ಮಂಗಳೂರಿನ ಮಂಗಳಾದೇವಿ ಜಾತ್ರಾ ಮಹೋತ್ಸವದಲ್ಲಿ ಎಲ್ಲ ಸಮುದಾಯ ವ್ಯಾಪಾರಸ್ಥರಿಗೂ ಅವಕಾಶ ನೀಡಬೇಕು. ಕೂಡಲೇ ತುರ್ತು ಟೆಂಡರ್ ಕರೆದು ಬಹಿರಂಗ ಹರಾಜು ಮಾಡಿ, ಮುಸ್ಲಿಂ ವ್ಯಾಪಾರಿಗಳಿಗೂ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ನಗರ ಪಾಲಿಕೆ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಜಿ ಸಂತೋಷ್ ಕುಮಾರ್ ತಾಕೀತು ಮಾಡಿದ್ದಾರೆ.
ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡಬಾರದು ಎಂದು ಸನಾತನ ಸಂಸ್ಥೆಯ ಮುಖಂಡರೊಬ್ಬರು ದೇವಸ್ಥಾನ ಆಡಳಿತ ಮಂಡಳಿಗೆ ಮನವಿ ಮಾಡಿದ್ದರು. ಅವರ ಮನವಿಯಂತೆ ಮಂಡಳಿಯು ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡದೆ ವಂಚಿಸಿತ್ತು. ಇದನ್ನು ಖಂಡಿಸಿ ಜಾತ್ರೆ ವ್ಯಾಪಾರಸ್ಥರ ಸಂಘ ಮತ್ತು ಡಿವೈಎಫ್‌ಐ ಮುಖಂಡರು ಜಿಲ್ಲಾಧಿಕಾರಿಗೆ ದೂರು ನೀಡಿದ್ದರು. ಅಲ್ಲದೆ, ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಈ ಬೆನ್ನಲ್ಲೇ ಸಂಘಟನೆಗಳ ಮುಖಂಡರು, ದೇವಸ್ಥಾನ ಆಡಳಿತ ಮಂಡಳಿ ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳೊಂದಿಗೆ ಅಪರ ಜಿಲ್ಲಾಧಿಕಾರಿ ಸಭೆ ನಡೆಸಿದ್ದಾರೆ.
ಸಭೆಯಲ್ಲಿ ತಮ್ಮ ತಪ್ಪನ್ನು ದೇವಸ್ಥಾನ ಆಡಳಿತ ಮಂಡಳಿ ಒಪ್ಪಿಕೊಂಡಿದೆ. “ಹಿಂದು ಸನಾತನ ಜಾತ್ರೆ ವ್ಯಾಪಾರಸ್ಥರ ಅರ್ಜಿ ಆಧಾರದಲ್ಲಿ ಸಂಘರ್ಷ ನಡೆಯಬಹುದು ಎಂದು ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡಲಾಗಿಲ್ಲ” ಎಂದು ಮಂಡಳಿಯ ಪ್ರತಿನಿಧಿಗಳು ಒಪ್ಪಿಕೊಂಡಿದ್ದಾರೆ.
ಈ ಬಗ್ಗೆ, ಮಂಡಳಿಯ ಪ್ರತಿನಿಧಿಗಳನ್ನು ತರಾಟೆಗೆ ತೆಗೆದುಕೊಂಡ ಅಪರ ಜಿಲ್ಲಾಧಿಕಾರಿ, “ಮುಸ್ಲಿಂ ವ್ಯಾಪಾರಿಗಳನ್ನು ಭಯ ಹುಟ್ಟಿಸಿ ವಾಪಸ್ ಕಳುಹಿಸಿರುವುದು ಸರಿಯಲ್ಲ. ವ್ಯಾಪಾರಿಗಳಿಗೆ ಭದ್ರತೆ ಕೊಟ್ಟು ಎಲ್ಲರನ್ನು ಒಳಗೊಳ್ಳುವಂತ ಕೆಲಸ ಮಾಡಬೇಕು. ದೇವಸ್ಥಾನದ ಜಾಗವನ್ನು ಹೊರತುಪಡಿಸಿ, ನಗರಪಾಲಿಕೆ ಜಾಗದಲ್ಲಿ ತುರ್ತು ಟೆಂಡರು ಕರೆದು ಶನಿವಾರ ಬೆಳಿಗ್ಗೆಯೇ ಬಹಿರಂಗ ಹರಾಜು ಮಾಡಬೇಕು. ಎಲ್ಲರಿಗೂ ವ್ಯಾಪಾರ ಮಾಡಲು ಅವಕಾಶವಾಗುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಮಹಾನಗರ ಪಾಲಿಕೆ ಉಪ ಆಯುಕ್ತ (ಕಂದಾಯ) ರೇಖಾ ಶೆಟ್ಟಿ, ಸಹಾಯಕ ಪೊಲೀಸ್ ಆಯುಕ್ತ ಮಹೇಶ್ ಕುಮಾರ್, ಮಂಗಳಾದೇವಿ ದೇವಸ್ಥಾನದ ಪ್ರತಿನಿಧಿಗಳು, ಬೀದಿಬದಿ ಮತ್ತು ಜಾತ್ರೆ ವ್ಯಾಪಾರಸ್ಥರ ಸಂಘದ ಬಿ.ಕೆ ಇಮ್ತಿಯಾಝ್, ಸುನಿಲ್ ಕುಮಾರ್ ಬಜಾಲ್, ಹರೀಶ್ ಪೂಜಾರಿ, ಪ್ರವೀಣ್ ಕುಮಾರ್ ಕದ್ರಿ, ರಿಯಾಜ್, ಶಾಫಿ ಬೆಂಗ್ರೆ, ಆಸೀಫ್ ಬಾವ ಉಪಸ್ಥಿತರಿದ್ದರು.