ಉಡುಪಿಯಲ್ಲಿ ಮಹಿಷ ದಸರಾ ನಡೆಸಲು ಅನುಮತಿಯಿಲ್ಲವೆಂದು ಉಡುಪಿ ನಗರ ಪೊಲೀಸರು ಹೇಳಿದ್ದಾರೆ. ಅನುಮತಿ ನಿರಾಕರಿಸಿರುವ ಪೊಲೀಸರ ನಡೆಯನ್ನು ಸಾಮಾಜಿಕ ಹೋರಾಟಗಾರ ಜಯನ್ ಮಲ್ಫೆ ಖಂಡಿಸಿದ್ದು, ‘ಅನುಮತಿ ನಿರಾಕರಣೆಯು ಸಂವಿಧಾನದ ಮೇಲಿನ ಅತ್ಯಾಚಾರ’ ವೆಂದು ಆಕ್ರೋಶ ವ್ಯಸ್ಥಪಡಿಸಿದ್ದಾರೆ.
ಅಕ್ಟೋಬರ್ 15ರಂದು ಉಡುಪಿಯಲ್ಲಿ ಮಹಿಷ ದಸರಾ ನಡೆಸಲು ಹಲವು ಸಂಘಟನೆಗಳು ನಿರ್ಧಸಿದ್ದವು. ಆಚರಣೆಗೆ ಅನುಮತಿ ಕೇಳಿ ಅಂಬೇಡ್ಕರ್ ಯುವ ಸೇನೆ ಅಧ್ಯಕ್ಷ ಹರೀಶ್ ಸಾಲ್ಯಾನ್ ಅವರು ಉಡುಪಿ ನಗರ ಪೊಲೀಸ್ ಠಾಣೆಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಅನುಮತಿ ನೀಡಲು ಪೊಲೀಸರು ನಿಕಾರಸಿದ್ದಾರೆ.
ಅನುಮತಿ ನೀಡಿಲ್ಲವೆಂದು ಹರೀಶ್ ಅವರಿಗೆ ಉಡುಪಿ ಪೊಲೀಸ್ ನಿರೀಕ್ಷಕರು ಪತ್ರ ಬರೆದಿದ್ದು, “ತಾವು ಮಹಿಷ ದಸರಾ ಮೆರವಣಿಗೆ ಮತ್ತು ಅದಕ್ಕೆ ಸಂಬಂಧಿಸಿದ ಬ್ಯಾನರ್‌ಗಳನ್ನು ಕಟ್ಟಲು ಅನುಮತಿ ಕೋರಿದ್ದೀರಿ. ಆದರೆ, ಕಾನೂನು ಸುವ್ಯವಸ್ಥೆಯ ಹಿತದೃಷ್ಠಿಯಿಂದ ಅನುಮತಿ ನೀಡಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
ಈ ಬಗ್ಗೆ ಕಿಡಿಕಾರಿರುವ ಜಯನ್ ಮಲ್ಫೆ, “ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಸೋದರತ್ವದ ತತ್ವಗಳ ಆಧಾರದ ಮೇಲೆ ಸಂವಿಧಾನವು ರಚಿತವಾಗಿದೆ. ಸಂವಿಧಾನದ 25ನೇ ವಿಧಿಯ ಪ್ರಕಾರ, ಧರ್ಮ ಪ್ರಚಾರ ಮತ್ತು ಪಾಲನೆಗೆ ಸ್ವತಂತ್ರ ಅವಕಾಶವಿದೆ. ಅಲ್ಲದೆ, ಪ್ರಜೆಗಳಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನೂ ನೀಡಲಾಗಿದೆ. ಆದರೂ, ಮಹಿಷ ದಸರಾಗೆ ಅನುಮತಿ ನೀಡದೇ ಇರುವುದು ಪ್ರಜಾಪ್ರಭುತ್ವದ ಕಗ್ಗೊಲೆ” ಎಂದು ಹೇಳಿದ್ದಾರೆ.
“ದಲಿತರ ಅಸ್ಮಿತೆಯಾಗಿರುವ ಮಹಿಷ ದಸರಾವನ್ನು ನಡೆಸದಂತೆ ಬಹಿರಂಗವಾಗಿ ಬೆದರಿಕೆ ಹಾಕುತ್ತಿರುವವರನ್ನು ಬಂಧಿಸಬೇಕು. ಆದರೆ, ಅದನ್ನು ಬಿಟ್ಟು, ಪೊಲೀಸರು ದಲಿತರ ಹಕ್ಕನ್ನು ಒಸಕಿ ಹಾಕುತ್ತಿದ್ದಾರೆ. ಉಡುಪಿಯ ಪರ್ಯಾಯ ಮಹೋತ್ಸವಕ್ಕೆ ಉಗ್ರರ ಬೆದರಿಕೆ ಬಂದರೆ ಉಗ್ರರನ್ನು ಮಟ್ಟ ಹಾಕುತ್ತಾರೋ, ಇಲ್ಲ ಪರ್ಯಾಯ ಮಹೋತ್ಸವವನ್ನು ನಿಲ್ಲಿಸುತ್ತಾರೋ” ಎಂದು ಪೊಲೀಸರನ್ನು ಪ್ರಶ್ನಿಸಿದ್ದಾರೆ.
ಅಕ್ಟೋಬರ್ 15ರಂದು ಆದಿ ಉಡುಪಿಯ ಅಂಬೇಡ್ಕರ್ ವನದಲ್ಲಿ ಮಹಿಷ ದಸರಾ ನಡೆಯಲಿದೆ. ಕಾರ್ಯಕ್ರಮದಲ್ಲಿ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯದ ಜನರು ಭಾಗಿಯಾಗಬೇಕು ಎಂದು ಅಂಬೇಡ್ಕರ್ ಯುವ ಸೇನೆ ಮನವಿ ಮಾಡಿದೆ.