ನೀಗೊನಿ | ದೊಡ್ಡೀರಿ-ಕೋಡಿಯ ಲಗ್ಣ

Date:

ಮುಂದೆ ತಮ್ಟೆ ಸಬುದ ಹಾದಿ ತೋರುಸ್ತಿದ್ರೆ, ಹಿಂದೆ ಸೋಬಾನೆ ಹಾಡ್ಗಳು ಸಂತಸ್ವ ಹರುಡ್ಕಂಡು ಸಾಗ್ತಿದ್ವು. ತಮ್ಟೆ ಬಡ್ದು-ಬಡ್ದು ಕೆಂಚೀರ್ನ ಬೆಳ್ನಾಗೆ ರೈತ ಸುರ್ದು, ಬಿಳಿ ತಮ್ಟೆ ಕೆಂಪಾಗೋಗಿತ್ತು. ಸೋಬಾನೆ ಹಾಡ್ತಿದ್ದ ಮುದ್ಕೀರ ಕಟ್ವಾಯ್ಲಿ ಅಡ್ಕೆಲೆ ಜೊಲ್ಲು ಕೆಂಪಾಗಿ ಸೋರ್ತಿತ್ತು…

(ಆಡಿಯೊ ಪೂರ್ಣಪ್ರಮಾಣದಲ್ಲಿ ಸಿಗದಿದ್ದಲ್ಲಿ, ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ, ಕೇಳಿ…)

ಸಂಚಿಕೆ 09

ಇಂಗೆ ದಿನ್ಗಳು ವಾರ್ಗಳು ಮುಗ್ದು-ಮುಗ್ದು ತಿರ್ಗತಿರ್ಗ ಬತ್ತಿದ್ವು. ದೊಡ್ಡೀರಿ ಗುಡ್ಲು ತಾವಲ್ಲಿ ಕೋಡಿ ನೀಗೊನಿನ ಮರ್ತ ಕುಂತ. ಯೆಂಗ್ಸು ಜ್ಯೋತ್ಗಿದ್ರೆ ಎಲ್ಲಾನು ಮರ್ಸುತ್ತೆ ಅಂತ ಅಂದ್ಕಂಡಿರ್ಲಿಲ್ಲ. ಅಯ್ಯ ಮತ್ಮತ್ತೆ ನರ್ಸಮ್ಮನ ನೋಡಕ್ಕೋಗ್ತಿದ್ರ ಗುಟ್ಟು ಕೋಡಿಗೆ ಈಗ ಅರುವಿಗ್ಬಂತು. ಕರಿವಂಗ್ಲದಲ್ಲಿದ್ದ ಕೋಡಿಗೆ ದೊಡ್ಡೀರಿಯಿಲ್ದೆ ಜಿವ್ವೇ ಬ್ಯಾಡವೆನುಸ್ತು. ಅವುಳ್ನ ಲಗ್ಣ ಆಗಕೆ ಪರ್ಚಿತ ಹಟ್ಟೀರ್ಜೊತೆ ಹೇಳ್ಕಂಡ. ಅದು ಆ ಕಡೆ ಈ ಕಡೆ ತೂರಾಡಿ ಹಟ್ಟಿಯಜ್ಮಾನಂಗೂ ಮುಟ್ತು. ಹಟ್ಟಿಯಜ್ಮಾನ ಕದ್ರಯ್ಯ ದೊಡ್ಡೀರಿಗೂ, ಅನಾಪರ್ದೇಸಿ ಈ ಕೋಡಿಗೂ ಲಗ್ಣ ಮಾಡ್ಸಣ ಅಂತ ವರ್ತಮಾನ್ವ ಚಿಕ್ಕಯ್ಯಂಗೆ ತಿಳುಸ್ದ. ಅಷ್ಟೊತ್ಗೆ ಚಿಕ್ಕಯ್ಯಂಗೆ ಕೋಡಿ ತನ್ನಟ್ಟೇನೇ ಅನ್ನಂಗೆ ಆಗೋಗಿತ್ತು. ದೊಡ್ಡೀರಿಗೆ ಇವ್ನೇ ಸರ್ಯಾದ ಗಂಡ್ಸು ಅನ್ಸಿತ್ತು. ಅದ್ಕೇ ಏನೂ ಮಾತ್ನಾಡ್ದೇ ತಲೆಗುಣ್ಕಾಕಿದ್ದ. ಇರೋಬರೋ ನೆಂಟರಿಸ್ಟರಿಗೆಲ್ಲ ಆಳ್ಕಳ್ಸಿ ಕರುಸ್ಕಂಡ. ಅಳಿಯಮಕ್ಳೊಂದ್ಗೆ ಬಂದ ನಿಂಗಿ, ಹನ್ಮಿನ ನೋಡಿ ಮತ್ತಷ್ಟು ಕುಸ್ಯಾದ. ಈಟಿದ್ದ ಚಿಕ್ಕಯ್ಯನ್ಹಟ್ಟಿ ಆಟಗಲ ಹಲ್ಡಕಂತು. ಹಟ್ಟಿತುಂಬೆಲ್ಲಾ ಜಿಗಿಜಿಗಿ ಅನ್ನಂಗಾಯ್ತು. ಹಟ್ಟಿನೇ ಆದ್ರಾಗೇ ಕೂಡ್ಕಂಡು ಲಗ್ಣದ ಯಾಪಾರ ಸುರುವಾತು. ರಾತ್ರಿ ಪೂರಾ ಹಟ್ಟೆರ್ಗೆಲ್ಲಾ ಘಟೆ ಸೇಂದಿ ಹರಿತಿತ್ತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಕದ್ರುಪ್ಪನ್ನೇ ಮುಂದ್ನಿತ್ತು ಲಗ್ಣದ ಕೆಲ್ಸುವ ಹೆಗ್ಲೇರ್ಸಕಂಡ. ಹಟ್ಟಿರೆಲ್ಗ ಒಂದೊಂದು ಕ್ಯಾಮೇ ವಯ್ಸಿ ಲಗ್ಣಕ್ಕೆ ಅಣಿಗೊಳುಸ್ತಿದ್ದ. ಗರ್ತೆರೆಲ್ಲ ತಮ್ಗುಡ್ಲಿಂದ ಮೊರ ತಕ್ಕಂಡು ಚಿಕ್ಕಯ್ಯನಟ್ಟಿ ಸೇರಿರು. ರಾಗಿ ಕೇರ್ತ, ತೂರ್ತಾ, ಬೀಸೆಕಲ್ನಾಗೆ ಬೀಸ್ತಾ, ಕಾಳುಕಡಿ ಕೂಡಿಕ್ತ, ಸೊಪ್ಪುಸೆದೆ ಸೋಸ್ತಾ, ಸೋಬಾನೆ ಹಾಡ್ತಾ ಗುಡ್ಲು ತುಂಬಾ ಪದ್ಗಳು ತುಳುಕಂಗಾಯ್ತು. ಸರೋತ್ತಾದ್ರೂ ಈ ಕ್ಯಾಮೇ ನಡೀತಾನೇ ಇತ್ತು. ಹುಟ್ದಾಗ್ಲಿಂದ ಅವ್ವನ ಕಳ್ಕಂಡಿದ್ದ ದೊಡ್ಡೀರಿಗೆ ಇದ್ನೆಲ್ಲ ನೋಡಿ ಬೋಸಂತಸವಾತು.

ಮೊದ್ಲ ದಿನ ಗಂಗುಮ್ಮನ ಮಾಡೋದ್ರಿಂದ ಲಗ್ಣಕ ಅಣಿಯಾತು ಹಟ್ಟಿ. ಕುಂಬಾರ ಮಣ್ಣಯ್ಯನ ಆವ್ಗೆ ಮನೆಯಿಂದ ವಚ್ಚಾನೆ ಹೊಸ್ದ ಬಾನಿ, ಕರಮಗಿ, ಅರ್ವಿಗಳ್ನ ತರಕ್ಕೆ ಕುಂಬಾರ್ರು ಮನ್ಗೆ ತಮ್ಟೆ ಹೊರುಟ್ವು. ಅದ್ರು ಜೊತ್ಗೆ ಕಳ್ಸ, ಆರ್ತಿ ತಳಿ ಇಡ್ಯೋರು ಇಡ್ಕಂಡು ನಡಿತಿದ್ರು, ಸಿಕ್ದೋರ್ಗೆ ಇಳ್ಯದೆಲೆ ಅಡ್ಕೆ ಸಾಕಾಣ್ಕೆ ಆಗ್ತಿತ್ತು. ಆವ್ಗೆ ಮನ್ಗೆ ಬಂದಾಗ ಪೂಜೆ ಮಾಡಿ ಮೋಟ್ರಂಗ್ಗೂ, ಜೂಲಯ್ಯಂಗೂ, ಕೆಂಪೀರಿಗೂ ಹೊರ್ಸಿ ಮತ್ತೆ ಮೆರ್ವಣ್ಗೆ ಹೊರುಟ್ವು. ಮರ್ವಣ್ಗೆ ಆವ್ಗೆ ಗೂಡಿಂದ ತಟಾಯ್ದು ಮಾದಿರ ಕೇರಿ ಒಳ್ಗೆ ನುಗ್ತು, ಅದ್ನು ಹಿಂದಕ್ಕು ಬಿಟ್ಕಂಡು ಲಗ್ಣದ ಗುಡ್ಲು ತಲುಪ್ತು. ನಿಟ್ಟಿಂದ ಗುಡ್ಲೊಳ್ಗೆ ಇಟ್ಟು ಸಾಸ್ತ್ರ ಮುಗ್ಸಿರು. ಯಜ್ಮಾನ ಕದ್ರಯ್ಯ ಹೂಗಾರ ಚಿನ್ನಯ್ನ ಮನ್ಗೆ ದಿಬ್ಣಗೂಡೆ, ಬಾಸಿಂಗ, ಹೂಕಡ್ಗ ಮಾಡ್ಲಿಕ್ಕೆ ಆಳ್ಗೆ ಹೇಳ್ಕಳ್ಸಿದ್ದ. ಅವು ಅದೇ ವತ್ನಾಗೆ ಬಂದು ಲಗ್ಣದ ಗುಡ್ಲು ಸೇರಿವು. ಅವು ಇವ್ಗಳ ಜೊತೆಯಾದ್ನೆ ಕಾಯ್ತಿದ್ದ ಯಜ್ಮಾನ ಕದ್ರುಪ್ಪ ಎಲ್ಲಾನು ಕರ್ಕಂಡು ಊರಾಚ್ಗಿದ್ದ ಕಟ್ಟೆತಕೆ ಗಂಗಮ್ಮುನ ಪೂಜ್ಗೆ ಅದಾಗುದಿ ಮಾಡ್ತಿದ್ದ.

ಈಚೆ ಕಡೆ ಕೆಂಚೀರ ಅಲ್ಲೇ ಸೌದೆಪುಳ್ಳಿ ಆರುಸ್ಕಂಡು ಬೆಂಕಿ ಹಾಕಂಡು ತಮ್ಟೆ ಕಾಯುಸ್ತ ಕಣಿಕಣಿ ಅನ್ನುಸ್ತಿದ್ದ. ಹದುಕ್ಕೆ ಬಂದೈತೆ ಅನ್ಸಿ ಹೆಗ್ಲಿಗಾಕಂಡ. ಅದ್ನೇ ಅಂಚರ್ಸಿ ದೊಖ್ರ, ಕ್ಯಾವ್ಡ, ಕುಂಟ್ಗದ್ರ ಚಣಿ-ಚಣಿ ಅಂತ ಸೇರ್ಕಂಡ್ರು. ತಮ್ಟೆ ಸದ್ಗೆ ಅದಗುದಿ ಸುರ್ವಾಗಿ ತಳಿ ಇಡ್ಯೋರು ತಳಿ ಇಡ್ಕಂಡ್ರು, ಅದ್ರ ಕೆಳ್ಗೆ ಕಳ್ಸಕನ್ನಡಿ, ದಿಬ್ಣೂದ್ಗೂಡೆ, ಆವ್ಗೆಗೂಡಿಂದ ತಂದ ಮಡ್ಕೆ, ಬಾನಿಗಳು ಸೇರ್ಕಂಡ್ವು. ಸೋಬಾನ ಹಾಡ್ತ ಮುದ್ಕೇರು ಅಂಚರ್ಸಕಂಡು ಬತ್ತಿದ್ರು. ಮುಂದೆ ತಮ್ಟೆ ಸಬುದ ಹಾದಿ ತೋರುಸ್ತಿದ್ರೆ, ಹಿಂದೆ ಸೋಬಾನೆ ಹಾಡ್ಗಳು ಸಂತಸ್ವ ಹರುಡ್ಕಂಡು ಸಾಗ್ತಿದ್ವು. ತಮ್ಟೆ ಬಡ್ದು-ಬಡ್ದು ಕೆಂಚೀರ್ನ ಬೆಳ್ನಾಗೆ ರೈತ ಸುರ್ದು, ಬಿಳಿ ತಮ್ಟೆ ಕೆಂಪಾಗೋಗಿತ್ತು. ಸೋಬಾನೆ ಹಾಡ್ತಿದ್ದ ಮುದ್ಕೀರ ಕಟ್ವಾಯ್ಲಿ ಅಡ್ಕೆಲೆ ಜೊಲ್ಲು ಕೆಂಪಾಗಿ ಸೋರ್ತಿತ್ತು.

ಊರಾಚ್ಗಿನ ಕಟ್ಟೆಹತ್ರ ಈ ದಿಬ್ಣ ಬಂದು ಕೂಡ್ಕಂತು. ಸಪ್ಪಟಜಾಗ್ವ ಹುಡ್ಕಿ, ಮಡ್ಕೆ, ಕುಡ್ಕೆ, ಬಾನಿ ತೊಳ್ಕಂಡು ಕೆಳ್ಗಡೆ ಮಳ್ಳನ್ನು ಹೊಯ್ದು ಅದ್ರ ಮ್ಯಾಕೆ ಹೊಸ ಅರ್ವಿಗಳ್ನ ಕರಮಗಿನ ಇಟ್ಟು ಕಂಟುಕ್ಕೆ ಅಂಗ್ದಾರ ಕಟ್ಟಿ, ಮೂಡ್ಲು ಕಡಿಕ್ಕೆ ಕೈ ಮುಗ್ದು, ಆವ್ಗೆ ಮನೆಯ ಮಡ್ಕೆಗಳ್ಗೆ ಅರುಸ್ಣ, ಕುಂಕ್ಮದ ಪಟ್ಟೆ ಹಾಕಿ ಸಿಂಗರ್ಸಿರು. ಮೂರು-ಮೂರು ಸತಿ ನೀರು ಸೇದಿ ಆ ಅರ್ವಿ, ಬಾನಿ, ಕರಮಗಿಗೆ ಹುಯ್ದು ಗರ್ತಿರೆಗೆ, ಬಾವ್ದಿರ್ಗೆ ತಲೆಮ್ಯಾಲೆ ಹೊರ್ಸಿರು. ಮೂಗು, ಮೊಕ ಕಾಣ್ದಂಗೆ ಮರೆ ಮಾಡಿ ಅವ್ರೆಲ್ಲ ನಡಿತಿದ್ರು. ತಮ್ಟೆಗಳು ದಾರಿ ತೋರುಸ್ತಿದ್ವು. ನಡಿತ-ನಡಿತ ಚಿಕ್ಕಯ್ಯನಟ್ಟಿ ಮುಂದ್ಕೆ ಬಂತು. ಎದ್ರು ಮಾಡ್ಕಂಡ ನಿಂಗಿ, ಆ ನೀರ್ನ ಕೈಮುಗ್ದು ಕೆಳ್ಗಿಳ್ಸಕಂಡು ಅರ್ವೆಯಿಂದ ಮುಚ್ಚಿ ಹಿಟ್ಟೆಸ್ರು ಇಕ್ಕಕ್ಕೆ, ಸಾರ್ವ ಮಾಡಕ್ಕೆ ಸುರು ಮಾಡ್ಕಂಡ್ರು. ಅಡ್ಗೆಗೆ ಬೇಕಾದ ವಸೀಕರ ಹಚ್ತಾ, ತೊಳಿತಾ… ಸಾಗ್ತಾ ಇತ್ತು. ಕುಂಭಿ ಅಡ್ಗೆ ಜಬಾಬ್ದಾರಿ ಹೊತ್ತು ಅದ್ನ ಮಾಡು, ಇದ್ನ ಮಾಡು ಎಂದು ಅಲ್ಲಿದ್ದೋರ್ಗೆ ಹೇಳ್ತಾ ಇದ್ದ. ಲಗ್ಣ ದಿನ್ಕೆ ಪೊಗುಡ್ದಸ್ತಾದ ಕ್ವಾಣನ್ ನೋಡಿಟ್ಟಿದ್ದ.

ಕೆಲುವ್ರು ನೀರು ತರೋರು ನೀರು ತರ್ತ ಬಾನಿ, ಗುಡಾಣ ತುಂಬುಸ್ತಿದ್ರು. ಹಟ್ಟಿಯ ಕೆಲ ಗಂಡುಸ್ರು ಕಟ್ಗೆ ತರಕ್ಕೆ ಕಾಡ್ಗೆ ಹೋದ್ರೆ, ಇನ್ಕೆಲುವ್ರು ಸ್ಯಪ್ರ ಹಾಕಕ್ಕೇ ತಯಾರಾದ್ರು. ಉಳ್ದೋರು ಲಗ್ಣದ ವಸಿಕರನ್ನೆಲ್ಲ ವಂಚ್ಕತಿದ್ರು. ಸೆನ್ನಾಗಿ ಮೇದಿರೋ ಕೋಣ, ದನಗಳ್ನ ಅಡ್ಗೆಗೆ ಅಣಿಗೊಳ್ಸತಿದ್ರು. ಅದಲ್ದೆ ಲಗ್ಣದಾಗೆ ಘಟೆ ಪೂಜಕ್ಕೆ ಸೇಂದಿ ಓಬಯ್ಯಂಗೂ ಕೇಳಿಬಂದಿದ್ರು. ಕಾಡ್ಗೋದೋರು ಮರ್ವ ತುಂಡ್ತುಂಡು ಮಾಡಿ ಹೊತ್ಕಂಡು ಬತ್ತಿದ್ರು. ಬಂದವ್ರೇ ದಾವ್ರ ಆಗಿ ನೀರು ಕುಡ್ದು ಮತ್ತೋಡಕ್ತಿದ್ರು. ಇನ್ಕೆಲವ್ರು ಸ್ಯಪ್ರಕ್ಕೆ ಬೇಕಾದ್ನ ಸುತ್ಮುತ್ತೆಲ್ಲ ಅರಸ್ತಿದ್ರು. ಹಟ್ಟಿದ್ದ ಅಷ್ಟೂ ಅಗಲ ಗರಿ ತಂದು ಸ್ಯಪ್ರ ಹಾಕ್ಬೇಕಂತ ಮುತುವರ್ಜಿ ಮಾಡ್ತಿದ್ರು.

ಚಿಕ್ಕದ್ರ ಮೂಡ್ಲು ಕಡಿಕೆ ಎರಡಡಿ ಗುಂಡಿ ತಗ್ದು, ಅದ್ರೊಳ್ಗೆ ತಾಮ್ರದ್ಕಾಸಾಕಿ ಪೂಜೆ ಮಾಡಿ ಅಳ್ವನ್ಗಿಡ್ದ ಗಳನ ಊಣ್ದ. ಆ ಕಂಬುಕ್ಕೆ ಅಂಗ್ದಾರ ಕಟ್ಟಿ, ದವ್ಸಗಳ ಗಂಟು ಕಟ್ಟಿ ಕಣ್ಗೊತ್ಗಂಡ. ಅಲ್ಲಿಂದ ಸುರು ಮಾಡ್ಕಂಡು ಗಳಗಳ್ನ ಗುಂಡಿ ತೆಗ್ದು ಊಣಕ್ಕೆ ಗೊಟ್ರ, ಕರುವ, ಎಲ್ರೂ ಕೂಡ್ಕಂಡ್ರು. ಗಳ ಊಣಿ ಅದ್ರ ಮ್ಯಾಲೆ ಬಾರ್ಗೆ ಒಂದ್ರಂತೆ ಗಳಗಳ್ನ ಅಡ್ಡುಕ್ಕಾಕಿ, ಅದ್ಕೆ ಅಡ್ಲಾಗಿ ಅಡ್ಕೆ ಮರ್ಗಳಿಂದ ಉದ್ದಾನೇ ಉದ್ದ ದೆಬ್ಬೆ ಸೀಳಿ, ದೆಬ್ಬೆಗಳ್ನ ಮೊಳದಗಲದ ಹತ್ರುಕ್ಕೆ ಕತ್ತಾಳೆ ನಾರಿಂದ ಬಿಗೆದ್ಸಿ ಅಳ್ಳಾಡ್ದಂಗೆ ಕಟ್ಟಿರು. ಕೆಂಕರ್ಸಿಮರ್ದ ಕೆಂಪುವ್ವ ತಂದು ಮಾವ್ನೆಲೆಗ್ಳ ಜೊತೆ ಸೇರ್ಸಿ ಸುಂದ್ರುವಾಗಿ ಕಾಣಂಗೆ ಕಟ್ಟಿರು. ಹಟ್ಯಾದ ಹಟ್ಟಿನೇ ಲಗ್ಣದಾಗೆ ಮುಳಗೋಯ್ತು. ಚಿಕ್ಕಯ್ಯನು ಕೊನೆ ಮಗ್ಳು ಮದ್ವೆ ದಾಂದೂಂ ಅಂತ ಮಾಡ್ಬೇಕು ಇಡೀ ಹಟ್ಟಿಗೆ ಎದೆ ಮೆಟ್ದಂಗೆ ಆಗ್ಬೇಕಂತ ಆ ಕಡೆ-ಈ ಕಡೆ ಈಡಾಡ್ತಿದ್ದ. ಯಾರ್ಗೂ ತಾಡಿಪಾಡಿ ಆಗ್ದಂಗೆ ನೋಡ್ಕಳ್ತಿದ್ದ.

ಲಗ್ಣ ನಾಳ್ಕೆ ಅನ್ನೋ ದಿನ ಭತ್ತ ಕುಟ್ಟೋದು ಸುರುವಾತು. ಊರ್ನಾಗೆ ಯಾರ್ದೋ ಮನೆಗೆ ಇಸ್ಕಂಡು ಬಂದಿದ್ದ ಒಂದು ಬಳ್ಳ ಬತ್ತನ ನಿಂಗಿ, ಹನ್ಮಿ ಯೆಂಗುಸ್ರಾದಿಯಾಗಿ ಒಳ್ಕಲ್ಲಲ್ಲಿ ಕುಟ್ಟಿರು. ಕಾಳು ಹೊರ್ಗಡೆ ಚೆಲ್ದಂಗೆ ಕಡಿ ಇಕ್ಕಿದ್ರು ಕಾಲ್ನಾಗೆ ಆ ಕಡೆಯಿಂದ ಈ ಕಡ್ಕೆ ವತ್ಕೊಳ್ತಾ ಕುಟ್ಟುತ್ತಿದ್ರು. ಮದ್ಮದ್ಯ ಮೋಟ್ರಂಗನೂ ಕೈ ಹಾಕ್ತಿದ್ದ. ಇದುಕ್ಕೆ ತಕ್ಕಂತೆ ಹೊರ್ಗಡೆ ತಪ್ಟೆ ಜಗ್ಗುಣಕ್ಕ ಜಗ್ಗುಣಕ್ಕ ಅಂತ ಕುಣಿತಿದ್ವು. ತಪ್ಟೆಯೊಂದ್ಗೆ ಕುಣಿತಿದ್ದ ಹಾಳೂರ್ನ ಬೆಳ್ಳಗೆ ರೈತ ಇಳಿತಿದ್ರು ನುಡ್ಸೋದು ನಿಂತಿರ್ಲಿಲ್ಲ. ತಪ್ಟೆ ಸಬ್ದುಕ್ಕೆ ಹಟ್ಟಿ ಹೈಕ್ಳೆಲ್ಲ ಕುಣಿತ, ಯೆಂಗುಸ್ರೆಲ್ಲಾ ತಲೆಗುಣುಕಾಕ್ತಾ ಒಪ್ಗೆ ಕೊಡ್ತಾ ಮುಳ್ಗೋಗಿದ್ರು. ಆಗ್ತಾನೇ ವಯ್ಸಿಗೆ ಬರ್ತಿರೋ ಗಂಡೈಕ್ಳಿಗೆ ಹಿರೇರು ತಪ್ಟೆ ಕಟ್ಟೋದ್ನ, ನುಡ್ಸೋದ್ನ, ಬೆಂಕಿಲಿ ಕಾಯ್ಸೋದ್ನ ಗಸ್ತುಗಳ್ನ ಹೇಳ್ಕೊಡ್ತಾ ಇದ್ರು. “ಇದ್ನೆ ಕ್ಯಾಮೇಲ್ಲಿದ್ರೆ ದಾರೆಮರ್ಗಳ್ನ ಯಾರ್‍ತರೋದ್ ಬರ್ರಲ್ಲ…” ಯಜ್ಮಾನ ಕದುರಪ್ಪನ ಆಗ್ನೆಯಿನ್ದ ಉಳ್ದ ಗಂಡುಸ್ರು ಹಟ್ಟಿಯಾಚ್ಗೆ ಇರೋ ಕರಿಕಲ್ಲುನೆತ್ತಿ ಕಡೆ ಹೊರಟ್ರು. ಅವ್ರ ಮುಂದೆ ಒಂದಷ್ಟು ತಪ್ಟೆಗ್ಳು ದಾರಿ ತೋರುಸ್ಕಂಡು ಹೊರಟ್ವು. ಕರಿಕಲ್ಲುನೆತ್ತಿ ಕಾಡಲ್ಲಿ ಗುರ್ತು ಮಾಡಿರೋ ಜಾಗ್ದಲ್ಲಿ ಅಂಕಾಲೇಮರ, ನೇರ್ಳೆಮರ, ಆಲದ್ಮರ, ಅತ್ತಿಮರ್ದ ಕೊಂಬೆಗ್ಳ ಕಡ್ಕಂಡು ಹಟ್ಟಿಯೊಳ್ಗೆ ಬಂತು. ಬರ್ವಾಗ ಮೊಕ ಮರೆ ಮಾಡ್ಕಂಡು ಯಾರ್ಜೊತೆಗೂ ಉಸ್ರು ಬಿಡ್ದಂಗೆ ಬರೋದು ಹಿಂದ್ನಿಂದ ಬಂದಿರೋ ರೂಡಿ. ಅದ್ನೆ ಪಾಲುಸ್ಕಂಡು ಇವ್ರೆಲ್ಲಾ ಬಂದ್ರು.

ಇವೆಲ್ಲಾ ಆಗ್ತಿರೋ ವತ್ನಾಗೆ ಯಜ್ಮಾನ ಕದ್ರುಪ್ಪ ತಲ್ಗೆ ವಲ್ಲಿ ಬಟ್ಟೆ ಕಟ್ಕಂಡು ಹೆಗ್ಲ ಮ್ಯಾಲೇ ಕೆಂಪ್ವಸ್ತ್ರ ಹಾಕಂಡು ರಣಾಂಗಣಕ್ಕೆ ದುಮ್ಕುದ್ರು. ಹಟ್ಟಿ ಅಣ್ತಮ್ಮಂದಿರ್ನ ಕೂರ್ಸಿ ಹಸೆ ಬರ್ಯೋದು; ಒಂದ್ಕಡೆ ದೊಡ್ಡೀರಿನ, ಇನ್ನೊಂದ್ಕಡಿಕೆ ರಾಗಿ ಅಳ್ಯೋ ಸೇರಿಟ್ಟು ಸೇಸು ಇಕ್ಕೋದ ಮಾಡ್ತಿದ್ರು. ಕುಡ್ಕೆಲಿಟ್ಟಿದ್ದ ಅರುಸ್ಣುದಿಂದ ದೊಡ್ಡೀರಿಗೆ ಕೈಯಿ, ಮಯ್ಯಿ, ಮೊಕ, ಮೂಗು ಇಲ್ಗೆಲ್ಲಾ ಹಟ್ಟಿಯೆಂಗುಸ್ರು ಗಂಡುಸ್ರಾದಿಯಾಗಿ ಬಳಿತ ಸೇರ್ನ ಕಣ್ಗೊತ್ಗಳ್ತಾ ಮಾಡ್ತಿದ್ರು. ದೊಡ್ಡೀರಿದು ಮುಗುದ್ಮೇಲೆ ಗರ್ತೇರು ಬಂದು ಮಂಗ್ಳಾರ್ತಿ ಮಾಡಿ ಕೈಯಿಡ್ದು ದೊಡ್ಡೀರಿನ ಎತ್ತಿರು. ಆಮ್ಯಾಕೆ ಬರಿ ಮಯ್ಯಾಗೆ ಕೋಡಿನ ಆ ಹಸೆಮಣೆ ಮ್ಯಾಲೆ ಕುಂಡ್ರಿಸಿ ಅರುಸ್ಣದ ಮನ್ಸುನ ಮಾಡಿರು.

ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ

ಪೋಸ್ಟ್ ಹಂಚಿಕೊಳ್ಳಿ:

ರವಿಕುಮಾರ್ ನೀಹ
ರವಿಕುಮಾರ್ ನೀಹ
ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ನೀಲಗೊಂಡನಹಳ್ಳಿಯವರು. ಕನ್ನಡ ಮೇಷ್ಟ್ರು. ಕನ್ನಡ ಸಾಹಿತ್ಯ ವಿಮರ್ಶೆಗೆ ಹೊಸ ಪರಿಭಾಷೆಗಳನ್ನು ಜೋಡಿಸಿದ ಗಮನಾರ್ಹ ವಿಮರ್ಶಕ. ಇತ್ತೀಚೆಗೆ ಬಿಡುಗಡೆಯಾದ 'ಅರಸು ಕುರನ್ಗರಾಯ' ಕೃತಿ ಇವರ ಸಂಶೋಧನಾ ಆಸಕ್ತಿಯನ್ನು ಮತ್ತು ನಿಜವಾದ ನೆಲಮೂಲದ ಸಂಶೋಧನೆಗಳು ಸಾಗಬೇಕಾದ ಹಾದಿಯನ್ನು ಸಾರುವ ಅಪೂರ್ವ ದಾಖಲೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹೊಸಿಲ ಒಳಗೆ-ಹೊರಗೆ | ಬ್ರಾ… ಪ್ರತಿಭಟನೆ ಮತ್ತು ಬಿಡುಗಡೆಯ ಭಾವ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಮೈಕ್ರೋಸ್ಕೋಪು | ಅಯೋಧ್ಯೆ ರಾಮ ಮಂದಿರದಲ್ಲಿ ‘ವಿಜ್ಞಾನ’ ಬಳಕೆ; ನಿಜಕ್ಕೂ ದೇಶದಲ್ಲಿ ಇದೇ ಮೊದಲಾ?

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಹೊಸಿಲ ಒಳಗೆ-ಹೊರಗೆ | ನೀವು ಕೊಕ್ಕರೆಯಾದರೂ ಸರಿಯಲ್ಲ, ನರಿಯಾದರೂ ಸರಿಯಲ್ಲ; ಯಾಕೆಂದರೆ…

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...