ದಸರಾ ಉತ್ಸವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸುವ ಸಂಗೀತ ಕಾರ್ಯಕ್ರಮಗಳಲ್ಲಿ ಕರೋಕೆಯನ್ನು ನಿಷೇಧಿಸಬೇಕು ಎಂದು ಮೈಸೂರು ಆರ್ಟಿಸ್ಟ್ ಅಸೋಸಿಯೇಷನ್ ಹಾಗೂ ನಗರದ ಎಲ್ಲ ಕಲಾ ಬಳಗಗಳ ಒಕ್ಕೂಟದ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಮೈಸೂರು ಆರ್ಟಿಸ್ಟ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಗುರುದತ್ ಮಾತನಾಡಿ, “ಮೈಸೂರು ದಸರಾ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದ್ದು, ಈ ದಸರಾ ಸಂದರ್ಭದಲ್ಲಿ ಅನೇಕ ವೇದಿಕೆಗಳಲ್ಲಿ ಕರೋಕೆಯನ್ನು ಬಳಸುತ್ತಿದ್ದಾರೆ. ಯುವ ದಸರಾ ಯುವ ಸಂಭ್ರಮ ಅರಮನೆ ವೇದಿಕೆ ಮತ್ತು ಇತರ ಮುಖ್ಯ ವೇದಿಕೆಗಳಲ್ಲಿಯೇ ಕರೋಕೆ ಬಳಸುತ್ತಿರುವುದು ಖಂಡನೀಯವಾಗಿದೆ. ಈ ಕರೋಕೆ ಬಳಕೆಯಿಂದ ಮೈಸೂರಿನ ಪಾರಂಪರಿಕ ಇತಿಹಾಸವನ್ನು ಹಾಳುಮಾಡುತ್ತಿದೆ” ಎಂದರು.
“ಸಾಂಸ್ಕೃತಿಕ ನಗರ ಮೈಸೂರಿಗೆ ಹಾಗೂ ನಾಡಹಬ್ಬ ದಸರಾಕ್ಕೆ ಮಾಡುವ ಅತಿ ದೊಡ್ಡ ಅನ್ಯಾಯವಾಗಿದು, ಕಳಂಕ ತಂದೊಡ್ಡಿದೆ. ಇದರೊಂದಿಗೆ ನೈಜ ಕಲಾವಿದರಿಗೆ ಅನ್ಯಾಯ ಮಾಡಿದಂತಾಗುತ್ತಿದೆ. ದಸರಾ ಕಾರ್ಯಕ್ರಮಗಳಲ್ಲಿ ಮೈಸೂರಿನ ಪ್ರತಿಭೆಗಳಿಗೆ ಹಾಗೂ ಕಲಾವಿದರಿಗೆ ಅವಕಾಶ ನೀಡದೇ ಇರುವುದು ಖಂಡನೀಯ” ಎಂದರು.
ಅಧ್ಯಕ್ಷ ರಘುನಾಥ್ ಮಾತನಾಡಿ, “ನೂರಾರು ವರ್ಷಗಳಿಂದ ನಡೆಯುತ್ತಾ ಬಂದಿರುವ ದಸರಾ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರಿಗೆ ಅವಕಾಶ ನೀಡದೆ ಇರುವುದು ಮೈಸೂರಿನ ಕಲಾವಿದರಿಗೆ ಮಾಡುತ್ತಿರುವ ಅತಿ ದೊಡ್ಡ ಅನ್ಯಾಯವಾಗಿದೆ. ಮೈಸೂರಿನ ಉನ್ನತ ವೇದಿಕೆಗಳಲ್ಲಿ ಕರೋಕೆ ಬಳಸಿ ಕಾರ್ಯಕ್ರಮ ಮಾಡುತ್ತಿರುವುದು, ಕರೋಕೆ ಬಳಸಲು ಅವಕಾಶ ನೀಡುತ್ತಿರುವುದು ಎಷ್ಟರಮಟ್ಟಿಗೆ ಸರಿ” ಎಂದು ಪ್ರಶ್ನಿಸಿದರು.
ಸರ್ಕಾರದ ವತಿಯಿಂದಲೇ ಕರೋಕೆಯನ್ನು ರದ್ದು ಮಾಡಬೇಕಾಗಿದೆ. ದಸರಾ ಕಾರ್ಯಕ್ರಮಗಳನ್ನು ಈವೆಂಟ್ ಮ್ಯಾನೇಜ್‌ಮೆಂಟ್‌ಗೆ ವಹಿಸುತ್ತಿರುವುದು ತಪ್ಪು. ಇದರಿಂದ ಎಲ್ಲ ಕಲಾವಿದರಿಗೆ ಹಾಗೂ ಮೈಸೂರಿನ ಧ್ವನಿವರ್ಧಕದವರಿಗೆ, ವೇದಿಕೆ ಸಿದ್ಧಪಡಿಸುವವರಿಗೆ ಹಾಗೂ ಅನೇಕ ಜನರಿಗೆ ಇದು ಮಾರಕವಾಗಿದ್ದು, ಅನ್ಯಾಯವಾಗುತ್ತಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಮಹಾರಾಜ ಕಾಲೇಜಿನಲ್ಲಿ ತರಗತಿಗಳು ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿಲ್ಲ; ಎಐಡಿಎಸ್‌ಒ ಆರೋಪ
ದಸರಾ ಸಂಗೀತ ಕಾರ್ಯಕ್ರಮದಲ್ಲಿ ಹಾಗೂ ಸಂಸ್ಕೃತಿ ಇಲಾಖೆ ನಡೆಸುವ ಸಂಗೀತ ಕಾರ್ಯಕ್ರಮದಲ್ಲಿ ಕರೋಕೆಯನ್ನು ನಿಷೇಧಿಸಿ ಎಂದು ಮೈಸೂರಿನ ಎಲ್ಲ ಕಲಾ ಬಳಗದ ಒಕ್ಕೂಟದ ಎಲ್ಲ ಕಲಾವಿದರೂ ಕೂಡ ಒಮ್ಮತದಿಂದ ಕೂಗಿದರು.
ಈ ವೇಳೆ ರಘುನಾಥ್, ಗುರುದತ್, ಷಣ್ಮುಗ ಸಜ್ಜಾ, ರೋಶನ್ ಸೂರ್ಯ, ರಾಜೇಶ್ ಪಡಿಯಾರ್, ರವಿಕಿರಣ್, ಬಾಲಣ್ಣ, ಸೌಭಾಗ್ಯ ಪ್ರಭು, ವಿನ್ಸೆಂಟ್, ಪ್ರದೀಪ್ ಗಾಂಧಿನಗರ, ಪ್ರದೀಲ್ ಕಿಗ್ಗಾಲ್, ರಾಮಚಂದ್ರು, ಸಂತೋಷ್, ಜಗದೀಶ್, ನಾಗಲಿಂಗೇಶ್, ಪೃಥ್ವಿ, ರವಿಕುಮಾರ್ ಸಾಕ್ಸೊಪೋನ, ಬಾಬು ಸೇರಿದಂತೆ ಇತರರು ಇದ್ದರು.