ತನ್ನ ಇಬ್ಬರು ಮಕ್ಕಳು ತಮ್ಮಿಷ್ಟದ ಯುವಕರನ್ನು ಪ್ರೀತಿಸಿದ್ದಕ್ಕೆ, ತನ್ನ ಮರ್ಯಾದೆ ಹೋಗುತ್ತದೆಂದು ಹಿರಿ ಮಗಳನ್ನು ತಂದೆಯೊಬ್ಬ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಬಿದಲೂರು ಗ್ರಾಮದಲ್ಲಿ ನಡೆದಿದೆ.
ಕವನಾ (20) ಹತ್ಯೆಯಾದ ಯುವತಿ. ಆರೋಪಿ ಮಂಜುನಾಥ್(47) ಮಗಳನ್ನೇ ಹತ್ಯೆಗೈದ ತಂದೆ. ಹಿರಿ ಮಗಳು ಪ್ರೀತಿ ಮಾಡುತ್ತಿದ್ದ ವಿಷಯ ತಿಳಿದು ಆಕ್ರೋಶಗೊಂಡಿದ್ದ ತಂದೆ, ಮಗಳನ್ನೇ ಕೊಲೆ ಮಾಡಿ ವಿಶ್ವನಾಥಪುರ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಈತ ಕೋಳಿ ಅಂಗಡಿ ಇಟ್ಟುಕೊಂಡಿದ್ದನು.
ಆರೋಪಿ ಮಂಜುನಾಥ್‌ನ ಕಿರಿಯ ಮಗಳು ಪ್ರೀತಿ ಮಾಡಿ, ಪ್ರಿಯಕರನ ಜತೆಗೆ ಹೋಗುತ್ತೇನೆ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಳು. ಈ ವೇಳೆ, ಪ್ರೀತಿಸಿದವನ ಜತೆಗೆ ಹೋಗುವುದಾಗಿ ಪಟ್ಟು ಹಿಡಿದಿದ್ದ ಆಕೆಯನ್ನು ಪೊಲೀಸರು ಸಾಂತ್ವನ ಕೇಂದ್ರಕ್ಕೆ ಕಳುಹಿಸಿದ್ದರು.
ಈ ಘಟನೆ ಬಳಿಕ ಹಿರಿಯ ಮಗಳು ಕೂಡ ಅನ್ಯಜಾತಿಯ ಯುವಕನನ್ನು ಪ್ರೀತಿಸುತ್ತಿರುವ ವಿಚಾರ ತಿಳಿದ ತಂದೆ ಚಿಕ್ಕ ಮಗಳು ಮರ್ಯಾದೆ ಕಳೆದಳು, ಈಗ ನೀನು ಕಳೆಯುತ್ತಿರುವೆಯಾ ಎಂದು ಹಿರಿಯ ಮಗಳ ಜತೆಗೆ ಜಗಳವಾಡಿದ್ದಾನೆ. ನಂತರ ರಾತ್ರಿ ವೇಳೆ ನಿದ್ದೆಗೆ ಜಾರಿದ್ದ ಮಗಳು ಕವನಾಳ ಕತ್ತನ್ನು ಕೋಳಿ ಕೊಯ್ಯುವ ಚಾಕುವಿನಿಂದಲೇ ಕೊಯ್ದು ಕೊಲೆ ಮಾಡಿದ್ದಾನೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಅ.12 ರಿಂದ ಸತತ ನಾಲ್ಕು ದಿನ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ; ಎಲ್ಲೆಲ್ಲಿ? ಇಲ್ಲಿದೆ ನೋಡಿ
ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ, ಆರೋಪಿಯನ್ನು ಬಂಧಿಸಿದ್ದಾರೆ.