಕುಶಾಲತೋಪು ಸಿಡಿಸಿ ಅಭ್ಯಾಸ ನಡೆಸಿದರು. ತಾಲೀಮಿನಲ್ಲಿ 43 ಕುದುರೆಗಳು, ಚಿನ್ನದ ಅಂಬಾರಿ ಹೊರಲಿರುವ ಅಭಿಮನ್ಯು ನೇತೃತ್ವದ 14 ಆನೆಗಳು, ಪೊಲೀಸ್ ಅಶ್ವಾರೋಹಿ ದಳ ಭಾಗಿಯಾಗಿದ್ದವು.
ಮುಂಜಾಗ್ರತಾ ಕ್ರಮವಾಗಿ ಅರ್ಜುನ, ಅಭಿಮನ್ಯು, ಮಹೇಂದ್ರ, ಭೀಮ ಹೊರತುಪಡಿಸಿ ಉಳಿದ ಎಲ್ಲ ಆನೆಗಳ ಕಾಲಿಗೆ ಸರಪಳಿ ಕಟ್ಟಲಾಗಿತ್ತು. ಎರಡನೇ ಸಾಲಿನಲ್ಲಿ ಸುಗ್ರೀವ, ರೋಹಿತ, ಪ್ರಶಾಂತ ಮತ್ತು ಹಿರಣ್ಯ ಆನೆಗಳಿದ್ದು, ಅವು ಬೆಚ್ಚಿಬಿದ್ದವು. ಮೊದಲ ಸುತ್ತಿನ ಸಿಡಿಮದ್ದು ಸ್ಫೋಟವಾಗುತ್ತಿದ್ದಂತೆ ಈ ಅನೆಗಳು ಚಡಪಡಿಸಲಾರಂಭಿಸಿದವು. ಸುಡುಮದ್ದು ಶಬ್ದಕ್ಕೆ ಬೆದರಿ ಘೀಳಿಟ್ಟವು. ಈ ಸಂದರ್ಭದಲ್ಲಿ ಮಾವುತರು ಆನೆಗಳನ್ನು ನಿಯಂತ್ರಿಸಿದ್ದು, ಬೆಚ್ಚಿದ ಕುದುರೆಗಳನ್ನು ಸವಾರರು ಹತೋಟಿಗೆ ತಂದರು.
ಫಿರಂಗಿ ನಳಿಕೆಯಿಂದ ಹೊರಹೊಮ್ಮುತ್ತಿದ್ದ ಬೃಹತ್ ಬೆಂಕಿಯುಂಡೆಗಳು, ಅವುಗಳ ಜೊತೆಗೆ ಆವರಿಸುತ್ತಿದ್ದ ದಟ್ಟ ಹೊಗೆಯನ್ನು ನೋಡುತ್ತ ಅಭಿಮನ್ಯು, ಅರ್ಜುನ, ಮಹೇಂದ್ರ ಹೆಸರಿನ ಅನುಭವಿ ಆನೆಗಳು ಧ್ಯಾನಸ್ಥ ಸ್ಥಿತಿಯಲ್ಲಿ ನಿಂತಿದ್ದವು.
ಈ ಸುದ್ದಿ ಓದಿದ್ದೀರಾ? ಮೈಸೂರು | ʼಮಹಿಷ ದಸರಾʼ ಮಾಡೇ ಮಾಡ್ತೇವೆ: ಪುರುಷೋತ್ತಮ್
“ಜಂಬೂಸವಾರಿಯಲ್ಲಿ ಭಾಗಿಯಾಗುವ ಆನೆಗಳಿಗೆ, ಕುದುರೆಗಳಿಗೆ ಬುಧವಾರದಂದು ಮೊದಲ ಹಂತದ ಸಿಡಿಮದ್ದು ತಾಲೀಮು ನೀಡಿದರು. ಒಂದೆರಡು ಆನೆಗಳನ್ನು ಬಿಟ್ಟರೆ ಉಳಿದ ಆನೆಗಳು ಸಿಡಿಮದ್ದು ತಾಲೀಮಿನ ವೇಳೆ ಅಂಜದೆ ನಿಂತಿದ್ದವು. ಆನೆಗಳು, ಕುದುರೆಗಳು ಬೆದರಬಾರದೆಂಬ ಉದ್ದೇಶದಿಂದಲೇ ಈ ತಾಲೀಮು. ಹಳೇ ಆನೆಗಳನ್ನು ಮುಂದಿನ ಸಾಲಿನಲ್ಲಿ ನಿಲ್ಲಿಸಿದ್ದೆವು. ಹೊಸ ಆನೆಗಳನ್ನು ಎರಡನೇ ಸಾಲಿನಲ್ಲಿ ನಿಲ್ಲಿಸಿದ್ದೆವು. ಎಲ್ಲ ಆನೆಗಳ ಆರೋಗ್ಯ ಚೆನ್ನಾಗಿದೆ. ಎಲ್ಲ ಹಂತದ ತಾಲೀಮನ್ನು ಯಶಸ್ವಿಯಾಗಿ ಮುಗಿಸುತ್ತಿವೆ. ಎರಡನೇ ಹಂತದ ಸಿಡಿಮದ್ದು ತಾಲೀಮು ಅಕ್ಟೋಬರ್ 13ರಂದು ನಡೆಯಲಿದೆ” ಎಂದು ಅರಣ್ಯಧಿಕಾರಿ ಸೌರಭ್ ಕುಮಾರ್ ತಿಳಿಸಿದ್ದಾರೆ.