ಮೇಲಾಧಿಕಾರಿ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಗುತ್ತಿಗೆ ನೌಕರನೊಬ್ಬ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮೈಸೂರು ಜಿಲ್ಲೆಯ ಎಚ್.ಡಿ ಕೋಟೆ ತಾಲೂಕಿನಲ್ಲಿ ನಡೆದಿದೆ.
ಮೂಲತಃ ಹುಣಸೂರು ತಾಲೂಕಿನ ಸಿಂಗರ ಮಾರನಹಳ್ಳಿಯ ವಿನೋದ್ (24) ಆತ್ಮಹತ್ಯೆಗೆ ಯತ್ನಿಸಿರುವ ಗುತ್ತಿಗೆ ನೌಕರ. ಆತನನ್ನು ಮೇಲಾಧಿಕಾರಿಗಳು ನಿಂದಿಸಿದ್ದರಿಂದ ಮನವೊಂದು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ.
ಎಚ್.ಡಿ ಕೋಟೆ ಹ್ಯಾಂಡ್ ಪೋಸ್ಟ್‌ನಲ್ಲಿರುವ ಅರಣ್ಯ ಇಲಾಖೆಯ ವಸತಿ ಗೃಹದಲ್ಲಿ ಆತ ಆತ್ಮಹತ್ಯೆಗೆ ಯತ್ನಿಸಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೈಸೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಡಿಆರ್‌ಎಫ್ಒ ನವೀನ್ ಎಂಬವರು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಆರೋಪ ಸಂಬಂಧ ಪ್ರಕ್ರಿಯಿಸಿರುವ ನವೀನ್, “ನಾನು ವಿನೋದ್ ಮೇಲೆ ಹಲ್ಲೆಯನ್ನಾಗಿಲೀ, ಕಿರುಕುಳವನ್ನಾಗಲೀ ಮಾಡಿಲ್ಲ. ಇಲಾಖೆಯ ಜೀಪ್ ಟೈರ್ ಪಂಚರ್ ಆಗಿತ್ತು. ನೀವೇ ಪಂಚರ್ ಹಾಕಿಸಬೇಕೆಂದು ವಿನೋದ್‌ಗೆ ಸುಮ್ಮನೆ ಗದರಿದ್ದೆ. ಅಷ್ಟೇ ವಿನೋದ್ ನನ್ನ ವಿರುದ್ಧ ದೂರು ನೀಡಲು ಕಚೇರಿಗೆ ತೆರಳಿದ್ದರು. ಕಚೇರಿಯಲ್ಲಿ ಏನಾಗಿದೆಯೋ ಗೊತ್ತಿಲ್ಲ” ಎಂದು ಹೇಳಿದ್ದಾರೆ.
“ಕಚೇರಿಯಿಂದ ವಿನೋದ್ ವಸತಿಗೃಹಕ್ಕೆ ಬಂದಿದ್ದಾರೆ. ಆ ಸಮಯದಲ್ಲಿ ನಾವು ಕಾಫಿ ಕುಡಿಯಲು ಹೋಗಿದ್ದೆ. ಬರುವಷ್ಟರಲ್ಲಿ ವಿಷ ಸೇವಿಸಿದ್ದಾನೆ. ನಾನು ಅವರ ಮೇಲೆ ಹಲ್ಲೆ ಮಾಡಿಲ್ಲ. ನಮಗೆ ಹಲ್ಲೆ ಮಾಡುವ ಯಾವುದೇ ಹಕ್ಕಿಲ್ಲ” ಎಂದು ಹೇಳಿದ್ದಾರೆ.