ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ ಮುಸ್ಲಿಂ ಸಮುಧಾಯಕ್ಕೆ ಕಾಂಗ್ರೆಸ್ ನೀಡಿದ್ದ ಯಾವುದೇ ಭರವಸೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈಡೇರಿಸಿಲ್ಲ. ಅವರು ಸಮುದಾಯಕ್ಕೆ ವಂಚನೆ ಮಾಡಿದ್ದಾರೆ. ಇಬ್ಬರೂ ನುಡಿದಂತೆ ನಡೆದಿಲ್ಲ ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಆರೋಪಿಸಿದರು.
ಕಾಂತರಾಜು ವರದಿ ಜಾರಿ ಮಾಡಬೇಕು. ಮುಸ್ಲಿಂ ಸಮುದಾಯಕ್ಕೆ 2ಬಿ ಮೀಸಲಾತಿಯನ್ನು ಶೇ.8ಕ್ಕೆ ಹೆಚ್ಚಿಸಬೇಕೆಂದು ಒತ್ತಾಯಿಸಿ ಮೈಸೂರಿನಲ್ಲಿ ಎಸ್‌ಡಿಪಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
“ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರಲು ಮುಸ್ಲಿಂ ಮತ್ತು ದಲಿತ ಸಮುದಾಯ ಪ್ರಮುಖ ಕಾರಣವಾಗಿದೆ. ಚುನಾವಣೆ ವೇಳೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದ ಮೊದಲ ಕ್ಯಾಬಿನೆಟ್ನಲ್ಲೇ ಬಿಜೆಪಿ ರದ್ದುಪಡಿಸಿದ್ದ 2ಬಿ ಮೀಸಲಾತಿ ಪುನರ್ ಪ್ರತಿಷ್ಠಾಪನೆ ಮಾಡುವುದಾಗಿ ಹೇಳಿದ್ದರು. ಈಗ 10 ಕ್ಯಾಬಿನೆಟ್ ಮೀಟಿಂಗ್‌ಗಳು ನಡೆದರೂ ಅದರ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಕೇಳಿದರೆ ಪ್ರಕರಣ ನ್ಯಾಯಾಲಯದಲ್ಲಿದೆ ಎನ್ನುತ್ತೀರಿ. ಆದರೇ, ಮತಾಂತರ ನಿಷೇದ ಕಾಯ್ದೆ ಪ್ರಕರಣವೂ ನ್ಯಾಯಾಲಯದಲ್ಲಿತ್ತು. ಅದನ್ನು ಸಂಪುಟ ಸಭೆಗೆ ತಂದು ಕಾಯ್ದೆ ರದ್ದು ಮಾಡಿದ್ದು ಹೇಗೆ? ಅದೇ ರೀತಿ ಇದನ್ನೂ ಮಾಡಬೇಕು” ಎಂದು ಒತ್ತಾಯಿಸಿದರು.
“ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯಕ್ಕೆ 30 ವರ್ಷಗಳಿಂದ ನೀಡಲಾಗಿದ್ದ 2ಬಿ ಮೀಸಲಾತಿ ಪುನರ್ ಪ್ರತಿಷ್ಠಾಪಿಸುವಂತೆ ಕಾಂಗ್ರೆಸ್ ಸರ್ಕಾರದಲ್ಲಿರುವ ಇಬ್ಬರು ಮುಸ್ಲಿಂ ಮಂತ್ರಿಗಳು ಸೇರಿದಂತೆ 9 ಶಾಸಕರಿಗೆ ಕೇಳುವ ಧೈರ್ಯ ಇಲ್ಲದಿರುವುದು ನಾಚಿಕೆಗೇಡು. ಅವರೆಲ್ಲರೂ ನಾಮರ್ಧರು ಎಂದು” ಕಿಡಿಕಾರಿದರು.
“ಕಳೆದ ಬಾರಿ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದಾಗ ಕಾಂತರಾಜು ವರದಿ ಅಂಗೀಕರಿಸದೆ, ಸಮ್ಮಿಶ್ರ ಸರ್ಕಾರದ ಸಿಎಂ ಕುಮಾರಸ್ವಾಮಿ ವರದಿ ಅಂಗೀಕರಿಸಲಿಲ್ಲ ಎಂದು ಆರೋಪಿಸುವ ಸಿಎಂ, ಆ ವೇಳೆ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದರು. ಯಾವ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಮಾಡಲಾಗಿತ್ತು ಎಂದು ಬಹಿರಂಗ ಮಾಡಲಿ. ಹೆಚ್ಡಿಕೆ ಸಿದ್ದರಾಮಯ್ಯ ಮೇಲೆ, ಸಿದ್ದರಾಮಯ್ಯ ಹೆಚ್ಡಿಕೆ ಮೇಲೆ ಆರೋಪ ಮಾಡುತ್ತಾ ಮುಸ್ಲಿಂ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದ್ದಾರೆ. ನಿಮಗೆ ದಮ್ಮು, ತಾಕತ್ತು ಇದ್ದರೆ ಕಾಂತರಾಜು ವರದಿ ಅಂಗೀಕರಿಸಿ ಅದಕ್ಕೆ ಅನುಗುಣವಾಗಿ ದಲಿತರು, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ಸಮುದಾಯಕ್ಕೆ ಸೂಕ್ತ ಸೌಲಭ್ಯ ಕಲ್ಪಿಸಿ” ಎಂದು ಅಬ್ದುಲ್ ಮಜೀದ್ ಸವಾಲು ಹಾಕಿದರು.
“ಒಂದು ವೇಳೆ ಕಾಂತರಾಜು ವರದಿ ಅಂಗೀಕರಿಸಿ ಸಮುದಾಯಗಳಿಗೆ ಅನುಕೂಲ ಮಾಡಿದ್ದಲ್ಲಿ ಮುಸ್ಲಿಂ ತುಷ್ಠೀಕರಣ ಎಂದು ಬಿಜೆಪಿ ಐಟಿ ಸೆಲ್ ಗುಲ್ಲೆಬ್ಬಿಸುತ್ತದೆ ಎಂಬ ಭಯ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರಿಗೆ ಕಾಡುತ್ತಿದೆ. ಆದರೇ, ಜನ ಜಾಗೃತರಾಗಿದ್ದಾರೆ. ಕಳೆದ ಬಾರಿ ಕೋಮುವಾದಿ ಸರ್ಕಾರದಿಂದ ತೀವ್ರ ಅನ್ಯಾಯಕ್ಕೆಒಳಗಾಗಿದ್ದ ಮುಸ್ಲಿಂ ಮತ್ತು ದಲಿತ ಸಮುದಾಯ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿತ್ತು. ಮುಂದಿನ ಚುನಾವಣೆಯಲ್ಲಿ ನೀವು ಈ ಸಮುದಾಯಗಳ ಆಶೋತ್ತರಗಳನ್ನು ಈಡೇರಿಸದಿದ್ದಲ್ಲಿ ನಿಮಗೆ ತಕ್ಕ ಪಾಠ ಕಲಿಸುತ್ತಾರೆ ಎಂಬುದು ನೆನಪಿರಲಿ” ಎಂದು ಎಚ್ಚರಿಕೆ ನೀಡಿದರು.
“ಬಿಹಾರದಲ್ಲಿ ಜಾತಿ ಗಣತಿ ವರದಿ ಪ್ರಕಟವಾಗಿದೆ. ಕಾಂಗ್ರೆಸ್ ಕೂಡ ತಾನು ಆಡಳಿತದಲ್ಲಿರುವ ರಾಜ್ಯಗಳಲ್ಲಿ ಜಾತಿ ಗಣತಿ ಮಾಡಿಸುವುದಾಗಿ ಹೇಳಿದೆ. ಆದರೇ ರಾಜ್ಯದಲ್ಲಿ ಈಗಾಗಲೇ ವರದಿ ತಯಾರಾಗಿದೆ. ಇದನ್ನು ಅಂಗೀಕರಿಸಿ ತುಳಿತಕ್ಕೆ ಒಳಗಾದ ಸಮುದಾಯದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಬೇಕು. ಅಲ್ಲಿಯ ತನಕವೂ ಎಸ್ಡಿಪಿಐ ರಾಜ್ಯವ್ಯಾಪಿ ಜನ ಜಾಗೃತಿ ಮೂಡಿಸಿ ಹೋರಾಟ ನಡೆಸುತ್ತದೆ” ಎಂದು ಮಜೀದ್ ಹೇಳಿದರು.
ಪ್ರತಿಭಟನೆಯಲ್ಲಿ ದೇವನೂರು ಪುಟ್ಟನಂಜಯ್ಯ, ಹರಿಹರ ಆನಂದಸ್ವಾಮಿ, ಮೌಲಾನ ನೂರುದ್ದೀನ್, ರಫತ್ ಖಾನ್,ತನ್ವೀರ್ ಪಾಷ, ಅಲ್ತಾಫ್ ಅಹಮದ್, ಸ್ವಾಮಿ ಮುಂತಾದವರು ಇದ್ದರು.