ಇಸ್ರೇಲ್ ಹಾಗೂ ಹಮಾಸ್ ನಡುವೆ ನಡೆಯುತ್ತಿರುವ ಸಂಘರ್ಷವನ್ನು ನಿರಂತರವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಾರ ಮಾಡುತ್ತಿರುವ ‘ಅಲ್-ಜಝೀರಾ’ ಸುದ್ದಿ ವಾಹಿನಿಯ ಪ್ರಸಾರಕ್ಕೆ ತಡೆ ನೀಡಲು ಇಸ್ರೇಲ್ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ. ಆದರೆ ಈ ತೀರ್ಮಾನದ ಬಗ್ಗೆ ಇಸ್ರೇಲ್ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.
ಅಲ್-ಜಝೀರಾ ಸಹಿತ ಗಾಝಾದ ಅಮಾಯಕ ಜನರ ಮೇಲೆ ಇಸ್ರೇಲ್ ಸುರಿಸುತ್ತಿರುವ ಬಾಂಬ್‌ಗಳ ವಿರುದ್ಧವಾಗಿ ಮಾತನಾಡುತ್ತಿರುವ ಸ್ಥಳೀಯ ಕೆಲವು ಚಾನೆಲ್‌ಗಳ ಪ್ರಸಾರಕ್ಕೂ ತಡೆ ನೀಡಲು ಇಸ್ರೇಲಿನ ಮಾಧ್ಯಮ ಮತ್ತು ಪ್ರಸಾರ ಸಚಿವ ಶ್ಲೋಮೋ ಕರ್ಹಿ ಚಿಂತನೆ ನಡೆಸಿರುವುದಾಗಿ ಇಸ್ರೇಲ್‌ನ ಸ್ಥಳೀಯ ಸುದ್ದಿ ಮೂಲಗಳನ್ನು ಮಾಹಿತಿಗಳನ್ನು ಉಲ್ಲೇಖಿಸಿ ‘ ಮಿಡ್ಲ್ ಈಸ್ಟ್ ಐ’ ವರದಿ ಮಾಡಿದೆ.
ಈ ಬಗ್ಗೆ ಚರ್ಚೆ ನಡೆಸಲು ಬುಧವಾರ ಸಂಜೆ ಮಾಧ್ಯಮ ಮತ್ತು ಪ್ರಸಾರ ಸಚಿವ ಶ್ಲೋಮೋ ಕರ್ಹಿ ತುರ್ತು ಕ್ಯಾಬಿನೆಟ್ ಸಭೆಯನ್ನು ಕರೆದಿದ್ದಾರೆ. ಅಲ್ಲದೇ, ಯುದ್ಧ ಮುಗಿಯುವವರೆಗೆ ಅಲ್ ಜಝೀರಾ ಪ್ರಸಾರವನ್ನು ನಿಷೇಧಿಸುವ ತುರ್ತು ಕಾನೂನನ್ನು ಸಿದ್ಧಪಡಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
🇵🇸🇮🇱 Israeli cabinet to discuss emergency regulations to terminate Al Jazeera news coverage from Israel. pic.twitter.com/ritsZhZzCD
— Censored Men (@CensoredMen) October 11, 2023
ಕತಾರ್ ಮೂಲದ ಅಂತಾರಾಷ್ಟ್ರೀಯ ಸುದ್ದಿ ವಾಹಿನಿ ಅಲ್ ಜಝೀರಾ ವಿಶ್ವದ ಹಲವು ದೇಶಗಳಲ್ಲಿ ಕಾರ್ಯಾಚರಿಸುತ್ತಿದೆ. ಇದರ ಸಂಪೂರ್ಣ ಜವಾಬ್ದಾರಿಯನ್ನು ಶ್ರೀಮಂತ ರಾಷ್ಟ್ರವಾದ ಕತಾರ್ ಸರ್ಕಾರವೇ ಹೊತ್ತುಕೊಂಡಿದೆ. ಪ್ಯಾಲೆಸ್ತೀನ್ ಜನರ ಪರ ಧ್ವನಿ ಎತ್ತುತ್ತಿರುವ ಮಾಧ್ಯಮವಾಗಿ ಗುರುತಿಸಿಕೊಂಡಿರುವುದರಿಂದ ‘ಅಲ್-ಜಝೀರಾ’ ಇಸ್ರೇಲ್‌ನ ಕೆಂಗಣ್ಣಿಗೆ ಗುರಿಯಾಗಿದೆ ಎಂದು ಕೆಲವೊಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.
ಗಾಝಾಕ್ಕೆ ಸಂಪೂರ್ಣ ಮುತ್ತಿಗೆ ಹಾಕುವುದಾಗಿ ಘೋಷಿಸಿದ ಬಳಿಕ ಗಾಝಾದಲ್ಲಿ ಭೂ ಕಾರ್ಯಾಚರಣೆ ನಡೆಸುವ ಸುಳಿವು ನೀಡಿರುವ ಇಸ್ರೇಲ್, ಅಮಾಯಕ ಜನರ ಮಾರಣ ಹೋಮಕ್ಕೆ ಮುಂದಾಗಿದೆ. ಅದು ವಿಶ್ವಕ್ಕೆ ತಿಳಿಯಬಾರದು ಎಂಬ ಕಾರಣಕ್ಕಾಗಿ ಅದು ಅಲ್-ಜಝೀರಾ ಪ್ರಸಾರ ತಡೆಗೆ ಮುಂದಾಗಿದೆ ಎಂದು ಹಲವು ನೆಟ್ಟಿಗರು ಆರೋಪಿಸಿದ್ದಾರೆ.
🚨BREAKING: The Communications Minister of Israel, Karai, prepared emergency regulations to approve the closure of Al Jazeera’s coverage in Israel – the cabinet will discuss the issue. pic.twitter.com/KdLcH3OQ5E
— Mario Nawfal (@MarioNawfal) October 11, 2023
2022ರ ಮೇನಲ್ಲಿ ಅಲ್-ಜಝೀರಾ ಪತ್ರಕರ್ತೆ ಶಿರೀನ್ ಅಬು ಅಕ್ಲೆಹ್ ಹತ್ಯೆಯಲ್ಲಿ ಇಸ್ರೇಲ್ ಕೈವಾಡವಿರುವ ಆರೋಪ ಕೇಳಿಬಂದಿತ್ತು. ಆದರೆ ಈ ಆರೋಪವನ್ನು ಇಸ್ರೇಲ್ ಸೇನೆ ತಳ್ಳಿ ಹಾಕಿತ್ತು. ಈ ಬಗ್ಗೆ ತನಿಖೆ ನಡೆಸಿದ್ದ ಕೆಲವೊಂದು ಸ್ವತಂತ್ರ ಸಂಸ್ಥೆಗಳು, ‘ಇಸ್ರೇಲ್ ಸುಳ್ಳು ಹೇಳಿವೆ, ಪತ್ರಕರ್ತೆಯ ಹತ್ಯೆಯಲ್ಲಿ ಪಾತ್ರವಿತ್ತು’ ಎಂದು ಸಾಬೀತುಪಡಿಸಿದ್ದವು.
ಅಲ್-ಜಝೀರಾ ಪತ್ರಕರ್ತೆ ಶಿರೀನ್ ಅಬು ಅಕ್ಲೆಹ್
ಕಳೆದ ಶನಿವಾರ ಬೆಳಗ್ಗೆ ಹಮಾಸ್, ಇಸ್ರೇಲ್ ಮೇಲೆ ರಾಕೆಟ್ ದಾಳಿ ನಡೆಸಿದ ಬಳಿಕ ಇಸ್ರೇಲ್ ಯುದ್ಧ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಗಾಝಾಪಟ್ಟಿಗೆ ಪ್ರವೇಶಿಸುವುದಕ್ಕೆ ಹಾಗೂ ತೊರೆಯುವುದಕ್ಕೆ ನಿರ್ಬಂಧ ವಿಧಿಸಿದೆ. ಗಾಝಾಕ್ಕೆ ಸಂಪೂರ್ಣ ಮುತ್ತಿಗೆ ಹಾಕುವುದಾಗಿ ಘೋಷಿಸಿದ ಬಳಿಕ, ನೀರು, ವಿದ್ಯುತ್ ಮತ್ತು ಆಹಾರವನ್ನು ಕಡಿತಗೊಳಿಸಿ, ಅಂತಾರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿದೆ.