ವಿಜಯಪುರ ಮಹಾನಗರ ಪಾಳಿಕೆಯಲ್ಲಿ ಕೆಲಸಮಾಡುತ್ತಿರುವ ಕಾರ್ಮಿಕರಿಗೆ ಕಳೆದ ನಾಲ್ಕು ತಿಂಗಳುಗಳಿಂದ ವೇತನವನ್ನೇ ನೀಡಲಾಗಿಲ್ಲ. ವೇತನ ನೀಡುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿವೆ.
ವಿಜಯಪುರ ಮಹಾನಗರ ಪಾಲಿಕೆಯ ವಾಹನ ಚಾಲಕರು ಮತ್ತು ನಿರ್ವಾಹಕರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕರ್ನಾಟಕ ಮುನ್ಸಿಪಲ್ ಕಾರ್ಮಿಕರ ಸಂಘ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಪ್ರತಿಭಟನೆ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ಮುನ್ಸಿಪಲ್ ಕಾರ್ಮಿಕರ ಸಂಘದ ಲಕ್ಷ್ಮಣ್ ಹಾಂದ್ರಳಾ, “ವಿಜಯಪುರ ಮಹಾನಗರ ಪಾಲಿಕೆಯಲ್ಲಿ ಸುಮಾರು ವರ್ಷಗಳಿಂದ ಹೊರಗುತ್ತಿಗೆ ಆಧಾರದ ಮೇಲೆ ಚಾಲಕ, ನಿರ್ವಾಹಕ, ಕಸ ಸಂಗ್ರಹಕಾರರು, ಲೋಡರ್ಸ್ ಯುಜಿಡಿ ಕಾರ್ಮಿಕರು ಹಾಗೂ ಸೂಪರ್ವೈಸರ್‌ಗಳು ಹಾಗೂ ನೇರ ಪಾವತಿ ಪೌರ ಕಾರ್ಮಿಕರಾಗಿ, ನೂರಾರು ಜನ ದುಡಿಯುತ್ತಿದ್ದಾರೆ. ಇವರಿಗೆ, ನಾಲ್ಕು ತಿಂಗಳಿಂದ ವೇತನ ಪಾವತಿಯಾಗಿಲ್ಲ. ಇಲ್ಲಿಯವರೆಗೆ ಇ.ಎಸ್.ಐ ಮತ್ತು ಪಿಎಫ್ ಹಣವನ್ನು ಭರ್ತಿ ಮಾಡಿಲ್ಲ” ಎಂದು ಕಿಡಿಕಾರಿದರು.
“ನಾವು ಈಗಾಗಲೇ ಸಂಘದ ವತಿಯಿಂದ ಅನೇಕ ಬಾರಿ ಗುತ್ತಿಗೆದಾರರಿಗೆ ಮೌಖಿಕವಾಗಿ ಹೇಳಿದರು, ವೇತನ ಪಾವತಿ ಮಾಡದೆ ಉಡಾಫೆಯಾಗಿ, ನಿಮ್ಮ ಮೇಲಾಧಿಕಾರಿಗಳು ಚೆಕ್ ನೀಡಿರುವುದಿಲ್ಲ ಎಂದು ಜಾರಿಕೆಯ ಉತ್ತರ ನೀಡುತ್ತಿದ್ದಾರೆ. ನಾಲ್ಕು ತಿಂಗಳ ವೇತನ ಇಲ್ಲದೆ ಕಾರ್ಮಿಕರ ಮಕ್ಕಳ ಶಾಲಾ ಶುಲ್ಕ, ಮನೆ ಬಾಡಿಗೆ, ತಿನ್ನಲು ರೇಷನ್ ಇಲ್ಲದೆ ಪರದಾಡುವ ಸ್ಥಿತಿ ಉಂಟಾಗಿದೆ. ಆದ್ದರಿಂದ ಕೆಲಸ ನಿಲ್ಲಿಸಿ, ಅನಿರ್ಧಿಷ್ಟಾವಧಿ ಮುಷ್ಕರ ಮಾಡಲು ನಿರ್ಧರಿಸಿದ್ದಾರೆ” ಎಂದರು.
ಇನ್ನು, ವಾಹನ ಚಾಲಕರು ನಿರ್ವಾಹಕರ ಕ್ಷೇಮ ಅಭಿವೃದ್ಧಿ ಸಂಘದ ಜಿಲ್ಲಾ ಮುಖಂಡ, ಶಂಕರ್ ಚಲವಾದಿ ಮಾತನಾಡಿ, ಗುತ್ತಿಗೆದಾರರ ಹೆಸರು, ಕಲ್ಲಪ್ಪ ಜಂಬಗಿ ಮತ್ತು ಜಸ್ಕೋ ಪ್ರವೇಟ್ ಲಿಮಿಟೆಡ್ ಕಂಪನಿ ಬೆಂಗಳೂರು, ಗುತ್ತಿಗೆದಾರ ಗಣೇಶ್ ಶಂಕರ್ ಹಾಗೂ ಪರಿಸರ ಅಭಿಯಂತರರಾದ ಅಶೋಕ್ ಕುಮಾರ್ ಸಜ್ಜನ್ ಇವರು ಕೂಡಿ ಕಾರ್ಮಿಕರಿಗೆ, ನೀವು ಯಾವುದೇ ಸಂಘಟನೆ ಮಾಡಿ ವೇತನ ಹಾಗೂ ಬೇಡಿಕೆ ಮಾಡಿದರೆ, ನಿಮ್ಮನ್ನು ಕೆಲಸದಿಂದ ತೆಗೆದುಹಾಕುತ್ತೇವೆ ಎಂದು ಬೆದರಿಸುತ್ತಾರೆ. ಈಗಾಗಲೇ ಅನೇಕ ಕಾರ್ಮಿಕರನ್ನು, ಸುಳ್ಳು ಆಪಾದನೆ ಮಾಡಿ ಕೆಲಸದಿಂದ ತೆಗೆದು ಹಾಕಿದ್ದಾರೆ. ಕೆಲಸದಿಂದ ತೆಗೆದು ಹಾಕಿದ ಕಾರ್ಮಿಕರನ್ನು ಮರಳಿ ಕೆಲಸಕ್ಕೆ ತೆಗೆದುಕೊಳ್ಳಿ ಎಂದು ಸಂಘದಿಂದ ಮನವಿ ಮಾಡಿದರು, ಪರಿಸರ ಅಶೋಕ್ ಕುಮಾರ್ ಸಜ್ಜನ್ ರವರು, ಕೆಲಸಕ್ಕೆ ತೆಗೆದುಕೊಳ್ಳುತ್ತೇವೆ ಎಂದು ಹೇಳಿ, ಅದೇ ಜಾಗದಲ್ಲಿ ಸುಮಾರು 40ರಿಂದ 50ಸಾವಿರ ತೆಗೆದುಕೊಂಡು, ಬೇರೆ ಕಾರ್ಮಿಕರನ್ನು ಬರ್ತಿ ಮಾಡಿಕೊಂಡಿದ್ದಾರೆ.
ಯಾಕೆ, ಕಾರ್ಮಿಕರು ನ್ಯಾಯಯುತವಾಗಿ ದುಡಿದಿರುವ ವೇತನ ಕೇಳಬಾರದೆ? ಎಷ್ಟು ದಿನ ಈ ಗುತ್ತಿಗೆದಾರರು ಹಾಗೂ ಅಧಿಕಾರಿಯಿಂದ ತೊಂದರೆ ಅನುಭವಿಸಬೇಕು? ನಾವು ಈಗಾಗಲೇ, ಆಯುಕ್ತರಿಗೆ ನಾಲ್ಕು ತಿಂಗಳ ವೇತನ ಆಗದೆ ಇರುವುದರ ಬಗ್ಗೆ ಮನವಿ ಮಾಡಿದ್ದಿವಿ. ಯಾವುದೇ ರೀತಿಯ ಸ್ಪಂದನೆ ಸಿಕ್ಕಿಲ್ಲ. ಅದಕ್ಕೆ, ಸಂಘದ ವತಿಯಿಂದ ಕಾರ್ಮಿಕರು ಕೆಲಸ ಬಂದ್ ಮಾಡಿ, ಅನಿರ್ದಿಷ್ಟವಾದಿ ಮುಷ್ಕರ ಮಾಡಲು ತಯಾರಾಗಬೇಕೆಂದು ಕರೆ ನೀಡಿದ್ದೇವೆ, ಎಂದು ತಮ್ಮ ಅಸಮಾಧಾನ ಹೊರ ಹಾಕಿದರು.
ಪ್ರತಿಭಟನೆಯಲ್ಲಿ, ಸಂಜು ಕಂಬಾಗಿ, ದಯಾನಂದ, ತನ್ವೀರ್ ಗೊಲ್ಸುರೋಸ್, ಮೋಸಿನ್ ಹಾಲ್ಮೆಲ್, ರಮೇಶ್ ರಾಥೋಡ್, ಸತೀಶ್ ಚಲವಾದಿ, ಜಾವೀದ್ ಅತ್ತಾರ್, ಮೋಹಿಸಿನ, ಹುಸೇನ್ ಮುಲ್ಲಾ, ಕಳ್ಳಿಮನಿ, ಸಾಗರ್ ಸೇರಿದಂತೆ ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.