- 17 ತಾಲ್ಲೂಕು ತೀವ್ರ ಬರಪೀಡಿತ, 4 ಸಾಧಾರಣಾ ಬರಪೀಡಿತ ತಾಲ್ಲೂಕುಗಳೆಂದು ಘೋಷಣೆ
- ಮೊದಲ ಸುತ್ತಿನಲ್ಲಿ 195 ತಾಲ್ಲೂಕುಗಳನ್ನು ಬರಪೀಡಿತ ಎಂದು ಸರ್ಕಾರ ಘೋಷಿಸಿದೆ
ರಾಜ್ಯ ಸರ್ಕಾರವು ಎರಡನೇ ಸುತ್ತಿನಲ್ಲಿ ಹೆಚ್ಚುವರಿಯಾಗಿ 17 ತಾಲ್ಲೂಕುಗಳನ್ನು ತೀವ್ರ ಬರಪೀಡಿತ ಮತ್ತು ನಾಲ್ಕು ಸಾಧಾರಣಾ ಬರಪೀಡಿತ ತಾಲ್ಲೂಕುಗಳೆಂದು ಘೋಷಣೆ ಮಾಡಿದೆ.
ಕೇಂದ್ರ ಸರ್ಕಾರದ ಬರ ನಿರ್ವಹಣೆ ಕೈಪಿಡಿ – 2020ರ ಬರ ಘೋಷಣೆ ಮಾರ್ಗಸೂಚಿಯಲ್ಲಿನ ಮಾನದಂಡಗಳನ್ವಯ ಜಿಲ್ಲಾಧಿಕಾರಿಗಳಿಂದ ಬೆಳೆಹಾನಿ ಸಮೀಕ್ಷೆಯ ವರದಿಯನುಸಾರ 2023ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಜ್ಯದ 31 ಜಿಲ್ಲೆಗಳ 236 ತಾಲ್ಲೂಕುಗಳ ಪೈಕಿ 195 ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು ಮೊದಲ ಸುತ್ತಿನಲ್ಲಿ ಸರ್ಕಾರ ಘೋಷಿಸಿದೆ.
ಈ ಹಿಂದೆ ಘೋಷಿಸಿದ್ದ ಸಾಧಾರಣ ಬರಪೀಡಿತ 34 ತಾಲ್ಲೂಕುಗಳಲ್ಲಿ ಮತ್ತೊಮ್ಮೆ 22 ತಾಲ್ಲೂಕುಗಳ ಬೆಳೆ ಸಮೀಕ್ಷೆ ದೃಢೀಕರಣ ವರದಿಯನ್ವಯ 11 ತೀವ್ರ ಬರ ಪೀಡಿತ ತಾಲ್ಲೂಕು ಹಾಗೂ 11 ಸಾಧಾರಣ ಬರ ಪೀಡಿತ ತಾಲ್ಲೂಕು ಎಂದು ಸರ್ಕಾರ ಘೋಷಿಸಿದೆ.
ಹಾಗೆಯೇ ಹೆಚ್ಚುವರಿಯಾಗಿ 21 ಬರ ಪೀಡಿತ ತಾಲ್ಲೂಕುಗಳ ಪೈಕಿ 17 ತೀವ್ರ ಬರಪೀಡಿತ ತಾಲ್ಲೂಕು ಹಾಗೂ 04 ಸಾಧಾರಣಾ ಬರಪೀಡಿತ ತಾಲ್ಲೂಕುಗಳೆಂದು ಎಂದು ಘೋಷಿಸಿ ಸರ್ಕಾರ ಆದೇಶ ಹೊರಡಿಸಿದೆ.
ತೀವ್ರ ಬರಪೀಡಿತ ತಾಲ್ಲೂಕುಗಳು
ಬೆಳಗಾವಿ ಜಿಲ್ಲೆಯಲ್ಲಿ ಬೆಳಗಾವಿ ಮತ್ತು ಖಾನಾಪುರ ತಾಲ್ಲೂಕು, ಚಾಮರಾಜನಗರ ಜಿಲ್ಲೆಯಲ್ಲಿ ಚಾಮರಾಜನಗರ ತಾಲ್ಲೂಕು, ಧಾರವಾಡ ಜಿಲ್ಲೆಯಲ್ಲಿ ಅಳ್ನಾವರ, ಅಣ್ಣಿಗೇರಿ ಹಾಗೂ ಕಲಘಟಗಿ ತಾಲ್ಲೂಕುಗಳು, ಗದಗ ಜಿಲ್ಲೆಯಲ್ಲಿ ಮುಂಡರಗಿ ತಾಲ್ಲೂಕು, ಹಾಸನ ಜಿಲ್ಲೆಯಲ್ಲಿ ಆಲೂರು, ಅರಸೀಕೆರೆ ಹಾಗೂ ಹಾಸನ ತಾಲ್ಲೂಕು, ಹಾವೇರಿ ಜಿಲ್ಲೆಯಲ್ಲಿ ಬ್ಯಾಡಗಿ, ಹಾನಗಲ್ ಹಾಗೂ ಶಿಗ್ಗಾವ್, ಕೊಡಗು ಜಿಲ್ಲೆಯಲ್ಲಿ ಪೊನ್ನಂಪೇಟೆ, ಮೈಸೂರು ಜಿಲ್ಲೆಯಲ್ಲಿ ಕೆ ಆರ್ ನಗರ ತಾಲ್ಲೂಕು, ಉಡುಪಿ ಜಿಲ್ಲೆಯ ಹೆಬ್ರಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲ್ಲೂಕುಗಳನ್ನು ತೀವ್ರ ಬರಪೀಡಿತ ತಾಲ್ಲೂಕುಗಳೆಂದು ಘೋಷಿಸಲಾಗಿದೆ.
ಸಾಧಾರಣ ಬರಪೀಡಿತ ತಾಲ್ಲೂಕುಗಳು
ಚಾಮರಾಜನಗರ ಜಿಲ್ಲೆಯ ಯಳಂದೂರು, ಚಿಕ್ಕಮಗಳೂರಿನ ಮೂಡಿಗೆರೆ ಮತ್ತು ತರೀಕೆರೆ ಹಾಗೂ ಉತ್ತರ ಕನ್ನಡದ ಸಿದ್ದಾಪುರ ತಾಲ್ಲೂಕುಗಳನ್ನು ಸಾಧಾರಣ ತಾಲ್ಲೂಕುಗಳೆಂದು ಸರ್ಕಾರ ಘೋಷಿಸಿದೆ.