ರಾಜ್ಯದಲ್ಲಿ ಒಟ್ಟು ಮೂರು ಸಾವಿರ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ನಿರ್ಮಿಸಲು ಸರ್ಕಾರ ತೀರ್ಮಾನಿಸಿದೆ. ಈ ವರ್ಷ 500ರಿಂದ 600 ಶಾಲೆಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ. ಈ ಶಾಲೆಗಳಲ್ಲಿ ಮೂಲಸೌಕರ್ಯಗಳು ಸೇರಿದಂತೆ ಎಲ್ಲ ರೀತಿಯ ಸೌಲಭ್ಯಗಳು ಇರಲಿವೆ. ಇದರಿಂದ ಮಕ್ಕಳಿಗೆ ಅನುಕೂಲವಾಗಲಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
‘ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳನ್ನು ಬಿಟ್ಟು ಅನುದಾನಿತ ಮತ್ತು ಖಾಸಗಿ ಶಾಲೆಗಳಿಗೆ ಹೋಗಿ ಸೇರಿದರೆ, ನಮ್ಮ ಶಾಲೆಗಳ ಗುಣಮಟ್ಟ ಸರಿ ಇಲ್ಲ ಎಂದೇ ಅರ್ಥ. ಇದನ್ನು ಸರಿಪಡಿಸಲು ಸರ್ಕಾರ ಮುಂದಾಗಿದೆ’ ಎಂದು ಮಧು ಬಂಗಾರಪ್ಪ ಬೆಂಗಳೂರಿನಲ್ಲಿ ಮಾತನಾಡುತ್ತಾ ತಿಳಿಸಿದ್ದಾರೆ.
ನಮ್ಮ ಸರ್ಕಾರಿ ಶಾಲೆಗಳ ಗುಣಮಟ್ಟ ಸರಿಯಿದ್ದರೆ ವಿದ್ಯಾರ್ಥಿಗಳ ಸಂಖ್ಯೆ ಏರಿಕೆಯಾಗುತ್ತದೆ. ಈ ನಿಟ್ಟಿನಲ್ಲಿ ಮೂಲಸೌಕರ್ಯಗಳು ಸೇರಿದಂತೆ ಎಲ್ಲ ರೀತಿಯ ಸೌಲಭ್ಯಗಳಿರುವ 3 ಸಾವಿರ ಶಾಲೆಗಳನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ.#GovernmentSchools pic.twitter.com/4kApLYIHoe
— DIPR Karnataka (@KarnatakaVarthe) October 12, 2023
ಸರ್ಕಾರಿ ಶಾಲೆಗಳ ಸುಮಾರು 53 ಸಾವಿರ ವಿದ್ಯಾರ್ಥಿಗಳು ಕಳೆದ ಐದು ವರ್ಷಗಳಲ್ಲಿ ಅನುದಾನಿತ ಶಾಲೆಗಳಿಗೆ ಮತ್ತು ಖಾಸಗಿ ಶಾಲೆಗಳಿಗೆ ಸೇರಿದ್ದಾರೆ ಎಂಬ ವರದಿಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ನ್ಯಾಯಾಲಯದ ತೀರ್ಪು ಹೊರಬಂದ ನಂತರ 13,500 ಶಿಕ್ಷಕರಿಗೆ ನೇಮಕಾತಿ ಆದೇಶ ಪತ್ರ ನೀಡಲಾಗುವುದು. ನ್ಯಾಯಾಲಯ ಇನ್ನು ಒಂದು ತಿಂಗಳಲ್ಲಿ ನೇಮಕಾತಿ ಆದೇಶ ಪತ್ರ ನೀಡಲು ಅನುಮತಿ ನೀಡಬಹುದು ಎಂದು ಇದೇ ವೇಳೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ರಾಜ್ಯದ ಸರ್ಕಾರಿ ಶಾಲೆಗಳಿಗೆ ಒಟ್ಟು 53 ಸಾವಿರ ಶಿಕ್ಷಕರ ಅಗತ್ಯ ಇದೆ. 20 ಸಾವಿರ ಶಿಕ್ಷಕರು ಸೇರ್ಪಡೆಯಾದರೆ ಈಗಿರುವ ಶಿಕ್ಷಕರ ಮೇಲಿನ ಒತ್ತಡ ಕಡಿಮೆ ಆಗಲಿದೆ. ಇನ್ನೂ 20 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ಸಂಬಂಧ ಮುಖ್ಯಮಂತ್ರಿಯವರಿಗೆ ಪ್ರಸ್ತಾವ ಸಲ್ಲಿಸಲು ಉದ್ದೇಶಿಸಲಾಗಿದೆ. ಇದಕ್ಕೆ ಒಪ್ಪಿಗೆ ನೀಡಿದರೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಈ ನೇಮಕಾತಿಯೂ ಪೂರ್ಣಗೊಳ್ಳಲಿದೆ ಎಂದು ಇದೇ ವೇಳೆ ತಿಳಿಸಿದರು.