ಚಿತ್ತಾಪುರ ತಾಲೂಕಿನ ಗುರೂಜಿ ನಾಯಕ ತಾಂಡಾದಲ್ಲಿ ಬೆಳೆಗೆ ಕ್ರಿಮಿನಾಶಕ ಸಿಂಪಡಿಸುವಾಗ ನಾಲ್ವರು ರೈತರು ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದಾರೆ. ಅವರ ಚಿಕಿತ್ಸೆ ಭಾರೀ ಹಣ ಕರ್ಚಾಗುತ್ತಿದ್ದು, ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಅವರಿಗೆ ಆರ್ಥಿಕ ನೆರವು ನೀಡಬೇಕೆಂದು ಎಐಕೆಕೆಎಂ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಎಸ್.ಬಿ ಮಹೇಶ್ ಹೇಳಿದ್ದಾರೆ.
“ತಾಂಡಾದ ರೈತ ಸುನೀಲ್ ಜಾಧವ್ (32), ಅನೀಲ್ ಜಾಧವ್ (26), ಕುಮಾರ್ ಜಾಧವ (24) ಹಾಗೂ ಖೇಮು ರಾಠೋಡ್ (35) ಅವರು ಕೀಟನಾಶಕ ಸಿಂಪಡಿಸುವ ವೇಳೆಯಲ್ಲಿ ಕೀಟನಾಶಕ ದೇಹ ಸೇರಿದ್ದು ತೀವ್ರ ಅಸ್ವಸ್ಥರಾಗಿದ್ದಾರೆ. ಕಳೆದ ಒಂದು ವಾರದಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರನ್ನು ಸಂಸದರು ಹಾಗೂ ಜಿಲ್ಲಾ ಆರೋಗ್ಯ ಅಧಿಕಾರಿಗಳು ಭೇಟಿ ಮಾಡಿದ್ದಾರೆ. ಆದರೆ, ಅವರಿಗೆ ಸಹಾಯ ಮಾಡುವುದಾಗಿ ಹೇಳಿಲ್ಲ. ಅವರಿಗೆ ಸಹಕಾರ ನೀಡದೇ ಇರುವುದು ದುರಂತ ಸಂಗತಿ” ಎಂದು ಮಹೇಶ್ ಅಸಮಧಾನ ವ್ಯಕ್ತಪಡಿಸಿದ್ದಾರೆ.
“ರೈತರ ಚಿಕಿತ್ಸೆಗೆ ದಿನನಿತ್ಯ 2 ಲಕ್ಷ ರೂ. ವೆಚ್ಚವಾಗುತ್ತಿದೆ. ರೋಗಿಗಳು ಇನ್ನೂ ಯಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದುಬಾರಿ ದರವನ್ನು ಕುಟುಂಬದವರು ಭರಿಸಲು ಪಡಬಾರದ ಕಷ್ಟ ಪಡುತ್ತಿದ್ದಾರೆ. ದೊಡ್ಡ ದೊಡ್ಡ ವ್ಯಕ್ತಿಗಳು ಬಂದು ಕೇವಲ ಮಾತನಾಡಿ ಹೋದರು. ಅವರುಗೆ ಯಾವುದೇ ರೀತಿಯ ನೆರವು ನೀಡಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಇನ್ನೂ ನೋವಿನ ವಿಷಯವೇನೆಂದರೆ ಈ ಭಾಗದ ಶಾಸಕರು ಸಂತ್ರಸ್ತ ಕುಟುಂಬವನ್ನು ಸಂಪರ್ಕಿಸಿಯೇ ಇಲ್ಲ. ಜವಬ್ದಾರಿ ಸ್ಥಾನದಲ್ಲಿರುವವರು ರೈತರ ಪರಿಸ್ಥಿತಿಯನ್ನು ಗಮನಿಸದೇ ಇರುವುದು ಖಂಡನೀಯ. ರೈತರ ತಾಯಂದಿರು ನೊಂದಿದ್ದಾರೆ. ಅವರಿಗೆ ಇಂತಹ ಸಂದರ್ಭದಲ್ಲಿ ಸರಿಯಾದ ಬೆಂಬಲ, ಸಹಕಾರ ಮತ್ತು ಸಹಾಯ ಸಿಗದೇ ಹೋದರೆ ಅವರ ಇಡೀ ಕುಟುಂಬವು ಸರ್ವಸ್ವವನ್ನು ಕಳೆದುಕೊಳ್ಳಬೇಕಾಗುತ್ತದೆ” ಎಂದು ಹೇಳಿದ್ದಾರೆ.
“ರೈತರ ಚಿಕಿತ್ಸೆಯ ಜವಬ್ದಾರಿಯನ್ನು ಸರ್ಕಾರವೇ ತೆಗೆದುಕೊಳ್ಳಬೇಕು. ಜಿಲ್ಲಾಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು. ಹತ್ತಿಗೆ ಔಷಧಿ ಸಿಂಪಡಿಸಲು ಬಳಸಲಾದ ಮೋನೋಕ್ರಾಟ್ ಕಂಪನಿಯಿಂದ ರೈತರ ಆಸ್ಪತ್ರೆಯ ಖರ್ಚನ್ನು ಕೊಡಿಸಬೇಕು. ಅವರ ಜೀವನಾಧಾರಕ್ಕೆ ಸೂಕ್ತವಾದ ಪರಿಹಾರ ನೀಡಬೇಕು” ಎಂದು ಒತ್ತಾಯಿಸಿದ್ದಾರೆ.