ಪ್ರಚೋದನಾಕಾರಿ ತಪ್ಪು ಸಂದೇಶಗಳನ್ನು ಹರಡುವ ಮೂಲಕ ಮುಸ್ಲಿಂ ಸಮುದಾಯದ ಕುರಿತು ದ್ವೇಷ ಮತ್ತು ಸೌಹಾರ್ದತೆಗೆ ಧಕ್ಕೆ ತರುವ ಆರೋಪಕ್ಕೆ ಸಂಬಂಧಿಸಿದಂತೆ ಹಿಂದುತ್ವ ಕೋಮುವಾದಿ, ಪೋಸ್ಟ್ ಕಾರ್ಡ್ ಸಂಪಾದಕ ಮಹೇಶ್ ಹೆಗಡೆ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಹಿಂಪಡೆಯಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ.
2017ರಲ್ಲಿ ಮಹೇಶ್ ಹೆಗಡೆ ಮತ್ತು ವಿವೇಕ ಶೆಟ್ಟಿ ಎಂಬಾತನ ವಿರುದ್ಧ ಕಾರವಾರದಲ್ಲಿ ಅಂದಿನ ತಹಶೀಲ್ದಾರ್ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿ, ನ್ಯಾಯಾಲಯಕ್ಕೆ ‘ಸಿ’ ರಿಪೋರ್ಟ್ ಸಲ್ಲಿಸಿದ್ದಾರೆ. ನ್ಯಾಯಾಲಯವು ವರದಿಯನ್ನು ಒಪ್ಪಿಕೊಂಡಿದೆ.
ಸಿ ರಿಪೋರ್ಟ್ ಆಧರಿಸಿ ಪ್ರಕರಣವನ್ನು ವಿಚಾರಣೆಯಿಂದ ಹಿಂಪಡೆದುಕೊಳ್ಳಲು ಯಾವುದೇ ಅಭ್ಯಂತರವಿಲ್ಲ ಎಂದು ಕಾರವಾರ ಪೊಲೀಸ್ ಇನ್ಸ್‌ಪೆಕ್ಟರ್ ಅಕ್ಟೋಬರ್ 1 ರಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
“ಪ್ರಕರಣ ಕುರಿತು ನಡೆಸಿದ ತನಿಖೆಯಿಂದ ಆರೋಪಿತರು ಪತ್ತೆಯಾಗದ ಕಾರಣ ಸದರಿ ಪ್ರಕರಣವನ್ನು ತುರ್ತು ನಾಪತ್ತೆ ಎಂದು ಪರಿಗಣಿಸಿ ಸಿಜೆಎಂ ನ್ಯಾಯಾಲಯಕ್ಕೆ 2021ರ ಏಪ್ರಿಲ್ 8ರಂದು ‘ಸಿ’ ಅಂತಿಮ ವರದಿಯನ್ನು ಸಲ್ಲಿಸಲಾಗಿತ್ತು. ವರದಿಯನ್ನು 2021ರ ಅಕ್ಟೋಬರ್ 29ರಂದು ನ್ಯಾಯಾಲಯವು ಅಂಗೀಕರಿಸಿದೆ. ಆದ್ದರಿಂದ ಪ್ರಕರಣವನ್ನು ಅಭಿಯೋಜನೆಯಿಂದ ಹಿಂಪಡೆದುಕೊಳ್ಳಲು ಯಾವುದೇ ಅಭ್ಯಂತರ ಇರುವುದಿಲ್ಲ” ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಹೇಳಿದ್ದಾರೆ ಎಂದು ವರದಿಯಾಗಿದೆ.
ಪ್ರಕರಣವನ್ನು ಹಿಂಪಡೆಯುವ ಸಂಬಂಧ ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರ ಆದೇಶಕ್ಕೆ ಕಡತವನ್ನು ಮಂಡಿಸಲಾಗಿದೆ ಎಂದು ತಿಳಿದು ಬಂದಿದೆ.
ಪ್ರಕರಣವೇನು?
ಹೊನ್ನಾವರದ ಪರೇಶ್ ಮೇಸ್ತಾ ಕೊಲೆ ಪ್ರಕರಣವನ್ನು ಮುಂದಿಟ್ಟುಕೊಂಡು ಮುಸ್ಲಿಂ ಸಮುದಾಯದ ಮೇಲೆ ದ್ವೇಷ ಉಂಟು ಮಾಡುವಂತಹ, ಪ್ರಚೋದನಾಕಾರಿ ಸಂದೇಶಗಳನ್ನು ರವಾನಿಸಿ ಸಾರ್ವಜನಿಕ ಸೌಹಾರ್ದತೆಗೆ ಧಕ್ಕೆ ತರುವ ರೀತಿಯಲ್ಲಿ ಪೋಸ್ಟ್ ಕಾರ್ಡ್ ವೆಬ್‌ಸೈಟ್‌ನಲ್ಲಿ ಸಂದೇಶಗಳನ್ನು ಬಿತ್ತರಿಸಲಾಗಿತ್ತು. ಆ ಸಂದೇಶಗಳು ಎರಡು ಕೋಮಿನ ನಡುವೆ ದ್ವೇಷದ ಭಾವನೆ ಬೆಳೆಯಲು ಕಾರಣವಾಗಿದ್ದವು. ಹೀಗಾಗಿ, ಪೋಸ್ಟ್ ಕಾರ್ಡ್ ನ್ಯೂಸ್ ಜಾಲತಾಣದ ಮುಖ್ಯಸ್ಥ ವಿವೇಕ ಶೆಟ್ಟಿ ಮತ್ತು ಮಹೇಶ ಹೆಗಡೆ ವಿರುದ್ಧ ಕಾರವಾರ ತಹಶೀಲ್ದಾರ್ ಗೋವಿಂದ ನಾಯ್ಕ ದೂರು ದಾಖಲಿಸಿದ್ದರು.
ಅವರ ದೂರನ್ನಾಧರಿಸಿ ಇಬ್ಬರೂ ಆರೋಪಿಗಳ ವಿರುದ್ಧ ಐಪಿಸಿ 183, ಕಲಂ 153, 153 (ಎ) 505 (2) ಅಡಿಯಲ್ಲಿ 2017ರ ಡಿಸೆಂಬರ್ 14ರಂದು ಎಫ್‌ಐಆರ್ ಕೂಡ ದಾಖಲಾಗಿತ್ತು. ಪ್ರಕರಣದ ಕುರಿತು ತನಿಖೆ ಕೈಗೊಂಡಿದ್ದ ಪೊಲೀಸರು 2021ರ ಏಪ್ರಿಲ್ 8ರಂದು ನ್ಯಾಯಾಲಯಕ್ಕೆ ‘ಸಿ’ ಅಂತಿಮ ವರದಿಯನ್ನು ಸಲ್ಲಿಸಿದ್ದರು.