ಐಸಿಸಿ ಏಕದಿನ ವಿಶ್ವಕಪ್ 2023ರ ಟೂರ್ನಿಯ ಪಂದ್ಯಗಳು ಆರಂಭವಾಗುವ ಮುನ್ನ ಡೆಂಗ್ಯೂ ಜ್ವರದಿಂದ ಆಸ್ಪತ್ರೆಗೆ ದಾಖಲಾಗಿದ್ದ ಟೀಂ ಇಂಡಿಯಾದ ಆರಂಭಿಕ ಆಟಗಾರ ಶುಭಮನ್ ಗಿಲ್ ಮೊದಲ ಎರಡು ಪಂದ್ಯಗಳಿಗೆ ಅಲಭ್ಯರಾಗಿದ್ದರು.
ಶುಭಮನ್ ಬದಲಿಗೆ ಇಶಾನ್ ಕಿಶನ್ ಅವರೊಂದಿಗೆ ರೋಹಿತ್ ಶರ್ಮಾ ಇನ್ನಿಂಗ್ಸ್ ಆರಂಭಿಸಿದ್ದರು. ಅಕ್ಟೋಬರ್ 14ರಂದು ಪಾಕಿಸ್ತಾನ ವಿರುದ್ಧ ಭಾರತ ತಂಡ ಗುಜರಾತ್‌ನ ಅಹಮದಾಬಾದ್‌ನಲ್ಲಿ ಮೂರನೇ ಪಂದ್ಯ ಆಡಲಿದೆ. ಈ ಪಂದ್ಯದಲ್ಲಿ ಶುಭಮನ್ ಆಡುತ್ತಾರಾ ಎಂಬ ಬಗ್ಗೆ ಬಹುತೇಕ ಸ್ಪಷ್ಟತೆ ಸಿಕ್ಕಿದೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತಾನಾಡಿದ ನಾಯಕ ರೋಹಿತ್ ಶರ್ಮಾ, ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಶುಭಮನ್ ಗಿಲ್ ಶೇ.99 ರಷ್ಟು ಲಭ್ಯರಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಡೆಂಗ್ಯೂ ಜ್ವರದಿಂದಾಗಿ ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ ವಿರುದ್ಧದ ಎರಡು ಪಂದ್ಯಗಳಿಗೆ ಶುಭಮನ್ ಗಿಲ್ ಅಲಭ್ಯರಾಗಿದ್ದರು. ಟೀಂ ಇಂಡಿಯಾ ಶುಭಮನ್ ಅನುಪಸ್ಥಿತಿಯ ನಡುವೆಯೂ ಎರಡೂ ಪಂದ್ಯಗಳನ್ನು ಜಯಿಸಿತ್ತು. ನಾಯಕ ರೋಹಿತ್ ಶರ್ಮಾ ಭರವಸೆ ನೀಡಿರುವುದರಿಂದ ನಾಳಿನ 11ರ ಬಳಗದಲ್ಲಿ ಬಹುತೇಕ ಸ್ಥಾನ ಪಡೆಯುವ ಸಾಧ್ಯತೆಯಿದೆ.
ಈ ಸುದ್ದಿ ಓದಿದ್ದೀರಾ? ಏಕದಿನ ವಿಶ್ವಕಪ್ 2023 | ಜಯ್ ಶಾ ಪ್ರತಿಷ್ಠೆಯಿಂದ ಪ್ರೇಕ್ಷಕರಿಲ್ಲದ ಕ್ರೀಡಾಂಗಣಗಳು, ಕಳೆಗುಂದಿದ ಕ್ರಿಕೆಟ್
ಈ ವರ್ಷ ಗಿಲ್ ಅವರು ಏಕದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದು, 2023ರಲ್ಲಿ ಜನವರಿ ಹಾಗೂ ಸೆಪ್ಟೆಂಬರ್ ತಿಂಗಳಿನಲ್ಲಿ ಎರಡು ಬಾರಿ ಐಸಿಸಿಯ ಅತ್ಯುತ್ತಮ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಏಷ್ಯಾಕಪ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಗೆಲುವಿನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಹಿನ್ನೆಲೆಯಲ್ಲಿ ಸೆಪ್ಟೆಂಬರ್‌ನಲ್ಲಿ ಐಸಿಸಿಯಿಂದ ವಿಶೇಷ ಆಟಗಾರ ಪ್ರಶಸ್ತಿಗೆ ಆಯ್ಕೆಯಾಗಿದ್ದರು. ಇದರಿಂದ ಶುಭಮನ್ ಗಿಲ್ ಒಂದಕ್ಕಿಂತ ಹೆಚ್ಚು ಬಾರಿ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಗಿಲ್ ಏಕದಿನ ಪಂದ್ಯಗಳಲ್ಲಿ 35 ಇನ್ನಿಂಗ್ಸ್‌ಗಳಲ್ಲಿ 67.35 ಸರಾಸರಿಯೊಂದಿಗೆ ಒಂದು ದ್ವಿಶತಕ, 5 ಶತಕ ಹಾಗೂ 9 ಅರ್ಧ ಶತಕಗಳೊಂದಿಗೆ 1917 ರನ್ ಗಳಿಸಿದ್ದಾರೆ.