ಆಘಾತಕಾರಿ ಘಟನೆಯೊಂದರಲ್ಲಿ ಮನೆಮುಂದೆ ನೀರು ಚೆಲ್ಲಬೇಡಿ ಎಂದದ್ದಕ್ಕೆ ದಲಿತ ಸಮುದಾಯದ ವ್ಯಕ್ತಿಯೊಬ್ಬರನ್ನು ಗುಂಡಿಕ್ಕಿ ಕೊಂದ ಘಟನೆ ಉತ್ತರ ಪ್ರದೇಶ ಲಖನೌದಿಂದ ಸುಮಾರು 250 ಕಿಲೋಮೀಟರ್ ದೂರದಲ್ಲಿರುವ ಕೌಶಂಬಿ ಜಿಲ್ಲೆಯಲ್ಲಿ ನಡೆದಿದೆ.
ದಲಿತ ಸಮುದಾಯದ ರಮ್ನೇವಾಜ್ ರಾಯಿದಾಸ್ (35) ಕೊಲೆಯಾದವರು. ನೆರೆ ಮನೆಯ ರಾಹುಲ್ ಕುಮಾರ್ ಎಂಬಾತ ಗುಂಡು ಹಾರಿಸಿದ್ದಾನೆ. ಎದೆ ಭಾಗಕ್ಕೆ ಎರಡು ಗುಂಡು ಹಾರಿಸಿದ್ದು, ರಾಯಿದಾಸ್ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಆರೋಪಿ ತಲೆಮರೆಸಿಕೊಂಡಿದ್ದು, ಆತನ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ಗುಂಡೇಟಿನಿಂದ ರಾಯಿದಾಸ್ ಕುಟುಂಬದ ಇಬ್ಬರು ಮಹಿಳೆಯರು ಸಹ ಗಾಯಗೊಂಡಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಮರ್ ಬಹಾದ್ದೂರ್ ಸಿಂಗ್ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬಿಲ್ಕಿಸ್ ಬಾನೊ ಪ್ರಕರಣ | ಗುಜರಾತ್, ಕೇಂದ್ರಕ್ಕೆ ದಾಖಲೆ ಕೇಳಿದ ಸುಪ್ರೀಂ ಕೋರ್ಟ್
ಪೊಲೀಸ್ ವರದಿಗಳ ಪ್ರಕಾರ ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಸಮೀಪದ ಮಾರುಕಟ್ಟೆಯಲ್ಲಿ ರಮ್ನೇವಾಜ್ ರಾಯಿದಾಸ್ ಕೂಲಿ ಕೆಲಸ ಮಾಡುತ್ತಿದ್ದರು. ನಿತ್ಯ ರಮ್ನೇವಾಜ್ ಅವರ ಮನೆಯ ಮುಂದೆ ನೆರೆ ಮನೆಯ ರಾಹುಲ್ ಕುಮಾರ್ ನೀರು ಚೆಲ್ಲುತ್ತಿದ್ದ ಕಾರಣ ರಾಯಿದಾಸ್ ಮನೆ ಮುಂದೆ ನೀರು ಹರಿದು ಕೊಳಚೆಯಾಗುತ್ತಿತ್ತು. ಬುಧವಾರವು ಇದೇ ರೀತಿ ಆದ ಕಾರಣ ರಾಯಿದಾಸ್ ರಾಹುಲ್ ಮನೆಯವರನ್ನು ಪ್ರಶ್ನಿಸಿದ್ದಾರೆ.
ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ಹೋಗಿ ರಾಹುಲ್ ರಮ್ನೇವಾಜ್ ರಾಯಿದಾಸ್ ಅವರ ಮೇಲೆ ಬಂದೂಕಿನಿಂದ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ.
ಅಪರಾಧ ಎಸಗಿದ ಬಳಿಕ ರಾಹುಲ್ ಪರಾರಿಯಾಗಿದ್ದು, ಆತನ ಪತ್ತೆಗೆ ಶೋಧ ನಡೆಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ನಂತರ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದರಿಂದ ಹಿರಿಯ ಅಧಿಕಾರಿಗಳು ಗ್ರಾಮಕ್ಕೆ ಆಗಮಿಸಿದ್ದು, ಸ್ಥಳದಲ್ಲಿ ಭದ್ರತೆಯನ್ನು ನಿಯೋಜಿಸಲಾಗಿದೆ.
”ನಾವು ಪರಿಸ್ಥಿತಿಯನ್ನು ಗಮನಿಸುತ್ತಿದ್ದೇವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರ ರಕ್ಷಣೆಗಾಗಿ ಇಬ್ಬರು ಪೊಲೀಸ್ ಪೇದೆಗಳನ್ನು ಆಸ್ಪತ್ರೆಯಲ್ಲಿ ನಿಯೋಜಿಸಲಾಗಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಸ್ಲಿಂ ದ್ವೇಷ ಹರಡಿ ದಲಿತರು ತಳವರ್ಗದವರು ಆದಿವಾಸಿಗಳು ಮೇಲಿನ ದೌರ್ಜನ್ಯ ಮುಚ್ಚಿಡಲು ಪ್ರಯತ್ನ