ಐಟಿ ದಾಳಿ ವಿಚಾರವಾಗಿ ನನ್ನ ಹೆಸರು ತಳುಕು ಹಾಕಿ ಟೀಕೆ ಮಾಡುತ್ತಿರುವ ಕುಮಾರಸ್ವಾಮಿ ಏನೂ ಆದಾಯ ತೆರಿಗೆ ಇಲಾಖೆಯ ಪ್ರತಿನಿಧಿ ಅಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ನೀಡಿದರು.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಯಾರು ಏನು ಆರೋಪ ಮಾಡುತ್ತಾರೋ ಮಾಡಲಿ. ಆದಾಯ ಇಲಾಖೆ ಅಧಿಕಾರಿಗಳ ದಾಳಿ, ತನಿಖೆ ಮುಗಿದ ನಂತರ ತಮ್ಮ ಹೇಳಿಕೆಯನ್ನು ಪ್ರಕಟಿಸಲಿ. ಆನಂತರ ನಾನು ಪ್ರತಿಕ್ರಿಯೆ ನೀಡುತ್ತೇನೆ. ನನ್ನ ವಿರುದ್ಧ ಆರೋಪ ಮಾಡುತ್ತಿರುವ ಕುಮಾರಸ್ವಾಮಿ ಆಗಲಿ, ಬಿಜೆಪಿ ನಾಯಕರಾಗಲಿ ಆದಾಯ ಇಲಾಖೆ ಪ್ರತಿನಿಧಿಗಳೇನೂ ಅಲ್ಲ” ಎಂದು ಹೇಳಿದರು.
ಇನ್ಮುಂದೆ ರಾಜ್ಯದಲ್ಲಿ ನಡೆಯಲಿರುವ ಐಟಿ ದಾಳಿಗಳು ಕುಮಾರಸ್ವಾಮಿ ಹಾಗೂ ಬಿಜೆಪಿ ಪ್ರೇರಿತ ದಾಳಿಯೇ ಎಂದು ಪತ್ರಕರ್ತರು ಪ್ರಶ್ನಿಸಿದಾಗ, “ಈ ವಿಚಾರವಾಗಿ ನಾನು ಈಗ ಏನನ್ನೂ ಹೇಳುವುದಿಲ್ಲ. ಈ ಹಿಂದೆ ಯಡಿಯೂರಪ್ಪ ಅವರ ಕಾಲದಲ್ಲಿ ಏನಾಯ್ತು? ಆಗ ಅವರಿಗೆ ಏನು ಸಿಕ್ಕಿದೆ? ಎಲ್ಲವೂ ದಾಖಲೆಗಳಲ್ಲಿ ಇವೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಖಲೆ ಬಿಡುಗಡೆ ಮಾಡಿದ ನಂತರ ಮಾತನಾಡೋಣ” ಎಂದು ತಿಳಿಸಿದರು.