ಮಾನವೀಯ ಮೌಲ್ಯಗಳು ಬೆಳೆಸುವಲ್ಲಿ ಮಾಧ್ಯಮಗಳ ಪಾತ್ರ ಬಹಳ ದೊಡ್ಡದು. ವ್ಯಕ್ತಿತ್ವ ವಿಕಾಸದಲ್ಲಿ ಮಾಧ್ಯಮಗಳು ಮಹತ್ವ ಪಡೆದಿವೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಮಾರ್ಥಂಡ ಜೋಷಿ ಹೇಳಿದರು.
ಬಸವಕಲ್ಯಾಣ ನಗರದ ಶ್ರೀ ಬಸವೇಶ್ವರ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿ ವಿಚಾರ ವೇದಿಕೆ ಹಾಗೂ ಈದಿನ.ಕಾಮ್ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಮಾಧ್ಯಮ, ಸಮಾಜ ಮತ್ತು ಸ್ವಾತಂತ್ರ್ಯ’ ಕುರಿತ ಉಪನ್ಯಾಸ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
“ಮಾಧ್ಯಮಕ್ಕೆ ಸಾಮಾಜಿಕ ಬದ್ಧತೆ ಮತ್ತು ಹೊಣೆಗಾರಿಕೆ ಎರಡೂ ಮುಖ್ಯ. ಮಾನವೀಯತೆಯ ದಾರಿಯೇ ಮಾಧ್ಯಮಕ್ಕಿರಬೇಕು. ಶಿಕ್ಷಣ, ಸಿನಿಮಾ, ರಾಜಕೀಯದಂತೆ ಪತ್ರಿಕೆಗಳು ಉದ್ಯಮಗಳಾಗಿವೆ. ಲಾಭ ಮತ್ತು ಸೇವೆ ಎರಡೂ ಒಳಗೊಂಡಿದೆ. ಮಾಧ್ಯಮಗಳಿಗೆ ಸಾಮಾಜಿಕ ಕಾಳಜಿ, ಜವಾಬ್ದಾರಿಗಳಿದ್ದರೆ ಸಮಾಜದ ಪ್ರಗತಿ ಸಾಧ್ಯ. ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳು ಆತ್ಮಸ್ಥೈರ್ಯ ರೂಢಿಸಿಕೊಳ್ಳಬೇಕು. ಮೊಬೈಲ್ ಸೇರಿದಂತೆ ಸಾಮಾಜಿಕ ಮಾಧ್ಯಮಗಳು ಸದ್ಬಳಕೆಯಾಗಲಿ” ಎಂದು ಸಲಹೆ ನೀಡಿದರು.
ಪತ್ರಕರ್ತ ಬಾಲಾಜಿ ಕುಂಬಾರ ಮಾತನಾಡಿ, “ಜನಪರ ಕಾಳಜಿಯೇ ಮಾಧ್ಯಮದ ಬಹುದೊಡ್ಡ ಜವಾಬ್ದಾರಿ. ಮುದ್ರಣ ಮಾಧ್ಯಮಕ್ಕೆ ಹೆಚ್ಚು ನಿಖರತೆ, ಸಾಮಾಜಿಕ ಹೊಣೆಗಾರಿಕೆಯಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ಪತ್ರಿಕೆಗಳು ಮಹತ್ವದ ಪಾತ್ರ ನಿರ್ವಹಿಸಿದ್ದವು. ಜಗತ್ತಿನ ಎಲ್ಲ ಜಾಗಗಳಲ್ಲಿ ಮಾಧ್ಯಮಗಳಿವೆ. ಮಾಧ್ಯಮ ಜನ ಬದುಕಿನ ಕನ್ನಡಿಯಾಗಿದೆ” ಎಂದು ಹೇಳಿದರು.
“ಒಂದು ಮನೆಯಲ್ಲಿ ಟಿ.ವಿ. ಒಂದೇ ಇರಬಹುದು. ಮೊಬೈಲ್ ಮನೆಯ ಎಲ್ಲರಲ್ಲೂ ಇವೆ. ಹಾಗಾಗಿ ಈ ಕಾಲದಲ್ಲಿ ಸಾಮಾಜಿಕ ಮಾಧ್ಯಮ ಹೆಚ್ಚು ಪ್ರಭುತ್ವ ಪಡೆದಿವೆ. ಇಂದು ಸಾಮಾಜಿಕ ಜಾಲತಾಣಗಳಿಂದ ವೇಗವಾಗಿ ಸುದ್ದಿ ಪ್ರಸಾರ, ಸಂಪರ್ಕಕ್ಕೆ ಅನುಕೂಲವಾಗಿದೆ. ವಿದ್ಯಾರ್ಥಿಗಳು ಮಾಧ್ಯಮ ಕ್ಷೇತ್ರಕ್ಕೆ ಬರಬೇಕು. ಭಾಷೆ, ಬರಹ ಮತ್ತು ಸಾಮಾಜಿಕ ಪ್ರಜ್ಞೆ ಹಾಗೂ ಕಳಕಳಿಗಳಿಂದ ಉತ್ತಮ ಪತ್ರಕರ್ತನಾಗಲು ಸಾಧ್ಯ. ಪತ್ರಿಕಾ ರಂಗದಲ್ಲಿ ವೃತ್ತಿಪರತೆಯಿಂದ ಹೆಚ್ಚು ಬೆಳೆಯಲು ಸಾಧ್ಯವಿದೆ. ಹಳ್ಳಿಗಳ ಮೂಲಭೂತ ಸೌಕರ್ಯ, ನಗರ ಸಮಸ್ಯೆಗಳು, ಜನರ ಕೊರತೆ ಬಿಂಬಿಸುವ ಕೆಲಸ ಮಾಧ್ಯಮಗಳಿಂದ ನಡೆಯಬೇಕು. ಮಾಧ್ಯಮ ಜನರ ದನಿಯಾಗಬೇಕು” ಎಂದರು.
ಸಂಸ್ಥೆಯ ಆಡಳಿತಾಧಿಕಾರಿ ಡಾ. ಮಲ್ಲಿಕಾರ್ಜುನ ಲಕಶೆಟ್ಟೆ ಅಧ್ಯಕ್ಷತೆ ವಹಿಸಿ ಮಾತನಾಡಿ, “ಅತ್ಯಂತ ಸಂವೇದನಾಶೀಲರ, ಚಿಂತನಾಶೀಲರ, ಸೂಕ್ಷ್ಮ ವಿವೇಚನೆವುಳ್ಳವರದು ಮಾಧ್ಯಮರಂಗ. ಯಾವುದೇ ಒಪ್ಪಂದವಿಲ್ಲದೆ, ಬದ್ಧತೆಯಿಂದ ಕೆಲಸ ಮಾಡುವ ಕ್ಷೇತ್ರ. ಕೋವಿಡ್ ಕಾಲಘಟ್ಟದಲ್ಲಿ ಮುದ್ರಣ ಮಾಧ್ಯಮಕ್ಕೆ ಹಿನ್ನಡೆಯಾಗಿತ್ತು. ಈಗ ಮತ್ತೆ ಪತ್ರಿಕೆ ಪ್ರಸರಣ ಹೆಚ್ಚಾಗಿದೆ” ಎಂದರು.
ಕಾಲೇಜು ಪ್ರಾಚಾರ್ಯ ಡಾ. ಭೀಮಾಶಂಕರ ಬಿರಾದಾರ ಮಾತನಾಡಿ, “ಮಾಧ್ಯಮಗಳು ಲೋಕಪ್ರಜ್ಞೆ, ಕಾಲಪ್ರಜ್ಞೆ ಜೀವಂತವಾಗಿಟ್ಟಿವೆ. ಸಮಕಾಲೀನ ಬಿಕ್ಕಟ್ಟುಗಳನ್ನು ಅತ್ಯಂತ ಪ್ರಜ್ಞಾಪೂರ್ವಕವಾಗಿ ಸ್ಪಂದಿಸುವ ಗುಣ ಮಾಧ್ಯಮಗಳಿಗಿದೆ. ಅದರಲ್ಲೂ ಮುದ್ರಣ ಮಾಧ್ಯಮ ಲೋಕವಿಮರ್ಶೆಯ ಬಹುದೊಡ್ಡ ಮಾದರಿಯಾಗಿವೆ. ಸಮಾಜ, ರಾಜಕಾರಣ, ಅರ್ಥವ್ಯವಸ್ಥೆ, ಎಲ್ಲದರ ಕುರಿತು ಸಾಂಸ್ಕೃತಿಕ ವಿವೇಚನೆಯಲ್ಲಿ ತೊಡಗುವ ಪರಿಕರಗಳಾಗಿವೆ. ವಿಜ್ಞಾನ- ತಂತ್ರಜ್ಞಾನ ಕ್ಷೇತ್ರದಲ್ಲಿನ ಆವಿಷ್ಕಾರಗಳು, ಚರಿತ್ರೆ, ಕಲೆ ಮತ್ತು ಸಾಹಿತ್ಯ ವಲಯಗಳ ಹೊಸ ಸಂಶೋಧನೆಗಳನ್ನು ಜಗತ್ತಿಗೆ ಕಾಣಿಸುವ ದಾರಿಯಾಗಿ ಮಾಧ್ಯಮಗಳು ಕೆಲಸ ಮಾಡುತ್ತಿವೆ” ಎಂದು ಹೇಳಿದರು.
“ಸರ್ಕಾರಗಳ ಕಣ್ಣಿಗೆ ಬೀಳದ ಸಮಸ್ಯೆಗಳು, ನಿರ್ಲಕ್ಷಿತ ವಲಯಗಳ, ಅಸಂಘಟಿತ ವಲಯಗಳ, ಕೃಷಿಕರ ಸವಾಲುಗಳು, ಕೃಷಿ ಬಿಕ್ಕಟ್ಟು ಸೇರಿ ಹಲವು ಕ್ಷೇತ್ರಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಕೆಲಸ ಮಾಧ್ಯಮಗಳಿಂದ ಸಾಧ್ಯ. ಮಾಧ್ಯಮ ಆ ನಿಟ್ಟಿನಲ್ಲಿ ಚುರುಕಾಗಿ ಕಾರ್ಯನಿರ್ವಹಿಸಲಿ” ಎಂದರು.
ಈ ಸುದ್ದಿ ಓದಿದ್ದೀರಾ? ಬೀದರ್ | ವಾರದೊಳಗೆ ಮನರೇಗಾ ಕೂಲಿ ಹಣ ಪಾವತಿಸಲು ಬಿಎಸ್‌ಪಿ ಆಗ್ರಹ
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ನಾಗಪ್ಪ ನಿಣ್ಣೆ, ಡಾ. ಶಾಂತಲಾ ಪಾಟೀಲ, ಶ್ರೀನಿವಾಸ ಉಮಾಪುರೆ, ವಿವೇಕಾನಂದ ಶಿಂಧೆ, ಸಚಿನ ಬಿಡವೆ,ಜಗದೇವಿ ಜವಳಗೆ, ಅಶೋಕರೆಡ್ಡಿ ಗದಲೇಗಾಂವ ಇದ್ದರು. ಗಂಗಾಧರ ಸಾಲಿಮಠ ಸ್ವಾಗತಿಸಿದರು. ಸೌಮ್ಯಾ ಕರಿಗೌಡ ನಿರೂಪಿಸಿದರು. ರೋಶನ್ ಬೀ ವಂದಿಸಿದರು.